varthabharthi


ಅನುಗಾಲ

ವಸುದೈವ ಕುಟುಂಬಕಂ!

ವಾರ್ತಾ ಭಾರತಿ : 21 Mar, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಆಧುನಿಕತೆಯ ಭರಾಟೆಯಲ್ಲಿ ವಿಶ್ವವೇ ಒಂದು ಗ್ರಾಮವಾಗಿ ಪರಿಣಮಿಸಿರುವುದರಿಂದ ಇನ್ನೊಂದು ಕಡೆ ಹೀಗೆ ಕುಟುಂಬವೇ ವಿಶ್ವವಾಗಿ ಪರಿಣಮಿಸಿದೆ. ದೇವರು ಅಮರನಾಗಿರುವುದರಿಂದ ಇನ್ನೂ ದೇವರ ಮಕ್ಕಳಿಗೆ ಈ ಭಾಗ್ಯ ಬಂದಿಲ್ಲ. ಅವರು ನಿರ್ವಸಿತರಾಗಿ ಮೀಸಲಾತಿಯಡಿಯೇ ಬದುಕಬೇಕೇನೋ? ದೇವರ ರಾಜ್ಯದ ವಿಚಿತ್ರ ವಿಕ್ಷಿಪ್ತತೆಯಿದು ಎಂದುಕೊಂಡು ಸುಮ್ಮನಿರೋಣ.


ಈ ದೇಶದ ಪೂರ್ವಸೂರಿಗಳು ಬಹಳಷ್ಟು ಉಕ್ತಿಗಳನ್ನು ನೀಡಿದ್ದಾರೆ. ಅವುಗಳಲ್ಲಿ ‘ವಸುದೈವ ಕುಟುಂಬಕಂ’ ಒಂದು. ಇಡೀ ಮಹಾಭಾರತವನ್ನು ಹೇಳಿದ ಮೇಲೆ ವೇದವ್ಯಾಸರಿಗೆ ಅನಿಸಿದ್ದು ಇಷ್ಟೇ ಅಂತೆ: ‘‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ ಉದಾರ ಚರಿತಾನಾಂತು ವಸುದೈವ ಕುಟುಂಬಕಂ’’ ಎಂಬ ಪೂರ್ಣ ಶ್ಲೋಕ; ಪುಣ್ಯದ ಪಾಠ. (ನನ್ನ ಸಂಸ್ಕೃತ ಕಲಿಕೆ ಇನ್ನೂ ಪ್ರಾಥಮಿಕ ಹಂತದಲ್ಲಿರುವ ಕಾರಣ ಈ ಬಗ್ಗೆ ಅಧಿಕಾರವಾಣಿಯಿಂದ ಇಲ್ಲವೇ ಇದಮಿತ್ಥಂ ಎಂದು ನುಡಿಯುವ ಹಕ್ಕು ನನಗಿಲ್ಲ. ಇದೇನಿದ್ದರೂ ಪಾಮರ ಸೂತ್ರ; ಪಂಡಿತರದ್ದಲ್ಲ.)

‘ರಾಜಾ ಪ್ರತ್ಯಕ್ಷ ದೇವತಾಃ’ ಎಂದು ನಮ್ಮ ಪರಂಪರೆ ಹೇಳಿದೆ. ಇವೆಲ್ಲ ಒಂದು ಸಂದರ್ಭಕ್ಕೆ ಒತ್ತಾಗಿ ನಿಂತ ಮಾತುಗಳಿರಬಹುದಾದರೂ ಅವು ರೂಢಿಯಲ್ಲಿವೆ. ರಾಜನೇ ಕಾಣುವ ದೇವರು ಎಂಬುದು ಇದರ ಪ್ರತಿಪದಾರ್ಥ. ತಾಯಿ ದೇವರು; ಜನ್ಮ ಕೊಟ್ಟ ತಂದೆಯೂ ದೇವರು;, ವಿದ್ಯೆ ನೀಡಿದ (ನೀಡುವ) ಗುರುವೂ ದೇವರು ಎಂಬ ಮಾತುಗಳಿವೆ. ಹೀಗೆಲ್ಲ ದೇವರನ್ನು ಹುಡುಕುತ್ತ ಹೋಗುವುದಕ್ಕಿಂತ ಆಳುವ ದೊರೆಯನ್ನು ದೇವರಾಗಿಸಿದರೆ ಇಹಪರದ ಸುಖಕ್ಕೆ ಒಮ್ಮೆಗೇ ಅನುಮತಿ ಪಡೆದಂತಾಯಿತು ಎಂಬುದು ಇದರ ತಾತ್ಪರ್ಯವಿರಬಹುದು. ಆಳುವ ದೊರೆಗೆ ಎಂದಿದ್ದರೂ ಹೊಗಳು ಭಟರು ಬೇಕು. ಈ ಹೊಗಳಿಕೆ ದೇವರನ್ನೇ ಬಿಟ್ಟಿಲ್ಲ. ಭಜನೆ, ಧ್ಯಾನ, ಸಹಸ್ರನಾಮ ಇವೆಲ್ಲ ದೇವರ ಹೊಗಳಿಕೆಯೇ. ಇವುಗಳಿಂದ ಆತ ಸಂಪ್ರೀತನಾಗುತ್ತಾನಂತೆ. ಕಾಣದ ದೇವರಿಗೇ ಇಷ್ಟು ಸ್ವಮೋಹವಿರುವಾಗ ಕಾಣುವ ದೊರೆ ಇದಕ್ಕೇನು ಕಮ್ಮಿ? ಆತನಿಗೂ ಭೋಪರಾಕಿನ ಪ್ರಜೆಗಳೆಂದರೆ ಇತರರಿಗಿಂತ ಅಧಿಕ ಪ್ರೀತಿ. ಆದ್ದರಿಂದ ದೊರೆಯ ಆರಾಧನೆಯನ್ನು ಮಾಡಿದರೆ ಲೌಕಿಕಕ್ಕೆ ಬೇಕಾದ ಅನುಕೂಲಗಳು ಲಭ್ಯವಾಗುತ್ತವೆ; ದೇವರನ್ನು ಯಾವ ರೂಪಿನಿಂದ ಪೂಜಿಸಿದರೂ ಪರದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ ಅಲ್ಲವೇ? ಆದ್ದರಿಂದ ರಾಜಾ ಪ್ರತ್ಯಕ್ಷ ದೇವತಾ! ದಿಳ್ಳೀಶ್ವರೋವಾ ಜಗದೀಶ್ವರೋವಾ!

ದೇವರು ವಿಶ್ವಕುಟುಂಬಿ. (ಸಾರಥಿಯಾದನೊಲಿದರ್ಜುನಗೆ ಮುರವೈರಿ!) ಎಲ್ಲೇ ಯಾರಿಗೇ ಕಷ್ಟ ಬಂದರೂ ಆತ ಹೆಲಿಕಾಪ್ಟರ್ ತೆಗೆದುಕೊಂಡು ಇಲ್ಲವೇ ಅಗ್ನಿಶಾಮಕದಳದಂತೆ ಬಂದು ಅದನ್ನು ಪರಿಹರಿಸುತ್ತಾನೆಂದು ಮನುಷ್ಯರು ನಿತ್ಯ ನಂಬುತ್ತಾರೆ. ನಿಮಗೆಂತಹ ಕಷ್ಟವೇ ಬರಲಿ ಅದನ್ನು ಮರೆಸುವಂತಹ ಸುಖ-ಸೌಕರ್ಯವನ್ನು ದೇವರು ನೀಡುತ್ತಾನೆಂಬ ನಂಬಿಕೆ ಇದಕ್ಕೂ ಹೆಚ್ಚಿನ ತರ್ಕದ್ದು. ದಿನನಿತ್ಯ ನಡೆಯುವ ದುರ್ಘಟನೆಯಲ್ಲಿ ಅಸಂಖ್ಯ ಜನರು ಸಾವು-ನೋವು ಅನುಭವಿಸುತ್ತಾರಾದರೂ ಅದಕ್ಕೆ ಕಾರಣಕರ್ತನಾದ ದೇವರನ್ನು ಹಳಿಯುವುದು ತತ್ಕಾಲೀನ ಶ್ರಮವೇ ಹೊರತು ಶಾಶ್ವತದ್ದಲ್ಲ. ತೀರ ನಾಸ್ತಿಕರ, ಅವರ ಮನೆಗಳ ಹೊರತಾಗಿ ಇನ್ನೆಲ್ಲೂ ಕಷ್ಟಪರಂಪರೆಗಳಿಗೆ ತುತ್ತಾದವರು ದೇವರನ್ನು ದೂರವಿಟ್ಟ ಉದಾಹರಣೆಯಿಲ್ಲ. ದೇವರೂ ಅಷ್ಟೇ: ಎಂತಹ ಮಹತ್ತರ ದುರಂತ ಬಂದಾಗಲೂ ತನ್ನ ಹುದ್ದೆಯನ್ನು ತ್ಯಜಿಸಿಲ್ಲ; ರಾಜೀನಾಮೆ ನೀಡಿದ ಉದಾಹರಣೆಯಿಲ್ಲ.

ಬ್ರಿಟಿಷ್ ರಾಜ್ಯಭಾರದಲ್ಲಿ ಮೆಗ್ನಕಾರ್ಟಾ ಎಂಬ ಶಾಸನವಿತ್ತಂತೆ: ‘ಪ್ರಭುತ್ವವೆಂದರೆ ದೈವೀ ಹಕ್ಕು; ಪ್ರಭು ತಪ್ಪುಮಾಡಲಾರ’ (Divine right is kingship; and the king can do no wrong). ಇದನ್ನು ನಾವು ಎಂದೋ ಸಾಧಿಸಿದ್ದೇವೆ; ತೋರಿಸಿದ್ದೇವೆ! ನಮ್ಮನ್ನಾಳುವವರೂ ಅಷ್ಟೇ: ಪ್ರಜೆಗಳಿಂದ ಸದಾ ಮನ್ನಣೆಗೆ ಪಾತ್ರರಾಗುತ್ತಾರೆ. ಆಳುವವರೆಂದರೆ ಈಗ ದೊರೆಗಳಲ್ಲ. ಏಕೆಂದರೆ ದೊರೆಗಳಿಲ್ಲ. ರಾಜಪ್ರಭುತ್ವ ಈಗ ಹಿಂಬಾಗಿಲಿನಿಂದ ಪ್ರವೇಶಿಸಿದ್ದರಿಂದ ಜನರೇ ತಮ್ಮನ್ನಾಳುವ ಪ್ರಭುಗಳನ್ನು ಆಯ್ಕೆ ಮಾಡುತ್ತಾರೆ. ತಮ್ಮ ಪ್ರತಿನಿಧಿಗಳೇ ತಮ್ಮನ್ನಾಳುವವರೆಂಬ ಮನಸ್ಥಿತಿಯ ಪ್ರಜಾಪ್ರಭುತ್ವವಿದೆ. ಇದೊಂದು ರೀತಿಯಲ್ಲಿ ಸ್ವತಂತ್ರ ಗುಲಾಮಗಿರಿಯೆಂಬ ವಿರೋಧಾಭಾಸ. ಉದಾಹರಣೆಗೆ ಯಾರದ್ದೋ ವೈಯಕ್ತಿಕ ಹಣ, ಶಕ್ತಿ, ಸಮಯ ಇವುಗಳನ್ನೊಳಗೊಂಡ ಬಂಡವಾಳದಿಂದ ಊರಿನಲ್ಲಿ ಒಂದು ಸಾಧನಾ ಕುಟೀರ ಸೃಷ್ಟಿಯಾದರೆ ಅದರ ಉದ್ಘಾಟನೆಗೂ ಆಳುವ ವ್ಯವಸ್ಥೆಯೇ ಬರಬೇಕೆನ್ನುತ್ತಾರೆ ಜನ. ಏನೇ ಬರಲಿ ಆಳುವವರಿರಲಿ ಎಂಬ ಸೌಜನ್ಯದಿಂದ ಒದೆಸಿಕೊಳ್ಳುವುದಕ್ಕೆ ತಮ್ಮ ತಲೆಗಳನ್ನು ಕಾದಿಟ್ಟ ಮಂದಿಗೆ ಅಂತಹ ಬದುಕೇ ಸುಖವಾಗಿರುತ್ತದೆ. ಪ್ರಶ್ನಿಸಿದರೆ ನಾನು ಹೇಗಿದ್ದರೆ ನಿಮಗೇನು ಎಂಬ ಉತ್ತರ ಸಿದ್ಧ.

ದೇವರೇ ವಿಶ್ವಕುಟುಂಬಿಯಾದ ಮೇಲೆ ಪ್ರತ್ಯಕ್ಷ ದೇವರಾಗಿರುವ ಪ್ರಭುಗಳು ವಿಶ್ವಕುಟುಂಬಿಯಾದರೆ ತಪ್ಪಿಲ್ಲ ಅಥವಾ ಅವರು ಹಾಗಿರಬೇಕು ಎಂದು ಪ್ರಜೆಗಳು ಬಯಸುತ್ತಾರೆ. ಆದ್ದರಿಂದ ಪ್ರಭುಗಳು ಈ ದಿಸೆಯಲ್ಲಿ ತಮ್ಮ ಶ್ರಮವನ್ನು ವ್ಯಯಮಾಡುತ್ತಾರೆ. ಆದರೆ ಕೊಂಚ ವ್ಯತ್ಯಾಸವೆಂದರೆ ವಿಶ್ವವೇ ತಮ್ಮ ಕುಟುಂಬವೆಂದು ತಿಳಿಯುವುದನ್ನು ಸ್ವಲ್ಪಬದಲಾಯಿಸಿ (ತಮ್ಮ) ಕುಟುಂಬವೇ ವಿಶ್ವವೆಂದು ತಿಳಿಯುತ್ತಾರೆ. (ಅದನ್ನು ತಿಳಿಗೇಡಿಗಳು ವ್ಯತ್ಯಸ್ತತೆಯೆಂದು ತಪ್ಪು ತಿಳಿಯುತ್ತಾರೆ!) ತಾಯಿ ತನ್ನ ಮಗು ತನ್ನ ಪಾಲಿನ ವಿಶ್ವವೆಂದು ತಿಳಿದರೆ ತಪ್ಪೇನಿದೆ? ಜಗದೋದ್ಧಾರನನ್ನು ಮಗುವೆಂದು ತಿಳಿಯುತ್ತ ಯಶೋದೆೆ ಆಡಿಸಿದಳಂತೆ. ಆದರೆ ನಿಜಕ್ಕೂ ಆದದ್ದೆಂದರೆ ಆಕೆಗೆ ತಾನು ಆಡಿಸಿದ ಮಗು ಜಗದೋದ್ಧಾರನೆಂಬುದು ಗೊತ್ತಿರಲಿಲ್ಲ. ತನ್ನ ಮಗುವೆಂದೇ ಆಕೆ ಆಡಿಸಿದ್ದು. ಆತ ಜಗದೋದ್ಧಾರನಾದರೆ ಯಶೋದೆೆಯದೇನು ತಪ್ಪು? ಹೀಗೆ ತಾವಾಡಿಸುವ ಮಗು, ಮಕ್ಕಳು ಜಗದೋದ್ಧಾರರಾಗಬೇಕೆಂದು ಬಯಸಿದರೆ ತಪ್ಪಿಲ್ಲ.

ಈಗ ಈ ಪುರಾಣಮಿಶ್ರಿತ ಅಪೂರ್ಣ ವರ್ತಮಾನಕಾಲದಿಂದ ವಾಸ್ತವದ ನಲಕ್ಕೆ, ನೆಲೆಗೆ ಬರೋಣ: ಸದ್ಯ ಬ್ರಿಟನ್‌ನಲ್ಲಿ ವಂಶಪಾರಂಪರ್ಯ ಆಡಳಿತವು ಹೆಸರಿಗಷ್ಟೇ ಉಳಿದು ಅದೀಗ ಚುನಾಯಿತರಿಂದ ಗೌರವಕ್ಕೆ ಮತ್ತು ಅನುಕಂಪಕ್ಕೆ ಪಾತ್ರವಾಗುವ (ದು)ಸ್ಥಿತಿಯಲ್ಲಿದೆಯೇ ಹೊರತು ಆಡಳಿತದ ಚುಕ್ಕಾಣಿ ಅದರಲ್ಲಿಲ್ಲ. ರಾಜ ರಾಣಿ ಎಂಬುದು ಒಂದು ಸಂಕೇತವಾಗಿ ಉಳಿದಿದೆ. (ಅದಕ್ಕಿಂತ ಹೆಚ್ಚು ಬಳಕೆಯಲ್ಲಿ ಇಸ್ಪೀಟಿನ ರಾಜರಾಣಿಯರಿದ್ದಾರೆ: ಏಕೆಂದರೆ ಅವರೊಂದಿಗೆ ಒಬ್ಬ ಗುಲಾಮನೂ ಇದ್ದಾನೆ!)

ಆದರೆ ಧರ್ಮಕ್ಷೇತ್ರವಾದ ಭಾರತದಲ್ಲಿ ಕುಟುಂಬಗಳೇ ದೇಶವನ್ನಾಳುತ್ತಿವೆ. ಆಳ್ವಿಕೆ ಅಂತಲ್ಲ, ಅಧಿಕಾರಶಾಹಿಯಲ್ಲಿ, ಆಯ್ಕೆಯಲ್ಲಿ, ಕೊನೆಗೆ ಕಲೆ-ಕ್ರೀಡೆಗಳಲ್ಲೂ ಈ ಕುಟುಂಬ ರಾಜಕಾರಣ ಶಾಶ್ವತವೆಂಬಂತೆ ಬೇರೂರಿದೆ. ಆಗಾಗ ನೆನಪಾಗುವ, ಬಳಕೆಯಾಗುವ ನಿದರ್ಶನಗಳು ನಮ್ಮ ಪುರಾಣಗಳಲ್ಲಿ ಬೇಕಷ್ಟಿವೆ. ಗಿರೀಶ ಕಾರ್ನಾಡರು ಹೇಳಿದಂತೆ ನಾಲಗೆ ಮತ್ತೆ ಮತ್ತೆ ನೋವಿನ ಹಲ್ಲಿನ ಕಡೆಗೆ ಹೊರಳುವಂತೆ ಈ ಕುರಿತು ಗಮನ ಸೆಳೆಯುವುದು ಅನಿವಾರ್ಯ. ನೆನಪೆಂಬುದು ಯಾವಾಗಲೂ ಹೀಗೆ. ದೃತರಾಷ್ಟ್ರನು ಸಂಜಯನಿಗೆ ಕೇಳಿದ್ದೇ ಹೀಗೆ: ಪಾಂಡುಪುತ್ರರೂ ‘ನಮ್ಮವರು’ (ಮಾಮಕಾ?) ಏನು ಮಾಡಿದರು? ಈ ‘ನಮ್ಮವರು’ ಎಂಬುದೇ ಕುಟುಂಬದ ಶ್ರೇಷ್ಠ ಕಲ್ಪನೆಯಾಗಿ ಉಳಿದಿದೆ. ಮಹಾಭಾರತ ಯುದ್ಧದಲ್ಲಿ ಸೇನಾಧಿಪತ್ಯದ ಅವಧಿಯನ್ನು ನೋಡಿದರೆ ಭೀಷ್ಮರು 10 ದಿನ, ದ್ರೋಣರು 5 ದಿನ, ಕರ್ಣನು 2 ದಿನ ಸೇನಾಧಿಪತ್ಯವನ್ನು ವಹಿಸಿದರೆ ಉಳಿದವರ ಸೇನಾಧಿಪತ್ಯವು ತೀರ ಕಡಿಮೆ ಅಂದರೆ ಘಳಿಗೆಗಳ ಅವಧಿಗೆ ಸೀಮಿತವಾದದ್ದನ್ನು ಕಾಣುತ್ತೇವೆ. ರಾಜಪ್ರಭುತ್ವದಲ್ಲೂ ಅಷ್ಟೇ: ಕೆಲವು ಸಾಮ್ರಾಜ್ಯಗಳ ವಂಶಗಳು ಹತ್ತಾರು ತಲೆಮಾರು ಬೆಳೆದರೆ ಇನ್ನು ಕೆಲವು ಒಂದೆರಡು ತಲೆಮಾರುಗಳಲ್ಲಿ ಅಳಿದಿವೆ. ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ ಕವಿತೆಯಲ್ಲಿ ಶಾಶ್ವತದ ಮತ್ತು ಕ್ಷಣಿಕತೆಯ ಕಲ್ಪನೆ ನಿಚ್ಚಳವಾಗಿದೆ.

ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ರಸ್ತೆ, ರೈಲು ಮಾರ್ಗಗಳನ್ನು ಅಭಿವೃದ್ಧಿಗೊಳಿಸಿದ್ದರೂ ಇಂತಹ ಕುಟುಂಬ ರಾಜಕಾರಣಕ್ಕೆ ದಾರಿಯನ್ನು ನಿರ್ಮಿಸಿರಲಿಲ್ಲ. ಗಾಂಧಿಗೆ ಮಕ್ಕಳಿದ್ದರೂ ಸ್ವತಃ ಗಾಂಧಿಯೇ ತನ್ನನ್ನೂ ತನ್ನ ಕುಟುಂಬವನ್ನೂ ಈ ರಾಜಕಾರಣದಿಂದ ದೂರವಿಟ್ಟಿದ್ದರು. ಇಲ್ಲದೇ ಹೋಗಿದ್ದರೆ, ಅಥವಾ ಗಾಂಧಿ ಬಯಸಿದ್ದರೆ ಪ್ರಾಯಃ ಅವರು ರಾಷ್ಟ್ರಪತಿಯೋ ಪ್ರಧಾನಿಯೋ ಆಗುತ್ತಿದ್ದರೆಂದು ತಿಳಿದರೆ ಅದು ನಮ್ಮ ಭ್ರಮೆ. ರಾಜಕೀಯ ಆ ಕಾಲದಲ್ಲೇ ಮುಖ್ಯ ರಸ್ತೆಯನ್ನು ಬಿಟ್ಟು ಚರಂಡಿಯ ಹಾದಿಯಲ್ಲಿತ್ತಾದ್ದರಿಂದ ಗಾಂಧಿ ಗೋಡ್ಸೆಯ ಕೈಯಲ್ಲಿ ಸಾಯದೆ ಇನ್ಯಾರದೋ ಕೈಯಲ್ಲಿ ಸಾಯುತ್ತಿದ್ದರೇನೋ? ಆದರೆ ಗಾಂಧಿಯ ಅದೃಷ್ಟ ದೊಡ್ಡದು: ರಾಜಕೀಯದಲ್ಲಿ ಸಾಯದೆ ತತ್ವ-ಸಿದ್ಧಾಂತ ಅಡಿಗಲ್ಲಿನಲ್ಲಿ ಸತ್ತರು. ನೆಹರೂ ಪ್ರಧಾನಿಯಾದರು. ಸರಿ ಸುಮಾರು ಎರಡು ದಶಕಗಳ ನಂತರ ಅವರ ಮಗಳೇ ಪ್ರಧಾನಿಯಾದರು. ಗಂಡುಮಕ್ಕಳಿಲ್ಲವೆಂದು ಯಾರೂ ಶೋಕಿಸಬೇಕಿಲ್ಲ. ವಂಶೋದ್ಧಾರವಾಗಬೇಕಾದರೆ ಮಹಿಳೆಯರೂ ಸಮಾನ ಪಾತ್ರವಹಿಸುತ್ತಾರೆಂಬುದಕ್ಕೆ ಇಂದಿರಾ ನೇರ ಉದಾಹರಣೆಯಾದರು. ಅಲ್ಲಿಂದೀಚೆಗೆ ರಾಜೀವ್, ಸಂಜಯ್, ಸೋನಿಯಾ, ಮೇನಕಾ, ರಾಹುಲ್, ವರುಣ್ ಹೀಗೆ ದೇವರುಗಳು ವಿವಿಧ ರೂಪಿನಿಂದ ಅದೇ ವಂಶದ ಗೋಕುಲದಲ್ಲಿ ಉದ್ಭವವಾಗಿ ಉದ್ಧಾರವಾಗಿದ್ದಾರೆ. ರಾಜೀವ್-ಸಂಜಯ್‌ರಿಗೆ ಇಂದಿರಾ ಯಶೋದೆಯಾದರೆ, ರಾಹುಲ್‌ಗೆ ಸೋನಿಯಾ, ವರುಣ್‌ಗೆ ಮೇನಕಾ ಯಶೋದೆೆಯಂತೆ ಆಡಿಸಲು ಕಂಕಣ-ಕಟಿಬದ್ಧರಾಗಿದ್ದಾರೆ.

ತೊಟ್ಟಿಲು ತೂಗುವ ಕೈ ದೇಶವನ್ನಾಳೀತು ಎಂಬ ಉಕ್ತಿಯ ಸೃಷ್ಟಿಕರ್ತನನ್ನು ಅಭಿನಂದಿಸಲೇ ಬೇಕು. ನೆಹರೂ ವಂಶಕ್ಕೆ ಒಂದು ಇತಿಹಾಸವಾದರೂ ಇತ್ತು. ಆದರೆ ಆನಂತರ ಬಂದ ಅನೇಕ ವಂಶಪರಂಪರೆಗಳಿಗೆ ಆ ರೀತಿಯ ಇತಿಹಾಸ ಸೃಷ್ಟಿಯಾಗಬೇಕಷ್ಟೇ. ನಮ್ಮ ಕಣ್ಣೆದುರೇ ಅಪ್ಪ-ಮಕ್ಕಳು ಆಡಳಿತದ ತೆಕ್ಕೆಯನ್ನು ತಮ್ಮ ಕೈಯಲ್ಲಿ ಹಿಡಿಯುವುದನ್ನು ಮತ್ತು ಅದನ್ನು ನೋಡಿಯೂ ಜನರು ಸುಮ್ಮನಿರುವುದನ್ನು ಗಮನಿಸುತ್ತೇವೆ. ಈ ಪಟ್ಟಿಯನ್ನು ತೆರೆಯುವುದೆಂದರೆ ಕಪಾಟನ್ನು ತೆರೆದು ಅದರೊಳಗಿನ ಅಸ್ತಿಪಂಜರವನ್ನು ತೆಗೆದಂತೆ. (Pandora’s Box ಎಂದು ಹೇಳಿದಂತೆಯೇ!) ಹಾಗಲಕಾಯಿ ಚಪ್ಪರದಲ್ಲಿ ಸಿಹಿಯೇನು ಕಹಿಯೇನು? ಎಲ್ಲರೂ ಸಮಾನರೇ. ವಂಶಪಾರಂಪರ್ಯ ರಾಜಕೀಯದ ಗರ್ಭ ಧರಿಸಿದ ಎಲ್ಲ ರಾಜಕಾರಣಿಗಳೂ ಹೆಚ್ಚು-ಕಡಿಮೆಯ ಮಾತುಗಳನ್ನ್ನಾಡುವುದು ಹಾಸ್ಯಾಸ್ಪದವಾಗುತ್ತಿದೆ. ಈ ಮಹತ್ವದ ವ್ಯಕ್ತಿಗಳಲ್ಲಿ ಚರಣ್ ಸಿಂಗ್, ದೇವೇಗೌಡರಂತಹ ಕೆಲವರು ನೆನಪಿನಲ್ಲುಳಿಯುತ್ತಾರೆ.

ಉಳಿದವರು ಉಳಿಯುತ್ತಾರೆ ಅಧಿಕಾರದಲ್ಲಿ. ಬಹುಗುಣಗಳು, ಜಗಜೀವನರಾಮ್‌ಗಳು, ಸಂಗ್ಮಾಗಳು, ಕರ್ನಾಟಕದ ರೆಡ್ಡಿಗಳು, ಯಡಿಯೂರಪ್ಪಗಳು, ಬಂಗಾರಪ್ಪಗಳು ((& Sons, & Bros) ಹೀಗೆ ಇವೆಲ್ಲ ಫಲಕಗಳು ನಮ್ಮ ವ್ಯಾಪಾರಮಳಿಗೆಗಳ ಹಾಗೆ ಎಲ್ಲೆಡೆ ರಾರಾಜಿಸುತ್ತವೆ. ಈ ವಂಶಪಾರಂಪರ್ಯ ರಾಜಕಾರಣ-ಇದನ್ನು ಕುಟುಂಬ ರಾಜಕಾರಣವೆಂದು ಈಗ ಪ್ರತ್ಯೇಕಿಸಿ ಉಪನಾಮ ನೀಡಲಾಗಿದೆ! ಇದಕ್ಕೆ ನಾಯಕರು ನೀಡುವ ಸಮರ್ಥನೆಗಳನ್ನು ಗಮನಿಸಿದರೆ ಇವರೆಲ್ಲ ಒಬ್ಬೊಬ್ಬರೂ ಒಂದೊಂದು ವಿಶ್ವವಿದ್ಯಾನಿಲಯಗಳಂತಿದ್ದಾರೆ! ನಾವೇನೂ ಹಿಂದಿನ ಬಾಗಿಲಿನಿಂದ (ವಿಧಾನ ಪರಿಷತ್ತು, ರಾಜ್ಯಸಭೆಗಳಿಗೆ ಈ ಅಪಮಾನಕರ ನಾಮಧೇಯ) ಆಯ್ಕೆಯಾಗುತ್ತಿಲ್ಲ, ನೇರ ಜನರಿಂದಲೇ ಆಯ್ಕೆ ಬಯಸುತ್ತೇವೆ ಎನ್ನುತ್ತಾರೆ. (ಜನರು ನೇರವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ!) ಇಷ್ಟೇ ಅಲ್ಲ, ಒಬ್ಬ ನಾಯಕ ಗತಿಸಿದರೆ ತಕ್ಷಣ ಆತನ ಕುಟುಂಬದವರನ್ನೇ ಆತನ ಸ್ಥಾನಕ್ಕೆ ಆಯ್ಕೆಮಾಡಲಾಗುತ್ತದೆ. ಸರಕಾರಿ ನೌಕರಿಯಲ್ಲಿ ಅನುಕಂಪಧಾರಿತ ನೌಕರಿಯನ್ನು ಗತಿಸಿದವರ ಕುಟುಂಬದಲ್ಲೊಬ್ಬರಿಗೆ ನೀಡುವ ಕ್ರಮವಿದೆ. ಅದನ್ನು ರಾಜಕಾರಣಕ್ಕೆ ಅನ್ವಯಿಸಿದ ಪ್ರಭೃತಿಗೆ ನಿಜಕ್ಕೂ ನೊಬೆಲ್ ಪ್ರಶಸ್ತಿ ನೀಡಬೇಕು! ಅನಂತಕುಮಾರ್ ಬದಲಿಗೆ ಅವರ ಪತ್ನಿ, ಅಂಬರೀಷ್ ಬದಲಿಗೆ ಅವರ ಪತ್ನಿ, ಹೀಗೆ ಇಂತಹ ಉತ್ತರಾಧಿಕಾರ ಶಾಸನವೂ ದೀರ್ಘವಿದೆ.

ರಾಜಕಾರಣಕ್ಕಷ್ಟೇ ಇದು ಸೀಮಿತವಾಗಿದೆಯೆಂದರೆ ತಪ್ಪು. ನ್ಯಾಯಾಧೀಶರ ಮಕ್ಕಳು ನ್ಯಾಯಾಧೀಶರಾಗುವುದು, ಆಡಳಿತಸೇವೆಯಲ್ಲಿದ್ದು ತೆರಳಿದವರ ಮಕ್ಕಳು ಅದೇ ಸೇವೆಗೆ ಮರಳುವುದು ಈಗ ಯಾರೂ ಆಡಿಕೊಳ್ಳದಷ್ಟು ಹಳತಾಗಿದೆ. ಈ ಕ್ಷೇತ್ರ ಮಾತ್ರವಲ್ಲ ಸಾಹಿತ್ಯ-ಸಂಗೀತ ಇಲ್ಲೆಲ್ಲ ಆನುವಂಶಿಕ ಪ್ರತಿಭೆ-ಪಾಂಡಿತ್ಯಗಳ ಪಾಲು ಸ್ವಲ್ಪಇರಬಹುದಾದರೂ ಅವರಿಗೆ ಲಭಿಸುವ ಸದವಕಾಶಗಳು ಉಳಿದವರಿಗೆ ದಕ್ಕುವುದಿಲ್ಲ. ಕ್ರೀಡೆಯಲ್ಲೂ ಇದು ಢಾಳಾಗಿದೆ. ಮಂಕಡ್, ಮಂಜ್ರೇಕರ್‌ಗಳು ಮಾತ್ರವಲ್ಲ, ಗವಾಸ್ಕರ್, ತೆಂಡುಲ್ಕರ್‌ಗಳೂ ಆಯ್ಕೆದಾರರ ಪ್ರಥಮ ಪ್ರಾಶಸ್ತ್ಯಕ್ಕೊಳಗಾಗುತ್ತವೆ. ಎಷ್ಟು ಪ್ರಯತ್ನಿಸಿದರೂ ಅವರನ್ನು ಸಮರ್ಥಿಸಿಕೊಳ್ಳಲಾಗದ ಸಂದರ್ಭದಲ್ಲಷ್ಟೇ ಅವರನ್ನು ಕೈಬಿಡಲಾಗುತ್ತದೆ. ಪ್ರಭು ಸಂಹಿತೆಯ ಗುಣ ಇದು.

ಆಧುನಿಕತೆಯ ಭರಾಟೆಯಲ್ಲಿ ವಿಶ್ವವೇ ಒಂದು ಗ್ರಾಮವಾಗಿ ಪರಿಣಮಿಸಿರುವುದರಿಂದ ಇನ್ನೊಂದು ಕಡೆ ಹೀಗೆ ಕುಟುಂಬವೇ ವಿಶ್ವವಾಗಿ ಪರಿಣಮಿಸಿದೆ. ದೇವರು ಅಮರನಾಗಿರುವುದರಿಂದ ಇನ್ನೂ ದೇವರ ಮಕ್ಕಳಿಗೆ ಈ ಭಾಗ್ಯ ಬಂದಿಲ್ಲ. ಅವರು ನಿರ್ವಸಿತರಾಗಿ ಮೀಸಲಾತಿಯಡಿಯೇ ಬದುಕಬೇಕೇನೋ? ದೇವರ ರಾಜ್ಯದ ವಿಚಿತ್ರ ವಿಕ್ಷಿಪ್ತತೆಯಿದು ಎಂದುಕೊಂಡು ಸುಮ್ಮನಿರೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)