varthabharthi


ಅನುಗಾಲ

ವಿದ್ವತ್ತಿನ ‘ಉಗ್ರಾಣ’

ವಾರ್ತಾ ಭಾರತಿ : 4 Apr, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಹಕಾರ ಸಂಘಗಳಿಂದ ಯಕ್ಷಗಾನದ ವರೆಗೆ ಅವರ ತಿಳಿವಳಿಕೆಯ ಹರಹು ಬೆರಗು ತರುವಂಥದ್ದು. ಕಾಲಾಂತರದ ಬದಲಾವಣೆ ಮತ್ತು ವ್ಯತ್ಯಾಸ ಇವು ಎಲ್ಲ ಕಾಲಗಳಲ್ಲೂ ಇರುವಂತಹದ್ದೇ. ಉಗ್ರಾಣರು 20ನೇ ಶತಮಾನದ ಆದಿಯಲ್ಲೇ ಬರೆಯತೊಡಗಿದವರು. ಆಧುನಿಕ ಕನ್ನಡದ ನೆಲೆಗಳ ಹರಿಕಾರರಲ್ಲೊಬ್ಬರು. ಅವರು ಕನ್ನಡದ ಮುನ್ನೆಲೆಗೆ ಬರದಿದ್ದರೂ ಆಧಾರಸ್ತಂಭವಾಗಿದ್ದವರು. ಕಾರಂತರಂತಹವರಿಗೂ ಮಾರ್ಗದರ್ಶನ ಮಾಡಿದವರು.


ವಿಷಾದವೆಂದರೆ ಹಳೆಯ ಅನೇಕ ಪಂಡಿತೋತ್ತಮರು ತಮ್ಮೆಲ್ಲ ಅನನ್ಯ ಸಾರಸ್ವತ ಕೊಡುಗೆಗಳೊಂದಿಗೂ ಆನಂತರದ ಪೀಳಿಗೆಯ ನೆನಪಿನಿಂದ ಮರೆಯಾಗಿದ್ದಾರೆ. ವರ್ತಮಾನದ ಸಾಹಿತ್ಯ ವಿಮರ್ಶಕರನೇಕರು ಈಗಾಗಲೇ ಪ್ರತಿಷ್ಠೆಯಾದವರನ್ನು ಮತ್ತಷ್ಟು ಹೊಳಪಿನ ಬೆಳಕಿನಲ್ಲಿಡುವುದಕ್ಕೆ ಪ್ರಯತ್ನಿಸುತ್ತಾರೆಯೇ ವಿನಾ ಈ ಮರೆಯ ಅಮೃತಫಲಗಳನ್ನಲ್ಲ. ಅಂತಹ ಕಾಡಬೆಳದಿಂಗಳಿನ ಕುರಿತು ಬರೆಯುವಾಗ ಯಾರಿಗೇನು ಲಾಭವೋ ಕಾಣೆನಾದರೂ ನಾವೇನೋ ಕೃತಕೃತ್ಯರಾದ, ಸಾರ್ಥಕ್ಯದ ಅನುಭವವಾಗುತ್ತದೆ. ಕರಾವಳಿಯ ಪುತ್ತೂರಿನಲ್ಲಿ ತಮ್ಮ ಬದುಕಿನ ಬಹುಭಾಗವನ್ನು ಕಳೆದ ಉಪಾಧ್ಯಾಯ ವೃತ್ತಿಯ ಉಗ್ರಾಣ ಮಂಗೇಶರಾಯರು (15.09.1893-11.12.1973) ಅಂತಹವರಲ್ಲೊಬ್ಬರು.

ಉಗ್ರಾಣ ಮಂಗೇಶರಾಯರ ಪೂರ್ವಜರು ಕೆಳದಿಯ ಸಂಸ್ಥಾನದಲ್ಲಿ ಉಗ್ರಾಣಿಗಳಾಗಿದ್ದರಂತೆ. (ಉಗ್ರಾಣ ಎಂದರೆ ಭಂಡಾರ ಎಂದೂ ಅರ್ಥ!) ಅವರ ತಂದೆ ಶಿವರಾಯರು ಕುಂದಾಪುರದ ಮುನ್ಸಿಫ್ ಕೋರ್ಟಿನಲ್ಲಿ ಗುಮಾಸ್ತರಾಗಿದ್ದರು. ಅವರ ವರ್ಗಾವಣೆಯೊಂದಿಗೆ ಅವರ ಮಗ ಮಂಗೇಶ ಮುಂದೆ ಪುತ್ತೂರು ಮತ್ತು ಮಂಗಳೂರಿನಲ್ಲಿ ಶಿಕ್ಷಣ ಪಡೆದರು. 1916ರಿಂದ 1948ರಲ್ಲಿ ನಿವೃತ್ತರಾಗುವವರೆಗೂ ಪುತ್ತ್ತೂರು ಅವರ ಕರ್ಮಭೂಮಿಯಾಯಿತು. ಆನಂತರವೂ ಅಲ್ಲೇ ಉಳಿದರು. ಕೊನೆಯ ದಿವಸಗಳನ್ನು ನಾಸಿಕದ ಅವರ ಮಗಳ ಮನೆಯಲ್ಲಿ ಕಳೆದರು. ಅವರನ್ನು ಅವರ ವಿದ್ಯಾರ್ಥಿಯೊಬ್ಬರು ‘‘ಉತ್ತಮ ವಿದೇಶಿ ಅರಿವೆಯ ಅಂದವಾದ ಉಡುಪು, ಎಡದ ಕೈಯಲ್ಲಿ ಪುಸ್ತಕಗಳು, ಸದ್ದು ಮಾಡುವ ಪಾದರಕ್ಷೆಗಳು, ತಾಳಬದ್ಧವಾದ ನಡಿಗೆ, ಗಂಭೀರ ಮುಖಮುದ್ರೆ, ಗೌರವರ್ಣದ ವಿದ್ವತ್ಸೂಚಕ ಲಲಾಟದ ಸುಂದರ ವ್ಯಕ್ತಿ’’ ಎಂದು ವಿವರಿಸಿದ್ದಾರೆ.

ಅವರ ಬದುಕಿನ ಒಂದು ಸಾಮಾನ್ಯ ಘಟನೆ ಅನೇಕ ಪ್ರಸಿದ್ಧರ ಕಣ್ಣು ತೆರೆಯಿಸುವಂತಿದೆ: 1912ರಲ್ಲಿ ಅವರ ಮದುವೆಯ ಸಂದರ್ಭದಲ್ಲಿ ವರನನ್ನು ಪಲ್ಲಕಿಯಲ್ಲಿ ಕೊಂಡೊಯ್ಯಲು ವಧುವಿನ ಕಡೆಯವರು ಸಿದ್ಧರಾಗಿ ನಿಂತಿದ್ದರು. ಆದರೆ ರಾಯರು ಪಲ್ಲಕಿಯನ್ನೇರಲು ಸುತರಾಂ ಒಪ್ಪದೆ ಹಟತೊಟ್ಟು ಕುಳಿತರಂತೆ. ಕೊನೆಗೆ ತಂದೆಯ ಒತ್ತಾಯಕ್ಕೆಂಬಂತೆ ಪಲ್ಲಕಿಯನ್ನೇರಿದರಂತೆ. ನಿವೃತ್ತಿಯ ಆನಂತರ ಉಗ್ರಾಣರು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅವರ ಅನೇಕ ಕೃತಿಗಳು ಆಗ ಪ್ರಸಿದ್ಧವಾಗಿದ್ದವು. ಅವರ ಮರಣಾನಂತರ ಅವರು ಮತ್ತು ಅವರ ಕೃತಿಗಳು ನಮ್ಮ ಸಾಹಿತ್ಯದ ರಾಜಕೀಯದಡಿ ಅಳಿಸಿಹೋದಂತಿವೆ.

1987ರಲ್ಲಿ ಬಿ. ಲೀಲಾ ಭಟ್ ಸಂಪಾದಿಸಿದ ಉಗ್ರಾಣ ಮಂಗೇಶರಾಯರ ಕುರಿತ ‘ಉಗ್ರಾಣ’ ಎಂಬ ಕೃತಿ ಸಮುಚ್ಚಯವು ಎರಡು ಸಂಪುಟಗಳಲ್ಲಿ ಪ್ರಕಟವಾಯಿತು. ಮೊದಲನೆಯ ಸಂಪುಟಕ್ಕೆ ಡಾ.ಶಿವರಾಮ ಕಾರಂತರು ಮುನ್ನುಡಿಯ ಒಸಗೆಯನ್ನು ಹೊದಿಸಿದರೆ, ಎರಡನೆಯ ಸಂಪುಟಕ್ಕೆ ಪ್ರೊ. ಕು.ಶಿ. ಹರಿದಾಸ ಭಟ್ಟರು ‘ಮುನ್ನುಡಿಯ ಮೂರು ಮಾತು’ ಬರೆದಿದ್ದಾರೆ. ಈ ಇಬ್ಬರು ಯಾರನ್ನೇ ಆಗಲಿ ಅನವಶ್ಯಕವಾಗಿ ಅಥವಾ ಆತ್ಮವಂಚನೆ ಮಾಡಿಕೊಂಡು ಹೊಗಳಲಾರರು. ಕಾರಂತರು ತಮ್ಮ ಹೊನ್ನುಡಿಗಳಲ್ಲಿ ಉಗ್ರಾಣ ಮಂಗೇಶರಾಯರನ್ನು ‘ಪಂಡಿತ ಶ್ರೇಷ್ಠ’ರೆಂದು ಬಣ್ಣಿಸಿದರೆ, ಕು.ಶಿ. ತಮ್ಮ ಮಾತುಗಳಲ್ಲಿ ಉಗ್ರಾಣರನ್ನು ‘ಕನ್ನಡದ ಒಬ್ಬ ಪೂರ್ವಾಚಾರ್ಯರು’, ‘ಕನ್ನಡ ಗದ್ಯದ ಒಬ್ಬ ಆದ್ಯರು’ ಎಂದಿದ್ದಾರೆ. ಈ ಎರಡು ಸಂಪುಟಗಳಲ್ಲಿ ಉಗ್ರಾಣರ ಕವಿತೆಗಳು, ಕಥೆಗಳು, ನಾಟಕ-ಕಾದಂಬರಿಗಳು, ವಿಮರ್ಶೆಗಳು, ಸಂಶೋಧನಾ ಲೇಖನಗಳು, ಹೀಗೆ ಅವರ ಎಲ್ಲ ಗದ್ಯ-ಪದ್ಯ ಬರಹಗಳು ಸಂಗ್ರಹಿತವಾಗಿವೆ. ಒಬ್ಬ ಸಾಹಿತ್ಯ ಪರಿಚಾರಕರ ಆಳ-ವಿಸ್ತಾರ ಈ ಕೃತಿಗಳಿಂದ ಅರ್ಥವಾಗುತ್ತದೆ. ಉಗ್ರಾಣರನ್ನು ಅವರ ನಿವೃತ್ತಿಯ ಕೆಲವು ವರ್ಷಗಳಲ್ಲಿ ಪುತ್ತೂರಿನ ಕೊಂಬೆಟ್ಟು ಎಂಬಲ್ಲಿ ನಾನು ನೋಡಿದ ನೆನಪಿದೆ. ಅಷ್ಟೇನೂ ದೊಡ್ಡ ಆಕೃತಿಯಲ್ಲ. ಆದರೆ ನೆನಪಿನಲ್ಲುಳಿಯುವ ವ್ಯಕ್ತಿತ್ವ. ಮಾತಿನಲ್ಲೇ ಅವರ ಅರಿವು ಗೊತ್ತಾಗುತ್ತಿತ್ತು. ಅವರ ಪದ್ಯಗಳನ್ನು ಚಿಕ್ಕಂದಿನಲ್ಲಿ ಪಠ್ಯಪುಸ್ತಕಗಳಲ್ಲಿ ಮತ್ತಿತರ ಬಿಡಿ ಸಂದರ್ಭಗಳಲ್ಲಿ ಓದುವ ಭಾಗ್ಯ ನನಗೂ ಇತ್ತು. ಅವರ ‘ಕನಕಾಂಗಿ’ಯಂತಹ ದೀರ್ಘ ಕವಿತೆಯು ಕಡೆಂಗೋಡ್ಲು ಶೈಲಿಯಲ್ಲಿದ್ದು ಸುಲಲಿತವಾಗಿ ಓದಿಸುತ್ತಲಿತ್ತು. ‘ಹುಟ್ಟುಗುಣ’ವೆಂಬೊಂದು ಕಥನ ಕವಿತೆಯು

ಎಲೆಮನೆಯ ಮೇಲೊಂದು ಕಾಗೆ ಹಾರುತ ಬಂದು
ಇಲಿಯನೊಂದನು ತಂದು ಕೆಳಗಿಕ್ಕಿತಂದು॥
ಕೆಲದ ಮುನಿಗಿದು ತಿಳಿದು ಸಲೆ ಕರುಣೆಯನು ತಳೆೆದು

ಜಲದಿ ಗಾಯವ ತೊಳೆದು ಪೊರೆದನದನೊಲಿದು॥

ಕೊನೆಯ ಹಂತದಲ್ಲಿ ‘‘ಅರರೆ ಗುಣದೋಷಗಳು ಭರಿತವಿಹವೆರಡರೊಳು
ಕೊರತೆಯಿಲ್ಲದ ವಸ್ತು ಧರೆಯೊಳೆಲ್ಲಿಹುದು?

‘ಎಮಗೆ ಹಳತೇ ಮೆಚ್ಚು’, ‘ತಮಗೆ ಹೊಸತೇ ಹೆಚ್ಚು’ ಅಮಮ! ಏತಕೆ ಹುಚ್ಚು ನಿಮಗೆಂಬೆ ನೀನು’’

ಎಂದು ಹೇಳಿ

‘‘ಬಗೆಯೆ ಹೊಸಹಳೆಯೆಂಬ ಜಗಳದೊಳು ಹುರುಳಿಲ್ಲ

ನಗುವೆ ನೀನೆರಡು ಕಡೆಯವರೆಗ್ಗತನಕೆ ಹೊಸತೇನು? ಹಳತೇನು? ರಸವನೊಸರುವ ಕಬ್ಬ ರಸದಾಳಿ ಕಬ್ಬಹುದು ನಿನಗೊಪ್ಪದಿಹುದೇ?’’

 ಎಂಬ ಸಮನ್ವಯದೊಂದಿಗೆ ಈ 64 ಸಾಲುಗಳ ಕವಿತೆ ಮುಕ್ತಾಯವಾಗುತ್ತದೆ. ಉಗ್ರಾಣರು ಗಂಭೀರ ಓದುಗರು. ಹಳೆಗನ್ನಡವನ್ನು ಸುಲಭವಾಗಿ ಜೀರ್ಣಿಸಿಕೊಂಡವರು. ತಮ್ಮ ‘ಸಾಹಿತ್ಯ ವಿಹಾರ’ ಎಂಬ ಲೇಖನದ ಮೂಲಕ ಕನ್ನಡ ಸಾಹಿತ್ಯದ ಕುರಿತು ವಿಚಾರಪರ ಚಿಂತನೆಯನ್ನು ಮಾಡಿದವರು. ಅವರ ‘ಕನ್ನಡ ಸಾಹಿತ್ಯ ದಿಗ್ದರ್ಶನ’ ಎಂಬ ದೀರ್ಘ ಲೇಖನದಲ್ಲಿ ಅವರು ಕನ್ನಡ ಸಾಹಿತ್ಯ ವಿಕಾಸಗೊಂಡ ಪರಿಯನ್ನು ವಿವರವಾಗಿ ಅಭಿವ್ಯಕ್ತಿಸಿ ದ್ದಾರೆ. ಸಹಜಕವಿಗಳಿಗೂ ಪಾಂಡಿತ್ಯ ಬಲದಿಂದ ಬರೆಯುವ ಕವಿಗಳಿಗೂ ವ್ಯತ್ಯಾಸವನ್ನು ಗುರುತಿಸಿದವರು ಉಗ್ರಾಣರು. ಹಾಗೆಯೇ ಶೈಲಿಯ ಕುರಿತು, ಪ್ರಾಸದ ಕುರಿತು ಬರೆದಿದ್ದಾರೆ. ಪ್ರಾಸ ಒಂದು ಬಂಧನವಲ್ಲ ಎಂದು ಪ್ರಭಾವಶಾಲಿಯಾಗಿ ಪ್ರತಿಪಾದಿಸಿದ್ದಾರೆ. ಆಡುವ ಕನ್ನಡ, ಕಾವ್ಯ ರೂಪ, ಕಾವ್ಯ ರಚನೆ, ಸರ್ವಂ ಕಾವ್ಯಮಯಂ ಜಗತ್ ಮುಂತಾದ ಲೇಖನಗಳಲ್ಲಿ ಅಪರೂಪದ ಮತ್ತು ಅಪೂರ್ವ ಒಳನೋಟಗಳು ದಕ್ಕುತ್ತವೆ. ಪ್ರಾಯಃ ಉಗ್ರಾಣ ಮಂಗೇಶ ರಾಯರ ಒಂದು ಮಹತ್ತರ ಸಾಧನೆಯೆಂದರೆ ರತ್ನಾಕರ ವರ್ಣಿಯ ಭರತೇಶ ಚರಿತೆಯ ಸಂಪಾದನೆ. ಈ ಕೃತಿಗೆ ಅವರು ವಿಸ್ತಾರವಾದ ಪ್ರಸ್ತಾವನೆಯನ್ನೂ ಬರೆದಿದ್ದಾರೆ. ಇದು ಕನ್ನಡ ಸಾಹಿತ್ಯದ ಮಹತ್ತರ ಹೆಗ್ಗುರುತುಗಳಲ್ಲೊಂದು.

ಇವಲ್ಲದೆ ಅನೇಕ ಗ್ರಂಥಾವಲೋಕನವನ್ನೂ ಮಾಡಿದ್ದಾರೆ. ಹಳೆಗನ್ನಡ ಕಾವ್ಯದ ರಸವತ್ತಾದ ಭಾಗಗಳನ್ನು ವಿದ್ಯಾರ್ಥಿಗಳಿಗೆ ಓದಿಸುವ ಪ್ರಯತ್ನವಾಗಿ ಅವರು ರಚಿಸಿದ ‘ಕಾವ್ಯ ರತ್ನಾಕರ’ ಎಂಬ ಕೃತಿಯು ಶಾಲೆಗಳಲ್ಲಿ ಪಠ್ಯವಾಗಿತ್ತು. ಉಗ್ರಾಣರು ವಿನಯಸಂಪನ್ನರು; ಸೌಜನ್ಯಶೀಲರು. ಬಡೆಕ್ಕಿಲ ವೆಂಕಟ್ರಮಣ ಭಟ್ಟರ ಕೃತಿಯೊಂದಕ್ಕೆ ಮುನ್ನುಡಿ ಬರೆಯಬೇಕಾದಾಗ ಅವರು ‘‘ಕವಿಯ ಪರಿಚಯ ಮಾಡಿ ಕೊಡಲೆ?- ಅವರ ಪರಿಚಯಕ್ಕಿಂತ ಒಂದು ವೇಳೆೆ ನನ್ನ ಪರಿಚಯವೇ ಅಗತ್ಯವಿರಬಹುದಾದಾಗ ನಾನೇನು ಬರೆಯುವೆನೊ? ಆದರೂ ಬೆಟ್ಟದ ಪರಿಚಯವನ್ನು ಇಲಿಯು ಮಾಡಿಕೊಡಬಹುದಷ್ಟೆ!’’ ಎಂದು ಬರೆಯುತ್ತಾರೆ. 1912ರಲ್ಲಿ ಬ್ರಿಟನ್‌ನಿಂದ ಅಮೆರಿಕಕ್ಕೆ ಹೊರಟ ‘ಟೈಟಾನಿಕ್’ ಎಂಬ ಹಡಗು ತನ್ನ ಮೊದಲ ಪಯಣದಲ್ಲೇ ಮುಳುಗಿದ್ದು ಒಂದು ಇತಿಹಾಸ ಪ್ರಸಿದ್ಧ ದುರಂತ. ಇದನ್ನಾಧರಿಸಿದ ಜೇಮ್ಸ್ ಕೆಮರೂನ್ ನಿರ್ದೇಶನದ ‘ಟೈಟಾನಿಕ್’ ಎಂಬ ಹಾಲಿವುಡ್ ಸಿನೆಮಾವು ಹೇರಳ ಗಳಿಕೆಯೊಂದಿಗೆ ಅನೇಕ ಪ್ರಶಸ್ತಿಗಳನ್ನು ಸಂಪಾದಿಸಿತು.

ಈ ಘಟನೆಯ ಬಗ್ಗೆ ಉಗ್ರಾಣ ಮಂಗೇಶರಾಯರು ಅದಾದ ತರುಣದಲ್ಲೇ ‘‘ಟೈಟನಿಕ್ ಮುಳುಗತಕ್ಕದ್ದಲ್ಲ’’ ಎಂಬ ಹೃದಯಸ್ಪರ್ಶಿ ಲೇಖನವನ್ನು ಬರೆದಿದ್ದರು. ಸಹಕಾರ ಸಂಘಗಳಿಂದ ಯಕ್ಷಗಾನದ ವರೆಗೆ ಅವರ ತಿಳಿವಳಿಕೆಯ ಹರಹು ಬೆರಗು ತರುವಂಥದ್ದು. ಕಾಲಾಂತರದ ಬದಲಾವಣೆ ಮತ್ತು ವ್ಯತ್ಯಾಸ ಇವು ಎಲ್ಲ ಕಾಲಗಳಲ್ಲೂ ಇರುವಂತಹದ್ದೇ. ಉಗ್ರಾಣರು 20ನೇ ಶತಮಾನದ ಆದಿಯಲ್ಲೇ ಬರೆಯತೊಡಗಿದವರು. ಆಧುನಿಕ ಕನ್ನಡದ ನೆಲೆಗಳ ಹರಿಕಾರರಲ್ಲೊಬ್ಬರು. ಅವರು ಕನ್ನಡದ ಮುನ್ನೆಲೆಗೆ ಬರದಿದ್ದರೂ ಆಧಾರಸ್ತಂಭವಾಗಿದ್ದವರು. ಕಾರಂತರಂತಹವರಿಗೂ ಮಾರ್ಗದರ್ಶನ ಮಾಡಿದವರು. ಕಾರಂತರು ಇದನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿದ್ದಾರೆ. ಇಂತಹ ಉಗ್ರಾಣರೇ ಯಕ್ಷಗಾನದ ಬಗ್ಗೆ ಬರೆಯುತ್ತ ‘‘ಈಗ ಅದೆಲ್ಲ ಬಹು ವ್ಯತ್ಯಾಸ ಹೊಂದಿದೆ’’ ಎಂದಿದ್ದರು. ಉಗ್ರಾಣ ಮಂಗೇಶ ರಾಯರು ಬರೆದ ಕಥೆಗಳು ಸರಳವಾಗಿ ಓದಿಸಿಕೊಂಡು ಹೋಗುವಂಥವುಗಳು. ಮಾಸ್ತಿ ಕಥೆಗಳನ್ನು ನೆನಪಿಗೆ ತರುವಂಥವು. ಅವರ ವಿದೂಷಕ ಸಾಮ್ರಾಜ್ಯ ಎಂಬ ಕಿರು ನಾಟಕವು ಬೇಂದ್ರೆಯವರ ಸಾಯೋ ಆಟವನ್ನೂ ನೆನಪಿಸುತ್ತದೆ. ಇವೆಲ್ಲ ಮರು ಓದನ್ನು ಪಡೆಯಬೇಕಾದ ಕಥೆಗಳು.

ಉಗ್ರಾಣರ ಮಹತ್ಕೃತಿಗಳಲ್ಲೊಂದು ‘ಡಾನ್ ಕ್ವಿಕ್ಸೊಟ್’ ಎಂಬ ಕಾದಂಬರಿ. ಪ್ರಸಿದ್ಧವಾದ ಆಂಗ್ಲ ಕೃತಿಯನ್ನು ಬಹು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಅಧ್ಯಾಪಕರ ಬಹು ಮುಖ್ಯ ಕರ್ತವ್ಯವೆಂದರೆ ಮಕ್ಕಳ ಜ್ಞಾನದಾಹವನ್ನು ಇಂಗಿಸುವುದು.. ಅದರಲ್ಲೂ ಭಾಷಾ ಅಧ್ಯಾಪಕರು ಮಕ್ಕಳಿಗೆ ಬೇಕಾದ ಭಾಷಾಸರಕನ್ನು ಹೇರಳವಾಗಿ ತುಂಬಸಿಕೊಡಬೇಕು. ಈ ದೃಷ್ಟಿಯಿಂದ ಉಗ್ರಾಣ ಮಂಗೇಶರಾಯರು ಬರೆದ ವ್ಯಾಕರಣ ಪುಸ್ತಕಗಳು ಕನ್ನಡ(ದಲ್ಲಿ) ಬರೆಯುವವರ ಕೈಯಲ್ಲಿರಬೇಕಾದ ಕೃತಿಗಳು. (ಇಂದು ಕನ್ನಡದಲ್ಲಿ ಬರೆಯುವ ಅನೇಕ ಹಿರಿಯ ಕಿರಿಯ ಬರಹಗಾರರೂ ಕನ್ನಡ ಭಾಷೆಯನ್ನು ಇಷ್ಟಬಂದಂತೆ ಬರೆಯತೊಡಗಿ ಅದನ್ನು ಪ್ರಯೋಗವೆಂಬಂತೆ ಸಮರ್ಥಿಸಿ ಕನ್ನಡದ ಕುಲಗೆಡಿಸಿದ್ದೂ ಉಂಟು.) 1948ರಲ್ಲಿ ಉಗ್ರಾಣರು ಬರೆದು ಬಾಳಿಗಾ ಎಂಡ್ ಸನ್ಸ್, ಮಂಗಳೂರು ಇವರು ಪ್ರಕಟಿಸಿದ ‘ನೂತನ ಬಾಲ ವ್ಯಾಕರಣ’ ಮತ್ತು ‘ನೂತನ ಶಾಲಾ ವ್ಯಾಕರಣ’ ಈ ದೃಷ್ಟಿಯಿಂದ ಕನ್ನಡ ಸಾಹಿತ್ಯ-ಭಾಷೆಗೆ ಅಮೂಲ್ಯ ಮತ್ತು ಅನನ್ಯ ಕೊಡುಗೆಗಳು. ವರ್ಣಮಾಲೆಯಿಂದ ಆರಂಭಗೊಂಡು, ವಿರಾಮ ಚಿಹ್ನೆಗಳು, ಸಂಧಿ, ಪ್ರತ್ಯಯ, ಅಲಂಕಾರಗಳವರೆಗೆ ಹಬ್ಬಿದ ಈ ಕೃತಿಗಳು ನಿಜಾರ್ಥದಲ್ಲಿ ಜ್ಞಾನಕೋಶಗಳು; ಕೈಪಿಡಿಗಳು. ಸೆಕೆಂಡರಿ ಮತ್ತು ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಬರೆದ ಈ ಕೃತಿಗಳು ಇಂದಿನ ಪಿಎಚ್‌ಡಿಗಳನ್ನೂ ಮೀರಿದ ಗ್ರಂಥಗಳು. ಉದಾಹರಣೆಗಳನ್ನೂ ನಿದರ್ಶನಗಳನ್ನೂ ಕನ್ನಡದ ಹಳೆಯ-ಹೊಸ ಕೃತಿಗಳಿಂದ ಉಲ್ಲೇಖಿಸಿದ್ದನ್ನು ನೋಡಿದರೆ ಕಿಟ್ಟೆಲ್ಲರ ಅರ್ಥಕೋಶ ಸ್ಮರಣೆಗೆ ಬರುತ್ತದೆ.

ಉ.ಮ.ರಾ. ಎಂಬ ಅಂಕಿತದೊಂದಿಗೆ ಉಗ್ರಾಣರು ಅನೇಕ ಚಿಕ್ಕ ದೊಡ್ಡ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವರ ಇಂಗ್ಲಿಷ್ ಜ್ಞಾನ ಅಗಾಧವಾದದ್ದು. ಶಿವರಾಮ ಕಾರಂತರು ಉಗ್ರಾಣರ ಕುರಿತು ‘‘ಆಂಗ್ಲ ಸಾಹಿತ್ಯದ ಬಗ್ಗೆ ಬೇಕಷ್ಟು ಓದಿಕೊಂಡವರು ಉಗ್ರಾಣ ಮಂಗೇಶರಾಯರು. ಅದನ್ನು ಬಲ್ಲ ನಾನು ಒಮ್ಮೆ ಅವರನ್ನು ಬೆಂಗಳೂರಿಗೆ ಕರೆದೊಯ್ದದ್ದೂ ಉಂಟು. ಅದು ಅಲ್ಲಿ ಏರ್ಪಟಾದ ಇಂಗ್ಲೆಂಡಿನ ಶೇಕ್ಸ್‌ಪಿಯರ್‌ನ ನಾಟಕ ಮಂಡಲಿಯ ಮೂರು ನಾಟಕಗಳನ್ನು ನೋಡುವ ಸಲುವಾಗಿ. ಅದನ್ನು ನೋಡಿ ಬಲು ಉತ್ಸಾಹ, ಆನಂದಭರಿತರಾದರು ಅವರು.’’ ಎಂದು ಬರೆದಿದ್ದಾರೆ.

ಎಲ್ಲಕ್ಕಿಂತ ಹೆಚ್ಚು ಸುಂದರ ಚಿತ್ರವೆಂದರೆ ಶಿವರಾಮ ಕಾರಂತರು ಬರೆದ ಈ ಸಾಲುಗಳು: ‘‘ಈ ಮುನ್ನುಡಿಯನ್ನು ಬರೆಯುತ್ತಿರುವಾಗ, ತಮ್ಮ ಮಿತ್ರರಾದ ಮಂಜೇಶ್ವರ ಅನಂತರಾಯರೊಡನೆಯೋ, ಚಕ್ರಕೋಡಿ ಶ್ಯಾಮ ಶಾಸ್ತ್ರಿಗಳೊಡನೆಯೋ, ಬೆಂಗಳೂರಿನ ವಿ. ಸೀತಾರಾಮಯ್ಯರೊಡನೆಯೋ ನಗುನಗುತ್ತಾ: ‘ಅದು ಹಾಗಲ್ಲ, ಹೀಗೆ’ ಎಂದು ವಾದಿಸುವ ಮಂಗೇಶರಾಯರ ಕಾಲ್ಪನಿಕ ಬಿಂಬ ನನ್ನ ಕಣ್ಮುಂದೆ ನಿಲ್ಲುತ್ತಿದೆ.’’
ಉಗ್ರ್ರಾಣರಂಥವರನ್ನು ಕನ್ನಡಿಗರಿಗೆ ಪರಿಚಯಿಸುವುದು ಕನ್ನಡದ ಹಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)