varthabharthi

ಸಂಪಾದಕೀಯ

ಮೋದಿಯ ಸೇನೆ ಯಾವುದು?

ವಾರ್ತಾ ಭಾರತಿ : 5 Apr, 2019

ಅವಿದ್ಯಾವಂತರು, ಅವಿವೇಕಿಗಳ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಸಿಕ್ಕಿದರೆ ಅದರ ಪರಿಣಾಮವೇನಾಗಬಹುದು ಎನ್ನುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಇತ್ತೀಚಿನ ಹೇಳಿಕೆಯೇ ಅತ್ಯುತ್ತಮ ಉದಾಹರಣೆ. ಭಾರತೀಯ ಸೇನೆಯನ್ನು ಬಿಜೆಪಿಯ ಕಾರ್ಯಕರ್ತರ ಪಡೆಯೋ ಎಂಬಂತೆ ಭಾವಿಸಿ ಹೇಳಿಕೆ ನೀಡಿರುವ ಆದಿತ್ಯನಾಥ್ ಅದನ್ನು ‘ಮೋದಿಯ ಸೇನೆ’ ಎಂದು ಸಾರ್ವಜನಿಕವಾಗಿ ಘೋಷಿಸಿ, ಇದೀಗ ಸ್ವತಃ ಬಿಜೆಪಿಯ ನಾಯಕರಿಂದಲೇ ‘ದೇಶದ್ರೋಹಿ’ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದಿತ್ಯನಾಥ್ ಹೇಳಿಕೆಯನ್ನು ಹಲವು ನಿವೃತ್ತ ಸೇನಾಧಿಕಾರಿಗಳು ಖಂಡಿಸಿದ್ದಾರೆ ಮಾತ್ರವಲ್ಲ, ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಮುಖ್ಯವಾಗಿ ಬಿಜೆಪಿ ಮುಖಂಡ, ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು ಆದಿತ್ಯನಾಥ್ ಅವರ ಹೇಳಿಕೆಯನ್ನು ಖಂಡಿಸಿ ‘‘ದೇಶದ್ರೋಹಿಗಳಿಂದ ಮಾತ್ರ ಅಂತಹ ಹೇಳಿಕೆಗಳನ್ನು ನೀಡಲು ಸಾಧ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರಾನಂತರ ಸೇನೆಯ ಮರು ನಿರ್ಮಾಣ, ಭೂಸೇನೆ, ವಾಯು ಮತ್ತು ಜಲಸೇನೆಯಾಗಿ ಪ್ರತ್ಯೇಕಗೊಳಿಸಿ ಪ್ರಜಾಸತ್ತೆಗೆ ಪೂರಕವಾಗಿ ಅದನ್ನು ಜೋಡಿಸಿದ ನೆಹರೂ ಅವರ ದೂರದೃಷ್ಟಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಶ್ರಮ, ಮೂರು ಯುದ್ಧಗಳನ್ನು ಗೆದ್ದ ಅದರ ಕೆಚ್ಚೆದೆಯ ಇತಿಹಾಸ, ಬಾಂಗ್ಲಾ ಸ್ವತಂತ್ರಗೊಳ್ಳಲು ಸೇನೆ ನೀಡಿದ ಕೊಡುಗೆ ಹೀಗೆ ಭಾರತೀಯ ಸೇನೆಯ ಭವ್ಯ ಇತಿಹಾಸವನ್ನು ಅರಿಯದವರಷ್ಟೇ ಆ ಸೇನೆಯ ತ್ಯಾಗ ಬಲಿದಾನಗಳನ್ನು ರಾಜಕೀಯಗೊಳಿಸಬಲ್ಲರು. ಭಾರತ ಸೇನೆ ಇಂದು ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಗುರುತಿಸಲ್ಪಡುತ್ತಿದ್ದರೆ ಅದರ ಹಿಂದೆ ನೆಹರೂ, ಶಾಸ್ತ್ರಿ, ಇಂದಿರಾ, ರಾಜೀವ್‌ಗಾಂಧಿಯಂತಹ ಮಹಾನ್ ನಾಯಕರ ಕೊಡುಗೆಗಳಿವೆ. ಇವರೇ ಹಂತ ಹಂತವಾಗಿ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡುತ್ತಾ ಅದನ್ನು ಬೆಳೆಸಿದವರು. ಆದರೆ ಈವರೆಗೆ ಯಾವ ಪಕ್ಷವೂ ಸೇನೆಯನ್ನು ತಮ್ಮ ರಾಜಕೀಯಕ್ಕಾಗಿ ದುರ್ಬಳಕೆ ಮಾಡುವ ಸಾಹಸಕ್ಕೆ ಇಳಿದಿರಲಿಲ್ಲ. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದದ್ದೇ ಮೊತ್ತ ಮೊದಲ ಬಾರಿಗೆ ಸರಕಾರದ ಪರವಾಗಿ ಸೇನೆಯಿಂದ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತು. ‘ಸರ್ಜಿಕಲ್ ಸ್ಟ್ರೈಕ್’ ಎನ್ನುವುದು ಸೇನೆಯೊಳಗಷ್ಟೇ ರಹಸ್ಯವಾಗಿರುವ ಕಾರ್ಯಾಚರಣೆ. ಅದನ್ನು ಬಹಿರಂಗಪಡಿಸುವುದೆಂದರೆ ಭಾರತದ ಅಂತರ್‌ರಾಷ್ಟ್ರೀಯ ಸಂಬಂಧವನ್ನು ಹದಗೆಡಿಸಿದಂತೆ. ಆದರೆ ದೇಶದ ಹಿತಾಸಕ್ತಿಗಿಂತ ತನ್ನ ಹಿತಾಸಕ್ತಿಯೇ ಮುಖ್ಯ ಎಂಬಂತೆ ಸೇನೆಯ ಸರ್ಜಿಕಲ್ ಸ್ಟ್ರೈಕ್‌ನ್ನು ಸರಕಾರದ ಸಾಧನೆಯೆಂಬಂತೆ ಘೋಷಿಸಿ ಸೇನೆಗೆ ಮುಜುಗರ ಸೃಷ್ಟಿಸಿದರು. ಪುಲ್ವಾಮದಲ್ಲಿ ಗುಪ್ತಚರ ಇಲಾಖೆ ಮತ್ತು ಭದ್ರತಾ ವೈಫಲ್ಯದಿಂದ 40 ಯೋಧರು ಉಗ್ರನೊಬ್ಬನ ದುಷ್ಕೃತ್ಯಕ್ಕೆ ಬಲಿಯಾಗಬೇಕಾಯಿತು. ಈ ವೈಫಲ್ಯವನ್ನು ಮರೆ ಮಾಚಲು ಮತ್ತೆ ‘ಸರ್ಜಿಕಲ್ ಸ್ಟ್ರೈಕ್’ ಗದ್ದಲವನ್ನು ಎಬ್ಬಿಸಿತು. ಪರಿಣಾಮ ನಮ್ಮ ಒಬ್ಬ ಯೋಧ ಪಾಕಿಸ್ತಾನದ ಸೇನೆಯ ಕೈಗೆ ಸೆರೆ ಸಿಗುವಂತಾಯಿತು.

ಈ ಬೆಳವಣಿಗೆಯಲ್ಲಿ ಪಾಕಿಸ್ತಾನ ವಿಶ್ವದ ಮುಂದೆ ಅಮಾಯಕನಂತೆ ತನ್ನನ್ನು ಬಿಂಬಿಸಿಕೊಂಡಿತು. ಮಾತ್ರವಲ್ಲ, ತನ್ನ ರಾಜತಾಂತ್ರಿಕತೆಯ ಮೂಲಕ ಪಾಕಿಸ್ತಾನ ಪ್ರಧಾನಿ ವಿಶ್ವದ ಗಮನಸೆಳೆದರು. ಬಾಲಕೋಟ್‌ನಲ್ಲಿ ಸೈನಿಕ ಕಾರ್ಯಾಚರಣೆ ನಡೆದಿರುವುದು ನಿಜ. ಆದರೆ ಈ ಕಾರ್ಯಾಚರಣೆಯಲ್ಲಿ ಉಗ್ರರು ಸತ್ತಿದ್ದಾರೆಯೋ ಇಲ್ಲವೋ ಎನ್ನುವುದನ್ನು ಸ್ವತಃ ಸೇನೆಯೇ ಸ್ಪಷ್ಟಪಡಿಸಿಲ್ಲ. ಅಷ್ಟರಲ್ಲಿ, ಸರಕಾರವೇ ಹೆಣಗಳ ಸಂಖ್ಯೆಗಳನ್ನು ಮಾಧ್ಯಮಗಳ ಮುಂದಿಟ್ಟು ಇನ್ನಷ್ಟು ನಗೆಪಾಟಲಿಗೀಡಾಯಿತು. ಜೊತೆ ಜೊತೆಗೆ ಇಡೀ ಸೇನೆಯನ್ನು ಮುನ್ನಡೆಸುತ್ತಿರುವುದೇ ನರೇಂದ್ರ ಮೋದಿ ಎಂಬಂತೆ ಬಿಂಬಿಸಿಕೊಂಡಿತು. ಸೇನೆಯನ್ನು ಯಾವ ಸಂಕೋಚವೂ ಇಲ್ಲದೆ ಬಹಿರಂಗವಾಗಿ ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿತು. ಸೇನೆಯ ಸಾಧನೆಗಳನ್ನೆಲ್ಲ ಪ್ರಧಾನಿ ಮೋದಿಯವರ ತಲೆಗೆ ಕಟ್ಟ ತೊಡಗಿತು. ಸೇನಾ ಧಿರಿಸನ್ನು ಧರಿಸಿ ಮತ ಯಾಚನೆ ಮಾಡುವ ಹೀನ ಸ್ಥಿತಿಗಿಳಿಯಿತು. ಇದೀಗ ಅಂತಿಮವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ‘ಭಾರತೀಯ ಸೇನೆಯನ್ನು ಮೋದಿಯ ಸೇನೆ’ ಎಂದು ಹೇಳಿ ಇಡೀ ಸೇನೆಯ ಘನತೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ. ಭಾರತದ ಸಾರ್ವಭೌಮತೆಯ ಸಂಕೇತವಾಗಿರುವ ಸೇನೆಯನ್ನು ಮೋದಿಯ ಮನೆಯ ಜೀತಕ್ಕಿಳಿಸುವ ಮಟ್ಟಕ್ಕೆ ತಲುಪಿದ್ದಾರೆ. ಭಾರತದ ಸೇನೆಗೂ ಮೋದಿಯ ಸೇನೆಗೂ ವ್ಯತ್ಯಾಸವಿದೆ ಎನ್ನುವ ಅರಿವನ್ನು ಓರ್ವ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರು ಬೆಳೆಸಿಕೊಳ್ಳಬೇಕು.

ಸೇನೆಯಿರುವುದು ದೇಶ ಕಾಯುವುದಕ್ಕೇ ಹೊರತು, ಮೋದಿಯನ್ನು ಕಾಯುವುದಕ್ಕಲ್ಲ. ಮೋದಿಯವರೂ ದೇಶದ ಒಂದು ಭಾಗ ಮಾತ್ರ. ಅವರಿಂದ ದೇಶವಲ್ಲ, ದೇಶಕ್ಕಾಗಿ ಎಲ್ಲರಂತೆಯೇ ಅವರೂ ಕೂಡ. ಹೌದು, ಮೋದಿಗೂ ಒಂದು ಸೇನೆಯಿದೆ. ಆದರೆ ಆ ಸೇನೆಗೂ ಭಾರತೀಯ ಸೇನೆಗೂ ವ್ಯತ್ಯಾಸವಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಪ್ರೊಫೈಲ್‌ಗಳ ಮೂಲಕ ಮೋದಿಯ ಎಲ್ಲ ಸುಳ್ಳುಗಳನ್ನು ಸಮರ್ಥಿಸುತ್ತಾ, ದೇಶದ ಚಿಂತಕರಿಗೆ, ಪ್ರಜ್ಞಾವಂತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮೋದಿಯ ಭಜನೆ ಮಾಡುತ್ತಿರುವ ಒಂದು ಗುಂಪಿದೆ. ಅವುಗಳನ್ನು ಬೇಕಾದರೆ ನಾವು ಮೋದಿಯ ಸೇನೆ ಎಂದು ಕರೆಯಬಹುದು. ಇದೇ ಸಂದರ್ಭದಲ್ಲಿ ಮೋದಿಯವರೇ ಸಾಕಿ ಬೆಳೆಸಿದ ಒಂದಿಷ್ಟು ಮಾಧ್ಯಮ ಮಂದಿಗಳಿದ್ದಾರೆ. ಮೋದಿಯ ಅಕ್ರಮಗಳನ್ನು ಮುಚ್ಚಿ ಹಾಕುತ್ತಾ, ಅವರು ಹೇಳುವ ಸುಳ್ಳುಗಳಿಗೆ ಬಣ್ಣ ತುಂಬುತ್ತಾ ಈ ಸೇನೆ ಹೊಟ್ಟೆ ಹೊರೆಯುತ್ತಿದೆ. ಇದೇ ಸಂದರ್ಭದಲ್ಲಿ ನಕಲಿ ಗೋರಕ್ಷಕರ ವೇಷದಲ್ಲಿ ಅಮಾಯಕರಿಗೆ ಬೀದಿಯಲ್ಲಿ ಥಳಿಸುತ್ತಾ ಓಡಾಡುತ್ತಿರುವವರನ್ನು ಆದಿತ್ಯನಾಥರು ‘ಮೋದಿಯ ಸೇನೆ’ ಎಂದು ಕರೆದಿದ್ದರೆ ಅದಕ್ಕೆ ಆಕ್ಷೇಪ ಇರುತ್ತಿರಲಿಲ್ಲ. ಯಾಕೆಂದರೆ, ಅದು ಮೋದಿಯ ಸೇನೆ ಅಲ್ಲವಾಗಿದ್ದಿದ್ದರೆ ಕಾನೂನು, ಸಂವಿಧಾನ ಇವೆಲ್ಲವನ್ನು ಕಾಲ ಕಸ ಮಾಡಿಕೊಂಡು ದೇಶದ ಬೀದಿಗಳಲ್ಲಿ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಾ ಬಹಿರಂಗವಾಗಿ ಓಡಾಡುವ ಧೈರ್ಯ ಮಾಡುತ್ತಿರಲಿಲ್ಲ.

ಅಖ್ಲಾಕ್‌ನನ್ನು ಕೊಂದವರು, ಆಸೀಫಾ ಎನ್ನುವ ಮಗುವಿನ ಮೇಲೆ ಬರ್ಬರ ಅತ್ಯಾಚಾರ ಎಸಗಿ ಹತ್ಯೆಗೈದವರು, ಜಾನುವಾರು ವ್ಯಾಪಾರಿಗಳನ್ನು ಹಾಡಹಗಲೇ ಬರ್ಬರವಾಗಿ ಥಳಿಸಿ ಕೊಲೆಗೈದವರು, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದವರು....ಇವರೆಲ್ಲ ಆದಿತ್ಯನಾಥ್ ಅವರ ಸೇನೆಯಾಗಿರಬಹುದು. ಆದರೆ ಅವರುಈ ದೇಶದ ಶತ್ರುಗಳು ಮತ್ತು ಅವರ ಜೊತೆಗೆ ಯಾವ ಕಾರಣಕ್ಕೂ ಭಾರತೀಯ ಸೇನಾನಿಗಳನ್ನು ತುಲನೆ ಮಾಡಬಾರದು. ಹಾಗೊಂದು ವೇಳೆ ತುಲನೆ ಮಾಡಿದ್ದೇ ಆದಲ್ಲಿ, ಕೇಂದ್ರ ಸಚಿವ ವಿ. ಕೆ. ಸಿಂಗ್ ಹೇಳಿದಂತೆ, ಅವರೂ ದೇಶದ್ರೋಹಿಗಳೇ ಆಗಿದ್ದಾರೆ. ಇಂತಹದೊಂದು ದೇಶದ್ರೋಹದ ಹೇಳಿಕೆ ನೀಡಿದ ಆದಿತ್ಯನಾಥ್ ವಿರುದ್ಧ ಚುನಾವಣಾ ಆಯೋಗ ಈವರೆಗೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲದೇ ಇರುವುದನ್ನೂ ನೋಡುತ್ತಿರುವಾಗ, ಮುಂದೊಂದು ದಿನ ಈ ಆಯೋಗವನ್ನು ಆದಿತ್ಯನಾಥ್ ಅವರು ಮೋದಿಯ ಇನ್ನಾವುದಕ್ಕೋ ಹೋಲಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)