varthabharthiಸಿನಿಮಾ

1,000 ಕೋಟಿ ರೂ. ಬಜೆಟ್ ನ ‘ರಂಡಾಮೂಳಂ’ ಚಿತ್ರಕ್ಕೆ ಏನಾಯಿತು: ನಿರ್ಮಾಪಕ ಬಿ.ಆರ್. ಶೆಟ್ಟಿ ಹೇಳಿದ್ದು ಹೀಗೆ…

ವಾರ್ತಾ ಭಾರತಿ : 3 Apr, 2019

 ಬೆಂಗಳೂರು, ಎ.3: ಖ್ಯಾತ ನಟ ಮೋಹನ್ ಲಾಲ್ ಅವರ ಅಭಿನಯದ ‘ರಂಡಾಮೂಳಂ’ ಚಲನಚಿತ್ರ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ಚಿತ್ರದ ನಿರ್ಮಾಪಕ, ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ಮಂಗಳವಾರ ದೃಢಪಡಿಸಿದ್ದಾರೆ.

ದುಬೈಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿರ್ದೇಶಕ ಶ್ರೀಕುಮಾರ್ ಮೆನನ್ ಹಾಗೂ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಅವರ ನಡುವೆ ಉಂಟಾದ ಸಂಘರ್ಷದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಇವರಿಬ್ಬರ ನಡುವಿನ ಮನಸ್ತಾಪವನ್ನು ಪರಿಹರಿಸಲು ತಾವು ವಿಧಿಸಿದ್ದ ಗಡುವು ಮುಗಿದು ಹೋಗಿರುವುದರಿಂದ ಯೋಜನೆ ಕೈಬಿಡಲಾಗಿದೆ ಎಂದ ಶೆಟ್ಟಿ, “ಈಗಲೂ ನಾನು ಉತ್ತಮ ಸ್ಕ್ರಿಪ್ಟ್ ರಚನಾಕಾರರನ್ನು ಹುಡುಕುತ್ತಿದ್ದೇನೆ. ಅದನ್ನು ಈಗಲೂ ನಿರ್ಮಿಸಬಹುದು. ನನ್ನ ಬದ್ಧತೆ ಈಗಲೂ ಇದೆ. ಒಬ್ಬ ನೈಜ ಭಾರತೀಯನಾಗಿ ನಮ್ಮ ದೇಶದ ಇತಿಹಾಸವನ್ನು ವಿಶ್ವದಾದ್ಯಂತ ಎಲ್ಲಾ ಭಾಷೆಗಳಲ್ಲಿ  ಪ್ರದರ್ಶಿಸಬೇಕು” ಎಂದು ಶೆಟ್ಟಿ ಹೇಳಿದ್ದಾರೆ.

ರೂ 1,000 ಕೋಟಿ ಬಜೆಟ್ ನಲ್ಲಿ ಈ ಚಿತ್ರ ನಿರ್ಮಿಸಲಾಗುವುದು ಎಂದು 2016ರಲ್ಲಿ ಮೋಹನ್ ಲಾಲ್ ಹೇಳಿದ್ದರು. ಈ ಚಿತ್ರ ತೆರೆ ಕಂಡಿದ್ದೇ ಆದಲ್ಲಿ ಭಾರತದಲ್ಲಿ ತಯಾರಾದ ಅತ್ಯಂತ ದೊಡ್ಡ ಬಜೆಟ್ ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು.

ಎರಡು ಭಾಗಗಳಲ್ಲಿ ಈ ಚಿತ್ರ ತಯಾರಿಸುವ ಪ್ರಸ್ತಾಪವಿತ್ತು. ಎಂ ಟಿ ವಾಸುದೇವನ್ ನಾಯರ್ ಅವರ ಪ್ರಶಸ್ತಿ ವಿಜೇತ ಅದೇ ಹೆಸರಿನ ಕಾದಂಬರಿಯ ಆಧರಿತ ಚಿತ್ರ ಇದಾಗಲಿತ್ತಲ್ಲದೆ, ಸೆಪ್ಟೆಂಬರ್ 2018ರಲ್ಲಿ ಸೆಟ್ಟೇರಬೇಕಿತ್ತು. ಮೊದಲ ಭಾಗ 2020ರಲ್ಲಿ ಬಿಡುಗಡೆಗೊಳಿಸುವ ಯೋಚನೆಯೂ ಇತ್ತು.  ಚಿತ್ರವನ್ನು ಇಂಗ್ಲಿಷ್, ಕನ್ನಡ, ಮಲಯಾಳಂ, ಹಿಂದಿ, ತಮಿಳು ತೆಲುಗು ಸಹಿತ ಪ್ರಮುಖ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ನಿರ್ಮಿಸುವ ಯೋಜನೆಯೂ ಇತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)