varthabharthi


ನೇಸರ ನೋಡು

ಚೊಕ್ಕಾಡಿಗೆ ‘ಗೌರಿ ಸುಂದರ್’

ವಾರ್ತಾ ಭಾರತಿ : 31 Mar, 2019
ಜಿ.ಎನ್.ರಂಗನಾಥ ರಾವ್

ಪತಿ ಗೌರಿಸುಂದರ್ ನಿಧನದ ನಂತರ ಅವರ ಪುಸ್ತಕೋದ್ಯಮ ಮತ್ತು ಇತರ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಶ್ರೀಮತಿ ಇಂದಿರಾ ಈ ವರ್ಷದಿಂದ ಗೌರಿಸುಂದರ್ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜೀವಮಾನವಿಡೀ ಸಲ್ಲಿಸಿರುವ ಸೇವೆಗಾಗಿ ನೀಡಲಾಗುವ ಈ ಪ್ರಶಸ್ತಿ ಮೊದಲ ವರ್ಷವೇ ದಕ್ಷಿಣ ಕನ್ನಡದ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ದೊರೆತಿರುವುದು ‘ಪಾತ್ರರಿಗೆ’ ಸಂದಿರುವ ಗೌರವ.


ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷ ಎಂದರು ಕವಿ ಕುವೆಂಪು. ಇದರಿಂದ ಸ್ಫೂರ್ತಿಪಡೆದು ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡು ಕಷ್ಟನಷ್ಟಗಳನ್ನು ಅನುಭವಿಸಿದವರು ಎಷ್ಟೋ ಮಂದಿ. ಅಂಥವರಲ್ಲಿ ಒಬ್ಬರು ಮೈಸೂರಿನ ಗೌರಿಸುಂದರ್. ಗೌರಿಸುಂದರ್ ಅವರ ಕಾರ್ಯಕ್ಷೇತ್ರ ವಿಶಾಲವಾದದ್ದು. ಪ್ರವಾಸೋದ್ಯಮ, ಕನ್ನಡ ಚಳವಳಿ, ಚಲನ ಚಿತ್ರ, ದೂರದರ್ಶನ, ರಂಗಭೂಮಿ, ಪುಸ್ತಕೋದ್ಯಮ -ಹೀಗೆ ಗೌರಿಸುಂದರ್ ಅವರ ಕನ್ನಡ ಸೇವಾಕ್ಷೇತ್ರಗಳ ಬಾಹುಳ್ಯ ವಿಸ್ತಾರವಾದುದು. ಕ್ಷೇತ್ರ ಯಾವುದೇ ಇರಲಿ ಅವರು ಸುದ್ದಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಕನ್ನಡದ ಕೆಲಸದಲ್ಲಿ ಸದಾ ತೊಡಗಿಕೊಂಡು ಏನಾದರೊಂದು ಸುದ್ದಿಸೂರು ಹಿಡಿದು ನಮಗೆ ದುಂಬಾಲು ಬೀಳುತ್ತಿದ್ದ ಗೌರಿಸುಂದರ್ ಅರುವತ್ತರ ಆಸುಪಾಸಿನಲ್ಲೇ ನಮ್ಮನ್ನು ಅಗಲಿ ಒಂದೆರಡು ವರ್ಷಗಳಾಗಿರಬಹುದು. ಗೌರಿಸುಂದರ್ ಅವರ ಪತ್ನಿ ಶ್ರೀಮತಿ ಇಂದಿರಾ ಸುಂದರ್ ನಮ್ಮ ಜನಪ್ರಿಯ ನಾಟಕಕಾರ ಎ.ಎಸ್.ಮೂರ್ತಿಯವರ ಮಗಳು. ಕನ್ನಡದ ಸಾಂಸ್ಕೃತಿಕ ಕೆಲಸಗಳಲ್ಲಿ ಪತಿಗೆ ತಕ್ಕ ಸಂಗಾತಿ. ಪತಿಯ ನಿಧನದ ನಂತರ ಅವರ ಪುಸ್ತಕೋದ್ಯಮ ಮತ್ತು ಇತರ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಶ್ರೀಮತಿ ಇಂದಿರಾ ಈ ವರ್ಷದಿಂದ ಗೌರಿಸುಂದರ್ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜೀವಮಾನವಿಡೀ ಸಲ್ಲಿಸಿರುವ ಸೇವೆಗಾಗಿ ನೀಡಲಾಗುವ ಈ ಪ್ರಶಸ್ತಿ ಮೊದಲ ವರ್ಷವೇ ದಕ್ಷಿಣ ಕನ್ನಡದ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ದೊರೆತಿರುವುದು ‘ಪಾತ್ರರಿಗೆ’ ಸಂದಿರುವ ಗೌರವ.

ಗೌರಿಸುಂದರ್ ಮೈಸೂರಿನವರು. ಅವರದು ಮೈಸೂರಿನ ರಾಜಮನೆತನಕ್ಕೆ ಸೇವೆ ಸಲ್ಲಿಸಿದ ಕುಟುಂಬ. ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಅರಮನೆಯಲ್ಲಿ ನಡೆಯುವ ಗೌರಿಪೂಜೆಗೆ ಇವರ ವಂಶಜರದೇ ಪ್ರಧಾನ ಪೌರೋಹಿತ್ಯ. ಅರಮನೆಯ ಗೌರಿ ಪೂಜೆಗೂ ಗೌರಿಸುಂದರ್ ಅವರ ವಂಶಕ್ಕೂ ಶತಮಾನಗಳ ನಂಟು. ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಗೌರಿ ಪೂಜೆ ನಡೆಸಿಕೊಡುತ್ತಿದ್ದ ಈ ಮನೆತನಕ್ಕೆ ಅವರ ನಾಮಧೇಯದ ಜೊತೆಗೆ ‘ಗೌರಿ’ ಪೂರ್ವಪ್ರತ್ಯಯ ಸೇರಿಕೊಂಡು ಬಿಟ್ಟಿತು. ಆ ವಂಶದ ಕುಡಿ ಗೌರಿಸುಂದರ್. ಗೌರಿಸುಂದರ್ ಸ್ವಲ್ಪಕಾಲ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯಲ್ಲಿ ‘ಗೈಡ್’ ಆಗಿ ಕೆಲಸಮಾಡಿದರು. ಇದೇ ಕಾಲಕ್ಕೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಅಲೆ ಚಿತ್ರ ಹುಟ್ಟಿಕೊಂಡಿತು. ‘ಸಂಸ್ಕಾರ’ ಚಿತ್ರ ನೋಡಿದ ನಂತರ ಹೊಸ ಅಲೆ ಚಿತ್ರದಲ್ಲಿ ಆಸಕ್ತಿ ಕುದುರಿರಬೇಕು. ಎಪ್ಪತ್ತರ ದಶಕ ಅನೇಕ ಹೊಸ ಅಲೆಯ ಚಿತ್ರಗಳನ್ನು ಕಂಡಿತು. ಹೊಸ ಅಲೆ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಗೌರಿಸುಂದರ್ ‘ಸಂದರ್ಭ’ ಚಿತ್ರವನ್ನು ಮಾಡಿದರು. ಇದೇ ಕಾಲಕ್ಕೆ ರಂಗಭೂಮಿಯಲ್ಲಿ, ದೂರದರ್ಶನದಲ್ಲಿ ಆಸಕ್ತಿ ಗರಿಗೆದರಿತು. ಪ್ರಖ್ಯಾತ ನಾಟಕಕಾರ ಎ.ಎಸ್.ಮೂರ್ತಿಯವರೊಂದಿಗೆ ಒಡನಾಟ.

ಈ ಒಡನಾಟ ಮುಂದೆ ಮೂರ್ತಿಯವರ ಮಗಳು ಇಂದಿರಾ ಅವರೊಂದಿಗಿನ ವಿವಾಹದಲ್ಲಿ ಭದ್ರವಾದ ನೆಂಟಸ್ಥಿಕೆಯಾಯಿತು. ಗೌರಿ ಸುಂದರ್ ಸಾಹಸಗಳಿಗೆ ಇನ್ನೊಂದು ಹೆಸರು.ಹಾಗೆಯೇ ಸ್ನೇಹ ಜೀವಿ. ದೂರದರ್ಶನ ಚಿತ್ರಗಳೊಂದಿಗೆ ಪುಸ್ತಕೋದ್ಯಮಕ್ಕೂ ಪದಾರ್ಪಣಮಾಡಿದರು. ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ಕೊಡುವ ಹಿರಿದಾಸೆಯಿಂದ, ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸುವ ಘನ ಉದ್ದೇಶದಿಂದ ಸುಂದರ ಪ್ರಕಾಶನ ಆರಂಭಿಸಿದರು. ಸುಪ್ರಸಿದ್ಧರೂ ಹೊಸಬರೂ ಸೇರಿದಂತೆ ಹಲವಾರು ಲೇಖಕರ ನೂರಾರು ಪುಸ್ತಕಗಳನ್ನು ಪ್ರಕಟಿಸಿದರು. ‘ಈ ಮನುಷ್ಯ ತಿಂಗಳಲ್ಲಿ ಐದೂ-ಹತ್ತು ಪುಸ್ತಕ ಪ್ರಕಟಿಸುತ್ತಾರಲ್ಲ. ಮಾರಾಟಕ್ಕೆ ಏನು ಜಾದೂ ಮಾಡುತ್ತಾರೋ’ ಎಂದು ಪುಸ್ತಕೋದ್ಯಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಪುಸ್ತಕ ಬಿಡುಗಡೆಯಾಗಲೀ, ಚಿತ್ರ ಬಿಡುಗಡೆಯಾಗಲೀ ಪೂರ್ವಭಾವಿಯಾಗಿ ಒಂದು ಭರ್ಜರಿ ‘ಸ್ನೇಹ ಸಮ್ಮಿಲನ’ವಾಗಲೇಬೇಕು. ಇದು ಗೌರಿಸುಂದರ್ ಜೀವನಶೈಲಿ.

‘ಅತಿಥಿ ದೇವೋ ಭವ’ ಎಂಬುದನ್ನು ಅವರು ಅಕ್ಷರಶ: ನಂಬಿದ್ದರು. ಅವರು ಸ್ನೇಹ ಸಮ್ಮಿಲನಗಳಿಗೆ ಸ್ನೇಹಿತರನ್ನು ಬರಮಾಡಿಕೊಳ್ಳುತ್ತಿದ್ದುದೇ ಒಂದು ವಿಶಿಷ್ಟ ಪರಿ. ಅತಿಥಿಗಳನ್ನು ಅರ್ಘ್ಯಪಾದ್ಯಾದಿಗಳೊಂದಿಗೆ ಸ್ವಾಗತಿಸಿ ಅವರನ್ನು ‘ಮಧು’ ಪರ್ಕದಲ್ಲಿ ಮೀಯಿಸುವವರೆಗೆ ಎಲ್ಲ ಆತಿಥ್ಯವನ್ನು ಸ್ವತ: ತಾವೇ ನಿಂತು ಸಾಂಗೋಪಾಂಗವಾಗಿ ನಡೆಸುತ್ತಿದ್ದರು. ಇವರ ಅತಿಥಿ ಸತ್ಕಾರದಲ್ಲಿ ಮಡದಿ ಮಕ್ಕಳ ಸಂಪೂರ್ಣ ಸಹಕಾರ. ಪತ್ನಿ ಇಂದಿರಾ ನುರಿತ ಸಿನಿಮಾಟೊಗ್ರಾಫರ್. ಮಗಳು ಚಿತ್ರಶ್ರೀ ರಕ್ತಗತವಾಗಿ ಬಂದ ಅಭಿನಯ ಕಲೆಯನ್ನು ರೂಢಿಸಿಕೊಂಡಿರುವ ಪಳಗಿದ ನಟಿ. ಎರಡನೆಯ ಮಗಳು ಮಾನಸಿ ಹಲವು ಹನ್ನೊಂದು ಆಸಕ್ತಿಗಳ ಚೂಟಿ ಹುಡುಗಿ. ಇಡೀ ಕುಟಂಬವೇ ಅ.ನ.ಸುಬ್ಬರಾಯರ ಕಲಾ ಕುಟುಂಬದ ಮತ್ತೊಂದು ಟಿಸಿಲು. ಕಲೆ ಸಾಹಿತ್ಯದಲ್ಲಿ ಸಂತೋಷ ಕಂಡುಕೊಂಡಿದ್ದ ಈ ಕುಟುಂಬಕ್ಕೆ ಗೌರಿಸುಂದರ್ ಅಕಾಲಿಕ ಮರಣ ದೊಡ್ಡ ಆಘಾತವೇ. ಈ ಆಘಾತದಿಂದ ಚೇತರಿಸಿಕೊಂಡ ಮಡದಿ ಮಕ್ಕಳು ಸುಂದರ್ ಅವರಿಗೆ ಪ್ರಿಯವಾದ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳನ್ನು ಮುಂದುವರಿಸಿ ಅವರ ಕನಸುಗಳನ್ನು ನನಸುಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯವಾದುದು. ಈ ವರ್ಷದಿಂದ ಗೌರಿ ಸುಂದರ್ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯೊಂದನ್ನು ಸ್ಥಾಪಿಸಿರುವುದು ಗೌರಿಸುಂದರ ಸ್ಮರಣೆಯ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ. ಮೊದಲ ವರ್ಷದ ಪ್ರಶಸ್ತಿ ಹೆಸರಾಂತ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನಮಾಡಲಿರುವುದು ಮತ್ತೊಂದು ಮೆಚ್ಚುವಂಥ ಕ್ರಮ. ಪ್ರಶಸ್ತಿಯೊಂದಿಗೆ ಚೊಕ್ಕಾಡಿಯವರ ‘ಕಾವ್ಯ ಕುಸುಮ ಮಾಲೆ’ ಗ್ರಂಥ ಪ್ರಕಟಣೆ ಮತ್ತೊಂದು ಅಗ್ಗಳಿಕೆ.

ಸುಬ್ರಾಯ ಚೊಕ್ಕಾಡಿ

ಕವಿ ಸುಬ್ರಾಯ ಚೊಕ್ಕಾಡಿಯವರನ್ನು ನಾನು ಮೊದಲು ಕಂಡದ್ದು ಅರುವತ್ತರ ದಶಕದ ಮಧ್ಯಭಾಗದಲ್ಲಿರಬೇಕು. ಆ ವೇಳೆಗೆ ಅವರ ಕವಿತೆಗಳು ಪತ್ರಿಕೆಗಳಲ್ಲಿ ಹಾಗೂ ‘ಸಾಕ್ಷಿ’, ‘ಲಹರಿ’ಯಂಥ ಪ್ರತಿಷ್ಠಿತ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿ, ಅವರು ಭರವಸೆಯ ಕವಿ (ಪ್ರಾಮಿಸಿಂಗ್ ಪೊಯೆಟ್) ಸ್ಥಾನಮಾನ ಮರ್ಯಾದೆಗಳಿಗೆ ಪಾತ್ರರಾಗಿದ್ದರು. ಆರು ದಶಕಗಳ ಹಿಂದಿನ ಭೇಟಿಯಾದರೂ ಅಂದು ನಾನು ಕಂಡ ಯುವ ಕವಿಯ ಮುಖಲಕ್ಷಣ ನನ್ನ ಮನಸ್ಸಿನಲ್ಲಿ ಇಂದಿಗೂ ಹಸಿರಾಗೇ ಇದೆ. ಮೊದಲ ನೋಟಕ್ಕೇ ಆಕರ್ಷಣೀಯವಾದ ಭುಜಮಟ್ಟದವರೆಗಿನ ಗುಂಗುರು ಕೂದಲ ಕ್ರಾಪು-ಗುಂಗುರು ಕೂದಲಿನ ಒಂದು ಜೊಂಪೆ ಅರ್ಧಚಂದ್ರಾಕಾರದಲ್ಲಿ ಕರ್ಣಾಭರಣದಂತೆ ಎರಡೂ ಕಿವಿಗಳನ್ನು ಅಲಂಕರಿಸಿತ್ತು. ಅಗಲವಾದ ಹಣೆ, ಹೊಳೆವ ಹುಡುಕುವ ಕಣ್ಣುಗಳು, ಕವಳ ಮೆದ್ದ ಹವಳಗೆಂಪಿನ ತುಟಿಗಳು...ಇಂವ ಯಾರೋ ತಾಳಮದ್ದಲೆಯವನೋ, ಅರ್ಥಧಾರಿಯೋ, ಯಕ್ಷಗಾನದ ಪಾತ್ರಧಾರಿಯೋ ಎಂದು ಭಾಸವಾಗುವಂಥ ಬಾಹ್ಯ ವ್ಯಕ್ತಿತ್ವ. ನಂತರ ತಿಳಿದದ್ದು ನನಗೆ ಭಾಸವಾದ್ದರಲ್ಲಿ ಸ್ವಲ್ಪ ತಥ್ಯಾಂಶವಿದೆಯೆಂದು. ಚೊಕ್ಕಾಡಿಯವರ ತಂದೆ ಪ್ರಸಿದ್ಧ ಯಕ್ಷಗಾನ ಕಲಾವಿದ ಅಜ್ಜನಗದ್ದೆ ಗಣಪಯ್ಯನವರು. ಹೀಗಾಗಿ ರಕ್ತಗತವಾಗಿ ಬಂದ ಕಲೆ ಅಂತರಂಗದಲ್ಲಿ ಕವಿಯಾಗಿ, ಬಾಹ್ಯದಲ್ಲಿ ಥೇಟ್ ಕಲಾವಿದನಾಗಿ ಪ್ರಕಟಗೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 1940ರಲ್ಲಿ, ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ಬಾಲ್ಯದಲ್ಲಿ ಶಿಕ್ಷಣ ಶಾಲೆಯಲ್ಲಿ ಹಾಗೂ ತಂದೆಯವರಿಂದಲೂ. ಯಕ್ಷಗಾನ ಕಲೆಯೊಂದಿಗೆ ತಂದೆ ಗಣಪಯ್ಯನವರಿಗೆ ಹೆಗಲಮೇಲೆ ಕನ್ನಡ ಪುಸ್ತಕಗಳನ್ನು ಹೊತ್ತು ಮನೆಮನೆಗೆ ಹೋಗಿ ಪುಸ್ತಕ ಪರಿಚಾರಿಕೆ ಮಾಡುವ ಹವ್ಯಾಸವೂ ಅಂಟಿಕೊಂಡಿತ್ತಂತೆ. ಹೀಗೆ ಎಳವೆಯಿಂದಲೇ ಬಾಲಕ ಚೊಕ್ಕಾಡಿಗೆ ಸಾಹಿತ್ಯದ ಸಹವಾಸ. ಸ್ವಾತಂತ್ರ್ಯ ಪೂರ್ವದ ಮಧ್ಯಮ ವರ್ಗದ ಎಲ್ಲ ಮನೆಗಳಂತೆ ಗಣಪಯ್ಯನವರ ಮನೆಯಲ್ಲೂ ಬಡತನದ್ದೇ ದರ್ಬಾರು. ಕಾಲೇಜಿಗೆ ಹೋಗುವ ಸುಯೋಗ ಸುಬ್ರಾಯನಿಗೆ ಒದಗಿಬರಲಿಲ್ಲ. ಪ್ರಾಥಮಿಕ ಶಾಲೆಯ ಮಾಸ್ತರಾಗಿ ಸಂಸಾರದ ಹೊಣೆಗೆ ಹೆಗಲು ಕೊಟ್ಟರು. ತಂದೆಯವರ ಹೆಗಲ ಚೀಲದ ಪುಸ್ತಕಗಳಿದ್ದವಲ್ಲ ಅವು ಚೊಕ್ಕಾಡಿಯವರನ್ನು ಸ್ವಯಮಾಚಾರ್ಯ ಪೀಠದಲ್ಲಿ ಕುಳ್ಳಿರಿಸಿದವು. ಇಂತು ಸಾಹಿತ್ಯಾಧ್ಯಯನದಲ್ಲಿದ್ದಾಗಲೇ ತಂದೆಯವರ ಚೀಲದಲ್ಲಿ ಮಾರಾಟವಾಗದೇ ಉಳಿದಿದ್ದ ಗೋಪಾಲಕೃಷ್ಣ ಅಡಿಗರ ‘ಚಂಡಮದ್ದಳೆ’ ಅವರಿಗೆ ಕರಗತವಾಯಿತು. ಬಾಲ್ಯದಿಂದಲೇ ಯಕ್ಷಗಾನದ ಚಂಡೆ ಮದ್ದಳೆಯ ಪರಿಚಯವಿದ್ದ ಯುವಕ ಚೊಕ್ಕಾಡಿಯವರನ್ನು ಅಡಿಗರ ‘ಚಂಡೆ ಮದ್ದಳೆ’ ಬೇರೊಂದು ಲೋಕಕ್ಕೇ ಕರೆದೊಯ್ದಿತು. ಅವರಲ್ಲಿ ಸುಪ್ತವಾಗಿದ್ದ ಕವಿ ಚೇತನವನ್ನು ಜಾಗೃತಗೊಳಿಸಿತು. ಕವಿ ಸುಬ್ರಾಯ ಚೊಕ್ಕಾಡಿಯವರು ಪ್ರಕಾಶಮಾನರಾದರು.

ನವ್ಯ ಕಾವ್ಯ ಕಬ್ಬಿಣ ಕಡಲೆ, ಅರ್ಥವಾಗುವುದಿಲ್ಲ ಎಂಬಂಥ ದಿನಗಳಲ್ಲಿ ಕಾವ್ಯವನ್ನು ಅರ್ಥವಾಗುವಂತೆ, ಅರ್ಥಪೂರ್ಣವಾಗಿ ಬರೆಯುವ ಸವಾಲಿನೊಂದಿಗೇ ಕನ್ನಡ ಕಾವ್ಯದಲ್ಲಿ ಹೊಸ ತಲೆಮಾರೊಂದು ಹುಟ್ಟಿಕೊಂಡಿತು. ಇವರಲ್ಲಿ ಸುಬ್ರಾಯ ಚೊಕ್ಕಾಡಿ, ತಿರುಮಲೇಶ, ರಾಮಚಂದ್ರ ದೇವ, ಎಚ್.ಎಸ್.ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್, ದೊಡ್ಡರಂಗೇಗೌಡ ಪ್ರಮುಖರು. ಏಳು ಕವನ ಸಂಕಲನಗಳ ಕವಿ ಸುಬ್ರಾಯ ಚೊಕ್ಕಾಡಿಯವರನ್ನು ಪ್ರತಿಮಾ ಮಾರ್ಗದ ಕವಿ ಎಂದು ವಿಮರ್ಶೆ ಗುರುತಿಸಿದೆ. ‘‘ಚೊಕ್ಕಾಡಿಯವರ ಕವಿತೆಗಳಂತೂ ಮೌನವನ್ನು ತಂಬೂರಿ ಮಿಡಿವಂತೆ ಮಿಡಿಯುವ ಕವಿತೆಗಳು. ಲಯದ ಸಹಜ ಹಾಸುಹೊಕ್ಕು ಅವರ ಕವಿತೆಗಳಲ್ಲಿ ಮೋಹಕವಾಗಿ ಹೆಣೆದುಕೊಳ್ಳುತ್ತೆ. ಮರಗಳು, ಹಕ್ಕಿಗಳು ಅವರ ಕಾವ್ಯದ ಕೇಂದ್ರ ಪ್ರತಿಮೆಗಳು’’ ಎಂಬುದು ಎಚ್.ಎಸ್. ವೆಂಕಟೇಶ ಮೂರ್ತಿಯವರ ವಿಮರ್ಶೆ.

ನವ್ಯದ ಪ್ರಭಾವದಿಂದಾಗಿಯೋ ಎನೋ ‘ಅಹಂ’ರತಿಯಿಂದ ಬಿಡಿಸಿಕೊಳ್ಳಲಾಗದೆ,-ಎಸ್.ಆರ್.ವಿಜಯಶಂಕರ್ ಹೇಳಿರುವಂತೆ- ‘ನಾನು’ ಅವರ ಕವಿತೆಗಳ ನಿರಂತರ ನಾಯಕ. ಚೊಕ್ಕಾಡಿಗೆ ಇದರ ಅರಿವು ಇಲ್ಲದೇ ಇರಲಿಲ್ಲ. ಗತಿಬದ್ಧ ಬೆಳವಣಿಗೆಯಿಂದ ಇದರಿಂದ ಬಿಡುಗಡೆ ಪಡೆದು ಅವರ ಕಾವ್ಯ ಸಮಾಜಮುಖಿಯಾಯಿತು. ‘ಅಹಂ’ ಜಾಗದಲ್ಲಿ ಪ್ರೀತಿ, ಬೆರಗು, ಕನಸುಗಳು, ಪರಿಸರ, ಮಾನವನ ಕ್ರೌರ್ಯ, ನಾಗರಿಕತೆಯ ವಿಪರ್ಯಾಸಗಳು ಮೊದಲ್ಗೊಂಡು ಬದುಕಿನ ಅನ್ವೇಷಣೆಯ ಜಾಡನ್ನು ಹಿಡಿಯಿತು. ಸಾಹಿತಿಯೊಬ್ಬನ ಬದುಕೆಂದರೆ ತನ್ನ ಕನಸುಗಳನ್ನು ನನಸಾಗಿಸುವುದಕ್ಕಾಗಿ ಆತ ನಡೆಸುವ ಅರ್ಥಪೂರ್ಣ ಹುಡುಕಾಟವೇ ಆಗಿದೆ ಎಂಬುದು ಚೊಕ್ಕಾಡಿಯವರದೇ ಮಾತು. ಈ ಮಾತುಗಳಲ್ಲಿ ಅವರ ಸೃಜನಶೀಲ ನಂಬಿಕೆಯ ಹಿಂದಿನ ಕಾವ್ಯ ಪ್ರಣಾಳಿಕೆ ಸ್ಪಷ್ಟ. ಚೊಕ್ಕಾಡಿಯವರು ಗಾಢಾನುರಕ್ತಿಯ ಅನೇಕ ಆಕರ್ಷಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸುದೀರ್ಘ ಕವನಗಳಿವೆ, ಪುಟ್ಟಪುಟ್ಟ ಪದ್ಯಗಳಿವೆ, ಹೃದಯಂಗಮವಾದ ಭಾವಗೀತೆಗಳಿವೆ, ಗಜಲ್‌ಗಳಿವೆ.ಮೊದಲ ಮಳೆ, ನನ್ನ ಪುಟ್ಟ ಪ್ರಪಂಚ, ಗಂಗೋತ್ರಿಯ ಹಕ್ಕಿಗಳು-ಇವು ಚೊಕ್ಕಾಡಿ ಎಂದ ಕೂಡಲೇ ನೆನಪಿಗೆ ಬರುವ ಉತ್ಕೃಷ್ಟ ಕವನಗಳು. ಸಿ.ಅಶ್ವತ್ಥರ ರಾಗ ಸಂಯೋಜನೆಯಲ್ಲಿ ಪುತ್ತೂರು ನರಸಿಂಹ ನಾಯಕ್ ಹಾಡಿರುವ ಚೊಕ್ಕಾಡಿಯವರ ಅನೇಕ ಗಜಲ್‌ಗಳು, ಭಾವಗೀತೆಗಳು ರಸಿಕರ ತುಟಿಗಳ ಮೇಲೆ ನಲಿದಾಡುವಷ್ಟು ಜನಪ್ರಿಯವಾಗಿವೆ. ‘ಮುನಿಸು ತರವೇ’, ‘ಸಂಜೆಯ ರಾಗಕೆ’ ಅಂಥವುಗಳಲ್ಲಿ ಕೆಲವು. ‘ಸಂತೆ’ ಚೊಕ್ಕಾಡಿಯವರ ಕಾದಂಬರಿಯಾದರೆ, ‘ಬೇರುಗಳು’ ಕಥಾ ಸಂಕಲನ. ‘ಕೃತಿ ಶೋಧ’, ‘ಒಳ ಹೊರಗು’, ‘ದಕ್ಷಿಣ ಕನ್ನಡ ಜಿಲ್ಲಾ ಕಾವ್ಯ ಸಮೀಕ್ಷೆ’ ವಿಮರ್ಶಾ ಕೃತಿಗಳು.

ಚೊಕ್ಕಾಡಿಯವರ ಕಾವ್ಯಾಭಿವ್ಯಕ್ತಿಯ ಪ್ರಮುಖ ಅಂಗಗಳಾದ ಮಾನವ ಸಮಾಜ, ನಾಗರಿಕತೆ ಮತ್ತು ಸುತ್ತಲ ಪ್ರಕೃತಿಪರಿಸರಗಳು ಅವರ ದೈನಂದಿನ ಬದುಕಿನಲ್ಲೂ ರಚನಾತ್ಮಕವಾಗಿ ಪ್ರಕಟಗೊಂಡಿದೆ. ಚೊಕ್ಕಾಡಿಯವರು ತನ್ನೊಂದಿಗೆ, ತನ್ನ ಕಾವ್ಯದೊಂದಿಗೆ ಲೋಕಸಂಪನ್ನವಾಯಿತು ಎನ್ನುವ ಪೈಕಿಯ ಕವಿಯಲ್ಲ. ತನ್ನ ಓರಿಗೆಯ ಕವಿ, ಕಲಾವಿದರೂ ಬೆಳೆಯಬೇಕು ಎನ್ನುವ ಕಳಕಳಿಯುಳ್ಳವರು. ಎಂದೇ ತನ್ನ ಕೃತಿಗಳು ಪ್ರಕಟವಾದರೆ ಸಾಕು ಎಂದು ಅವರು ಕೈಕಟ್ಟಿ ಕೂರಲಿಲ್ಲ. ಉದಯೋನ್ಮುಖ ಪ್ರತಿಭೆಗಳಿಗೆ ಪ್ರಕಟಣೆಯ ಅವಕಾಶ ಕಲ್ಪಿಸಲು ಸಾಹಿತ್ಯಾಸಕ್ತರನ್ನು ಸಂಘಟಿಸಿದರು. ವಸಂತ ಪ್ರಕಾಶನ ಪ್ರಾರಂಭಿಸಿದರು. ಓರಿಗೆಯ, ಯುವಪೀಳಿಗೆಯ ಲೇಖಕರ ಕೃತಿಗಳನ್ನು ಪ್ರಕಟಿಸಿದರು. ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕವನ್ನು ಚೊಕ್ಕಾಡಿ ವಸಂತ ಪ್ರಕಾಶನದಲ್ಲಿ ಪ್ರಕಟಿಸಿದರು. ಮುಂದೆ ಪುಸ್ತಕೋದ್ಯಮ ‘ಹೊರಲಾಗದ ಹೊರೆ’ ಎನ್ನಿಸಿದಾಗ ಪ್ರಕಟಣಾ ಸಾಹಸವನ್ನು ಬಿಡುವುದು ಅನಿವಾರ್ಯವಾಯಿತು. ಯುವ ಕವಿಗಳ ಪಟಾಲಂ ಕಟ್ಟಿ ಚೊಕ್ಕಾಡಿಯವರು ‘ಸುಮನಸ’ ಎಂಬ ವಿಚಾರ ವೇದಿಕೆ ಪ್ರಾರಂಭಿಸಿದರು. ನಾಟಕ, ಸಾಹಿತ್ಯ, ವಿಮರ್ಶೆ, ಜಿಜ್ಞಾಸೆ, ಚರ್ಚೆಗಳ ಮುಖೇನ ಅನೇಕ ಯುವ ಲೇಖಕರನ್ನು ಬೆಳೆಸಿದರು.

ಚೊಕ್ಕಾಡಿ ಮಾಸ್ತರರು ಎಷ್ಟು ಅಚ್ಚುಮೆಚ್ಚಿನ ವಿದ್ಯಾ ಗುರುಗಳೆಂದರೆ, ಇಂದಿಗೂ ಗುರುಗಳನ್ನು ಮರೆಯದ ಶಿಷ್ಯಗಣವಿದೆ. ಕುಮುಟೆಯ ಬಸ್ ನಿಲ್ದಾಣ. ಚೊಕ್ಕಾಡಿಯವರು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾರೆ. ಚೆಲುವೆ ಸುಮಂಗಲಿ ಹೆಣ್ಣುಮಗಳೊಬ್ಬಳು ಥಟ್ಟನೆ ಪ್ರತ್ಯಕ್ಷವಾಗಿ ಅವರ ಕಾಲಿಗೆರಗುತ್ತಾಳೆ. ನಾನು ಪ್ರಾಥಮಿಕ ಶಾಲೆಯಲ್ಲಿ ನಿಮ್ಮ ಸ್ಟೂಡೆಂಟು.ಗಂಡನ ಕೈಯಲ್ಲಿರುವ ಹಸುಗೂಸನ್ನು ಇಸ್ಕೊಂಡು ‘ನನ್ನ ಕೂಸು’ ಎಂದು ಗುರುಗಳ ಉಡಿಗೆ ಹಾಕುತ್ತಾಳೆ. ಶಿಷ್ಯೆಯ ‘ಜೀವಂತ ಕಾವ್ಯ’ವನ್ನು ಕಂಡು ಮಾಸ್ತರು ಬೆರಗಾಗಿ ನಿಲ್ಲುತ್ತಾರೆ. ಪ್ರೀತಿಯ ಮೇಷ್ಟ್ರು, ಪ್ರೀತಿಯ ಕವಿ, ಪ್ರೀತಿಯ ಗೆಳೆಯನಾಗಿ ಅವರವರ ಭಾವಕ್ಕೆ ತಕ್ಕಂತೆ ಸಲ್ಲುವ ಸುಬ್ರಾಯ ಚೊಕ್ಕಾಡಿಯವರ ಟೊಪ್ಪಿಗೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯಂಥ ಒಂದೆರಡು ಮನ್ನಣೆಯ ಪುಚ್ಛಗಳೂ ಸೇರಿಕೊಂಡಿವೆ. ಈಗ ‘ಗೌರಿಸುಂದರ್ ಪ್ರಶಸ್ತಿ’. ಸುಬ್ರಾಯ ಚೊಕ್ಕಾಡಿಯವರಿಗೆ ಮೂರು ‘ಸ್ವಸ್ತಿ’.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)