‘ಅಪ್ಪಾ, ಅಮ್ಮಾ ನಾನು ಮತ ಚಲಾಯಿಸುತ್ತೇನೆ, ನೀವೂ ಚಲಾಯಿಸಿ...’
ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯ ವಿಶಿಷ್ಟ ಕಾರ್ಯಕ್ರಮ
ಉಡುಪಿ, ಮಾ.19: ‘ಅಪ್ಪಾ, ಅಮ್ಮಾ... 2019ರ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ.... ಯಾವುದೇ ಆಮಿಷಗಳಿಗೆ ಒಳಗಾಗ ಬೇಡಿ...’
ಇದು ಮನೆಯಲ್ಲಿರುವ ಮಕ್ಕಳು ಹೇಳುವ ಮಾತಲ್ಲ. ಅಪ್ಪ, ಅಮ್ಮ, ಬಂಧುಬಳಗದಿಂದ ದೂರ ಇದ್ದು, ಹಾಸ್ಟೆಲ್ಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಹೇಳುತ್ತಿರುವ ಮಾತುಗಳಿವು.
ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ, ಮತದಾನ ಜಾಗೃತಿಗಾಗಿ ಕೈಗೊಂಡಿರುವ ವಿನೂತನ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಯಲ್ಲಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಮತ್ತು ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ಬಂಧು ಬಳಗದವರಿಗೆ, ಆತ್ಮೀಯರಿಗೆ ಪತ್ರದ ಮೂಲಕ ಮತದಾನ ಜಾಗೃತಿ ಮೂಡಿಸುತಿದ್ದಾರೆ.
ವಿದ್ಯಾರ್ಥಿಗಳಿಗೆ ಪತ್ರ ಬರೆಯಲು ಅಗತ್ಯವಿರುವ ಅಂಚೆ ಕಾಗದಗಳನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನೀಡಲಾಗುತಿದ್ದು, ಮಕ್ಕಳು ತಮ್ಮ ಪೋಷಕರಿಗೆ, ಹಿತೈಷಿಗಳಿಗೆ, ಸಂಬಂಧಿಕರಿಗೆ ಎಷ್ಟು ಪತ್ರ ಬೇಕಾದರೂ ಬರೆಯಬಹುದಾಗಿದೆ. ಪತ್ರದಲ್ಲಿ ವಿಳಾಸ ನಮೂದಿಸಿ, ಪತ್ರಗಳನ್ನು ಹಾಸ್ಟೆಲ್ಗಳ ವಾರ್ಡನ್ಗೆ ನೀಡಬೇಕು. ವಾರ್ಡನ್ಗಳು ಆ ಪತ್ರಗಳನ್ನು ಅಂಚೆ ಕಚೇರಿಗೆ ತಲುಪಿಸಿ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಒಟ್ಟು 61 ಹಾಸ್ಟಲ್ಗಳ ಸುಮಾರು 5000 ವಿದ್ಯಾರ್ಥಿಗಳಿಂದ ಈ ಪತ್ರ ಅಭಿಯಾನ ನಡೆಯಲಿದೆ. ವಿದ್ಯಾರ್ಥಿಗಳು ಪತ್ರದಲ್ಲಿ ಮತದಾನ ಮಾಡುವಂತೆ ತಿಳಿಸುವುದಲ್ಲದೇ ಮತದಾನದ ಮಹತ್ವ ಕುರಿತ ಸಂದೇಶಗಳನ್ನು ಸಹ ತಿಳಿಸಲಿದ್ದಾರೆ.
ಮೆಟ್ರಿಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳಿಂದ ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಮಾಡಲು ಮನವಿ ಮಾಡಿದರೆ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ, ಮತಯಂತ್ರ ಹಾಗೂ ವಿವಿಪ್ಯಾಟ್ಗಳ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ ಅಧಿಕಾರಿ ಹಾಕಪ್ಪ ಆರ್. ಲಮಾಣಿ.
ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾ ಗುತ್ತಿದೆ. ಆದರೂ ಪತ್ರ ಸಂದೇಶದಲ್ಲಿ ಇರುವ ಆತ್ಮೀಯತೆ ಯಾವ ಎಲೆಕ್ಟ್ರಾನಿಕ್ ಯಂತ್ರವು ನೀಡಲಾರದು. ಮಕ್ಕಳು ತಮ್ಮ ಮುದ್ದು ಅಕ್ಷರದಲ್ಲಿ ಬರೆದಿರುವ ಪತ್ರವನ್ನು ಓದುವ ಪೋಷಕರು ಖಂಡಿತವಾಗಿ ಮಕ್ಕಳ ಮನವಿಗೆ ಸ್ಪಂದಿಸಿ, ಮತದಾನದಲ್ಲಿ ಭಾಗವಹಿಸುತ್ತಾರೆ ಎಂಬ ವಿಶ್ವಾಸವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂದೂ ಬಿ.ರೂಪೇಶ್ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮತ್ತು ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.