ಪುರುಷರ ಫುಟ್ಬಾಲ್ ತಂಡಕ್ಕಿಂತ ಮಹಿಳಾ ತಂಡ ಉತ್ತಮ
ಭಾರತ ತಂಡದ ನಾಯಕ ಸುನೀಲ್ ಚೆಟ್ರಿ
ಹೊಸದಿಲ್ಲಿ, ಮಾ.24: ವಿಶ್ವ ರ್ಯಾಂಕಿಂಗ್ ಪ್ರಕಾರ ಭಾರತದ ಮಹಿಳಾ ಫುಟ್ಬಾಲ್ ತಂಡ ಪುರುಷರ ತಂಡಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಇದನ್ನು ಭಾರತದ ಪುರುಷರ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಕೂಡ ಅನುಮೋದಿಸಿದ್ದಾರೆ.
ವಿಶ್ವ ರ್ಯಾಂಕಿಂಗ್ನಲ್ಲಿ ಭಾರತ ಪುರುಷರ ತಂಡ 211 ರಾಷ್ಟ್ರಗಳ ಪೈಕಿ 103ನೇ ಸ್ಥಾನದಲ್ಲಿದೆ. ಕಳೆದ ವರ್ಷ 100ರೊಳಗಿನ ಸ್ಥಾನದಲ್ಲಿತ್ತು. ಮಹಿಳಾ ತಂಡ 152 ರಾಷ್ಟ್ರಗಳ ಪೈಕಿ ಸದ್ಯ 62ನೇ ರ್ಯಾಂಕಿಂಗ್ನಲ್ಲಿದೆ. ಅಂತರ್ರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರಲ್ಲಿ ಎರಡನೇ ಗರಿಷ್ಠ ಗೋಲು ಗಳಿಕೆದಾರರಾಗಿರುವ ಭಾರತೀಯ ಫುಟ್ಬಾಲ್ನ ಪೋಸ್ಟರ್ಬಾಯ್ ಚೆಟ್ರಿ, ಮಹಿಳಾ ತಂಡ ಸತತ 5ನೇ ಬಾರಿ ಸ್ಯಾಫ್ ಪ್ರಶಸ್ತಿಯನ್ನು ಜಯಿಸಿದ್ದಕ್ಕೆ ಪ್ರಶಂಸೆಗಳ ಮಳೆ ಸುರಿಸಿದ್ದಾರೆ. ‘‘ನಮ್ಮ ಮಹಿಳಾ ತಂಡದ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಮಹಿಳಾ ತಂಡ ಪುರುಷರಿಗಿಂತ ಸಾಕಷ್ಟ್ಟು ಉತ್ತಮ ತಂಡ ಎಂದು ನಾನು ಯಾವಾಗಲೂ ಹೇಳುತ್ತೇನೆ’’ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಚೆಟ್ರಿ ತಿಳಿಸಿದ್ದಾರೆ.
Next Story