ಸೂಕ್ತವಲ್ಲದ ಉಡುಪು ಧರಿಸಿದ್ದಕ್ಕಾಗಿ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸುವ ಬೆದರಿಕೆ
ಕ್ಷಮೆಯಾಚಿಸಿದ ಥಾಮಸ್ ಕುಕ್ ವಿಮಾನಯಾನ ಸಂಸ್ಥೆ
ಲಂಡನ್,ಮಾ.14: ಇನ್ನಷ್ಟು ಬಟ್ಟೆಗಳನ್ನು ಧರಿಸಬೇಕು,ಇಲ್ಲದಿದ್ದರೆ ‘ಸೂಕ್ತವಲ್ಲದ’ ಉಡುಪು ಧರಿಸಿದ್ದಕ್ಕಾಗಿ ವಿಮಾನದಿಂದ ಕೆಳಗಿಳಿಸುವುದಾಗಿ 21ಹರೆಯದ ಯುವತಿಗೆ ಬೆದರಿಕೆಯೊಡ್ಡಿದ್ದ ಥಾಮಸ್ ಕುಕ್ ವಿಮಾನಯಾನ ಸಂಸ್ಥೆಯು ಆ ಯುವತಿಯ ಕ್ಷಮೆಯನ್ನು ಯಾಚಿಸಿದೆ.
ಮಾ.2ರಂದು ಥಾಮಸ್ ಕುಕ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಬರ್ಮಿಂಗ್ಹ್ಯಾಮ್ನಿಂದ ಕ್ಯಾನರಿ ಐಲಂಡ್ಸ್ನ ಟೆನೆರೈಫ್ಗೆ ಪ್ರಯಾಣಿಸುತ್ತಿದ್ದ ಬ್ರಿಟನ್ ನಿವಾಸಿ ಎಮಿಲಿ ಒ’ಕಾನರ್ ಸರಣಿ ಟ್ವೀಟ್ಗಳಲ್ಲಿ ತಾನು ಅನುಭವಿಸಿದ್ದ ಕಿರುಕುಳ,ಅವಮಾನಗಳ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ತನ್ನ ಮೇಲುಡುಪಿನ ಮೇಲೆ ಜಾಕೆಟ್ ತೊಟ್ಟುಕೊಳ್ಳದಿದ್ದರೆ ವಿಮಾನದಿಂದ ಕೆಳಕ್ಕಿಳಿಸುವುದಾಗಿ ಸಿಬ್ಬಂದಿಗಳು ಬೆದರಿಕೆಯೊಡ್ಡಿದ್ದರು. ತಾನು ವಿಮಾನ ನಿಲ್ದಾಣದಲ್ಲಿ ಮತ್ತು ಭದ್ರತಾ ತಪಾಸಣೆಯ ವೇಳೆಯಲ್ಲಿಯೂ ಇದೇ ಉಡುಪನ್ನು ಧರಿಸಿದ್ದೆ ಮತ್ತು ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ತನ್ನನ್ನು ಮತ್ತು ತನ್ನ ಲಗೇಜ್ನ್ನು ಕೆಳಗಿಳಿಸಲು ವಿಮಾನದ ನಾಲ್ವರು ಸಿಬ್ಬಂದಿಗಳು ಸುತ್ತುಗಟ್ಟಿ ನಿಂತಿದ್ದರು. ವಿಮಾನದಲ್ಲಿ ಮುಂದೆ ಕುಳಿತಿದ್ದ ತನ್ನ ಸೋದರ ಸಂಬಂಧಿ ತನಗೆ ಜಾಕೆಟ್ ನೀಡಿದ್ದು,ಅದನ್ನು ತೊಡುವವರೆಗೂ ಅವರು ಅಲ್ಲಿಂದ ಕದಲಿರಲಿಲ್ಲ. ಪರಿಸ್ಥಿತಿ ಕುರಿತು ಅವರು ಸ್ಪೀಕರ್ನಲ್ಲಿ ಟೀಕೆಗಳನ್ನು ಮಾಡಿದ್ದರು. ಇದರಿಂದ ತಾನು ನಖಶಿಖಾಂತ ನಡುಗುವಂತಾಗಿತ್ತು ಮತ್ತು ತನ್ನನ್ನು ತೀವ್ರ ತಳಮಳಗೊಳಿಸಿತ್ತು ಎಂದು ಎಮಿಲಿ ಟ್ವೀಟಿಸಿದ್ದಾರೆ.
ತಾನು ಎಮಿಲಿಯ ಕ್ಷಮೆಯನ್ನು ಯಾಚಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿರುವ ಥಾಮಸ್ ಕುಕ್,ಅವರಿಗೆ ತೊಂದರೆ ನೀಡಿದ್ದಕ್ಕೆ ಸಂಸ್ಥೆಯು ವಿಷಾದಿಸುತ್ತದೆ. ನಾವು ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದಿದೆ. ಸಂಸ್ಥೆಯ ವಸ್ತ್ರ ಸಂಹಿತೆಯಂತೆ ಸೂಕ್ತವಲ್ಲದ ಉಡುಪುಗಳನ್ನು ಧರಿಸಿದ ಗ್ರಾಹಕರು ಅವುಗಳನ್ನು ಬದಲಿಸದಿದ್ದರೆ ಅವರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ. ಇದು ಎಲ್ಲ ವಯೋಮಾನದ ಪುರುಷರು ಮತ್ತು ಮಹಿಳೆಯರಿಗೆ ಅನ್ವಯಿಸುತ್ತದೆ. ಆದರೆ ಇದನ್ನು ಅನುಷ್ಠಾನಿಸುವುದು ಕಠಿಣವಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.