varthabharthi

ರಾಷ್ಟ್ರೀಯ

ಕರ್ತಾರಪುರ ಕಾರಿಡಾರ್: ಭಾರತ ಮತ್ತು ಪಾಕ್ ನಡುವೆ ರಚನಾತ್ಮಕ ಮಾತುಕತೆ

ವಾರ್ತಾ ಭಾರತಿ : 14 Mar, 2019

ಹೊಸದಿಲ್ಲಿ,ಮಾ.14: ಭಾರತ ಮತ್ತು ಪಾಕಿಸ್ತಾನಗಳು ಗುರುವಾರ ಪಂಜಾಬಿನ ಅಟ್ಟಾರಿಯಲ್ಲಿ ಕರ್ತಾರಪುರ ಕಾರಿಡಾರ್‌ನ ವಿವಿಧ ಮಗ್ಗಲುಗಳ ಕುರಿತು ‘ರಚನಾತ್ಮಕ ಚರ್ಚೆಗಳನ್ನು’ ನಡೆಸಿವೆ ಮತ್ತು ಯೋಜನೆಯನ್ನು ತ್ವರಿತವಾಗಿ ಕಾರ್ಯಾರಂಭಿಸಲು ಒಪ್ಪಿಕೊಂಡಿವೆ. ಉಭಯ ರಾಷ್ಟ್ರಗಳ ನಡುವೆ ಮುಂದಿನ ಸಭೆ ಎ.2ರಂದು ವಾಘಾದಲ್ಲಿ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕರ್ತಾರಪುರ ಕಾರಿಡಾರ್ ಕುರಿತಂತೆ ಇದು ಉಭಯ ರಾಷ್ಟ್ರಗಳ ನಡುವೆ ಮೊದಲ ಸಭೆಯಾಗಿದ್ದು,ಸೌಹಾರ್ದಪೂರ್ಣ ವಾತಾವರಣದಲ್ಲಿ ಮಾತುಕತೆಗಳು ನಡೆದಿವೆ ಮತ್ತು ಗುರುದ್ವಾರಾ ಕರ್ತಾರಪುರ ಸಾಹಿಬ್‌ಗೆ ಸಿಖ್ ಯಾತ್ರಿಗಳ ಭೇಟಿಗೆ ಅನುಕೂಲ ಕಲ್ಪಿಸಲು ಕರಡು ಒಪ್ಪಂದವೊಂದರ ಕುರಿತು ಅಧಿಕಾರಿಗಳು ಚರ್ಚಿಸಿದರು ಎಂದು ಅದು ಹೇಳಿದೆ.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌ಸಿಎಲ್ ದಾಸ್ ಅವರು ಭಾರತೀಯ ನಿಯೋಗದ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಅವರು ಪಾಕ್ ನಿಯೋಗದ ನೇತೃತ್ವವನ್ನು ವಹಿಸಿದ್ದರು.

ಫೆ.14ರಂದು ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆಯೇ ಈ ಬೆಳವಣಿಗೆಯು ನಡೆದಿದೆ.

ನವೆಂಬರ್,2018ರಲ್ಲಿ ಉಭಯ ರಾಷ್ಟ್ರಗಳು ಕರ್ತಾರಪುರ ಕಾರಿಡಾರ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದು, ಈ ಕಾರಿಡಾರ್ ಭಾರತದ ಪಂಜಾಬ್‌ನಲ್ಲಿರುವ ದೇರಾ ಬಾಬಾ ನಾನಕ್ ಮತ್ತು ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಕರ್ತಾರಪುರ ಪ್ರದೇಶದಲ್ಲಿರುವ ಗುರುದ್ವಾರಾ ದರ್ಬಾರ್ ಸಾಹಿಬ್ ನಡುವೆ ಸಂಪರ್ಕ ಕಲ್ಪಿಸಲಿದೆ. ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್ ಅವರು 1539ರಲ್ಲಿ ಕರ್ತಾರಪುರದಲ್ಲಿ ನಿಧನರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)