varthabharthi


ಅನುಗಾಲ

ಅಂತ್ಯ ಕಂಡ ಅಡ್ವಾಣಿ ರಥಯಾತ್ರೆ!

ವಾರ್ತಾ ಭಾರತಿ : 28 Mar, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಹಿಂದೆ ಮಹಾಭಾರತವು ಟಿವಿ ಪರದೆಯಲ್ಲಿ ಪ್ರಸಾರವಾಗುತ್ತಿದ್ದಾಗ ಆರಂಭದಲ್ಲಿ ‘ಮೈ ಸಮಯ್ ಹೂಂ’ ಎಂಬ ಧ್ವನಿ ಪ್ರಸಾರವಾಗುತ್ತಿತ್ತು. ಗೀತೆಯ ಒಂದು ಶ್ಲೋಕದನುಸಾರವೂ ಕಾಲವೇ ಎಲ್ಲದಕ್ಕೂ ಉತ್ತರ. ಪ್ರಾಯಃ ಮೋದಿ-ಅಮಿತ್ ಶಾ ಕೂಡಾ ಇದಕ್ಕೆ ಹೊರತಲ್ಲ ಎಂಬಲ್ಲಿಗೆ ಅಡ್ವಾಣಿಯವರು ಉತ್ತರಾಯಣಕ್ಕೆ ಕಾಯುತ್ತಾ ಶರಶಯ್ಯೆಯಲ್ಲಿ ವಿರಮಿಸಬಹುದು. ಶೇಕ್ಸ್‌ಪಿಯರ್‌ನ ದುರಂತ ನಾಟಕಗಳ ನಾಯಕ ಪಾತ್ರಗಳು ತಮ್ಮ ದುರಂತಕ್ಕೆ ಕಾರಣಗಳನ್ನು ಹುಡುಕಹೊರಟಂತೆ ಅಡ್ವಾಣಿಯವರೂ ತಮ್ಮ ಹಣೆಬರೆಹದ ಅನ್ವೇಷಕರಾಗಬಹುದು.


ಯಾವುದೇ ರಾಜಕೀಯ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸರ್ವಸ್ವತಂತ್ರರು. ಅದನ್ನು ಪ್ರಶ್ನಿಸಲು ಇತರ ಪಕ್ಷಗಳಿಗೆ ಹಕ್ಕಿಲ್ಲ. ಮತದಾರರಿಗೂ ಹಕ್ಕಿಲ್ಲ. ಇಂದು ಚುನಾವಣೆಗಳಲ್ಲಿ ನಡೆಯುವ ವಿದ್ಯಮಾನಗಳು ಈ ಹಕ್ಕಿನ ಮೇಲೆಯೇ ಸವಾರಿ ಮಾಡುವುದರಿಂದ ಚುನಾವಣೆಯಿಂದಾಗಿ ಸಂಭವಿಸುವ ಅನಾಹುತಗಳನ್ನು ನೋಡಿಯೂ ಸುಮ್ಮನಿರಬೇಕಾದ, ಅಸಹಾಯಕರಾಗಿ ಶೋಕಿಸಬೇಕಾದ ಹಣೆಬರಹ ಮತದಾರನದ್ದು. ಇಂತಹ ಮತದಾರರ ಸಂಖ್ಯೆ ತೀರ ಚಿಕ್ಕದು. ಏಕೆಂದರೆ ಬಹುಪಾಲು ಮತದಾರರು ಯಾವುದಾದರೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡು ಇಲ್ಲವೇ ಯಾವೊಬ್ಬ ವ್ಯಕ್ತಿಯನ್ನು ಅನುಸರಿಸಿಕೊಂಡು ಬದುಕನ್ನು ನಡೆಸುವವರು. ಅವರಿಗೆ ದೇಶ, ಸಮಾಜ, ಕೊನೆಗೆ ತಾನೂ ಮುಖ್ಯವಾಗುವುದಿಲ್ಲ. ದೇಶದಲ್ಲಿ ಕಲ್ಲುಚಪ್ಪಡಿಗಳ ಕೈಗಾರಿಕೆ ಸಮೃದ್ಧವಾಗಿ ಬೆಳೆಯುತ್ತಿದೆ ಮತ್ತು ಅದನ್ನು ತಮ್ಮ ಕಾಲ ಮೇಲೆ ಎಳೆದುಕೊಳ್ಳಲು ಸಿದ್ಧವಿರುವವರ ಸಂಖ್ಯೆ ಹೆಚ್ಚುತ್ತಿದೆ.

ಇಂತಹ ಸಂಕ್ರಮಣ ಕಾಲದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷವು ನಿರಾಕರಿಸಿದರೆ ಅದನ್ನು ಪ್ರಶ್ನಿಸುವ, ಇಲ್ಲವೇ ಹಕ್ಕೊತ್ತಾಯ ಮಾಡುವ ಹಕ್ಕು ಪ್ರಜೆಗಳಿಗಿಲ್ಲ. ವಯಸ್ಸು, ಪ್ರಸ್ತುತ ಪರಿಸ್ಥಿತಿ ಮುಂತಾದ ಅಂಶಗಳು ಅವರ ವಿರುದ್ಧವೇ ಇವೆ. 91ರ ಇಳೀ ವಯಸ್ಸಿನಲ್ಲಿ ಅವರು ಸ್ಪರ್ಧಿಸಿ ಮಾಡುವುದಾದರೂ ಏನು ಎಂಬ ತರ್ಕ ಸಾಧುವಾಗಿ ಕಾಣಿಸುತ್ತದೆ. ಅವರು ಮಾತ್ರವಲ್ಲ, ಅವರೊಂದಿಗೇ ರಾಜಕೀಯದ ಏರಿಳಿತಗಳನ್ನು ಕಂಡ ಡಾ ಮುರಳಿ ಮನೋಹರ ಜೋಶಿಯವರಿಗೂ ಸ್ಪರ್ಧೆಗೆ ನಕಾರ ದೊರಕಿದೆ. ಈ ಇಬ್ಬರ ರಾಜಕೀಯ ಜೀವನ ಹೆಚ್ಚು ಕಡಿಮೆ ಮುಗಿದಂತೆಯೇ. ಈ ಪೈಕಿ ಅಡ್ವಾಣಿಯವರ ರಾಜಕೀಯ ಜೀವನ ಹೆಚ್ಚು ರೋಚಕ ಮತ್ತು ವರ್ಣರಂಜಿತ. ಅಡ್ವಾಣಿಯವರು ವಾಜಪೇಯಿಯವರೊಂದಿಗೆ ಜೊತೆಯಾದಾಗ ಭಾರತೀಯ ಜನತಾ ಪಕ್ಷದ ರಾಮ-ಲಕ್ಷ್ಮಣರು ಎಂಬ ಹೋಲಿಕೆಗೆ ಸಮೀಪವಾಗಿದ್ದರು.

ವಾಜಪೇಯಿ ಅಡ್ವಾಣಿಯವರಿಗಿಂತ ಹಿರಿಯರು; ಹೆಚ್ಚು ಸಮಾಧಾನಿ; ಹೆಚ್ಚು ಹೊಂದಿಕೊಳ್ಳಬಲ್ಲವರು; ಮತ್ತು ಹೆಚ್ಚು ಪ್ರಭಾವಶಾಲಿ ಮಾತುಗಾರ ಮತ್ತು ಮುತ್ಸದ್ದಿ ಎಂಬ ವಿಶೇಷಣಗಳೊಂದಿಗೆ ಬಹುಪಾಲು ಜನಪ್ರಿಯತೆಗೆ ಒಳಗಾಗಿದ್ದರು. ಅವರಿಗೆ ಹೋಲಿಸಿದರೆ ಹೆಚ್ಚಿನ ಉಗ್ರತೆ, ಮೂಲಭೂತವಾದ ಇವುಗಳೊಂದಿಗೆ ಅಡ್ವಾಣಿ ಸದಾ ಬೆಳ್ಳಿ ಪದಕಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಆದರೆ 1990ರ ದಶಕದಲ್ಲಿ ಉಗ್ರ ಹಿಂದುತ್ವದ ಪಣ ತೊಟ್ಟು ಭಾರತೀಯ ಜನತಾ ಪಕ್ಷವು ಅಯೋಧ್ಯೆಯ ಮೂಲಕ ದಿಲ್ಲಿಗೆ ದಾರಿ ಹುಡುಕಿದಾಗ ಅಡ್ವಾಣಿಯವರು ಇದ್ದಕ್ಕಿದ್ದಂತೆ ಭಾರತೀಯ ಜನತಾ ಪಕ್ಷದ ಮುಖವಾಣಿಯಾದರು. ಗುಜರಾತಿನ ಸೋಮನಾಥದಿಂದ (ಗಾಂಧಿಯುಗದ ಆನಂತರ ಗುಜರಾತ್ ಭಾರತೀಯ ರಾಜಕೀಯ ಭೂಪಟದಲ್ಲಿ ಗುರುತಿಸಿಕೊಂಡದ್ದು ಸರದಾರ್ ಪಟೇಲರಿಂದಲ್ಲ; ಈ ರಥಯಾತ್ರೆಯಿಂದಲೇ!) ಅಯೋಧ್ಯೆಗೆ ಅಡ್ವಾಣಿಯವರು ರಥಯಾತ್ರೆಯನ್ನು ಘೋಷಿಸಿದಾಗ ಇಡೀ ದೇಶದ ಹುಬ್ಬೇರಿತು. ಭಾಜಪದ ಬೆಂಬಲಿಗರಂತೂ ರೋಮಾಂಚಗೊಂಡರು. ಈ ಯಾತ್ರೆ ಬಿಹಾರ ತಲುಪಿದಾಗ ರಥಯಾತ್ರೆ ನಿಂತುಹೋಯಿತು. ಆದಿಪುರಾಣದ ಭರತನ ವಿಜಯಚಕ್ರವು ಬಾಹುಬಲಿಯನ್ನು ಗೆಲ್ಲಲಾರದೆ ಪಟ್ಟಣದ ಹೊರಗೆ ನಿಂತಂತೆ ಅಡ್ವಾಣಿಯವರ ರಥ ನಿಂತಿತು. ಇದರ ಲಾಭವನ್ನು ಅಡ್ವಾಣಿ ರಾಜಕೀಯವಾಗಿ ಪಡೆದರು. ಮುಂದಿನದು ವರ್ತಮಾನವೆನ್ನುವಷ್ಟು ಇತ್ತೀಚೆಗಿನ ಇತಿಹಾಸ.

ಅಡ್ವಾಣಿಯವರು ಭಾರತೀಯ ಜನತಾ ಪಕ್ಷದ ರಾಜಕೀಯದ ಅವಳಿ ಸೂತ್ರಧಾರರಲ್ಲೊಬ್ಬರಾದರು. ಅಧಿಕಾರದ ಮುಖ ವಾಜಪೇಯಿಯವರಾದರೆ, ರಾಜಕೀಯದ ಮುಖ ಅಡ್ವಾಣಿಯವರಾದರು. ವಾಜಪೇಯಿ ದೇಶದ ಭವಿಷ್ಯವನ್ನು ರೂಪಿಸುವ ನೇತಾರರೆಂದು ಪಕ್ಷ ಪರಿಗಣಿಸಿದರೆ, ಅಡ್ವಾಣಿ ಭಾರತೀಯ ಜನತಾ ಪಕ್ಷದ ಭವಿಷ್ಯವನ್ನು ರೂಪಿಸುವ ನೇತಾರರೆಂದು ಪರಿಗಣಿಸಲ್ಪಟ್ಟರು. ಜಸ್ವಂತ್‌ಸಿಂಗ್‌ರಂಥವರು ಈ ಜೋಡಿಗೆ ಸಾಥ್ ನೀಡಿದರು. (ಭಾರತೀಯ ವಿದೇಶಾಂಗ ಸೇವೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅನುಭವದಲ್ಲಿ ಪರಿಣಾಮಕಾರಿಯಾಗಿ ವಿಚಾರವನ್ನು ಮಂಡಿಸಬಲ್ಲ ಮತ್ತು ಯಾವುದೇ ಸಮಸ್ಯೆಯನ್ನು ಅಧಿಕಾರಿಗಳು ಹಂಚಿಕೊಳ್ಳಬಲ್ಲ ಮೂವರು ರಾಜಕಾರಣಿಗಳೆಂದರೆ ವಾಜಪೇಯಿ, ಅಡ್ವಾಣಿ ಮತ್ತು ಜಸ್ವಂತ್ ಸಿಂಗ್ ಎಂದು ಒಮ್ಮೆ ಹೇಳಿದ್ದರು.)

‘ಡೋಂಗೀ ಜಾತ್ಯತೀತತೆ’ ಎಂಬ ಪದ ಅಡ್ವಾಣಿಯವರ ಸೃಷ್ಟಿ. ತಮ್ಮ ಎಲ್ಲ ಪ್ರತಿಭೆ, ಪಾಂಡಿತ್ಯ, ಅನುಭವವನ್ನು ಅವರು ಭಾರತೀಯ ಜನತಾ ಪಕ್ಷಕ್ಕೆ ಧಾರೆಯೆರೆದಿದ್ದರು. 2002ರ ಹೊತ್ತಿಗೆ ಮೋದಿ ಗುಜರಾತಿನ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದರು. ಅವರ ಮುಖ್ಯಮಂತ್ರಿತನದಲ್ಲಿ ಗೋಧ್ರಾ ದುರಂತ ನಡೆಯಿತು. ತತ್ಪರಿಣಾಮವಾಗಿ ನಡೆದ ಹಿಂಸಾ ಕಾಂಡದಲ್ಲಿ ಸಾವಿರಾರು ಜನರು-ಬಹುತೇಕ ಅಲ್ಪಸಂಖ್ಯಾತ ಮುಸ್ಲಿಮರು ಸಾವು-ನೋವು ಅನುಭವಿಸಿದರು. ಈ ಹಿಂಸೆಗೆ ಪರೋಕ್ಷವಾಗಿ ಮೋದಿ ಕಾರಣರೆಂಬುದು ಎಲ್ಲೆಡೆ ಜನಜನಿತವಾಯಿತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ತಮ್ಮ ಸೌಮ್ಯನಿಲುವಿಗನುಗುಣವಾಗಿ ಮೋದಿಗೆ ‘ರಾಜಧರ್ಮ’ ಪಾಲಿಸಲು ಕರೆಯಿತ್ತರು. ಮೋದಿಯವರನ್ನು ಪದತ್ಯಾಗಮಾಡುವಂತೆ ಮನವೊಲಿಸಲು ಕರೆದಿದ್ದ ಸಭೆಗೆ ವಾಜಪೇಯಿ ಪಯಣಿಸುವಾಗ ಅವರೊಂದಿಗೆ ಅಡ್ವಾಣಿಯಿದ್ದರು. ಅಡ್ವಾಣಿಯವರು ವಾಜಪೇಯಿಯವರ ಈ ನಡೆಯನ್ನು ನಿರ್ಬಂಧಿಸಿ ಮೋದಿಗೆ ಜೀವದಾನ ನೀಡಿದರು. ಹೀಗಾಗಿ ಮೋದಿಗೆ ಅಡ್ವಾಣಿಯವರೇ ಎಲ್ಲವೂ ಆಗಬೇಕಿತ್ತು. ಆದರೆ ರಾಜಕೀಯವು ಮಹಾಭಾರತಕ್ಕಿಂತಲೂ ವಿಚಿತ್ರ ತಿರುವುಗಳನ್ನು ಮತ್ತು ಸುಳಿಗಳನ್ನು ಕಾಣಿಸುತ್ತದೆ. ಅಡ್ವಾಣಿ ಉಪಪ್ರಧಾನಿ ಪಟ್ಟದವರೆಗೂ ತಲುಪಿದರು. ಆದಿಪುರಾಣದ ಚಕ್ರ ಅವರನ್ನು ಇಲ್ಲಿಗೇ ನಿಲ್ಲಿಸಿತು. ಪಾಕಿಸ್ತಾನಕ್ಕೆ ಭೇಟಿ ನೀಡಿದ ಅಡ್ವಾಣಿ ಜಿನ್ನಾರನ್ನು ಜಾತ್ಯತೀತ ಎಂದು ಘೋಷಿಸಿಯೇಬಿಟ್ಟರು! ಈ ವಿವಾದಾಸ್ಪದ ಉಲ್ಲೇಖ ಅವರ ಅಧ್ಯಕ್ಷತೆಯನ್ನು ಮಾತ್ರವಲ್ಲ ಪಕ್ಷದಲ್ಲಿ ಅವರಿಗಿದ್ದ ಪ್ರಾಮುಖ್ಯತೆಯನ್ನು ಕಸಿದುಕೊಂಡಿತು.

(ಅಡ್ವಾಣಿಯವರ ‘ನನ್ನ ದೇಶ ನನ್ನ ಬದುಕು’ ಕೃತಿಯಲ್ಲಿ ಅವರು ಜಿನ್ನಾರ ಕುರಿತ ಈ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಜಿನ್ನಾರ ಸಮಾಧಿಯನ್ನು ಸಂದರ್ಶಿಸಿದ ಅಡ್ವಾಣಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಹೀಗೆ ಬರೆದರು: ಚರಿತ್ರೆಯಲ್ಲಿ ತಮ್ಮ ಅಳಿಸಲಾಗದ ಛಾಪನ್ನು ಬಿಟ್ಟುಹೋಗುವ ಮಂದಿ ಅನೇಕರಿದ್ದಾರೆ. ಆದರೆ ವಾಸ್ತವವಾಗಿ ಚರಿತ್ರೆಯನ್ನು ಸೃಷ್ಟಿಸಬಲ್ಲವರು ಕೆಲವೇ ಮಂದಿ. ಕ್ವೆದ್-ಇ-ಅಝಮ್ ಮುಹಮ್ಮದ್ ಆಲಿ ಜಿನ್ನಾ ಅಂತಹ ಒಬ್ಬ ಅಪರೂಪದ ವ್ಯಕ್ತಿ. ಅವರ ಆರಂಭದ ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಧೀಮಂತ ಪ್ರಮುಖರಲ್ಲೊಬ್ಬರಾದ ಸರೋಜಿನಿ ನಾಯ್ಡು ಅವರು ಜಿನ್ನಾರನ್ನು ಹಿಂದೂ-ಮುಸ್ಲಿಮ್ ಐಕ್ಯದ ರಾಯಭಾರಿ ಎಂದು ವಿವರಿಸಿದ್ದರು. ಅಗಸ್ಟ್ 11, 1947ರಂದು ಅವರು ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣವು ದೇಶದ ಪ್ರತೀ ಪ್ರಜೆಯೂ ತನ್ನ ಮತವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ಹೊಂದಿದ ಆದರೆ ರಾಷ್ಟ್ರವು ಮತಕಾರಣವಾಗಿ ಒಬ್ಬ ಪ್ರಜೆಗೂ ಇನ್ನೊಬ್ಬನಿಗೂ ನಡುವೆ ತಾರತಮ್ಯವನ್ನು ತಾಳದ ಜಾತ್ಯತೀತ ರಾಷ್ಟ್ರದ ಒಂದು ಉತ್ಕೃಷ್ಟ, ಶಕ್ತಿಯುತ ಮತ್ತು ಸಮರ್ಥನೆಯಾಗಿದೆ. ಈ ಮಹಾನ್ ವ್ಯಕ್ತಿಗೆ ನನ್ನ ಗೌರವಪೂರ್ವಕ ನಮನಗಳು.)

ಈ ನಡೆ ನಮ್ಮ 24/7 ಮಾಧ್ಯಮಗಳ ದೆಸೆಯಿಂದಾಗಿ ತಕ್ಷಣ ಭಾರತೀಯ ಜನತಾ ಪಕ್ಷದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಭಾರತೀಯ ಜನತಾ ಪಕ್ಷದೊಳಗಿನ ಅವರ ಎದುರಾಳಿಗಳಿಗೆ ಸುಗ್ರಾಸವನ್ನೊದಗಿಸಿತು. ಅವರ ಪಕ್ಷದ ಪ್ರಮುಖರೊಬ್ಬರು ‘‘ಜಿನ್ನಾರಂತಹ ದೇಶದ್ರೋಹಿಗಳನ್ನು ವೈಭವೀಕರಿಸಿದವರೂ ದೇಶದ್ರೋಹಿಗಳೇ. ಜಿನ್ನಾ ಜಾತ್ಯತೀತರಾಗಿದ್ದರೆ ಅಡ್ವಾಣಿಯವರೇಕೆ ತಮ್ಮ ಕುಟುಂಬದೊಂದಿಗೆ ಸಿಂಧ್‌ಗೆ ಪಲಾಯನಮಾಡಬೇಕಿತ್ತು? ಬಿಜೆಪಿಯ ಅಧ್ಯಕ್ಷರು ತಮ್ಮ ನೈಜ ಬಣ್ಣವನ್ನು ಅನಾವರಣಗೊಳಿಸಿದ್ದಾರೆ.’’ ಅಡ್ವಾಣಿಯವರೇ ಹೇಳುವಂತೆ ಈ ಎಲ್ಲ ಗೊಂದಲಗಳು ಸೃಷ್ಟಿಯಾದದ್ದು ಮಾಧ್ಯಮಗಳ ತಪ್ಪು ವರದಿಗಳಿಂದಾಗಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಉದ್ದೇಶಪೂರ್ವಕವಾಗಿಯೋ ಅನುದ್ದೇಶಿತವಾಗಿಯೋ ಮಾಧ್ಯಮಗಳು ಯಾವುದೇ ವಿಚಾರವನ್ನು ತಮಗನುಗುಣವಾಗಿ ಅಂದರೆ ರೋಚಕತೆಯನ್ನುಂಟುಮಾಡುವಂತೆ ವರದಿಮಾಡುತ್ತವೆ. ತಾವು ಜಿನ್ನಾರನ್ನು ಜಾತ್ಯತೀತ ಎಂದಿಲ್ಲ; ಇತಿಹಾಸದ ಒಂದು ಮುಖ್ಯ ಸಂದರ್ಭದಲ್ಲಿ ಜಿನ್ನಾ ಮಾಡಿದ ಭಾಷಣವನ್ನು ಮೆಚ್ಚಿಕೊಂಡದ್ದನ್ನು ಅದೂ ಅವರ ಸಮಾಧಿಯ ಸಂದರ್ಶನದ ಆನಂತರ ಸಜ್ಜನಿಕೆಯಲ್ಲಿ ಹೇಳಿದ್ದೇನೆಯೇ ವಿನಾ ಅವರನ್ನು ವೈಭವೀಕರಿಸುವುದಕ್ಕಲ್ಲ ಎಂದು ಸಮಜಾಯಿಷಿಕೆ ನೀಡಿದರು. (ಜಸ್ವಂತ್ ಸಿಂಗ್ ‘ಜಿನ್ನಾ ಭಾರತ-ವಿಭಜನೆ ಸ್ವಾತಂತ್ರ್ಯ’ ಎಂಬ ಒಂದು ಗ್ರಂಥವನ್ನೇ ಬರೆದಿದ್ದಾರೆ!)

ಅಡ್ವಾಣಿ ಇಂದಿನ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದವರು. ಕೃತಕ ಗಡಿರೇಖೆಗಳು ಅವರ ಅನುಭವವನ್ನು ವಂಚಿಸುವಂತಿರಲಿಲ್ಲ. ಆದರೆ ಅವರ ಮನಸ್ಥಿತಿಯನ್ನು ಭಾರತದ ಮತೀಯ ಉಗ್ರಗಾಮಿಗಳು ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆನಂತರದ ದಿನಗಳಲ್ಲಿ ಅವರದೇ ಪಕ್ಷದಲ್ಲಿ ಸಂಭವಿಸಿದ ಕೋಲಾಹಲಗಳಿಂದಾಗಿ ಅವರು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಬೇಕಾಯಿತು.

ಇಷ್ಟಾದರೂ ಅಡ್ವಾಣಿಯವರಿಗೆ ಭವ್ಯ ಭವಿಷ್ಯ ಕಾದಿತ್ತು. 2009ರ ಸಂಸದೀಯ ಚುನಾವಣೆಯ ಹೊತ್ತಿಗೆ ಅನಾರೋಗ್ಯ ನಿಮಿತ್ತ ವಾಜಪೇಯಿ ರಾಜಕೀಯದಿಂದ ವಿರಮಿಸಿದ್ದರು. ಅಡ್ವಾಣಿಯವರು ಪ್ರಧಾನಿ ಅಭ್ಯರ್ಥಿಯಾಗಿ ಭಾಜಪದ ಚುನಾವಣಾ ಚುಕ್ಕಾಣಿಯನ್ನು ಹಿಡಿದರು. ಆದರೆ ಅದೃಷ್ಟ ಅವರಿಗೆ ಕೈಕೊಟ್ಟಿತು. ಆ ಚುನಾವಣೆಯಲ್ಲಿ ಯುಪಿಎ ಮತ್ತೆ ಅಧಿಕಾರ ಹಿಡಿಯಿತು. ಎಲ್ಲ ಚುನಾವಣೆಗಳಲ್ಲಿ ಅಡ್ವಾಣಿ ಗುಜರಾತಿನ ಗಾಂಧಿನಗರ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದಿದ್ದರು. ಆದರೆ 2014ರ ಹೊತ್ತಿಗೆ ಮೋದಿ ಪ್ರಭಾವವು ಇನ್ನಷ್ಟು ಪ್ರಖರವಾಯಿತು. ಮೋದಿ ಪ್ರಚಾರ ಸಮಿತಿಯ ಅಧ್ಯಕ್ಷರಾದರು. ಅಕ್ಷರಶಃ ಮೋದಿಯೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತರಾದರು. ಇದು ಅಡ್ವಾಣಿ ಮತ್ತು ಅವರ ಸರೀಕರಿಗೆ ಹಿಡಿಸಿರಲಿಲ್ಲ. ಆದರೆ ಪಕ್ಷವು ಅಧಿಕಾರದ ದಾಹದಲ್ಲಿತ್ತೇ ವಿನಾ ಅಡ್ವಾಣಿಯಂತಹ ಹಿರಿಯರನ್ನು ಸಮಾಧಾನಪಡಿಸುವ ಸ್ಥಿತಿಯಲ್ಲಿರಲಿಲ್ಲ. ಪಾರಂಪರಿಕ, ಸಾಂಸ್ಕೃತಿಕ, ಔದಾರ್ಯ ಮನೋಭಾವ ರಾಜಕೀಯಕ್ಕೆ ಸಲ್ಲ ಎಂಬ ನೀತಿಯನ್ನು ಹೊಂದಿತ್ತು. 2014ರಲ್ಲಿ ಮೋದಿ ಪ್ರಧಾನಿಯೇ ಆಗಿಬಿಟ್ಟರು.

ಅಡ್ವಾಣಿ ಮತ್ತು ಅವರಂತಹ ಹಿರಿಯರಿಗೆ ಅಧಿಕಾರದ ವೇದಿಕೆಯಲ್ಲಿ ಸ್ಥಾನವಿರಲಿಲ್ಲ. ಪುನರ್ವಸತಿಯೊದಗಿಸುವ ರಾಜ್ಯಪಾಲ ಮುಂತಾದ ಹುದ್ದೆಗಳಿಗೆ ಅವರನ್ನು ಕೂರಿಸುವಂತಿರಲಿಲ್ಲ. ಆದರೂ ರಾಷ್ಟ್ರಪತಿ ಹುದ್ದೆ ಅಥವಾ ಯಕಶ್ಚಿತ್ ಸಭಾಪತಿಯ ಹುದ್ದೆ ಸಿಗಬಹುದೆಂದು ಅಡ್ವಾಣಿಯವರ ನಿರೀಕ್ಷೆಯಿತ್ತು. ಇದರಿಂದಲೂ ಅವರು ವಂಚಿತರಾದರು. ಬದಲಿಗೆ ನಿರುದ್ಯೋಗ ನಿವಾರಣಾ ಯೋಜನೆಯಂತೆ ‘ಮಾರ್ಗದರ್ಶಕ ಮಂಡಲಿ’ ಎಂಬ ಹೊಸ ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿ ಅಲ್ಲಿ ಅಡ್ವಾಣಿ ಮತ್ತಿತರ ಪಿತೃಗಳನ್ನು ಪ್ರತಿಷ್ಠಾಪಿಸಲಾಯಿತು. ವ್ಯವಹಾರವನ್ನು ತಮ್ಮಂದಿರಿಗೆ ಕೊಟ್ಟು ಮಡಿ ಹಚ್ಚುವ ಕಾಯಕದ ಹಿರಿಯಣ್ಣನ ಸ್ಥಾನವು ಅಡ್ವಾಣಿಯವರಿಗೆ ಲಭಿಸಿತು. ಅವಮಾನವನ್ನು ಅಡ್ವಾಣಿಯವರು ‘ಹೊಲಿ ನಿನ್ನ ತುಟಿಗಳನು’ ಎಂಬ ಹಾಗೆ ಸಹಿಸಿದರು. ತಮ್ಮ ಹಿರಿತನದಲ್ಲಿ ಅವರಿಗೆ ಈ ದ್ವಂದ್ವ ಬಾಧಿಸಿತ್ತು: ತಾನೇ ಕಟ್ಟಿ ಬೆಳೆಸಿದ ಪಕ್ಷದ ಕುರಿತು ಬಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದರೆ ಪಕ್ಷದ ವರ್ಚಸ್ಸು ಮಾತ್ರವಲ್ಲ, ತಮ್ಮ ವರ್ಚಸ್ಸೂ ಕುಂಠಿತವಾಗುತ್ತದೆಯೆಂಬ ಅರಿವು ಇಲ್ಲದವರು ಅಡ್ವಾಣಿಯವರಲ್ಲ. ಪ್ರತ್ಯೇಕವಾಗಿ ರಾಜಕೀಯದಲ್ಲಿ ಗುರುತಿಸಿಕೊಳ್ಳಬಲ್ಲ ವಯಸ್ಸು ಅವರದಲ್ಲ. ಈ ಗೊಂದಲದೊಂದಿಗೆ ಅವರು ಪ್ರಾಯಃ ತಮ್ಮ ಎಲ್ಲ ಸಂಕಟಗಳನ್ನು ನುಂಗಿದರು.

ಈ ಬಾರಿಯ ಮಹಾ ಚುನಾವಣೆಯಲ್ಲಿ ಅವರ ಗಾಂಧಿನಗರ ಕ್ಷೇತ್ರವನ್ನು ಅವರ ಅರಿವಿಗೆ ಬಾರದಂತೆ ಅಮಿತ್ ಶಾ ನುಂಗಿದ್ದು ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಅವರ ಸಹವರ್ತಿ ಡಾ.ಮುರಳಿ ಮನೋಹರ ಜೋಶಿಯವರನ್ನು ಸ್ಪರ್ಧಿಸಬಾರದೆಂಬ ಸೂಚನೆಯೊಂದಿಗೆ ಪೂರ್ಣವಾಗಿ ನಿಯಂತ್ರಿಸಲಾಯಿತು. ಜಸ್ವಂತ್‌ಸಿಂಗ್ ಈ ಹಿಂದೆಯೇ ದೂರವಾಗಿದ್ದರು. ವಾಜಪೇಯಿಯವರ ಹಿರಿತನವನ್ನು ಹೊರತುಪಡಿಸಿದರೆ ಒಂದು ಕಾಲಕ್ಕೆ ಭಾಜಪದ ತ್ರಿಮೂರ್ತಿಗಳಾಗಿದ್ದ ಈ ಮಂದಿ ಇಂದು ಅಪ್ರಸ್ತುತರಾದರು. ರಾಜಕೀಯವೆಂದರೆ ಏಣಿಯಂತೆ. ಮೇಲೇರಿದವರು ಇತರರನ್ನು ತುಳಿಯುವುದು ಇದ್ದದ್ದೇ. ಹಿಂದೆ ಮಹಾಭಾರತವು ಟಿವಿ ಪರದೆಯಲ್ಲಿ ಪ್ರಸಾರವಾಗುತ್ತಿದ್ದಾಗ ಆರಂಭದಲ್ಲಿ ‘ಮೈ ಸಮಯ್ ಹೂಂ’ ಎಂಬ ಧ್ವನಿ ಪ್ರಸಾರವಾಗುತ್ತಿತ್ತು. ಗೀತೆಯ ಒಂದು ಶ್ಲೋಕದನುಸಾರವೂ ಕಾಲವೇ ಎಲ್ಲದಕ್ಕೂ ಉತ್ತರ. ಪ್ರಾಯಃ ಮೋದಿ-ಅಮಿತ್ ಶಾ ಕೂಡಾ ಇದಕ್ಕೆ ಹೊರತಲ್ಲ ಎಂಬಲ್ಲಿಗೆ ಅಡ್ವಾಣಿಯವರು ಉತ್ತರಾಯಣಕ್ಕೆ ಕಾಯುತ್ತಾ ಶರಶಯ್ಯೆಯಲ್ಲಿ ವಿರಮಿಸಬಹುದು. ಶೇಕ್ಸ್‌ಪಿಯರ್‌ನ ದುರಂತ ನಾಟಕಗಳ ನಾಯಕ ಪಾತ್ರಗಳು ತಮ್ಮ ದುರಂತಕ್ಕೆ ಕಾರಣಗಳನ್ನು ಹುಡುಕಹೊರಟಂತೆ ಅಡ್ವಾಣಿಯವರೂ ತಮ್ಮ ಹಣೆಬರೆಹದ ಅನ್ವೇಷಕರಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)