varthabharthi

ಅಂತಾರಾಷ್ಟ್ರೀಯ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಿಂದ ಚೀನಾಕ್ಕೆ ಎಚ್ಚರಿಕೆ

ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸಲು ಪರ್ಯಾಯ ಕ್ರಮ

ವಾರ್ತಾ ಭಾರತಿ : 14 Mar, 2019

ವಾಶಿಂಗ್ಟನ್, ಮಾ. 14: ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್‌ನ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಚೀನಾ ತಡೆ ಒಡ್ಡಿದ ಬೆನ್ನಿಗೇ, ಈ ವಿಷಯವನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಭದ್ರತಾ ಮಂಡಳಿಯ ಕೆಲವು ಖಾಯಂ ಸದಸ್ಯ ದೇಶಗಳು ನಿರ್ಧರಿಸಿವೆ ಎಂದು ಭದ್ರತಾ ಮಂಡಳಿಯ ರಾಜತಾಂತ್ರಿಕರೊಬ್ಬರು ಬುಧವಾರ ತಿಳಿಸಿದರು.

ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಆದರೆ, ಚೀನಾ ತಡೆಯೊಡ್ಡಿರುವ ನಿರ್ಣಯವನ್ನು ಭದ್ರತಾ ಮಂಡಳಿಯಲ್ಲಿ ಈಗಲೇ ಇನ್ನೊಮ್ಮೆ ಮಂಡಿಸಹುದಾಗಿದೆ ಎಂದು ಭಯೋತ್ಪಾದಕರನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಇರುವ ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಹೀಗೆ ಮಾಡಿದರೆ ಅದು ಅಭೂತಪೂರ್ವ ಕ್ರಮವಾಗುತ್ತದೆ ಹಾಗೂ ಚೀನಾಕ್ಕೆ ನೀಡುವ ‘ಸಾರ್ವಜನಿಕ’ ತಪರಾಕಿಯಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಆಗ, ಎಲ್ಲರೂ ಬಲ್ಲ ಭಯೋತ್ಪಾದಕನಿಗೆ ತಾನು ನೀಡಿದ ಸಮರ್ಥನೆಯನ್ನು ಚೀನಾ ಸಾರ್ವಜನಿಕವಾಗಿ ಸಮರ್ಥಿಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಕಲಾಪಗಳ ನೇರಪ್ರಸಾರವನ್ನು ಮಾಡಲಾಗುತ್ತದೆ.

ಬುಧವಾರ ಮಸೂದ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭದ್ರತಾ ಮಂಡಳಿಯ ನಿರ್ಣಯವನ್ನು ತಾಂತ್ರಿಕ ಕಾರಣವೊಡ್ಡಿ ಚೀನಾ ತಡೆಹಿಡಿದಿರುವುದನ್ನು ಸ್ಮರಿಸಬಹುದಾಗಿದೆ.

ಈ ಬೆಳವಣಿಗೆಯಿಂದ ನಿರಾಶೆಯಾಗಿದೆ ಎಂಬುದಾಗಿ ಭಾರತ ಹೇಳಿದೆ.

‘‘ಈ ನಿರ್ಣಯಕ್ಕೆ ಚೀನಾ ತಡೆ ಹಾಕಿರುವುದು ಇದು ನಾಲ್ಕನೇ ಬಾರಿ’’ ಎಂದು ಭದ್ರತಾ ಮಂಡಳಿಯ ರಾಜತಾಂತ್ರಿಕರೊಬ್ಬರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)