varthabharthi

ರಾಷ್ಟ್ರೀಯ

ರಫೇಲ್ ವಿವಾದ: ಆರ್‌ಟಿಐಯಿಂದ ದಾಖಲೆಗಳ ಗೌಪ್ಯತೆ ಪರಿಕಲ್ಪನೆ ಬದಲಾಗಿದೆ; ಸುಪ್ರೀಂ

ವಾರ್ತಾ ಭಾರತಿ : 14 Mar, 2019

ಹೊಸದಿಲ್ಲಿ, ಮಾ. 14: ಮಾಹಿತಿ ಹಕ್ಕು ಕಾಯ್ದೆ ಅಸ್ತಿತ್ವಕ್ಕೆ ಬಂದ ಬಳಿಕ ದಾಖಲೆಗಳ ಗೌಪ್ಯತೆ ಪರಿಕಲ್ಪನೆ ಬದಲಾಗಿದೆ ಎಂದು ರಫೇಲ್ ತೀರ್ಪಿನ ಮರು ಪರಿಶೀಲನೆ ಕೋರಿದ ಮನವಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ದೂರುದಾರರು ವರ್ಗೀಕೃತ ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಹಾಗೂ ಅದನ್ನು ಬಹಿರಂಗಗೊಳಿಸಿದ್ದಾರೆ. ಆದುದರಿಂದ ಮರು ಪರಿಶೀಲನಾ ಅರ್ಜಿ ತಿರಸ್ಕರಿಸುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿತ್ತು. ದಾಖಲೆಗಳು ತಾವು ಹೊಂದಿದ್ದ ಪವಿತ್ರತೆ ಕಳೆದುಕೊಂಡಿವೆ. ಆರ್‌ಟಿಐ ಕ್ರಾಂತಿ ತಂದಿದೆ. ಅದು ಸಂಪೂರ್ಣ ಬದಲಾವಣೆ. ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಸೂಕ್ಷ್ಮ ಸಂಸ್ಥೆಗಳು ಕೂಡ ಆರ್‌ಟಿಐ ಅಡಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಹೇಳಿದೆ. 

‘‘ನಿಮ್ಮ ಪ್ರಕಾರ ಈ ದಾಖಲೆಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡಿದೆ. ಆದರೆ, ನಾವು ಹಸ್ತಕ್ಷೇಪ ನಡೆಸುವುದಿಲ್ಲ. ನಾವು ಇದನ್ನು ಆರ್‌ಟಿಐ ಕಾಯ್ದೆ ಅಡಿಯಲ್ಲಿ ಪರಿಗಣಿಸುತ್ತೇವೆ.’’ ಎಂದು ರಂಜನ್ ಗೊಗೋಯಿ ಹೇಳಿದರು. ಅಗತ್ಯವಾದರೆ ಪ್ರತಿಕ್ರಿಯೆ ಸಲ್ಲಿಸುವುದಾಗಿ ದೂರುದಾರ ಪ್ರಶಾಂತ್ ಭೂಷಣ್ ಹೇಳಿದರು. ಗೌಪ್ಯತೆಯ ಯಾವುದಾದರೂ ಉಲ್ಲಂಘನೆ ನಡೆದಿದೆಯೋ ಎಂಬ ಬಗ್ಗೆ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತು. ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ‘ದಿ ಹಿಂದೂ’ವಿನ ತನಿಖಾ ವರದಿ ಗುರಿಯಾಗಿರಿಸಿ ಕೇಂದ್ರ ಸರಕಾರ ಬುಧವಾರ, ದೂರುದಾರರು ‘ಸರಕಾರಿ ಗೌಪ್ಯತೆ ಕಾಯ್ದೆ’ ಉಲ್ಲಂಘಿಸಿದ್ದಾರೆ. ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ್ದಾರೆ ಎಂದು ಹೇಳಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ ಯಾವುದೇ ದಾಖಲೆಗಳು ಕೂಡ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸದು ಎಂದು ಪ್ರಕರಣದ ದೂರುದಾರರಲ್ಲಿ ಒಬ್ಬರಾದ ನ್ಯಾಯವಾದಿ-ಹೋರಾಟಗಾರ ಪ್ರಶಾಂತ್ ಭೂಷಣ್ ವಾದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)