varthabharthi


ನೇಸರ ನೋಡು

ಕನ್ನಡ ಕಥೆಗೆ ಏಶ್ಯಾ ಸಾಹಿತ್ಯ ಕಿರೀಟ

ವಾರ್ತಾ ಭಾರತಿ : 24 Mar, 2019
ಜಿ.ಎನ್.ರಂಗನಾಥ ರಾವ್

ಎಲ್ಲಿ ಪ್ರೀತಿ ಇದೆ, ಎಲ್ಲಿ ಪ್ರೀತಿ ಇಲ್ಲ; ಎಲ್ಲಿ ಮಾನವ ಹೃದಯ ಮಿಡಿಯುತ್ತದೆ, ಎಲ್ಲಿ ಅಂತ:ಕರಣ ಮಿಡಿಯುತ್ತಿಲ್ಲ ಎಂದು ತಡಕಾಡುತ್ತಿರುವ ನವಮಾನವ ಸಂವೇದನೆಯ ವಿಶ್ವ ಪ್ರಜ್ಞೆಗೆ ಸಂವಾದಿಯಾಗಿರುವ ಜಯಂತರಿಗೆ ಶಾರ್ಕುಗಳಿರುವ ಮಹಾಸಾಗರ ಮುಂಬೈ, ಅಮಾನವೀಯತೆಯಲ್ಲಿ ಅದರ ಪಡಿ ನೆಳಲಾಗಿರುವ ಬೆಂಗಳೂರು, ಥಾರ್ ಮರುಭೂಮಿ, ನಿರ್ಭಯ ದಿಲ್ಲಿ ಎಲ್ಲಾ ಒಂದೇ.-ಮಾನವ ಪ್ರೀತಿ ಮತ್ತು ಅಮ್ಮನ ಜೀವಜಲ ‘ಅಮೃತಬಳ್ಳಿ ಕಷಾಯ’ದ ಹನಿಗಳಿಗಾಗಿ ಕಾದುಕುಳಿತಿರುವ ಜನಾರಣ್ಯಗಳಂತೆ ಕಂಡರೆ ಆಶ್ಚರ್ಯವೇನಿಲ್ಲ.


ಜ್ಞಾನಪೀಠಕ್ಕೆ ಸೀಮಿತಗೊಂಡಿದ್ದ ಕನ್ನಡದ ಕೀರ್ತಿ ಈಗ ಆ ಸೀಮೋಲ್ಲಂಘನ ಮಾಡಿ ಅಂತರ್‌ರಾಷ್ಟ್ರೀಯ ದಿಗಂತದಲ್ಲಿ ಏಶ್ಯಾದ ತಾರೆಯಾಗಿ ವಿರಾಜಮಾನವಾಗಿರುವುದು ಸಹಜವಾಗಿಯೇ ಕನ್ನಡಿಗರಿಗೆ ಸಂಭ್ರಮಾಚರಣೆಯ ಸಂಗತಿ. ಇಂಥದೊಂದು ಸಂಭ್ರಮಾಚರಣೆಗೆ ಸಾಕ್ಷಿಯಾಗಿತ್ತು ಕಳೆದ ರವಿವಾರ (ಮಾ.17) ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ನಡೆದ ‘ಅಂಕಿತ-750’ ಸಮಾರಂಭ. ಏಶ್ಯಾ ದರ್ಪಣದಲ್ಲಿ ಕಾಣಿಸಿಕೊಂಡ ಕನ್ನಡಿಗ ಕಥೆಗಾರ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕಥಾ ಸಂಕಲನದ ಲೋಕಾರ್ಪಣೆ. ದಕ್ಷಿಣ ಏಶ್ಯಾ ಸಾಹಿತ್ಯದ ಡಿ.ಎಸ್.ಸಿ. ಪ್ರಶಸ್ತಿಗೆ ಪಾತ್ರವಾಗಿರುವ ಜಯಂತರ ಈ ಕಥಾ ಸಂಕಲನದ ಪ್ರಶಸ್ತಿ ಆವೃತ್ತಿಯನ್ನು ಅಂಕಿತ ಪುಸ್ತಕ ತನ್ನ 750ನೇ ಪ್ರಕಟಣೆಯಾಗಿ ಪ್ರಕಟಿಸಿದ್ದು, ಖ್ಯಾತ ಭಾಷಾ ಶಾಸ್ತ್ರಜ್ಞ, ಇತಿಹಾಸಕಾರ ಪ್ರೊ.ಷ.ಶೆಟ್ಟರ್ ಇದನ್ನು ಲೋಕಾರ್ಪಣೆ ಮಾಡಿದಾಗ ತುಂಬಿತುಳುಕುತ್ತಿದ್ದ ಜಯಂತೋಕನ್ನಡಾಭಿಮಾನಕ್ಕೆ ಭರಪೂರ ಬಂದಿತ್ತು. ಲೋಕಾರ್ಪಣೆಯೊಂದಿಗೆ ಲೇಖಕರ ಜೊತೆ ರಸಸಂವಾದವೂ ಇತ್ತು. ವೇದಿಕೆಯ ಮೇಲೆ, ಎಲ್ಲ ಕಡೆಗಳಲ್ಲೂ ಅಭಿಮಾನಿ ಬಳಗ ತುಂಬಿದ್ದರಿಂದಲೋ ಏನೋ ‘ರಸಸಂವಾದ’ ಪ್ರಶಂಸೆಯ ಗಡಿ ದಾಟಿ ವಿಮರ್ಶೆಯ ಎಲ್ಲೆಯನ್ನು ತಲುಪಲಿಲ್ಲ. ಹೇಳಿ ಕೇಳಿ ಈ ಸಭೆಯೊಂದು ಹಿಗ್ಗಿನ ಕೂಟವಾದ್ದರಿಂದ ಇಲ್ಲಿ ವಿಮರ್ಶೆ ನಿರೀಕ್ಷಿತವಲ್ಲ.

ಜೀವನ ಪಥದಲ್ಲಿ, ಸಾಹಿತ್ಯ ಪಥದಲ್ಲಿ ಜಯಂತ ಕಾಯ್ಕಿಣಿಯವರದು ಒಂದು ‘ಮ್ಯಾರಥಾನ್ ಓಟ’. ಈ ಓಟದಲ್ಲಿ ಅವರು ಅರಗಿಸಿಕೊಂಡ ಜೀವನ ದರ್ಶನಗಳು, ಕಂಡುಕೊಂಡ ಸತ್ಯಗಳು, ಅವರು ಇಷ್ಟಪಟ್ಟ ಜೀವನ ಮೌಲ್ಯಗಳು, ಅವರ ಸಾಧನೆಗಳು ಇವೆಲ್ಲವೂ ಅವಲೋಕನಾರ್ಹ. ಜಯಂತ ಜನಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ತಂದೆ ಗೌರೀಶ ಕಾಯ್ಕಿಣಿ, ಸುಪ್ರಸಿದ್ಧ ಸಾಹಿತಿ, ಮೇಧಾವಿ. ಗೌರೀಶರ ಸಾಹಿತ್ಯ ರಚನೆ ವಿವಿಧ ಪ್ರಕಾರಗಳಲ್ಲಿ ಸಾಗಿ ಬಂದಿದ್ದು, ಏಳು ಸಂಪುಟಗಳಲ್ಲಿ ಅಡಗಿರುವ ಗೌರೀಶರ ಸಾಹಿತ್ಯವನ್ನು ಅಧ್ಯಯನ ಮಾಡಿಯೇ ಅವರ ಪ್ರಸ್ತುತತೆಯನ್ನು ಅರಿತುಕೊಳ್ಳಬೇಕು. ಹೀಗೆ ಜಯಂತ ಕಾಯ್ಕಿಣಿಗೆ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲತೆ ರಕ್ತಗತವಾಗಿ ಬಂದದ್ದು. ಗೋಕರ್ಣದಲ್ಲಿ ಹುಟ್ಟಿ-ಬೆಳೆದು, ಕುಮುಟಾ-ಧಾರವಾಡಗಳಲ್ಲಿ ಹೊಟ್ಟೆಪಾಡಿನ ಶಿಕ್ಷಣ ಮುಗಿಸಿದರು.ಸ್ನಾತಕೋತ್ತರರಾಗಿ ಉದ್ಯೋಗ ಅರಸುತ್ತಾ ಅಂದಿನ ಬಾಂಬೆ ಮುಟ್ಟಿದರು. ಅಲ್ಲಿ ಬಯೋಕೆಮಿಸ್ಟ್ ಆಗಿ ಇಪ್ಪತ್ಮೂರು ವರ್ಷ ದುಡಿದು, ಮುಂಬೈಯೊಳಗೊಬ್ಬ ಮುಂಬೈಗನಾಗಿ ಹೋಗಿದ್ದ ಜಯಂತ, ಯಾವ ಮೋಹನ ಮುರಳಿಯ ಕರೆಗೆ ಮನಸೋತೋ ಬೆಂಗಳೂರು ಸೇರಿದರು.

ಮುಂಬೈಯ ಇಪ್ಪತ್ಮೂರು ವರ್ಷಗಳು ಜಯಂತರ ಪಾಲಿಗೆ(ಕನ್ನಡ ಸಾಹಿತ್ಯದ ಪಾಲಿಗೂ)ಅತ್ಯಂತ ಫಲಪ್ರದವಾದ ವರ್ಷಗಳು. ಅವರು ಬರೆದಿರುವ ಬಹುತೇಕ ಕಥೆಗಳು ಮುಂಬೈ ಕೇಂದ್ರಿತ. ‘‘ಹೌದು ಮತ್ತೆ ನಮ್ಮನ್ನು ಸಾಕಿ ಬೆಳೆಸಿದ್ದು ಮುಂಬೈ, ಯಾರಯಾರದ್ದೂ ಹೆಸರಿಟ್ಟುಕೊಂಡು, ಹಾಗೆಲ್ಲ ಮುಂಬೈಗೆ ಅಪಮಾನ ಮಾಡಬಾರದು ನಾವು’’ ಎಂದು ದೃಢವಾಗಿ ನಂಬಿದ ಕನ್ನಡ ಚೇತನ. ಮುಂಬೈಯಲ್ಲಿದ್ದಾಗಲೇ ಅವರ ಪ್ರಮುಖ ಕಥಾ ಸಂಕಲನಗಳು ಪ್ರಕಟಗೊಂಡವು. ‘ತೆರೆದಷ್ಟೇ ಬಾಗಿಲು’, ಮೊದಲ ಕಥಾ ಸಂಕಲನ. ‘ದಗಡೂ ಪರಬನ ಅಶ್ವಮೇಧ’, ‘ಅಮೃತಬಳ್ಳಿ ಕಷಾಯ’, ‘ಬಣ್ಣದ ಕಾಲು’, ‘ತೂಫಾನ್ ಮೇಲ್’, ‘ಚಾರ್ ಮಿನಾರ್’, ‘ನೋ ಪ್ರೆಸೆಂಟ್ಸ್ ಪ್ಲೀಸ್’ ಜಯಂತರ ಕಥಾ ಸಂಕಲನಗಳು. ‘ರಂಗದಿಂದೊಂದಿಷ್ಟು ದೂರ’, ‘ಕೋಟಿ ತೀರ್ಥ’, ‘ನೀಲಿ ಮಳೆ’, ‘ಒಂದು ಜಿಲೇಬಿ’ ಅವರೊಳಗಣ ಕವಿಯ ಅಭಿವ್ಯಕ್ತಿ. ನೀನಾಸಮ್ ಸಹವಾಸ ಪ್ರೇರಿತ, ‘ಸೇವಂತಿ ಪ್ರಸಂಗ’, ‘ಜತೆಗಿರುವನು ಚಂದಿರ’, ‘ಇತಿ ನಿನ್ನ ಅಮೃತ’ ನಾಟಕಗಳು.

ಎದೆಯೊಳಗೆ ಮುಂಬೈ ಜೀವನಕ್ಕೆ ಕಾವು ಕೊಡುತ್ತಾ, ಏನು ಕಾರಣವೋ ಏನೋ 23 ವರ್ಷಗಳ ಆ ಜೀವನಕ್ಕೆ ವಿದಾಯ ಹೇಳಿ ಕನ್ನಡ ಪ್ರೀತಿಯನ್ನರಸುತ್ತಾ ಬೆಂಗಳೂರು ತಲುಪಿದರು. ‘ಭಾವನಾ’ ಸಂಪಾದಕರಾಗಿ ಪತ್ರಕರ್ತರೆನಿಸಿಕೊಂಡರು. ದೂರದರ್ಶನ ಕಾರ್ಯಕ್ರಮಗಳಲ್ಲಿ ಮಿಂಚಿದರು. ಕನ್ನಡ ಚಲಚಿತ್ರ ರಂಗ ಪ್ರವೇಶಿಸಿದರು. ‘ಮುಂಗಾರು ಮಳೆ’ಗೆ ಕಾಯುತ್ತಾ ಬೆಂದುಬರಡಾಗಿ ನಿಂತ ಚೈತ್ರದ ಭೂಮಿಯಂತಿದ್ದ ಕನ್ನಡ ಚಲಚಿತ್ರ ಸಾಹಿತ್ಯಕ್ಕೆ ನವಚೈತನ್ಯ ತುಂಬಿದರು.ಗೋಕರ್ಣದ ಅಚ್ಚ ಮುಂಬೈ ಕನ್ನಡಿಗ ಜಯಂತ ಬೆಂಗಳೂರಿನ ಕನ್ನಡಿಗರಾದರು. ಕನ್ನಡಿಗರ ಮನೆಮಾತಾದರು. ಎಲ್ಲರ ಮನ ಗೆದ್ದರು.ಅವರನ್ನು ಆದರಿಸುತ್ತಿರುವ ಬೆಂಗಳೂರು ಮುಂಬೈಯಂತೆ ಅವರ ಕಥಾ ಕ್ಷೇತ್ರವಾದೀತೇ? ಅಭಿಮಾನಿಯೊಬ್ಬರ ಪ್ರಶ್ನೆ. ಮುಂಬೈಯನ್ನು ಕಂಡ ಮುಗ್ಧ ಕಣ್ಣುಗಳಿಂದ ಬೆಂಗಳೂರನ್ನು ಕಾಣಲಾದೀತೇ?

ಎಲ್ಲಿ ಪ್ರೀತಿ ಇದೆ, ಎಲ್ಲಿ ಪ್ರೀತಿ ಇಲ್ಲ; ಎಲ್ಲಿ ಮಾನವ ಹೃದಯ ಮಿಡಿಯುತ್ತದೆ, ಎಲ್ಲಿ ಅಂತ:ಕರಣ ಮಿಡಿಯುತ್ತಿಲ್ಲ ಎಂದು ತಡಕಾಡುತ್ತಿರುವ ನವಮಾನವ ಸಂವೇದನೆಯ ವಿಶ್ವ ಪ್ರಜ್ಞೆಗೆ ಸಂವಾದಿಯಾಗಿರುವ ಜಯಂತರಿಗೆ ಶಾರ್ಕುಗಳಿರುವ ಮಹಾಸಾಗರ ಮುಂಬೈ, ಅಮಾನವೀಯತೆಯಲ್ಲಿ ಅದರ ಪಡಿ ನೆಳಲಾಗಿರುವ ಬೆಂಗಳೂರು, ಥಾರ್ ಮರುಭೂಮಿ, ನಿರ್ಭಯ ದಿಲ್ಲಿ ಎಲ್ಲಾ ಒಂದೇ.-ಮಾನವ ಪ್ರೀತಿ ಮತ್ತು ಅಮ್ಮನ ಜೀವಜಲ ‘ಅಮೃತಬಳ್ಳಿ ಕಷಾಯ’ದ ಹನಿಗಳಿಗಾಗಿ ಕಾದುಕುಳಿತಿರುವ ಜನಾರಣ್ಯಗಳಂತೆ ಕಂಡರೆ ಆಶ್ಚರ್ಯವೇನಿಲ್ಲ. ಇಲ್ಲೆಲ್ಲ ಮಾನವ ಪ್ರೀತಿಯನ್ನು ಬಿತ್ತುವ ಕಥೆಗಾರ ಜಯಂತರ ಕರುಣಾಪೂರ್ಣ ದೃಷ್ಟಿಗೆ ಏಶ್ಯಾ ಸಾಹಿತ್ಯ ಡಿ.ಎಸ್.ಸಿ. ಪ್ರಶಸ್ತಿಯ ತೀರ್ಪುಗಾರರು ಮಾರುಹೋಗಿರುವುದರಲ್ಲೂ ಸೋಜಿಗವೇನಿಲ್ಲ. ಕನ್ನಡ ವಿಮರ್ಶೆ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದಾರೆ ಎಂಬುದು ನಾವು ಕರುಬುತ್ತಲೂ ಮೆಚ್ಚಿಕೊಳ್ಳಬೇಕಾದ ಅಂಶ. ಜಯಂತರ ಯಶಸ್ಸಿನ ಸೋಪಾನಗಳು ಹಲವಾರು.ಆದರೆ ಕಥಾ ಸಾಹಿತ್ಯ ಅವರ ಯಶಸ್ಸಿನ ಶೃಂಗ. ಬದುಕನ್ನು ಕುರಿತಾದ ನಮ್ಮ ದೃಷ್ಟಿಕೋನವನ್ನೂ, ಸಾಹಿತ್ಯವನ್ನು ಕುರಿತ ನಮ್ಮ ತಿಳಿವಳಿಕೆಯನ್ನೂ ಹಿಗ್ಗಿಸಿದ ಈ ಪುಸ್ತಕಕ್ಕೆ ನಾವು ಋಣಿಯಾಗಿದ್ದೇವೆ ಎನ್ನುವ ತೀರ್ಪುಗಾರರ ಮಾತುಗಳನ್ನು ಪರಾಮರ್ಶಿಸುವ ಮುನ್ನ, ನಮ್ಮ ವಿಮರ್ಶೆ ಗುರುತಿಸದೇ ಇರುವ ಕನ್ನಡ ಸಣ್ಣ ಕತೆಯ ಹೊರಳು-ಪಲ್ಲಟಗಳ ಒಂದು ವಿಹಂಗಮ ನೋಟವಾದರೂ ಅಗತ್ಯವೆನಿಸುತ್ತದೆ.
 
ಜಯಂತ ಕಾಯ್ಕಿಣಿ ಕನ್ನಡದಲ್ಲಿ ನವ್ಯ ಚಳವಳಿ ಪ್ರಾದುರ್ಭವಿಸುತ್ತಿದ್ದ ಕಾಲಘಟ್ಟದಲ್ಲೇ ಕಥೆಗಳ ರಚನೆಯಲ್ಲಿ ತೊಡಗಿಕೊಂಡಿದ್ದರಾದರೂ ಅವರ ಮೊದಲ ಕಥಾ ಸಂಕಲನ ‘ತೆರೆದ ಬಾಗಿಲು’ ಪ್ರಕಟವಾದದ್ದು 1982ರಲ್ಲಿ. ಇದರಲ್ಲಿ 1975ರಿಂದ 1982ರವರೆಗೆ ಬರೆದ ಏಳು ಕಥೆಗಳಿವೆ. 1989ರಲ್ಲಿ ‘ದಗಡೂ ಪರಬನ ಅಶ್ವಮೇಧ’ ಮತ್ತು 1996ರಲ್ಲಿ ‘ಅಮೃತಬಳ್ಳಿ ಕಷಾಯ’ ಪ್ರಕಟಗೊಂಡಿವೆ. ಈ ಎರಡೂ ಸಂಕಲನಗಳ ನಡುವಣ ಅವಧಿ, ಕನ್ನಡದಲ್ಲಿ ಸಣ್ಣಕಥೆ ನವ್ಯದ ಉತ್ತುಂಗವನ್ನೂ ಇಳಿಜಾರನ್ನೂ ಕಂಡ ಕಾಲಘಟ್ಟ. ವ್ಯಕ್ತಿಕೇಂದ್ರಿತ,ಅಹಂಕೇಂದ್ರಿತ, ಲಿಬಿಡೋಕೇಂದ್ರಿತ ಇತ್ಯಾದಿ ಆರೋಪಗಳಿಗೆ ಗುರಿಯಾಗಿದ್ದ ನವ್ಯಕಥೆ, ಸಮುದಾಯ ಕೇಂದ್ರಿತವಾಗಲು ಹಾತೊರೆಯುತ್ತಿದ್ದ ಕಾಲಘಟ್ಟವಿದು. ದಲಿತ, ಬಂಡಾಯಗಳು ಪುರೋಹಿತಶಾಹಿ ಪರಂಪರೆಯನ್ನೂ ನವ್ಯದ ವ್ಯಕ್ತಿಸ್ವೋಪಜ್ಞ ನಿಷ್ಠ ದೃಷ್ಟಿಕೋನವನ್ನೂ ಧಿಕ್ಕರಿಸಿ ಶೋಷಿತ ಸಮುದಾಯಗಳಿಗೆ ದನಿಯಾಗಲು ಪ್ರಯತ್ನಿಸುತ್ತಿದ್ದವು. ಸಾಮಾಜಿಕ ಬದ್ಧತೆಯೊಂದೇ ಸಾಕೇ? ಕಲಾತ್ಮಕತೆ, ತಂತ್ರ, ಭಾಷೆಯ ಸೃಜನಶೀಲ ಸಂವೇದನಾ ಬಿಂದುಗಳು ಯಾವುವು-ಇವೆಲ್ಲದರ ಬಗ್ಗೆ ತಡಕಾಡುತ್ತಾ ತಮ್ಮ ಅನನ್ಯತೆ ಛಾಪಿಸಲು ಹೊಸಪೀಳಿಗೆಯ ಕಥೆಗಾರರು ಹಪಹಪಿಸುತ್ತಿದ್ದ ದಿನಗಳು.

ಇಂಥ ಸಂದಿಗ್ಧ ಕಾಲಘಟ್ಟದಲ್ಲೇ, ಪಂಜೆ-ಮಾಸ್ತಿಯವರ ಕಥನ ಕ್ರಮವನ್ನೂ, ನವ್ಯರ ಕಲಾತ್ಮಕ ಶಿಸ್ತನ್ನೂ, ಆಧುನಿಕ ಮಾನವ ಪ್ರಜ್ಞೆಯನ್ನೂ ಮೈಗೂಡಿಸಿಕೊಂಡು ಹೊಸಬಗೆಯ ಕಥನ ಮಾರ್ಗವನ್ನು ರೂಪಿಸಿಕೊಳ್ಳುವ ಪ್ರಯೋಗಶೀಲತೆ ಕಂಡುಬಂದಿತು. ಅಂದರೆ, ಪರಂಪರೆಯ ಕಥನ ಶೈಲಿ, ಸೃಜನಶೀಲ ಮಾಧ್ಯಮವಾದ ಭಾಷೆಯನ್ನು ರೂಪಕ, ಸಂಕೇತ, ಪ್ರತಿಮೆಗಳಾಗಿ ಪರಿವರ್ತಿಸುವ ಬಗೆ, ಸಮುದಾಯ ಪ್ರಜ್ಞೆ ಮತ್ತು ಆಧುನಿಕ ಮಾನವ ಪ್ರಜ್ಞೆಯನ್ನು ದುಡಿಸಿಕೊಳ್ಳುವ ಪರಿ-ಈ ಪ್ರಯೋಗಶೀಲತೆಯ ಹಿಂದಿನ ಮುಖ್ಯಕಾಳಜಿಯಾಗಿತ್ತು. ಆ ದಿನಗಳಲ್ಲಿ ಈ ಪರಿಯ ಪ್ರಯೋಗಶೀಲತೆಯಲ್ಲಿ ತೊಡಗಿಕೊಂಡವರಲ್ಲಿ, ಜಯಂತ ಕಾಯ್ಕಿಣಿ, ವಿವೇಕ ಶಾನುಭಾಗ, ರಾಘವೇಂದ್ರ ಪಾಟೀಲ, ಕೆ.ಸತ್ಯನಾರಾಯಣ ಮುಖ್ಯರು. ಪರಂಪರೆಯಿಂದ ಕಥನ ಸತ್ತ್ವ, ನವ್ಯರಿಂದ ಕಲಾತ್ಮಕ ಶಿಸ್ತು, ದಲಿತಬಂಡಾಯದವರಿಂದ ಸಾಮಾಜಿಕ ಬದ್ಧತೆ-ಈ ತ್ರಿಗುಣಗಳನ್ನು ಪಡೆದುಕೊಂಡ ಕಥಾ ಸಂಯೋಗವಿದು. ಆಧುನಿಕ ಸಂವೇದನೆಯ ಮಾನವೀಯ ದೃಷ್ಟಿಕೋನ, ಗಟ್ಟಿಮುಟ್ಟಾದ ಕಥಾನಕ, ಈ ಕಥನದ ಮೈಯಲ್ಲಿ ಅದರ ಅವಿಭಾಜ್ಯ ಅಂಗವಾಗಿ ಅವತರಿಸುವ ಧ್ವನಿಪೂರ್ಣ ಸಂಕೇತಗಳು, ಪ್ರತಿಮೆಗಳು, ರೂಪಕಗಳು ಜಯಂತ, ವಿವೇಕರು ಕಂಡುಕೊಂಡ ಹೊಸ ಕಥನ ಮಾರ್ಗ.

ಈ ಮಾರ್ಗದ ಇನ್ನೊಂದು ಲಕ್ಷಣವೆಂದರೆ ಅವುಗಳ ಮುಕ್ತ ಅಂತ್ಯ. ರಾಘವೇಂದ್ರ ಪಾಟೀಲರು ದೇಸಿಗತಿಯ ಲಯದಲ್ಲಿ ಆಧುನಿಕ ‘ದೇಸಗತಿ’ಯನ್ನೂ ಸಾಮಾಜಿಕ ಪಲ್ಲಟಗಳನ್ನೂ ಸಮರ್ಥವಾಗಿ ಬಳಸಿಕೊಂಡು ಆಧುನಿಕ ಸಮಾಜದ ‘ಪುರಾಣಿಕ’ರಾದರು. ಕೆ.ಸತ್ಯನಾರಾಯಣ, ಮಾಸ್ತಿಯವರ ಕೆಲವು ಸಣ್ಣ ಕತೆಗಳಂತೆ, ಪ್ರಸಂಗ ಪ್ರಕರಣಗಳನ್ನು ಕಥಿಸುತ್ತಲೇ ಇಡೀ ಕಥೆಯನ್ನು ಬದುಕಿನ ಒಂದು ರೂಪಕವಾಗಿಸುವ ರೀತಿರಿವಾಜುಗಳಲ್ಲಿ ಕಥೆಗಳನ್ನು ಬರೆದರು. ಇದೇ ಸಮಯದಲ್ಲಿ ಮೊಗಳ್ಳಿ ಗಣೇಶ, ಅಮರೇಶ ನುಗಡೋಣಿಯವರು ಶೋಷಿತ ದಲಿತ ಸಮುದಾಯವನ್ನು ಮುಖ್ಯ ದ್ರವ್ಯವಾಗಿಸಿಕೊಂಡು ಅವರ ಬದುಕಿನ ಲಯದಲ್ಲೇ ಜನಪದದಲ್ಲಿ ಕಥಿಸಿರುವ ಪರಿಯೂ ವಿಶೇಷವಾದುದು.

ಪರಂಪರೆ, ಆಧುನಿಕತೆ, ನವ್ಯತೆ, ಸಾಮಾಜಿಕ ಬದ್ಧತೆಗಳ ಅಪೂರ್ವ ಸಂಲಗ್ನವಿದು. ಕನ್ನಡ ಸಣ್ಣ ಕಥೆ 80-90ರ ದಶಕದಲ್ಲಿ ಕಂಡುಕೊಂಡ ಈ ಹೊಸ ಹೊರಳು-ಪಲ್ಲಟವನ್ನು ವಿಮರ್ಶೆ ಅಷ್ಟಾಗಿ ಗಮನಿಸಿದಂತಿಲ್ಲ. ಜಿ.ಎಸ್.ಅಮೂರರ ‘ಕನ್ನಡ ಕಥನ ಸಾಹಿತ್ಯ-ಸಣ್ಣಕತೆ’ ಗ್ರಂಥದಲ್ಲಿ ಇಂಥದೊಂದು ಹೊಳಹು ಕಾಣುತ್ತದೆ. ಜಯಂತರು ಕನ್ನಡದ ಪ್ರಮುಖ ನವ್ಯ ಹಾಗೂ ನವ್ಯೋತ್ತರ ಲೇಖಕರೊಡನೆ ಹಲವಾರು ಸಂಬಂಧಗಳನ್ನು ಹೊಂದಿರುವುದನ್ನು ಅಮೂರರು ಗುರುತಿಸಿದ್ದಾರೆ. ಈ ನಾಲ್ಕೈದು ಮಂದಿ ಕಥೆಗಾರರಲ್ಲಿ ಪ್ರಧಾನವಾಗಿ ಕಾಣುವ ಈ ಪಲ್ಲಟ ಇತ್ಯಾತ್ಮಕವಾದ ಬೆಳವಣಿಗೆ. ಧೋರಣಾತ್ಮಕ ಬದಲಾವಣೆ, ಕಲಾತ್ಮಕ ಶಿಸ್ತು ಇವುಗಳಿಂದಾಗಿ ಇವರ ಕಥೆಗಳು ನವಮಾನವತಾವಾದಿ ಕಥೆಗಳಂತೆ-ನ್ಯೂ ಹ್ಯೂಮನಿಸ್ಟಿಕ್ ಅಪ್ರೋಚ್ ಎಂಬಂಥ ಬೋಧ ಉಂಟುಮಾಡುತ್ತವೆ. ಭಾಷೆಯ ಸೃಜನಶೀಲ ಸಾಧ್ಯತೆಗಳು, ಕಲಾತ್ಮಕತೆ ಗಳನ್ನು ದುಡಿಸಿಕೊಳ್ಳುವುದರ ಜೊತೆಗೆ ಸಮುದಾಯ ಪ್ರಜ್ಞೆ, ವಿಶಿಷ್ಟ ಸಂವೇದನೆಗಳನ್ನು ಅವುಗಳ ಲಯವಿಸ್ತಾರಗಳೊಂದಿಗೆ ಕಥೆಯ ಒಡಲಲ್ಲಿ ನೇಯುವ ಶ್ರದ್ಧಾಪೂರ್ವಕ ಪ್ರಯತ್ನಗಳಿಂದಾಗಿ ಇವರ ರಚನೆಗಳು ಜಾತಿ-ವರ್ಗಗಳನ್ನು ದಾಟಿಕೊಂಡು ಆಖೈರಾಗಿ ಮಾನವ ನಾಗರಿಕತೆ ಮತ್ತು ಸಮಾಜಗಳ ಬಗ್ಗೆ ಚಡಪಡಿಸುತ್ತವೆ.

ಇಲ್ಲಿ ಬಂಡಾಯವಿದ್ದರೂ ‘ಬಂಡಾಯವಿಲ್ಲ’, ಕ್ರಾಂತಿ ಇದ್ದರೂ ‘ಕ್ರಾಂತಿ’ಯ ಸೊಲ್ಲುಗಳಿಲ್ಲ; ನೋವಿದ್ದರೂ ಆಕ್ರಂದನವಿಲ್ಲ, ಭಾವಾವೇಶವಿಲ್ಲ;ವಿಷಾದ-ವಿಡಂಬನೆಗಳಿದ್ದರೂ ಮಗ್ಗುಲ ಮುಳ್ಳಿಲ್ಲ. ಇವರ ಕಥೆಗಳಲ್ಲಿ ಸ್ಪಷ್ಟವಾಗಿ ಕೇಳಿಬರುವುದು ಉತ್ತಮ ನಾಗರಿಕ ಬದುಕಿನ ಕಾಳಜಿಯ ಪಲುಕುಗಳು. ಇನ್ನು ಪ್ರಶಸ್ತಿಗೆ ಬರೋಣ. ಏಶ್ಯಾ ಸಾಹಿತ್ಯ ಪ್ರಶಸ್ತಿ ಸಮಿತಿ ತೀರ್ಪುಗಾರರು ಹೀಗೆ ಅಭಿಪ್ರಾಯಪಟ್ಟಿದ್ದಾರೆ: ‘‘ಸುಸ್ಪಷ್ಟವಾಗಿದ್ದೂ ಆಂತರಿಕ ಸಂಘರ್ಷಗಳನ್ನುಳ್ಳ, ಚೈತನ್ಯಶಾಲಿಯಾಗಿದ್ದೂ ಏಕಾಂಗಿಯಾ ಗಿರುವ, ನಿತ್ಯದ ಸಮರಕ್ಕೆ ಸನ್ನದ್ಧನಾಗಿದ್ದಾಗಲೂ ಉದಾರ ಹೃದಯಿಯಾಗಿರುವ ಭೂಮಿಕೆ. ನಾವಿನ್ನೂ ನೋಡಿರದಂಥ ಮುಂಬೈ ‘ಇದು’. ಅಭಿಲಾಷೆ ಮತ್ತು ಭಯ, ಸ್ವಪ್ನ ಮತ್ತು ಭಗ್ನಹೃದಯಗಳಿಂದಲೇ ಜೋಡಿಸಲ್ಪಟ್ಟ ಮುಂಬೈ. ಮಾಧ್ಯಮಗಳಲ್ಲಿ ಝಗಮಗ ಮೆರೆಯುವ, ಹಣದ ಥೈಲಿಗಳಲ್ಲಿ ಬಿರಿಯುವ, ಬಾಂದ್ರ ಮಲಬಾರ್‌ಹಿಲ್‌ಗಳ ಮುಂಬೈಯಲ್ಲ. ಅದರ ‘ಆಲ್ಟರ್ ಇಗೋ’ದಂತೆ, ಅದೃಶ್ಯವಾಗಿಯೇ ಇರುವ ಬೋರಿವಿಲಿ ಮುಲುಂಡ್‌ಗಳ ಮುಂಬೈ ಇದು. ಕಾಯ್ಕಿಣಿ ನಚ್ಚುಗೆಯಿಂದ ರೂಪಿಸುವ ಮುಂಬೈಯ ಈ ಭಾವ ಚಿತ್ರಣಕ್ಕೆ ಸುದೀಪ್ತವಾದ ವಿವರಗಳು ಎಲ್ಲಿಂದ ಬರುತ್ತವೆ? ಹಿಡಿಸಲಾರದಷ್ಟು ಜನರನ್ನು ಒಡಲಲ್ಲಿಟ್ಟು ಸಾಕುವ ಠಾಣೆಯ ಚಾಳ್‌ಗಳಿಂದ, ಉಕ್ಕಿಹರಿಯುವ ಮಾಹಿಮ್‌ನ ಕೊಳಚೆ ಧಾರಾವಿಯ ಧಾರೆಯಿಂದ, ನೀರವ ರಾತ್ರಿಗಳಲ್ಲಿ ಚೆಲ್ಲಾಟ ನಡೆಸುವ ಬೃಹತ್ ಸಿನೆಮಾ ಪೋಸ್ಟರುಗಳಿಂದ, ಹಠಾತ್ ಮತೀಯ ಗಲಭೆಯ ನಂತರದ ತ್ರಸ್ತ ನಿರ್ಜನ ಬೀದಿಗಳಿಂದ, ಇಡೀ ಶಹರವನ್ನೇ ತಮ್ಮ ಪುಟ್ಟ ಗ್ರೀಸ್ ಮೆತ್ತಿದ ಕೈಗಳಿಂದ ಎತ್ತಿಹಿಡಿದಿರುವ ಪುಟ್ಟ ಪೋರರಿಂದ, ಕೆಂಪು ಕೂಪಗಳಲ್ಲಿ ಉಬ್ಬೆಗೆ ಬಿದ್ದ ಯುವತಿಯರಿಂದ....!.’’

-ಜಯಂತರ ಕಥೆಗಳ ರೂಪಕದಂತೆಯೇ ತೋರುವ ಈ ವಿಮರ್ಶೆಯಲ್ಲಿನ ತಲ್ಲಣ ಮತ್ತು ಚಡಪಡಿಕೆಗಳನ್ನು ಗಮನಿಸಿ. ಜಯಂತರ ಕಥೆಗಳಲ್ಲ್ಲಿನ ‘ಮಾನವ ಬದುಕಿಗೆ ಸ್ಪಂದಿಸಿರುವ’ ಈ ಬಗೆಯೇ ಕಥೆಗಳ ಪರಿಣಾಮವನ್ನು ಸೂಚಿಸುತ್ತದೆ.
‘‘ಧ್ವನಿ ಮತ್ತು ಅರ್ಥಗಳ ನಡುವಿನ ಸೂಕ್ಷ್ಮ ಹಿಂಜರಿಕೆಯೇ ಕಾವ್ಯ’’ ಎನ್ನುವ ಪೌಲ್ ವೆಲೆರಿಯ ಮಾತುಗಳಿಗೆ ಈ ಸಂಕಲನದ ಶ್ರೇಷ್ಠ ಕಥೆಯಾದ ‘ಅಮೃತಬಳ್ಳಿ ಕಷಾಯ’ ಅಪ್ಪಟ ಉದಾಹರಣೆಯಾದೀತು. ಇಲ್ಲಿ ಅಬ್ಬರದ ದನಿಯಿಲ್ಲ, ಸಂದೇಶ ಹೊರಡಿಸುವ ಒತ್ತಡವಿಲ್ಲ. ಬಾಂಬ್ ಸರಣಿ ಸ್ಫೋಟದಲ್ಲಿ ಮುಂಬೈ ಮಹಾನಗರ ತತ್ತರಿಸಿ ತಲ್ಲಣಿಸುತ್ತಿದ್ದಾಗ ಹುಟ್ಟಿದ ಕಥೆ ಇದು. ಇದೊಂದು ರೂಪಕನಿಷ್ಠ ಕಥೆ. ಗಂಗಾಧರ ಒಂದು ಫೋಟೋ ಫ್ರೇಮ್ ವರ್ಕ್ಸ್ ಅಂಗಡಿಯ ಮಾಲಕ. ಯಾರೋ ಆರ್ಡರು ಕೊಟ್ಟು ಕಟ್ಟುಹಾಕಿಸಿದ ಮೂರು ಫೋಟೋಗಳು, ಅವರು ವಾಪಸು ತೆಗೆದುಕೊಂಡು ಹೋಗದೇ ಹಾಗೇ ಉಳಿದುಬಿಟ್ಟಿವೆ. ಗಂಗಾಧರನ ತಾಯಿ ಅಮೃತಬಳ್ಳಿ ಕಷಾಯ ತಯಾರಿಸಿ ಊರಿನವರ ಬೇನೆಗಳನ್ನೆಲ್ಲ ಅದರಿಂದ ಗುಣಪಡಿಸುತ್ತಾ ಊರಿಗೆಲ್ಲ ಉಪಕಾರಿಯಾಗಿ ಬಾಳುತ್ತಿರುವ ಹೆಂಗಸು. ಫೋಟೋಗಳನ್ನು ಏನು ಮಾಡುವುದು ಎಂದು ಗಂಗಾಧರ ತಾಯಿಯ ಸಲಹೆ ಕೇಳುತ್ತಾನೆ.

‘ಹಾಗೇ ಇಟ್ಟಿರು, ಎಂದೋ ಅವು ಉಪಯೋಗಕ್ಕೆ ಬರುತ್ತವೆ’ ಎನ್ನುತ್ತಾಳೆ ತಾಯಿ. ಮುಂದೆ ನಾಟಕ ಕಂಪೆನಿಯೊಂದರ ಮಾಲಕ ಬಂದು, ರಂಗದ ಹಿಂದಿನ ತೆರೆಯ ಮೇಲೆ ಹಾಕಲು ತನಗೆ ಬೇಕೆಂದು ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಾನೆ. ಇದಾದ ನಾಲ್ಕೇ ದಿನಕ್ಕೆ ಒಬ್ಬ ಯುವಕ ಬರುತ್ತಾನೆ. ಈ ಯುವಕ ಒಬ್ಬಳನ್ನು ಪ್ರೀತಿಸಿದ್ದಾನೆ. ಅವಳ ತಂದೆತಾಯಿಗಳೂ ಮಗಳನ್ನು ಕೊಡಲು ಒಪ್ಪಿದ್ದಾರೆ. ಆದರೆ ವರನಿಗೆ ತಂದೆ-ತಾಯಿ ಇರಬೇಕೆಂದು ಅವರ ಶರತ್ತು. ಯುವಕನಿಗೆ ತಂದೆತಾಯಿ ಇಲ್ಲ. ಆದರೆ ಇದ್ದಾರೆ ಎಂದು ಮನವರಿಕೆಮಾಡಿಕೊಡಲು ಫೋಟೋಗಳಾದರೂ ಬೇಕು.ಅಂಥ ಫೋಟೋ ಏನಾದರೂಮಾಡಿ ತನಗೆ ಕೊಡಿ ಎಂದು ಅವನು ಗಂಗಾಧರನಿಗೆ ದುಂಬಾಲು ಬೀಳುತ್ತಾನೆ. ಇದ್ದ ಫೋಟೋಗಳನ್ನು ಮಾರಿ ಬಿಟ್ಟಾಗಿದೆ. ಏನು ಮಾಡುವುದು? ಅವನಿಗೆ ನೆನಪಾಗುತ್ತದೆ.ಆಸ್ಪತ್ರೆಯಲ್ಲಿರುವ ರೋಗಿ ಹುಡುಗನೊಬ್ಬನಿಗೆ ಆರೈಕೆ ಮಾಡುತ್ತಿರುವ ತಾಯಿ ಅವನಿಗೆ ತನ್ನ ನೀಲಿ ಅಂಗಿಯನ್ನು ತೊಡಿಸಿರುವುದು ಕಣ್ಣಿಗೆ ಕಟ್ಟಿದಂತಾಗುತ್ತದೆ. ಅವನು ಆ ಪ್ರೇಮಿ ಯುವಕನಿಗೆ ಮನೆಯಲ್ಲಿದ್ದ ತಂದೆಯ ಫೋಟೋವನ್ನೇ ಕೊಟ್ಟು ಕಳಿಸಿಬಿಡುತ್ತಾನೆ. ಕಥೆ ವಿಚಿತ್ರವಾಗಿ ಕಂಡರೂ, ನಮ್ಮದೆನ್ನುವ ಎಲ್ಲದರ ಸಾರ್ಥಕತೆ ಪರರಿಗಾಗಿ ಅದನ್ನು ಬಳಸುವುದರಲ್ಲಿದೆ ಎನ್ನುವ ಸಂದೇಶವಿದೆ. ಜಡ್ಡು ಹಿಡಿದ ದೇಶಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂಬಂತೆ ಎಲ್ಲರಿಗೂ ಅಮೃಬಳ್ಳಿ ಕಷಾಯ ಕುಡಿಸುವ ತಾಯಿ, ನಮಗೆ ಗಾರ್ಕಿ, ಬ್ರೆಕ್ಟರ ತಾಯಿಯಂತೆಯೇ ಕಂಡರೆ, ನೀಲಿ ಅಂಗಿ, ಫ್ರೇಮುಗಳು, ಅವುಗಳೊಳಗೆ ಬಂದಿಯಾದ ವ್ಯಕ್ತಿಗಳು, ಕಟ್ಟುಹಾಕಿದ ಕಂಗೆಡಿಸುವ ಜಗತ್ತೊಂದರ (ಫ್ರೇಮ್ಡ್ ವಲ್ಡ್) ರೂಪಕದಂತೆ ಕಂಡು ಬೇರೊಂದು ಆಯಾಮ ತೆರೆದುಕೊಳ್ಳುತ್ತದೆ. ಹೀಗೆ ನಮ್ಮ ಮನಂಬುಗುವ ಜಯಂತ ಕಾಯ್ಕಿಣಿಗೆ ಪ್ರಶಸ್ತಿಗಳ ವಜನು ಕಡಿಮೆ ಏನಿಲ್ಲ. ನಾಸಿಕ್ ವಿದ್ಯಾ ಪೀಠದ ‘ಕುಸುಮಾಗ್ರಜ’, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ದಿಲ್ಲಿಯ ‘ಕಥಾ’ ಪುರಸ್ಕಾರ, ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್-ಹೀಗೆ ಹಲವಾರು. ಈಗ ಏಶ್ಯಾ ಸಾಹಿತ್ಯ ಪ್ರಶಸ್ತಿ. ಕನ್ನಡ ಸಣ್ಣ ಕತೆಯ ದಿಗಂತಗಳನ್ನು ವಿಸ್ತರಿಸುತ್ತಾ ವಿಶ್ವದೆತ್ತರಕ್ಕೆ ಕೊಂಡೊಯ್ಯುತ್ತಿರುವ ಜಯಂತನಿಗೆ-
ಸ್ವಸ್ತಿ-ಸ್ವಸ್ತಿ-ಸ್ವಸ್ತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)