varthabharthi

ಸಂಪಾದಕೀಯ

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೇ?

ವಾರ್ತಾ ಭಾರತಿ : 20 Mar, 2019

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊನೆಗೂ ಲೋಕಪಾಲರನ್ನುನೇಮಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳಲ್ಲಿ ಲೋಕಪಾಲ ನೇಮಕವೂ ಒಂದು. ಕಳೆದ ಐದು ವರ್ಷಗಳಲ್ಲಿ ಲೋಕಪಾಲರ ನೇಮಕದ ಬಗ್ಗೆ ಕೇಂದ್ರ ಸರಕಾರ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಆದರೆ ಅಧಿಕಾರಾವಧಿ ಮುಗಿಯಲು ಮೂರು ತಿಂಗಳಿರುವಾಗ ಅದೂ ಸುಪ್ರೀಂ ಕೋರ್ಟ್ ಕಿವಿ ಹಿಂಡಿದ ಬಳಿಕ ಲೋಕಪಾಲರ ನೇಮಕವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ನಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೊಹಟಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್ ಅವರನ್ನು ಮೊದಲ ಲೋಕಪಾಲರನ್ನಾಗಿ ನೇಮಿಸಿದೆ.ಲೋಕಸಭೆಯ ಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಮಿತಿಗೆ ತಮ್ಮನ್ನು ಕೇವಲ ಆಹ್ವಾನಿತರನ್ನಾಗಿ ಮಾಡಿದ್ದನ್ನು ಪ್ರತಿಭಟಿಸಿ ಆಯ್ಕೆ ಸಮಿತಿ ಸಭೆಯಿಂದ ದೂರ ಉಳಿದಿದ್ದರು.

ಲೋಕಪಾಲರ ನೇಮಕವನ್ನು ಸರಕಾರ ತಾನೇ ಮಾಡಬೇಕಾಗಿತ್ತು. ಅದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ಕಿವಿ ಹಿಂಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಆ ಇಚ್ಛಾಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಲಿಲ್ಲ. ಸರ್ವಾಧಿಕಾರಿ ವ್ಯಕ್ತಿತ್ವದ ಮೋದಿಯವರು ತಮ್ಮನ್ನು ಪ್ರಶ್ನಿಸುವ ಲೋಕಪಾಲದಂಥ ವ್ಯವಸ್ಥೆಯನ್ನು ಇಷ್ಟಪಡುವುದಿಲ್ಲ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಲೋಕಾಯುಕ್ತ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದ್ದರು. ಅಲ್ಲಿ ಹಿಂದೆ ಇದ್ದ ಲೋಕಾಯುಕ್ತರೊಂದಿಗೆ ಕಿತ್ತಾಡಿಕೊಂಡಿದ್ದರು. ಇಂತಹ ಮೋದಿಯವರು ಲೋಕಪಾಲ ನೇಮಕದ ಬಗ್ಗೆ ಆಸಕ್ತಿಹೊಂದಿರಲಿಲ್ಲ. ಆದರೆ ಕಳೆದ ಸೆಪ್ಟ್ಟಂಬರ್ 27ರಂದು ಸುಪ್ರೀಂ ಕೋರ್ಟ್ ಒತ್ತಡ ಹೇರಿದ್ದರಿಂದ ಲೋಕಪಾಲ ಶೋಧ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಮೊದಲ ಸಭೆ ನಡೆದದ್ದು ಇದೇ ಫೆಬ್ರವರಿಯಲ್ಲಿ. ಈಗ ಅದು ಲೋಕಪಾಲರನ್ನು ನೇಮಕಗೊಳಿಸಿದೆ.

ಸಾರ್ವಜನಿಕ ಸೇವೆಯ ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸುವುದು ಲೋಕಪಾಲ ಸಂಸ್ಥೆಯ ಕರ್ತವ್ಯ. ಮಾಜಿ ಪ್ರಧಾನಿ, ಕೇಂದ್ರದ ಹಾಲಿ ಮತ್ತು ಮಾಜಿ ಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು ಕೇಂದ್ರ ಸರಕಾರದ ಹಾಗೂ ಕೇಂದ್ರ ಸರಕಾರಿ ಒಡೆತನದ ಉದ್ಯಮಗಳ ಉನ್ನತ ಅಧಿಕಾರಿಗಳು, ಲೋಕಪಾಲ ತನಿಖೆಯ ವ್ಯಾಪ್ತಿಗೆ ಬರುತ್ತಾರೆ.

ಲೋಕಪಾಲ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರಬೇಕೆಂದು 1968ರಲ್ಲಿ ಪ್ರಸ್ತಾಪವಾದರೂ ಕಳೆದ ಐದು ದಶಕಗಳಲ್ಲಿ ಈ ಬಗ್ಗೆ ಯಾರೂ ಆಸಕ್ತಿ ತೋರಿಸಿರಲಿಲ್ಲ. 2014ರಲ್ಲಿ ‘‘ನಾನೂ ತಿನ್ನುವುದಿಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ’’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಈ ದೇಶಕ್ಕೆ ಮಾತನ್ನು ಬಿಟ್ಟು ಏನನ್ನೂ ನೀಡಲಿಲ್ಲ. ತನ್ನನ್ನು ತಾನು ದೇಶದ ‘ಚೌಕಿದಾರ’ ಎಂದು ಮೋದಿ ಬಿಂಬಿಸಿಕೊಳ್ಳುತ್ತಲೇ ಬಂದರು. ಆದರೆ ಅವರ ಆಡಳಿತದಲ್ಲೇ ಯುದ್ಧ ವಿಮಾನ ಖರೀದಿಯ ರಫೇಲ್‌ನಂತಹ ಹಗರಣಗಳು ನಡೆದವು. ಈ ಹಗರಣದ ಬಗ್ಗೆ ‘ಹಿಂದೂ’ ಪತ್ರಿಕೆ ಸಾಕ್ಷ್ಯಾಧಾರ ಸಹಿತ ತನಿಖಾ ವರದಿಯನ್ನು ಪ್ರಕಟಿಸಿತು. ಆಗ ದಿಗಿಲುಗೊಂಡ ಸರಕಾರ ‘‘ರಕ್ಷಣಾ ಸಚಿವ ಖಾತೆಯಲ್ಲಿನ ದಾಖಲೆಗಳು ಕಳವು ಆಗಿವೆ’’ ಎಂದು ಅಟಾರ್ನಿ ಜನರಲ್ ಮೂಲಕ ಹೇಳಿಸಿತು. ಆಗ ಸರಕಾರ ಅಪಹಾಸ್ಯಕ್ಕೀಡಾಯಿತು. ಆ ತಪ್ಪನ್ನು ತಿದ್ದಿಕೊಳ್ಳಲು ದಾಖಲೆಗಳನ್ನು ಜೆರಾಕ್ಸ್ ಮಾಡಿಕೊಳ್ಳಲಾಗಿದೆ ಎಂದು ಕತೆ ಕಟ್ಟಿತು. ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ ಈಗಲೂ ಕೆಳ ಮಟ್ಟದಲ್ಲಿದೆ.

ಉನ್ನತ ಮಟ್ಟದ ತನಿಖಾ ಸಂಸ್ಥೆ ಸಿಬಿಐ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪಕ್ಕೆ ಗುರಿಯಾಗಿದೆ. ಐವತ್ತಾರು ಸಾವಿರ ಕೋಟಿ ರೂಪಾಯಿಗಳ ರಫೇಲ್ ಯುದ್ಧ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರದ ದುರ್ವಾಸನೆ ಹಬ್ಬಿದೆ. ಕಾವಲುಗಾರನೇ ಕಳ್ಳ ಎಂದು ಜನರು ಲೇವಡಿ ಮಾಡುತ್ತಿದ್ದಾರೆ. ಮೋದಿ ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬ ಸಂದೇಹ ಜನರಲ್ಲಿ ಮೂಡಿದೆ.

ಇದೊಂದೇ ಹಗರಣವಲ್ಲ, ಇನ್ನ್ನೂ ಹಲವಾರು ಹಗರಣಗಳು ಈ ಸರಕಾರವನ್ನು ಸುತ್ತಿಕೊಂಡಿವೆ. ತಾನು ಪ್ರಾಮಾಣಿಕ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಮೋದಿ ಸರಕಾರ, ಊರು ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಐದು ವರ್ಷಗಳ ಕಾಲ ಸುಮ್ಮನಿದ್ದು ಈಗ ಸುಪ್ರೀಂ ಕೋರ್ಟ್ ಕಿವಿ ಹಿಂಡಿದ ಆನಂತರವಷ್ಟೇ ಲೋಕಪಾಲರ ನೇಮಕಕ್ಕೆ ತರಾತುರಿಯಲ್ಲಿ ಮುಂದಾಯಿತು.

ತಾನೇ ಕಾವಲುಗಾರ ಎಂದು ಹೇಳಿಕೊಂಡು ಲೋಕಪಾಲ ಸಂಸ್ಥೆಯ ಅಗತ್ಯವೇ ಇಲ್ಲ ಎಂಬಂತೆ ಬಿಂಬಿಸಿಕೊಳ್ಳುತ್ತ ಬಂದ ನರೇಂದ್ರ ಮೋದಿ ಸಿಬಿಐ, ಆರ್‌ಬಿಐ, ಯುಜಿಸಿಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸುತ್ತ ಬಂದರು. ಬ್ಯಾಂಕ್ ಲೂಟಿಮಾಡಿ ವಿದೇಶಕ್ಕೆ ಪಲಾಯನ ಮಾಡಿದವರಿಗೆ ರಕ್ಷಣೆ ನೀಡಿದರು. ವಿದೇಶದಲ್ಲಿರುವ ಕಪ್ಪುಹಣವನ್ನು ಸ್ವದೇಶಕ್ಕೆ ತರುವುದಾಗಿ ಹೇಳಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲಿಲ್ಲ. ಭಾರೀ ಕಾರ್ಪೊರೇಟ್ ಕಂಪೆನಿಗಳ ಎರಡು ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದ ಮೋದಿ ಸರಕಾರ ಹಣಕಾಸು ವಂಚಕರಿಗೆ ರಕ್ಷಣೆ ನೀಡುತ್ತಾ ಬಂತು.

ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಂಚನೆ ಮಾಡಿದ ವಂಚಕ ಉದ್ಯಮಪತಿಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್‌ನ ಹಿಂದಿನ ಗವರ್ನರ್ 2015ರಲ್ಲಿ ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವರ ಕಚೇರಿಗಳಿಗೆ ನೀಡಿದ್ದರು. ಆದರೆ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳದೇ ವಂಚಕರಿಗೆ ರಕ್ಷಣೆ ನೀಡುತ್ತಿದೆ.

ಹೀಗೆ ನರೇಂದ್ರ ಮೋದಿ ಸರಕಾರದ ಹಲವಾರು ಹಗರಣಗಳು ಬೆಳಕಿಗೆ ಬಂದಿದ್ದರೂ ಲೋಕಪಾಲದಂತಹ ವ್ಯವಸ್ಥೆ ಇಲ್ಲದೇ ಇದ್ದುದರಿಂದ ಅನೇಕ ಹಗರಣಗಳು ಮುಚ್ಚಿಹೋಗಿವೆ. ಇನ್ನು ಮುಂದೆ ಹೀಗಾಗದಂತೆ ಮುಂದೆ ಬರುವ ಸರಕಾರ ನೋಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)