varthabharthi

ಸಂಪಾದಕೀಯ

ಡೈರಿ ಬಿಚ್ಚಿಟ್ಟ ರಾಜಕೀಯ ಅಧಃಪತನ

ವಾರ್ತಾ ಭಾರತಿ : 25 Mar, 2019

ಕೆಲವು ತಿಂಗಳ ಹಿಂದೆ ‘ಆಡಿಯೊ’ ಒಂದರ ಮೂಲಕ ವಿವಾದಕ್ಕೊಳಗಾಗಿದ್ದ ಯಡಿಯೂರಪ್ಪ ಇದೀಗ ‘ಡೈರಿ’ಯ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಬಿಜೆಪಿಯು ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸುತ್ತಿದೆ. ಆದರೆ ಅದರ ಪಾಲಿಗೆ ಇದೀಗ ಯಡಿಯೂರಪ್ಪ ಅವರೇ ನುಂಗಲಾರದ ತುತ್ತಾಗಿದ್ದಾರೆ. ಈ ಡೈರಿ ಬಹಿರಂಗವನ್ನು ಬಿಜೆಪಿ ‘ಕಾಂಗ್ರೆಸ್’ ನ ತಲೆಗೆ ಕಟ್ಟುತ್ತಿದೆ. ಕಾಂಗ್ರೆಸ್ ನಾಯಕರು ಹೆಣೆದ ಸುಳ್ಳು ಕತೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ‘ಡೈರಿ ನಕಲಿಯೋ ಅಸಲಿಯೋ’ ಎನ್ನುವುದಕ್ಕಿಂತ ಮುಖ್ಯವಾಗಿ, ಚುನಾವಣೆ ಘೋಷಣೆಯಾದ ಬೆನ್ನಿಗೇ ಈ ಡೈರಿಯ ಜೆರಾಕ್ಸ್ ಕಾಪಿ ಬಹಿರಂಗವಾದುದರ ಹಿಂದೆ ಸ್ವತಃ ಬಿಜೆಪಿಯೊಳಗಿರುವ ಯಡಿಯೂರಪ್ಪ ವಿರೋಧಿ ಹಾಗೂ ಗಡ್ಕರಿ ವಿರೋಧಿ ಶಕ್ತಿಗಳ ಪಾತ್ರವೆಷ್ಟು ಎನ್ನುವುದೇ ಚರ್ಚೆಯ ಮುಖ್ಯ ವಿಷಯವಾಗಿ ಬಿಟ್ಟಿದೆ.

ಯಡಿಯೂರಪ್ಪ ‘ಇದೊಂದು ಸುಳ್ಳಿನ ಕಂತೆ’ ಎಂದಾಕ್ಷಣ ಅವರ ಹೊಣೆಗಾರಿಕೆ ಮುಗಿಯುವುದಿಲ್ಲ. ಯಾಕೆಂದರೆ ಈ ಹಿಂದೆ ಬೆಳಕಿಗೆ ಬಂದ ‘ಆಡಿಯೊ’ ಕುರಿತಂತೆಯೂ ಇದೇ ಹೇಳಿಕೆಯನ್ನು ಅವರು ನೀಡಿದ್ದರು. ಆದರೆ ಬಳಿಕ ಅವರು ತಪ್ಪೊಪ್ಪಿಕೊಂಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದಿಲ್ಲಿಯ ಬಿಜೆಪಿ ನಾಯಕರಿಗೆ ಗಣಿ ರೆಡ್ಡಿಗಳಿಂದ ಕಪ್ಪ ರವಾನೆಯಾಗುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಹಲವು ಬಾರಿ ವರದಿಯಾಗಿದ್ದವು. ವರ್ಷಕ್ಕೊಮ್ಮೆ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಭೇಟಿ ನೀಡುತ್ತಿದ್ದುದು, ಈ ಕಪ್ಪವನ್ನು ಸ್ವೀಕರಿಸುವುದಕ್ಕಾಗಿ ಎಂಬ ವದಂತಿಗಳೂ ಆಗ ವ್ಯಾಪಕವಾಗಿ ಹರಡಿದ್ದವು. ರೆಡ್ಡಿ ಸಹೋದರರ ತಲೆಯ ಮೇಲೆ ಸುಶ್ಮಾ ಸ್ವರಾಜ್ ಕೈಯಿಟ್ಟ ಚಿತ್ರಗಳೂ ಆಗ ಭಾರೀ ಜನಪ್ರಿಯತೆಯನ್ನು ಪಡೆದಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಡೈರಿಯಲ್ಲಿ ಬರೆಯಲಿ, ಬರೆಯದೇ ಇರಲಿ, ಯಡಿಯೂರಪ್ಪ ಅವರು ತಮ್ಮ ಕುರ್ಚಿ ಉಳಿಸುವುದಕ್ಕೋಸ್ಕರ 1800 ಕೋಟಿ ರೂಪಾಯಿ ನೀಡಿರುವುದು ತಿರಸ್ಕರಿಸುವಂತಹ ವಿಷಯವೇನೂ ಅಲ್ಲ. ಡೈರಿಯ ಕುರಿತಂತೆ ಐಟಿ ಅಧಿಕಾರಿಯೇ ಯಡಿಯೂರಪ್ಪ ಪರವಾಗಿ ಪತ್ರಿಕಾಗೋಷ್ಠಿ ಕರೆದಿರುವುದು ಇನ್ನೊಂದು ತಮಾಷೆಯಾಗಿದೆ. ಈವರೆಗೆ ಕೇಂದ್ರದ ನಾಯಕರಿಗಾಗಿ ಐಟಿ ಅಧಿಕಾರಿಗಳು ದಾಳಿಗಳನ್ನು ನಡೆಸುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದ್ದರೆ, ಇದೀಗ ತಮ್ಮ ನಾಯಕರನ್ನು ರಕ್ಷಿಸಲು ಪತ್ರಿಕಾಗೋಷ್ಠಿಯನ್ನು ನಡೆಸುವ ಹಂತಕ್ಕೆ ಅಧಿಕಾರಿಗಳು ತಲುಪಿದ್ದಾರೆ. ಡೈರಿ ಅಸಲಿಯೋ, ನಕಲಿಯೋ ಎನ್ನುವುದನ್ನು ಸಾಬೀತು ಮಾಡಬೇಕಾದವರು ಆರೋಪಕ್ಕೊಳಗಾಗಿರುವ ನಾಯಕರು. ಅದಕ್ಕಾಗಿಯೇ ಸಕಲ ದಾರಿಗಳೂ ಮುಕ್ತವಾಗಿಯೇ ಇವೆ.

ಹಸ್ತಾಕ್ಷರಗಳನ್ನು ಪರೀಕ್ಷಿಸುವುದಕ್ಕೆ ಆಧುನಿಕ ತಂತ್ರಜ್ಞಾನಗಳು ಸಾಕಷ್ಟಿವೆ ಮತ್ತು ಐಟಿ ಅಧಿಕಾರಿಗಳ ಕೆಲಸ ತೀರ್ಮಾನಗಳನ್ನು ನೀಡುವುದಲ್ಲ. ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಗಳಿವೆ. ಇದೇ ಸಂದರ್ಭದಲ್ಲಿ ಇಂತಹದೊಂದು ಭಾರೀ ಆರೋಪ ‘ಕಾರವಾನ್’ ಪತ್ರಿಕೆಯಲ್ಲಿ ಪ್ರಕಟವಾದ ಬಳಿಕವೂ ಯಾರೂ ಅದರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಮಾತನ್ನಾಡಿಲ್ಲ. ಕೇವಲ, ಕಾಂಗ್ರೆಸನ್ನು ಟೀಕಿಸುವ ಮೂಲಕವೇ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವುದು ಬಿಜೆಪಿಗೆ ಹೊಸತೇನೂ ಅಲ್ಲ. ಆದರೂ ಆ ಸಂಶೋಧನಾ ವರದಿಯ ವಿರುದ್ಧ ಯಾಕೆ ನ್ಯಾಯಾಲಯದ ಕಟಕಟೆಯನ್ನು ಹತ್ತಿಲ್ಲ ಎನ್ನುವ ಪ್ರಶ್ನೆಯೇ ಕೆಲವು ಕಟು ವಾಸ್ತವಗಳನ್ನು ತೆರೆದಿಡುತ್ತದೆ.

ಇಷ್ಟಕ್ಕೂ ಕೇವಲ ನಿರಾಕರಣೆಯ ಮೂಲಕ ಕೈ ಬಿಡುವ ಆರೋಪ ಇದಲ್ಲ. 1800 ಕೋಟಿ ರೂಪಾಯಿಗಳನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದಿಲ್ಲಿಯ ವರಿಷ್ಠರಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿವೆ. ಮುಖ್ಯವಾಗಿ ಜೇಟ್ಲಿ, ನಿತಿನ್ ಗಡ್ಕರಿಯಂತಹ ಹಿರಿಯ ನಾಯಕರಿಗೆ ಅವರು ಈ ಹಣವನ್ನು ನೀಡಿದ್ದಾರೆ. ಈಗಾಗಲೇ ಭ್ರಷ್ಟಾಚಾರ ಕಾರಣಕ್ಕಾಗಿ ಯಡಿಯೂರಪ್ಪ ಜೈಲು ನೋಡಿ ಬಂದವರು. ಯಡಿಯೂರಪ್ಪ ಒಂದು ವೇಳೆ ದಿಲ್ಲಿ ವರಿಷ್ಠರಿಗೆ ಕಪ್ಪ ನೀಡಿದ್ದರೆ ಅದು ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವೆನ್ನುವುದನ್ನು ಗ್ರಹಿಸುವುದಕ್ಕೆ ಯಾವ ತನಿಖೆಯೂ ಬೇಡ. ಈ ರಾಜ್ಯದಿಂದ ದೋಚಿದ ಹಣವನ್ನೇ ಅವರು ತಮ್ಮ ವರಿಷ್ಠರಿಗೆ ಸಲ್ಲಿಸಿದ್ದಾರೆ. ಅಂದರೆ, ಯಡಿಯೂರಪ್ಪರ ಭ್ರಷ್ಟಾಚಾರದಲ್ಲಿ ದಿಲ್ಲಿಯ ವರಿಷ್ಠರೂ ಭಾಗೀದಾರರು ಎಂದಾಯಿತಲ್ಲವೇ? ಲಂಚ ಕೊಟ್ಟವನು ಅಪರಾಧಿ ಎಂದಾದ ಮೇಲೆ ಪಡೆದವನೂ ಅಷ್ಟೇ ದೊಡ್ಡ ಮಟ್ಟದಲ್ಲಿ ಅಪರಾಧಿಯಾಗುತ್ತಾನೆ. ಹೀಗಿರುವಾಗ, ಯಡಿಯೂರಪ್ಪ ಮೇಲಿರುವ ಆರೋಪ ಗಂಭೀರ ತನಿಖೆಯೊಂದನ್ನು ಬೇಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಡೆದ ಹಗರಣಗಳು, ಅವರನ್ನು ಕೆಳಗಿಳಿಸಲು ಪಕ್ಷದೊಳಗೇ ನಡೆದ ಸಂಚು, ಆ ಸಂಚುಗಳನ್ನು ವಿಫಲಗೊಳಿಸಲು ಯಡಿಯೂರಪ್ಪ ಬಳಸಿದ ಹಣ ಮತ್ತು ಜಾತಿಯ ಬಲದ ಕುರಿತಂತೆ ಅರಿವಿರುವವರಿಗೆ 1800 ಕೋಟಿ ರೂಪಾಯಿ ದೊಡ್ಡ ಮೊತ್ತವಾಗಿ ಕಾಣಲಾರದು.

ಡೈರಿಯಲ್ಲಿ ಯಡಿಯೂರಪ್ಪ ಅತ್ಯಂತ ಸ್ಪಷ್ಟವಾಗಿ, ಯಾರನ್ನೋ ಉದ್ದೇಶಿಸಿ ಪ್ರಜ್ಞಾಪೂರ್ವಕವಾಗಿ ದಾಖಲೆಗಳನ್ನು ಬರೆದಿಟ್ಟಂತಿದೆ. ಮುಖ್ಯವಾಗಿ, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ದಿಲ್ಲಿಯಲ್ಲಿ ಸಂಚು ನಡೆಯುತ್ತಿರುವಾಗ, ಈ ಡೈರಿಯನ್ನು ಬರೆದಿರುವ ಸಾಧ್ಯತೆಗಳಿವೆ. ಈ ಡೈರಿಯ ಉದ್ದೇಶವೇ, ತನ್ನನ್ನು ಅಧಿಕಾರದಿಂದ ಕೆಳಗಿಳಿಸಿದರೆ ನಿಮಗೆ ನೀಡಿರುವ ಕಪ್ಪವನ್ನು ಬಹಿರಂಗಪಡಿಸುತ್ತೇನೆ ಎಂಬ ಬೆದರಿಕೆಯನ್ನು ಸಂಬಂಧಪಟ್ಟವರಿಗೆ ನೀಡುವುದು. ಇದೇ ಸಂದರ್ಭದಲ್ಲಿ ಈ ಡೈರಿ ಬೇರೆಯವರ ಕೈ ಸೇರಿರುವುದು ಕೂಡ ಆಕಸ್ಮಿಕವಲ್ಲ. ಇದೀಗ ಆ ಡೈರಿ ಬಹಿರಂಗವಾಗುವುದರ ಹಿಂದೆ ಯಾರಿದ್ದಾರೆ ಎನ್ನುವುದೂ ಕುತೂಹಲಕರ ಸಂಗತಿಯೇ ಆಗಿದೆ. ಡೈರಿ ಬಹಿರಂಗವಾಗುವುದರ ಹಿಂದೆ ಮೋದಿ ಗುಂಪಿನ ಸಂಚಿದೆ ಎನ್ನುವುದು ಒಂದು ವಾದ.

ನಿತಿನ್ ಗಡ್ಕರಿ, ಜೇಟ್ಲಿ ಮೊದಲಾದ ಹಿರಿಯ ನಾಯಕರ ತಂಡ ಒಳಗೊಳಗೆ ಮೋದಿ ಗುಂಪಿನ ವಿರುದ್ಧ ಅಸಮಾಧಾನ ಹೊಂದಿದೆ. ನಿತಿನ್ ಗಡ್ಕರಿ ಅದನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಗಡ್ಕರಿಯನ್ನು ಬಿಂಬಿಸುವ ಪ್ರಯತ್ನ ಒಂದು ಗುಂಪಿನಿಂದ ಗುಟ್ಟಾಗಿ ನಡೆಯುತ್ತಿದೆ. ಯಡಿಯೂರಪ್ಪರ ಡೈರಿಯನ್ನು ಬಹಿರಂಗ ಪಡಿಸುವ ಮೂಲಕ ಮೋದಿ ಗುಂಪು ಬಿಜೆಪಿಯೊಳಗಿರುವ ಹಿರಿಯ ನಾಯಕರಿಗೆ ಮುಜುಗರ ಉಂಟು ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ, ಬಿಜೆಪಿ ನಾಯಕತ್ವದಿಂದ ಯಡಿಯೂರಪ್ಪರನ್ನು ಹೊರಗಿಡಲು ರಾಜ್ಯ ಬಿಜೆಪಿಗೆ ಇನ್ನೊಂದು ಕಾರಣ ದೊರಕಿದಂತಾಯಿತು. ಈ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಹಿನ್ನಡೆಯೇನಾದರೂ ಆದರೆ, ಈ ಡೈರಿಯ ಜೊತೆ ಜೊತೆಗೆ ಯಡಿಯೂರಪ್ಪ ಬಿಜೆಪಿಯಲ್ಲಿ ಇತಿಹಾಸ ಸೇರಲಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪರ ಡೈರಿ, ನಮ್ಮ ರಾಜಕೀಯ ನೈತಿಕವಾಗಿ ಪಾತಾಳ ತಲುಪಿರುವ ವಾಸ್ತವವನ್ನಷ್ಟೇ ಹೇಳುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)