varthabharthi

ಸಂಪಾದಕೀಯ

ವಯನಾಡಿನಲ್ಲಿ ರಾಹುಲ್: ಗೆಲ್ಲುವವರು ಯಾರು?

ವಾರ್ತಾ ಭಾರತಿ : 2 Apr, 2019

ಪಕ್ಷದ ನಾಯಕ ಎನ್ನುವ ಕಾರಣಕ್ಕಾಗಿ ಒಬ್ಬ ಅಭ್ಯರ್ಥಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಈಗಾಗಲೇ ರಾಹುಲ್ ಗಾಂಧಿ ಅಮೇಠಿಯ ಜೊತೆಗೆ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರು ಕಳೆದ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಎಲ್ಲ ಸಾಧ್ಯತೆಗಳಿವೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಎರಡೂ ಕ್ಷೇತ್ರಗಳನ್ನು ಅಭ್ಯರ್ಥಿಗೆ ಪ್ರತಿನಿಧಿಸಲು ಸಾಧ್ಯವಿಲ್ಲ ಎನ್ನುವುದು ಅರಿವಿದ್ದೂ ಯಾಕೆ ಚುನಾವಣಾ ಆಯೋಗ ಇದಕ್ಕೆ ಅವಕಾಶ ನೀಡುತ್ತಿದೆ ಎನ್ನುವುದು ಶ್ರೀಸಾಮಾನ್ಯರ ಪ್ರಶ್ನೆಯಾಗಿದೆ. ಒಂದು ಕ್ಷೇತ್ರದಲ್ಲಿ ಸೋತರೆ, ಇನ್ನೊಂದು ಕ್ಷೇತ್ರದ ಮೂಲಕ ಪ್ರತಿನಿಧಿಸಿ, ನಾಯಕತ್ವವನ್ನು ಉಳಿಸಿಕೊಳ್ಳಬಹುದು ಎನ್ನುವ ದೂರಾಲೋಚನೆಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಮುಖ ಉದ್ದೇಶ. ಒಬ್ಬ ಪಕ್ಷದ ನಾಯಕನ ಹಿತಾಸಕ್ತಿಗಾಗಿ ಮತದಾರರ ಮೇಲೆ ಎರಡೆರಡು ಬಾರಿ ಚುನಾವಣೆಯನ್ನು ಹೇರುವುದು ಎಷ್ಟು ಸರಿ?

ಸಾಧಾರಣವಾಗಿ ಉತ್ತರ ಭಾರತದ ರಾಷ್ಟ್ರೀಯ ಪಕ್ಷವೊಂದರ ಅತ್ಯುನ್ನತ ನಾಯಕನೊಬ್ಬ ತನ್ನ ಕ್ಷೇತ್ರದ ಜೊತೆಗೆ ದಕ್ಷಿಣ ಭಾರತದ ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾದರೆ ಅದು ಸಾಕಷ್ಟು ಸುದ್ದಿ ಮಾಡುತ್ತದೆ. ಸೋನಿಯಾಗಾಂಧಿಯವರು ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗಲೂ ಇದು ಸಂಭವಿಸಿತು. ಸುಶ್ಮಾ ಸ್ವರಾಜ್ ಮತ್ತು ಸೋನಿಯಾಗಾಂಧಿಯವರ ನಡುವಿನ ಸ್ಪರ್ಧೆ ಸದಾ ಪತ್ರಿಕೆಗಳಲ್ಲಿ ಮುಖಪುಟದ ವಿಷಯವಾಯಿತು. ಉಭಯ ಪಕ್ಷಗಳ ಮುಖಂಡರೂ ಆ ಕ್ಷೇತ್ರದಲ್ಲಿ ಝಂಡಾ ಹೂಡಿದರು. ಸೋನಿಯಾಗಾಂಧಿಯವರು ಬಳ್ಳಾರಿಯಲ್ಲಿ ಗೆದ್ದರಾದರೂ, ಬಳಿಕ ರಾಜೀನಾಮೆ ನೀಡಿ ಉತ್ತರ ಭಾರತಕ್ಕೆ ತೆರಳಿದರು. ಸೋನಿಯಾಗಾಂಧಿ ಗೆದ್ದಲ್ಲಿ ತಮ್ಮ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡಬಹುದು ಎನ್ನುವ ಆಸೆಯಿಂದ ಮತದಾರರು ಅವರನ್ನು ಆರಿಸಿದರು. ಆದರೆ ಗೆದ್ದು ರಾಜೀನಾಮೆ ಸಲ್ಲಿಸಿದ ಬಳಿಕ ಆ ಕ್ಷೇತ್ರವನ್ನು ತಿರುಗಿಯೂ ನೋಡಲಿಲ್ಲ. ‘ತನ್ನನ್ನು ಗೆಲ್ಲಿಸಿದ ಮತದಾರರು’ ಎಂಬ ಋಣವನ್ನು ಇಟ್ಟುಕೊಂಡು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆ ಕ್ಷೇತ್ರವನ್ನು ಸಂದರ್ಶಿಸಿ ಅಲ್ಲಿನ ಜನರ ಕಷ್ಟ ಸುಖಗಳನ್ನು ವಿಚಾರಿಸುವುದು ಅವರ ಕರ್ತವ್ಯವಾಗಿತ್ತು. ಆದರೆ ಅಂತಹದ್ದೇನೂ ನಡೆಯಲಿಲ್ಲ. ಬಳ್ಳಾರಿಯ ಜನತೆ ಮತ್ತೊಂದು ಚುನಾವಣೆಯ ಹೊರೆಯನ್ನು ಹೊತ್ತುಕೊಳ್ಳಬೇಕಾಯಿತು.

ಒಂದು ಚುನಾವಣೆ ಎಂದರೆ ಸಾಕಷ್ಟು ಪೂರ್ವತಯಾರಿ ಮಾಡಬೇಕಾಗುತ್ತದೆ. ಅಪಾರ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ಸಮಯ ವ್ಯಯವಾಗುತ್ತದೆ. ಅಪಾರ ಹಣ ವೆಚ್ಚವಾಗುತ್ತದೆ. ಈ ಎಲ್ಲ ವೆಚ್ಚವನ್ನು ಅಭ್ಯರ್ಥಿ ಭರಿಸುತ್ತಾರೆಯೇ? ಒಂದು ವೇಳೆ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಾನಾದರೆ ಅಲ್ಲಿ ಚುನಾವಣೆಗಾಗಿ ವ್ಯಯ ಮಾಡಿದ ಸರ್ವ ವೆಚ್ಚವನ್ನು ಆ ಅಭ್ಯರ್ಥಿ ಅಥವಾ ಅಭ್ಯರ್ಥಿಯನ್ನು ಪ್ರತಿನಿಧಿಸುವ ಪಕ್ಷ ಭರಿಸಬೇಕು. ಅದಕ್ಕಾಗಿ ಆತನಿಂದ ಮೊದಲೇ ಇಂತಿಷ್ಟು ಠೇವಣಿಯನ್ನು ಪಡೆಯಬೇಕು. ಇದಲ್ಲದೇ ಇದ್ದರೆ ಆತನಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಚುನಾವಣಾ ಆಯೋಗ ನೀಡಬಾರದು. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ. ಈ ದೇಶವನ್ನು ಆಳಿದ ಬಹುತೇಕರು ಉತ್ತರ ಪ್ರದೇಶವನ್ನು ಪ್ರತಿನಿಧಿನಿಸುತ್ತಿರುವವರು. ಅವರಿಗೆ ದಕ್ಷಿಣ ಭಾರತದ ಜನರನ್ನು ತಲುಪುವುದಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ದೇಶ ಉತ್ತರ ಭಾರತ-ದಕ್ಷಿಣ ಭಾರತವೆಂದು ಒಡೆದಿದೆ.

ದಕ್ಷಿಣ ಭಾರತೀಯರ ಕುರಿತಂತೆ ಉತ್ತರಭಾರತೀಯರಲ್ಲಿ ಕೀಳರಿಮೆ, ಅಸಹನೆಗಳಿವೆ. ಅದು ಭಾಷಾ ಹೇರಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಆಗಾಗ ಹೊರಹೊಮ್ಮುತ್ತಾ ಇರುತ್ತದೆ. ಇಂತಹ ಸಂದರ್ಭದಲ್ಲಿ, ಉತ್ತರ ಭಾರತದ ನಾಯಕರು ದಕ್ಷಿಣ ಭಾರತದ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಸ್ಪರ್ಧಿಸುವುದು ಉತ್ತರ- ದಕ್ಷಿಣವನ್ನು ಪರೋಕ್ಷವಾಗಿ ಬೆಸೆದಂತೆಯೇ ಸರಿ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸಲು ಹೊರಟಿರುವುದು ಶ್ಲಾಘನೀಯ. ಆದರೆ, ಒಂದು ವೇಳೆ ವಯನಾಡ್‌ನಲ್ಲಿ ಗೆದ್ದರೆ ಅವರು ಅಮೇಠಿಯನ್ನು ಬಿಟ್ಟು ವಯನಾಡನ್ನೇ ಪ್ರತಿನಿಧಿಸಬಲ್ಲರೇ? ಎಂಬ ಪ್ರಶ್ನೆಗೆ ಕಾಂಗ್ರೆಸ್ ಈವರೆಗೆ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಅಮೇಠಿಯಲ್ಲಿ ಸೋತರೆ ಇರಲಿ ಎಂಬಂತೆ ವಯನಾಡ್‌ನ್ನು ‘ಇಟ್ಟುಕೊಳ್ಳುವುದಕ್ಕೆ’ ರಾಹುಲ್ ಹೊರಟಿದ್ದಾರೆ. ಆದರೆ ಅಧಿಕೃತ ಪತ್ನಿಯಾಗಿ ಅಮೇಠಿಯನ್ನೇ ಒಪ್ಪಿಕೊಂಡಿದ್ದಾರೆ. ಆದುದರಿಂದ ಈ ಸ್ಪರ್ಧೆಯಿಂದ ವಯನಾಡ್‌ಗಾಗಲಿ, ದಕ್ಷಿಣ ಭಾರತಕ್ಕಾಗಲಿ ದೊಡ್ಡ ಪ್ರಯೋಜನವಾಗದು.

 ಇದೇ ಸಂದರ್ಭದಲ್ಲಿ ರಾಹುಲ್‌ಗಾಂಧಿಯವರು ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಸ್ಪರ್ಧಿಸದೇ ಎಡಪಕ್ಷಗಳು ಪ್ರಬಲವಾಗಿರುವ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ರಾಹುಲ್‌ಗಾಂಧಿ ಬಿಜೆಪಿಗೆ ಹೆದರಿಕೊಂಡರೇ? ಅಮೇಠಿಯಲ್ಲಿ ಬಿಜೆಪಿಯಿಂದ ಸೋಲುವ ಭಯ ಅವರನ್ನು ಕಾಡಿದೆಯೇ? ಕನಿಷ್ಠ ದಕ್ಷಿಣದಲ್ಲೂ ಯಾಕೆ ಅವರು ಎದುರಾಳಿಯಾಗಿ ಬಿಜೆಪಿಯನ್ನು ಆರಿಸಿಕೊಳ್ಳದೆ ಎಡಪಕ್ಷವನ್ನು ಆರಿಸಿಕೊಂಡರು? ಎನ್ನುವುದು ಅವರ ಜಾತ್ಯತೀತ ಸಿದ್ಧಾಂತದ ಬದ್ಧತೆಯನ್ನು ಪ್ರಶ್ನಿಸುತ್ತದೆ.

ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್ ಒಂದನ್ನು ಗಮನಿಸಬೇಕು. ಕೇರಳದಲ್ಲಿ ಇಂದಿಗೂ ಬಿಜೆಪಿಗೆ ತಲೆಯೆತ್ತಲೂ ಸಾಧ್ಯವಾಗದೇ ಇದ್ದರೆ ಅದಕ್ಕೆ ಕಾರಣ, ಕಮ್ಯುನಿಷ್ಟರು ಕೋಮುವಾದಿ ಶಕ್ತಿಗಳಿಗೆ ಒಡ್ಡಿದ ಪ್ರಬಲ ಪ್ರತಿರೋಧವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಬಾಲ ಬಿಚ್ಚದೇ ಇರುವುದಕ್ಕೆ ಮುಖ್ಯ ಕಾರಣವೇ ಇಲ್ಲಿನ ಪ್ರಾದೇಶಿಕ ಪಕ್ಷಗಳು. ಕೋಮುವಾದಿ ಶಕ್ತಿಗಳ ಜೊತೆಗೆ ಕಾಂಗ್ರೆಸ್ ಮೃದುವಾಗಿ ನಡೆದುಕೊಂಡಿದ್ದರೆ, ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಅವುಗಳಿಗೆ ಸಮರ್ಥ ಉತ್ತರವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ತಮಿಳುನಾಡು, ಆಂಧ್ರ, ಕೇರಳದಲ್ಲಿ ಬಿಜೆಪಿ ಏದುಸಿರು ಬಿಡುವುದಕ್ಕೆ ಪ್ರಾದೇಶಿಕ ಪಕ್ಷಗಳೇ ಕಾರಣ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿರುವ ಕರ್ನಾಟಕದಲ್ಲಿ ಬಿಜೆಪಿ ಸುಲಭವಾಗಿ ತನ್ನ ಬೇರನ್ನು ಇಳಿಸಿತು. ದಕ್ಷಿಣ ಭಾರತದ ಅಸ್ಮಿತೆಯೊಂದಿಗೆ ಬೇರಿಳಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳ ಹಿರಿಮೆಯನ್ನು ಇದು ಎತ್ತಿ ಹಿಡಿಯುತ್ತದೆ. ಈ ಕಾರಣಕ್ಕಾಗಿಯೇ ತಮಿಳುನಾಡಿನಲ್ಲಿ ಬಿಜೆಪಿಯು ಪ್ರಾದೇಶಿಕ ಪಕ್ಷವನ್ನು ಬಳಸಿಕೊಂಡು ಚುನಾವಣೆ ಎದುರಿಸಲು ಹೊರಟಿದೆ. ರಾಹುಲ್ ಸ್ಪರ್ಧೆಯಿಂದ ಕೇರಳದಲ್ಲಿ ಎಡಪಕ್ಷಗಳಿಗೆ ಹಿನ್ನಡೆಯಾದರೆ ಮತ್ತು ಕಾಂಗ್ರೆಸ್ ಮುನ್ನೆಲೆಗೆ ಬಂದರೆ ಅದರ ಅಂತಿಮ ಲಾಭ ಬಿಜೆಪಿಗೇ ಆಗಲಿದೆ. ಯಾಕೆಂದರೆ ಬಿಜೆಪಿ ಯಾವತ್ತೂ ಕಾಂಗ್ರೆಸ್‌ನ ನೆರಳನ್ನು ಬಳಸಿಕೊಂಡೇ ಹೆಜ್ಜೆ ಮುಂದಿಟ್ಟಿದೆ. ಈ ನಿಟ್ಟಿನಲ್ಲಿ, ಕಾಂಗ್ರೆಸ್-ಎಡಪಕ್ಷಗಳ ಜಟಾಪಟಿಯಲ್ಲಿ ಬಿಜೆಪಿ ಚಿಗುರಿದರೆ ಅದು ದಕ್ಷಿಣ ಭಾರತಕ್ಕೆ ರಾಹುಲ್‌ಗಾಂಧಿ ಮಾಡುವ ಅತಿ ದೊಡ್ಡ ಹಾನಿಯಾಗಿರುತ್ತದೆ ಎಂಬ ಎಚ್ಚರಿಕೆ ಕಾಂಗ್ರೆಸ್ ನಾಯಕರಲ್ಲಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)