ಕಳಪೆ ದಾಖಲೆಗೆ ಪಾತ್ರವಾದ ಕುಲದೀಪ್ ಯಾದವ್
ಭಾರತ-ಆಸ್ಟ್ರೇಲಿಯ ಏಕದಿನ ಸರಣಿ
ದಿಲ್ಲಿ, ಮಾ.14: ಇಲ್ಲಿಯ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ್ದ 35 ರನ್ಗಳಿಂದ ಸೋಲುವುದರೊಂದಿಗೆ ಭಾರತ ಸರಣಿಯನ್ನು 2-3 ರಿಂದ ಕಳೆದುಕೊಂಡಿತ್ತು. ಆರಂಭದಲ್ಲಿ 2-0 ಯಿಂದ ಮುಂದಿದ್ದ ಪ್ರವಾಸಿಗರಿಗೆ ಸರಣಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲವು ಆಟಗಾರರು ಕಳಪೆ ಪ್ರದರ್ಶನದ ಮೂಲಕ ಸುದ್ದಿಯಾಗಿದ್ದಾರೆ. 2019ರ ವಿಶ್ವಕಪ್ಗೆ ಸಮಯ ಹತ್ತಿರವಿರುವ ಸಂದರ್ಭದಲ್ಲಿ ಆತಿಥೇಯ ತಂಡದ ಈ ಸೋಲು ದಿಗ್ಭ್ರಮೆ ಮೂಡಿಸಿದೆ. ಹಲವು ಆಟಗಾರರು ತಮ್ಮ ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಅಂತಹವರಲ್ಲಿ ಕುಲದೀಪ್ ಯಾದವ್ ಕೂಡ ಒಬ್ಬರು. ಆಸ್ಟ್ರೇಲಿಯ ತಂಡದ ದಾಂಡಿಗರ ಎದುರು ಅವರ ಪ್ರದರ್ಶನ ನಿರಾಸೆ ಮೂಡಿಸಿದೆ.
ಸಂಪೂರ್ಣ ಐದು ಪಂದ್ಯಗಳಲ್ಲಿ ಕಾಣಿಸಿಕೊಂಡ ಕುಲದೀಪ್ 50 ಓವರ್ಗಳ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಿದರೂ ಅವುಗಳಲ್ಲಿ ಒಂದೇ ಒಂದು ಓವರ್ ಮೇಡನ್ ಇರಲಿಲ್ಲ. ಅಲ್ಲದೆ 30.20ರ ಸರಾಸರಿಯಲ್ಲಿ ಅವರು 302 ರನ್ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದರು. ಸರಣಿಯಲ್ಲಿ ಒಟ್ಟು 10 ವಿಕೆಟ್ಗಳನ್ನು ಗಳಿಸಿದ್ದರೂ ತಮ್ಮ ಜೀವನಶ್ರೇಷ್ಠ ಬೌಲಿಂಗ್ನ ಹತ್ತಿರಕ್ಕೆ ಸುಳಿಯಲಿಲ್ಲ. ವಿಶ್ವಕಪ್ ಪಂದ್ಯಾವಳಿಗೆ ಇನ್ನು ಎರಡೇ ತಿಂಗಳಿರುವ ಸಮಯದಲ್ಲಿ ಯಾದವ್ ತಮ್ಮ ಅತ್ಯುತ್ತಮ ಪ್ರದರ್ಶನಕ್ಕೆ ಮರಳಬೇಕಿದೆ. 2019ರ ವಿಶ್ವಕಪ್ ಮೇ 30ರಂದು ಇಂಗ್ಲೆಂಡ್ನಲ್ಲಿ ಆರಂಭವಾಗಲಿದ್ದು, ಜು.14ರಂದು ಲಾರ್ಡ್ಸ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.