varthabharthi

ಕ್ರೀಡೆ

ಭಾರತದ ವೇಗಿ ಶಮಿ ವಿರುದ್ಧ ಚಾರ್ಜ್‌ಶೀಟ್ ದಾಖಲು

ವಾರ್ತಾ ಭಾರತಿ : 14 Mar, 2019

ಹೊಸದಿಲ್ಲಿ, ಮಾ.14: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅತ್ಯಂತ ಪ್ರಮುಖ ಐಸಿಸಿ ವಿಶ್ವಕಪ್‌ಗೆ ಮೊದಲು ವೈಯಕ್ತಿಕ ಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಕೋಲ್ಕತಾ ಪೊಲೀಸರು ಶಮಿ ವಿರುದ್ಧ ಐಪಿಸಿ ಸೆಕ್ಷನ್ 498 ಎ(ವರದಕ್ಷಿಣೆ ಕಿರುಕುಳ) ಹಾಗೂ 354ಎ(ಲೈಂಗಿಕ ಕಿರುಕುಳ)ಅಡಿ ಚಾರ್ಜ್‌ಶೀಟ್ ದಾಖಲಿಸಿದ್ದಾರೆ. ಜೂ.22 ರಂದು ವಿಚಾರಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಶಮಿ ಅವರ ವಿಶ್ವಕಪ್ ಅಭಿಯಾನ ಡೋಲಾಯಮಾನವಾಗಿದೆ. ವಿಶ್ವಕಪ್ ಮೇ 30 ರಿಂದ ಆರಂಭವಾಗಿ, ಜೂ.14 ರಂದು ಫೈನಲ್ ಪಂದ್ಯ ನಡೆಯುವುದು. ಇದೀಗ ಶಮಿ ವಿಶ್ವಕಪ್ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ನೀಡಿದ ದೂರಿನ ಮೇರೆಗೆ ಕೋಲ್ಕತಾದ ಮಹಿಳಾ ದೂರು ನಿರ್ವಹಣಾ ವಿಭಾಗದ ಪೊಲೀಸರು ಅಲಿಪೋರ್ ಎಸಿಜೆಎಂ ಕೋರ್ಟ್‌ಗೆ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸೆಕ್ಷನ್ 307(ಹತ್ಯೆ ಯತ್ನ) ಹಾಗೂ 376(ಅತ್ಯಾಚಾರಕ್ಕೆ ಶಿಕ್ಷೆ)ನಂತಹ ಗಂಭೀರ ಆರೋಪಗಳನ್ನು ಪೊಲೀಸರು ಕೈಬಿಟ್ಟಿರುವ ಕಾರಣ ಶಮಿ ನಿಟ್ಟುಸಿರು ಬಿಡುವಂತಾಗಿದೆ. ಅಂತಿಮ ಚಾರ್ಜ್‌ಶೀಟ್‌ನಲ್ಲಿ ಶಮಿ ಅವರ ಹೆತ್ತವರು ಸೇರಿದಂತೆ ಮೂವರು ಕುಟುಂಬ ಸದಸ್ಯರ ಹೆಸರನ್ನು ಕೈಬಿಡಲಾಗಿದೆ. ಶಮಿ ಸಹೋದರ ಹಾಸಿಬ್ ಅಹ್ಮದ್ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಜಹಾನ್ ಕಳೆದ ವರ್ಷ ಶಮಿ ವಿರುದ್ಧ ಅಕ್ರಮ ಸಂಬಂಧ ಹಾಗೂ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಶಮಿ ಅನ್ಯ ಮಹಿಳೆಯೊಂದಿಗಿದ್ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆಗ ಬಿಸಿಸಿಐ ಶಮಿ ವಿರುದ್ಧ ವಾರ್ಷಿಕ ಗುತ್ತಿಗೆಯನ್ನು ಹಿಂಪಡೆದಿತ್ತು. ಬಿಸಿಸಿಐ ಆಂತರಿಕ ತನಿಖೆಯ ಬಳಿಕ ಕ್ಲೀನ್‌ಚಿಟ್ ಪಡೆದ ಶಮಿ ಅವರ ಗುತ್ತಿಗೆಯನ್ನು ನವೀಕರಿಸಲಾಗಿತ್ತು.

ಜಹಾನ್ ಕಳೆದ ವರ್ಷ ಮಾರ್ಚ್‌ನಲ್ಲಿ ಮೊದಲ ಬಾರಿ ಶಮಿ ವಿರುದ್ಧ ಲಾಲ್ ಬಝಾರ್‌ನಲ್ಲಿರುವ ಕೋಲ್ಕತಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಶಮಿ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳ ಆರೋಪ ಹೊರಿಸಿದ್ದರು. ಶಮಿ ಅವರ ಕುಟುಂಬ ಸದಸ್ಯರ ವಿರುದ್ಧ ಕಿರುಕುಳ ನೀಡಿದ ಆರೋಪ ಹೊರಿಸಿದ್ದರು. ಜಹಾನ್ ಮಾಡಿದ ಎಲ್ಲ ಆರೋಪವನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ನಿರಾಕರಿಸಿದ್ದ ಶಮಿ, ಆರೋಪದಲ್ಲಿ ಹುರುಳಿಲ್ಲ, ಇದೊಂದು ಪಿತೂರಿ ಎಂದಿದ್ದರು.

ಶಮಿ ಬುಧವಾರ ಕೊನೆಗೊಂಡ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯ 4 ಪಂದ್ಯಗಳಲ್ಲಿ ಆಡಿದ್ದು 4 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿರುವ ಶಮಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಪ್ರಭಾವ ಪ್ರದರ್ಶನ ನೀಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)