varthabharthi


ಕಾಲಂ 9

ಪ್ರಧಾನಿಗಳೇ, ಸನಾತನ ಸಂಸ್ಥೆ ಮಾಡಿದ್ದು ಮುಸ್ಲಿಂ ಭಯೋತ್ಪಾದನೆಯೇ?

ವಾರ್ತಾ ಭಾರತಿ : 6 Apr, 2019
ಶಿವಸುಂದರ್

 ಮುಸ್ಲಿಮ್ ಸಮುದಾಯಕ್ಕೆ ಸೇರಿದವರೆಲ್ಲರೂ ಭಯೋತ್ಪಾದಕರಲ್ಲ ಎಂದು ಹೇಳಿದಾಗ ಬಿನ್ ಲಾದೆನ್‌ನಂಥ ವ್ಯಕ್ತಿಗಳು ಮತ್ತು ಅಲ್ ಖಾಯಿದಾದಂಥ ಪ್ರಭುತ್ವ ಬೆಂಬಲಿತ ಹಾಗೂ ಧರ್ಮದ ಹೆಸರಿನ ಭಯೋತ್ಪಾದಕರ ಅಸ್ತಿತ್ವವನ್ನು ಹೇಗೆ ನಿರಾಕರಿಸಲು ಸಾಧ್ಯವಿಲ್ಲವೋ, ಹಾಗೆ ಹಿಂದೂಗಳು ಭಯೋತ್ಪಾದಕರಲ್ಲ ಎಂಬ ಸತ್ಯವೂ ಸಹ ಹಿಂದೂ ಧರ್ಮದ ಹೆಸರು ಹೇಳಿಕೊಂಡು ಸನಾತನ ಸಂಸ್ಥ್ಥೆ, ‘ಅಭಿನವ್ ಭಾರತ್’ನಂಥ ತಾಂತ್ರಿಕವಾಗಿ ಮಾತ್ರ ಆರೆಸ್ಸೆಸ್‌ನ ಭಾಗವಾಗಿಲ್ಲದ ವ್ಯಕ್ತಿಗಳು ಮತ್ತು ಸಂಘಟನೆಗಳು ಮಾಡುತ್ತಿರುವ, ಮಾಡಿರುವ ಹಾಗೂ ಮಾಡಲು ಯೋಜಿಸುತ್ತಿರುವ ಸಂಘಟಿತ ಭಯೋತ್ಪಾದನಾ ಕೃತ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ.


ಯುಪಿಎ-1ರ ಅವಧಿಯುದ್ದಕ್ಕೂ ಸಂಭವಿಸಿದ ಸಾಲು ಸಾಲು ಭಯೋತ್ಪಾದನಾ ಕೃತ್ಯಗಳಲ್ಲಿ ನಿಂದಿತವಾದ ಸಂಘಪರಿವಾರದ ಸಂಘಟನೆಗಳು ಮತ್ತು ಬಂಧಿತರಾದ ಭಯೋತ್ಪಾದಕ ಆರೋಪಿಗಳೆಲ್ಲರೂ, 2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರ, ಒಬ್ಬೊಬ್ಬರಾಗಿ ‘ದೋಷಮುಕ್ತ’ರಾಗುತ್ತಿದ್ದಾರೆ. 2006ರ ಮಾಲೇಗಾಂವ್ ಸ್ಫೋಟ, 2007ರ ಮೇ ತಿಂಗಳಲ್ಲಿ ನಡೆದ ಹೈದರಾಬಾದಿನ ಮಕ್ಕಾ ಮಸೀದಿ ಸ್ಫೋಟ, 2007ರ ಅಕ್ಟೋಬರ್‌ನಲ್ಲಿ ನಡೆದ ಅಜ್ಮೀರ್ ಸ್ಫೋಟದ ಪ್ರಕರಣದ ಆರೋಪಿತರೆಲ್ಲಾ ಕಳೆದ ಎರಡು ವರ್ಷಗಳಲ್ಲಿ ಬಿಡುಗಡೆಗೊಂಡಿದ್ದಾರೆ. ಆ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ನಿಂದಿತರಾದ ‘ಭಯೋತ್ಪಾದಕರು’. ಈ ಪ್ರಕರಣದಲ್ಲಂತೂ ಆರ್‌ಡಿಎಕ್ಸ್ ಬಳಕೆಯಾಗಿತ್ತು ಮತ್ತು 68 ಪ್ರಯಾಣಿಕರು ಹತರಾಗಿದ್ದರು. ಅವರಲ್ಲಿ 44 ಜನ ಪಾಕಿಸ್ತಾನೀಯರು. ಸಂಜೋತಾ ಪ್ರಕರಣದಲ್ಲಿ ನಿಂದಿತರು ಬಿಡುಗಡೆಯಾದ ಮರುದಿನ ವಾರ್ಧಾದಲ್ಲಿ ಮಾಡಿದ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಹಿಂದೂ ಭಯೋತ್ಪಾದನೆ’ಯೆಂಬುದು ಕಾಂಗ್ರೆಸ್ ಪಕ್ಷವು ಹಿಂದೂಗಳ ವಿರುದ್ಧ ಹುಟ್ಟುಹಾಕಿದ ಪ್ರಚಾರವೆಂದು ಆರೋಪಿಸಿ, ಅತ್ಯಂತ ಶಾಂತಿಪ್ರಿಯರಾದ ಹಿಂದೂಗಳನ್ನು ಭಯೋತ್ಪಾದಕರೆಂದು ಕರೆದ ಕಾಂಗ್ರೆಸ್‌ಗೆ ಹಿಂದೂಗಳು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕರೆಕೊಟ್ಟರು. ಇಂತಹ ಕೋಮುವಾದಿ ಭಾಷಣದ ಬಗ್ಗೆ ಚುನಾವಣಾ ಆಯೋಗಕ್ಕೆ ಕಣ್ಣು, ಕಿವಿ ಮತ್ತು ಸಾಂವಿಧಾನಾತ್ಮಕ ಜವಾಬ್ದಾರಿಯಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ದುರದೃಷ್ಟವಶಾತ್, ಅಂತಹ ಯಾವ ನಿರೀಕ್ಷೆಯನ್ನೂ ಈ ‘ಮೋದೀಕರಣ’ಗೊಂಡ ಆಯೋಗದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಕಳೆದ ಒಂದು ವಾರದಲ್ಲಿ ಪ್ರಧಾನಿಯನ್ನು ಒಳಗೊಂಡಂತೆ ವಿವಿಧ ಸಾಂವಿಧಾನಿಕ ಸ್ಥಾನದಲ್ಲಿರುವ ಆಳುವ ಪಕ್ಷದ ನಾಯಕರು ಭಾರತದ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯನ್ನು ಮಾಡುತ್ತಲೇ ಇದ್ದಾರೆ.

ಎ-ಸ್ಯಾಟ್ ಪ್ರಯೋಗವನ್ನು ಪ್ರಧಾನಿ ಘೋಷಿಸಿದ್ದು, ‘ಮೈ ಭೀ ಚೌಕಿದಾರ್’ ಕಾರ್ಯಕ್ರಮವನ್ನು ರೇಡಿಯೊ ಮತ್ತು ದೂರದರ್ಶನಗಳು ಲೈವ್ ರಿಲೇ ಮಾಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದ ಸೇನೆಯನ್ನು ಮೋದಿ ಸೇನೆಯೆಂದು ಕರೆದದ್ದು, ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಹಿರಂಗ ಸಭೆಯಲ್ಲಿ ಹೇಳಿದ್ದು, ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ನೀತಿ ಆಯೋಗದ ಮುಖ್ಯಸ್ಥ ಬಹಿರಂಗವಾಗಿ ಟೀಕೆ ಮಾಡಿದ್ದು, ಬಿಜೆಪಿ ಹೈಕಮಾಂಡ್‌ಗೆ 1,800 ಕೋಟಿ ರೂ. ಕಪ್ಪಸಲ್ಲಿಸಿರುವುದನ್ನು ಬಯಲು ಮಾಡಿದ ಯಡಿಯೂರಪ್ಪನವರ ಡೈರಿಯು ಸುಳ್ಳೆಂದು ಐಟಿ ಅಧಿಕಾರಿಗಳು ತುರ್ತು ಪತ್ರಿಕಾ ಗೋಷ್ಠಿ ಮಾಡಿ ಹೇಳಿದ್ದು, ಸರಕಾರದ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದಿದ್ದರೂ ಮಾರ್ಚ್ 31ರಿಂದಲೇ ನಮೋ ಟಿವಿ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಮೋದಿಯ ಆತ್ಮ ಚರಿತ್ರೆ ಆಧಾರಿತ ಸಿನೆಮಾ ಬಿಡುಗಡೆಯಾಗುತ್ತಿದ್ದರೂ ಕಣ್ಣುಮುಚ್ಚಿಕೊಂಡಿರುವುದು...ಒಂದೇ ಎರಡೇ..ಸೇನೆಯ ಮೋದೀಕರಣವಾಗಿದೆಯೋ ಅಲ್ಲವೋ, ಚುನಾವಣಾ ಆಯೋಗವನ್ನು ಒಳಗೊಂಡಂತೆ ಪ್ರಭುತ್ವದ ಇತರ ಅಂಗಸಂಸ್ಥೆಗಳೆಲ್ಲವೂ ಗುಜರಾತೀಕರಣ ಮತ್ತು ಮೋದೀಕರಣಗೊಂಡಿರುವುದು ಮಾತ್ರ ಸ್ಪಷ್ಟವಾಗಿದೆ. ಇದು ಈ ಬಾರಿಯ ಚುನಾವಣೆ ನಿಜಕ್ಕೂ ‘‘ಭಯಮುಕ್ತ ಮತ್ತು ನ್ಯಾಯ ಸಮ್ಮತ’’ವಾಗಿರುತ್ತದೆಯೇ ಎಂಬ ಬಗ್ಗೆ ಗಂಭೀರವಾದ ಅನುಮಾನವನ್ನೇ ಹುಟ್ಟುಹಾಕಿದೆ.

ಅಂತದ್ದೇ ಒಂದು ಗಂಭೀರವಾದ ಆತಂಕವನ್ನು ಸಂಜೋತಾ ದೋಷಿಗಳ ಬಿಡುಗಡೆಯನ್ನು ಕೋಮುವಾದಿ ರಾಜಕಾರಣಕ್ಕೆ ಪೂರಕವಾಗಿ ಬಳಸಿಕೊಂಡ ಬಿಜೆಪಿಯ ವ್ಯೆಹತಂತ್ರಗಳು ಹುಟ್ಟುಹಾಕುತ್ತಿವೆ. ಹಿಂದೂಗಳು ಶಾಂತಿಪ್ರಿಯರು ಎಂಬ ಮಾತು ಸರಿಯಾದದ್ದೇ. ಹಾಗೆಯೇ ಮುಸ್ಲಿಮರು, ಕ್ರೈಸ್ತರು, ಎಲ್ಲಾ ಸಾಮಾನ್ಯ ನಾಗರಿಕರು ಶಾಂತಿಪ್ರಿಯರೇ. ಆದರೆ ಹಾಲಿ ರಾಜಕಾರಣವು ಧರ್ಮದ ಹೆಸರಿನಲ್ಲಿ ಒಂದಷ್ಟು ಯುವಕರಲ್ಲಿ ಭಯೋತ್ಪಾದನಾ ಚಿಂತನೆಯನ್ನು ಮತ್ತು ಸಂಘಟನೆಗಳನ್ನು ಬೆಳೆಸುತ್ತಿದೆೆ. ಇದು ಎಲ್ಲಾ ಸಮುದಾಯಗಳಲ್ಲೂ ಸಂಭವಿಸುತ್ತಿದೆ. ಅದಕ್ಕೆ ಹಿಂದೂ, ಮುಸ್ಲಿಂ, ನ್ಯೂಝಿಲ್ಯಾಂಡಿನ ಪ್ರಕರಣ ಸಾಬೀತು ಮಾಡುವಂತೆ ಕ್ರಿಶ್ಚಿಯನ್ನರೂ ಯಾರೂ ಹೊರತಾಗಿಲ್ಲ.

ಆದ್ದರಿಂದ ಸಂಜೋತಾ ಸ್ಫೋಟ, ಗೌರಿ-ದಾಭೋಲ್ಕರ್-ಪನ್ಸ್ಸಾರೆ-ಕಲಬುರ್ಗಿ ಹತ್ಯೆಗಳ ಆರೋಪಿಗಳು ಹಿಂದೂ ಕೋಮಿಗೆ ಸೇರಿದವರೇ ಆಗಿದ್ದರೂ, ಮತ್ತು ಹಿಂದೂ ಧರ್ಮವನ್ನು ಕಾಪಾಡುವ ಹೆಸರಿನಲ್ಲಿ ಈ ಭಯೋತ್ಪಾದನಾ ಕೃತ್ಯವನ್ನು ಎಸಗಿದ್ದರೂ ಅದಕ್ಕೆ ದೂಷಿಸಬೇಕಿರುವುದು ಆ ವ್ಯಕ್ತಿಗಳನ್ನು ಮತ್ತು ಸಂಘಟನೆಗಳನ್ನೇ ವಿನಃ ಹಿಂದೂ ಧರ್ಮವನ್ನ್ನು ಅಲ್ಲ. ಹಿಂದೂ ಸಮುದಾಯ ವನ್ನೂ ಅಲ್ಲ. ಇದೇ ತರ್ಕ ಮುಸ್ಲಿಂ ಕೋಮಿಗೆ ಸೇರಿದ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಭಯೋತ್ಪಾದಕ ಕೃತ್ಯವನ್ನು ನಡೆಸಿದಾಗಲೂ ಅನ್ವಯವಾಗಬೇಕು. ಹೀಗಾಗಿ ಹಿಂದೂ ಕೋಮಿಗೆ ಸೇರಿದ ಕೆಲವರು ಭಯೋತ್ಪಾದನಾ ಆರೋಪ ದಿಂದ ಬಿಡುಗಡೆಯಾಗಿದ್ದನ್ನು ಮುಂದಿಟ್ಟುಕೊಂಡು ಪ್ರಧಾನಿಗಳು ‘‘ಹಿಂದೂ ಸಮುದಾಯವು ಭಯೋತ್ಪಾದಕವಲ್ಲವೆಂದು ಇದರಿಂದ ಸಾಬೀತಾಗಿದೆ’’ ಎಂದು ಹೇಳುವುದು ಅನಗತ್ಯ ಮಾತ್ರವಲ್ಲ ದುರುದ್ದೇಶಪೂರ್ವಕ. ಮೋದಿಯವರ ಭಾಷಣದ ಹಿಂದಿರುವ ದುರುದ್ದೇಶ ಈ ಚುನಾವಣೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸುವುದು ಮಾತ್ರವಲ್ಲ. ಅದಕ್ಕಿಂತ ಮುಖ್ಯವಾಗಿ ಅವರು ಹಿಂದೂ ಧರ್ಮದ ಹೆಸರಿನಲ್ಲಿ ಮತ್ತು ಹಿಂದೂ ಧರ್ಮೀಯರ ಹೆಸರಿನಲ್ಲಿ ಸಂಘಪರಿವಾರದ ಕೆಲವು ಅಂಗಸಂಘಟನೆಗಳು ಹಾಗೂ ಹಿಂದೂ ಜನ ಜಾಗೃತಿ ಸಂಸ್ಥೆ ಮತ್ತು ಸನಾತನ ಸಂಸ್ಥೆಯಂಥ ಸಂಘಟನೆಗಳು ನಡೆಸಿರುವ, ಯೋಜಿಸುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ.

ಮುಸ್ಲಿಮ್ ಸಮುದಾಯಕ್ಕೆ ಸೇರಿದವರೆಲ್ಲರೂ ಭಯೋತ್ಪಾದಕರಲ್ಲ ಎಂದು ಹೇಳಿದಾಗ ಬಿನ್ ಲಾದೆೆನ್‌ನಂಥ ವ್ಯಕ್ತಿಗಳು ಮತ್ತು ಅಲ್ ಖಾಯಿದಾದಂಥ ಪ್ರಭುತ್ವ ಬೆಂಬಲಿತ ಹಾಗೂ ಧರ್ಮದ ಹೆಸರಿನ ಭಯೋತ್ಪಾದಕರ ಅಸ್ತಿತ್ವವನ್ನು ಹೇಗೆ ನಿರಾಕರಿಸಲು ಸಾಧ್ಯವಿಲ್ಲವೋ, ಹಾಗೆ ಹಿಂದೂಗಳು ಭಯೋತ್ಪಾದಕರಲ್ಲ ಎಂಬ ಸತ್ಯವೂ ಸಹ ಹಿಂದೂ ಧರ್ಮದ ಹೆಸರು ಹೇಳಿಕೊಂಡು ಸನಾತನ ಸಂಸ್ಥ್ಥೆ, ‘ಅಭಿನವ್ ಭಾರತ್’ನಂಥ ತಾಂತ್ರಿಕವಾಗಿ ಮಾತ್ರ ಆರೆಸ್ಸೆಸ್‌ನ ಭಾಗವಾಗಿಲ್ಲದ ವ್ಯಕ್ತಿಗಳು ಮತ್ತು ಸಂಘಟನೆಗಳು ಮಾಡುತ್ತಿರುವ, ಮಾಡಿರುವ ಹಾಗೂ ಮಾಡಲು ಯೋಜಿಸುತ್ತಿರುವ ಸಂಘಟಿತ ಭಯೋತ್ಪಾದನಾ ಕೃತ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಸತ್ಯವನ್ನು ಹೇಳುತ್ತಿರುವುದು ಪೊಲೀಸರು ಕೋರ್ಟುಗಳಿಗೆ ಸಲ್ಲಿಸಿದ ಚಾರ್ಜ್ ಶೀಟುಗಳೇ ವಿನಃ ಯಾರೋ ಕೆಲವು ಎಡಪಂಥೀಯ ಆರೆಸ್ಸೆಸ್ ವಿರೋಧಿಗಳಲ್ಲ. ಈ ನಿಟ್ಟಿನಲ್ಲಿ ಗೌರಿ ಲಂಕೇಶ್ ಹತ್ಯೆ ಮತ್ತು ಸಂಜೋತಾ ಪ್ರಕರಣ ವಿಚಾರಣೆಯಿಂದ ಹೊರಬಿದ್ದ ಭಯೋತ್ಪಾದನಾ ಕೃತ್ಯಗಳ ವಿವರವನ್ನು ಮತ್ತು ಆ ಬಗ್ಗೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯನ್ನೇ ಪರಿಶೀಲಿಸಬಹುದು. ಮೊದಲಿಗೆ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಪ್ರಕರಣದ ತನಿಖೆಯ ಫಲಿತಾಂಶವನ್ನು ನೋಡೋಣ.

ಈ ತನಿಖೆಯನ್ನು ನಡೆಸಿದ ಕರ್ನಾಟಕದ ವಿಶೇಷ ತನಿಖಾ ತಂಡ-ಸಿಟ್ ಎಲ್ಲಾ ಕೋನಗಳಿಂದ ಮತ್ತು ಎಲ್ಲ ಬಗೆಯ ಎಂದರೆ ಸಾಂದರ್ಭಿಕ, ಫೋರೆನ್ಸಿಕ್, ಡಿಜಿಟಲ್ ಇನ್ನಿತ್ಯಾದಿ ಸಾಕ್ಷ್ಯಗಳೆಲ್ಲವನ್ನೂ ಕಲೆಹಾಕಿ 18 ಆರೋಪಿಗಳ ಮೇಲೆ ಹತ್ತು ಸಾವಿರ ಪುಟಗಳ ಚಾರ್ಜ್‌ಶೀಟನ್ನು ದಾಖಲಿಸಿದ್ದಾರೆ. ಈ 18 ಜನರಲ್ಲಿ 16 ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನಿಬ್ಬರು ತಲೆತಪ್ಪಿಸಿಕೊಂಡಿದ್ದಾರೆ. ಬಂಧನದಲ್ಲಿರುವ 16 ಜನರೂ ಸಹ ತಾಂತ್ರಿಕವಾಗಿ ಈಗ ಹಿಂದೂ ಉಗ್ರಗಾಮಿತ್ವವನ್ನು ಬಿತ್ತುವ ಸನಾತನ ಸಂಸ್ಥೆಯ ಸದಸ್ಯರಲ್ಲವಾದರೂ ಎಲ್ಲರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಅದರ ಸದಸ್ಯ ಗಣವೇ ಆಗಿದ್ದಾರೆ. ಈ ಹತ್ಯೆಯ ಪ್ರಧಾನ ಸೂತ್ರಧಾರಿಯಾಗಿರುವ ಅಮೋಲ್ ಕಾಳೆ 2008ರವರೆಗೆ ಸನಾತನ ಸಂಸ್ಥೆಯ ನೇರ ಸದಸ್ಯರೇ ಆಗಿದ್ದರು ಮಾತ್ರವಲ್ಲದೆ 2015ರಲ್ಲಿ ನರೇಂದ್ರ ದಾಭೋಲ್ಕರ್ ಹತ್ಯಾ ಆರೋಪದ ಮೇಲೆ ಸನಾತನ ಸಂಸ್ಥೆಯ ಮುಖ್ಯಸ್ಥ ಡಾ. ವೀರೇಂದ್ರ ತಾವಡೆಯ ಬಂಧನವಾದ ಮೇಲೆ ಅವರ ಸ್ಥಾನವನ್ನು ವಹಿಸಿಕೊಂಡರು.

ಈತ ಗೌರಿ ಹತ್ಯೆಯಲ್ಲಿ ಮಾತ್ರವಲ್ಲದೆ ಪನ್ಸಾರೆ, ಪ್ರೊ. ಕಲಬುರ್ಗಿ ಹತ್ಯೆಗಳಲ್ಲೂ ನಂತರದ ಪ್ರೊ. ಭಗವಾನ್ ಹಾಗೂ ವಿಚಾರವಾದಿ ನರೇಂದ್ರ ನಾಯಕ್ ಅವರ ಹತ್ಯೆಯ ಸಂಚಿನಲ್ಲೂ ಪ್ರಮುಖ ಪಾತ್ರಧಾರಿಯಾಗಿದ್ದಾನೆಂದು ಆರೋಪಟ್ಟಿಯು ತಿಳಿಸುವುದಲ್ಲದೆ ಅದಕ್ಕೆ ಬೇಕಾದ ಪುರಾವೆಗಳನ್ನೂ ಕೊಡುತ್ತದೆ. ಗೌರಿಗೆ ಗುಂಡು ಹೊಡೆದ ಆರೋಪಿತ ಪರಶುರಾಮ್ ವಾಗ್ಮೋರೆ, ಆತನನ್ನು ಬೈಕಿನಲ್ಲಿ ಗೌರಿ ಮನೆಗೆ ಕರೆದೊಯ್ದಿದ್ದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಹತ್ಯೆ ಮಾಡಿದ ನಂತರ ಅದಕ್ಕೆ ಬಳಸಿದ ವಸ್ತುಗಳನ್ನು ಕಾರಿನಲ್ಲಿ ಮತ್ತೊಂದು ಜಾಗಕ್ಕೆ ಕೊಂಡೊಯ್ದ ಅಮಿತ್ ಬಡ್ಡಿ, ಎಲ್ಲರ ಮೇಲೂ ಈ ಹಿಂದೆ ಹಿಂದೂ ಪರ ಸಂಘಟನೆಗಳ ಪರವಾಗಿ ಕೋಮು ಗಲಭೆಗಳನ್ನು ಮಾಡಿದ ಆರೋಪಗಳಿವೆ. 16 ಆರೋಪಿಗಳು ಸಹ ಸನಾತನ ಸಂಸ್ಥೆಯ ಗುರಿಗಳನ್ನು ಬೋಧಿಸುವ ‘ಕ್ಷಾತ್ರ ಧರ್ಮ ಸಾಧನ’ ಎಂಬ ಪುಸ್ತಕದಿಂದ ಅಪಾರವಾಗಿ ಪ್ರಭಾವಿತರಾಗಿದ್ದಾರೆ. ಹಿಂದೂಗಳ ಗುರಿ ಹಿಂದೂ ರಾಷ್ರವನ್ನು ನಿರ್ಮಿಸುವುದಾಗಿದ್ದು ಅದಕ್ಕಾಗಿ ಸಜ್ಜನರು ದುರ್ಜನರನ್ನು ಕೊನೆಗೊಳಿಸಬೇಕೆಂದು ‘ಕ್ಷಾತ್ರ ಧರ್ಮ ಸಾಧನ’ವು ಕರೆ ನೀಡುತ್ತದೆ ಹಾಗೂ ಈ ಪ್ರಯತ್ನದಲ್ಲಿ ಸತ್ತರೆ ವೀರಸ್ವರ್ಗ ಮತ್ತು ಮೋಕ್ಷ ಪ್ರಾಪ್ತವಾಗುತ್ತದೆಂದು ಬೋಧಿಸುತ್ತದೆ.

ತನ್ನ ಧರ್ಮವನ್ನು ಪಾಲಿಸುವುದು ಮಾತ್ರವಲ್ಲದೆ ಅದನ್ನು ರಕ್ಷಿಸಲು, ಸಾಯಲು ಮತ್ತು ಕೊಲ್ಲಲೂ ಸಿದ್ಧರಾಗುವುದೇ ಕ್ಷಾತ್ರಧರ್ಮವೆಂಬುದು ಅದರ ತಾತ್ಪರ್ಯ. ಇದಕ್ಕಾಗಿ ಮಾಡಿಕೊಳ್ಳುವ ಮಾನಸಿಕ ಸಿದ್ಧತೆಯನ್ನೇ ಅದು ಆಧ್ಯಾತ್ಮಿಕತೆ (ಸ್ಪಿರಿಚುಯಾಲಿಟಿ) ಎಂದು ಕರೆಯುತ್ತದೆ. ಮತ್ತು ಅಂಥ ಸ್ಪಿರಿಚುಯಾಲಿಟಿಯು ಶೇ.75ನ್ನು ದಾಟಿದಾಗ ಅಂಥವರನ್ನು ಸಂತರೆಂದು ಕರೆದು ಸನ್ಮಾನಿಸುತ್ತದೆ. ಗೌರಿಯನ್ನು ಕೊಂದ 16 ಜನರಲ್ಲಿ ಅಮೋಲ್ ಕಾಳೆ, ಅಮಿತ್ ದಾಗ್ವೇಕರ್ ಇನ್ನಿತರರು ಶೇ.75ಕ್ಕಿಂತ ಹೆಚ್ಚಿನ ಆಧ್ಯಾತ್ಮಿಕತೆ ಪಡೆದಿದ್ದರೆ ಇತರ ಆರೋಪಿಗಳಾದ ಮನೋಹರ್ ಯಡವೆ, ಸುಜಿತ್‌ಕುಮಾರ್, ನವೀನ್‌ಕುಮಾರ್ ಇನ್ನಿತರರು ‘ಸಾಧನೆಯ’ ಹಾದಿಯಲ್ಲಿದ್ದಾರೆ!

ಇದರಷ್ಟೆ ಮುಖ್ಯವಾದ ಮತ್ತೊಂದು ಸಂಗತಿಯನ್ನೂ ಕರ್ನಾಟಕದ ತನಿಖಾ ತಂಡ ಬಯಲು ಮಾಡಿತು. ಆರೋಪಿ ಅಮೋಲ್ ಕಾಳೆಯ ಡೈರಿಯಲ್ಲಿ ಗೂಢಲಿಪಿಯಲ್ಲಿ ದಾಖಲಿಸಿದ್ದ ಅಂಶಗಳನ್ನು ಹೊರತೆಗೆದಾಗ ಮಹಾರಾಷ್ಟ್ರದಲ್ಲಿರುವ ಈ ಸಂಘಟನೆಯ ವ್ಯವಸ್ಥಿತ ಭಯೋತ್ಪಾದನಾ ಜಾಲ ಮತ್ತು ಬಂದೂಕು-ಬಾಂಬುಗಳ ಸಂಗ್ರಹ ಹಾಗೂ ಮುಂದೆ ಅವರು ಎಸಗಬೇಕೆಂದುಕೊಂಡಿದ್ದ ಭಯೋತ್ಪಾದನಾ ಕೃತ್ಯಗಳ ಮಾಹಿತಿಯೂ ದೊರೆಯಿತು. ಅದನ್ನು ಆಧರಿಸಿ ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) 2018ರ ಆಗಸ್ಟ್‌ನಲ್ಲಿ ಪುಣೆಯ ನಲಸ್ಪೋರಾದಲ್ಲಿ ವಾಸಿಸುತ್ತಿದ್ದ ಸನಾತನ ಸಂಸ್ಥೆಯ ಕಾರ್ಯಕರ್ತರಾದ ವೈಭವ್ ರಾವತ್, ಸುಧನ್ವ ಗೋಧಾಲ್ಕರ್, ಶರತ್ ಕಲಸ್ಕರ್, ಇನ್ನಿತರ 12 ಜನರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿತು. ಯಥಾಪ್ರಕಾರ ಸನಾತನ ಸಂಸ್ಥೆಯು ಅವರು ಯಾರೂ ತಮ್ಮ ಸಂಘಟನೆಗೆ ಸೇರಿದವರಲ್ಲವೆಂದು ನಿರಾಕರಿಸಿದೆ. ಗಾಂಧಿಯನ್ನು ಕೊಂದ ನಂತರ ಗೋಡ್ಸೆಯ ಬಗ್ಗೆ ಆರೆಸ್ಸೆಸ್ಸ್ ಹೇಳಿದೂ ಇದನ್ನೇ ಅಲ್ಲವೇ?

ಈಗ ಬಿಜೆಪಿ ಸರಕಾರದ ಅನುಮತಿಯನ್ನು ಪಡೆದೇ ಮಹಾರಾಷ್ಟ್ರ ಪೊಲೀಸರು ಆ 12 ಜನರ ಮೇಲೆ ಭಯೋತ್ಪಾದನಾ ವಿರೋಧಿ ಕಾಯ್ದೆಯಾದ ಯುಎಪಿಎ (ಅನ್‌ಲಾಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್) ಪ್ರಕಾರ ಪ್ರಕರಣವನ್ನು ದಾಖಲಿಸಿದೆ. 2018ರ ಡಿಸೆಂಬರ್‌ನಲ್ಲಿ 7000 ಪುಟಗಳ ಚಾರ್ಜ್‌ಶೀಟ್ ಸಹ ಸಲ್ಲಿಸಿದೆ. ಈಗ ಅನಿವಾರ್ಯವಾಗಿ ಮಹಾರಾಷ್ಟ್ರದ ಬಿಜೆಪಿ ಸರಕಾರವೇ ಸನಾತನ ಸಂಸ್ಥೆಯನ್ನು ಭಯೋತ್ಪಾದನಾ ಸಂಸ್ಥೆಯೆಂದು ಪರಿಗಣಿಸಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈ 12 ಜನರಲ್ಲಿ ಮೂವರನ್ನು ಹೊರತು ಪಡಿಸಿದರೆ ಉಳಿದ ಒಂಬತ್ತು ಜನರು ಗೌರಿ ಹತ್ಯೆಯಲ್ಲೂ ಪಾಲ್ಗೊಂಡವರೇ ಆಗಿದ್ದಾರೆ. ಅವರಲ್ಲಿ ಅಮೋಲ್ ಕಾಳೆಯಂತೂ ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಪ್ರಕರಣಗಳಲ್ಲೂ ಬೇಕಾಗಿದ್ದಾನೆಂದು ಎರಡೂ ರಾಜ್ಯಗಳ ಪೋಲಿಸರು ಸ್ಪಷ್ಟಪಡಿಸಿದ್ದಾರೆ. ಸನಾತನ ಸಂಸ್ಥೆ ಒಂದು ಭಯೋತ್ಪಾದನೆ ಸಂಸ್ಥೆ ಎಂದಾದರೆ ಅದು ಮಾಡಿದ್ದು ಮುಸ್ಲಿಂ ಭಯೋತ್ಪಾದನೆಯೇ?

ಹಾಗೆಯೇ ಸಂಜೋತಾ ಪ್ರಕರಣವನ್ನೂ ಸ್ವಲ್ಪಹತ್ತಿರದಿಂದ ಗಮನಿಸೋಣ. 2007ರ ಫೆಬ್ರವರಿಯಲ್ಲಿ ಈ ಭಯೋತ್ಪಾದನಾ ಕೃತ್ಯ ಸಂಭವಿಸಿತು. ಅದಾದ ಎರಡೇ ದಿನಗಳಲ್ಲಿ ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿ ವಿಕಾಸ್ ನಾರಾಯಣ್ ರಾಯ್ ಅವರ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ದಳವನ್ನು ರಚಿಸಲಾಯಿತು. ಅವರು 2007ರಿಂದ 2010ರ ತನಕ ಈ ತನಿಖೆಯ ನೇತೃತ್ವವನ್ನು ವಹಿಸಿದ್ದರು. ತನಿಖಾ ತಂಡ ಮತ್ತು ಆಗ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರಗಳು ಈ ಸ್ಫೋಟದ ಹಿಂದೆ ಪಾಕಿಸ್ತಾನದ ಕೈವಾಡವಿದೆಯೆಂದೇ ನಂಬಿದ್ದವು ಮತ್ತು ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಬೇಗ ಸಾಕ್ಷಿಗಳನ್ನು ಕ್ರೋಡೀಕರಿಸಬೇಕೆಂಬ ನಿರ್ದೇಶನವನ್ನೂ ಪೊಲೀಸರಿಗೆ ಕೊಟ್ಟಿದ್ದವು. ಆದರೆ ತನಿಖಾ ತಂಡಕ್ಕೆ ಸ್ಫೋಟಗೊಂಡ ರೈಲಿನಲ್ಲಿ ಸ್ಫೋಟವಾಗದೇ ಉಳಿದಿದ್ದ ಬಾಂಬ್ ದೊರಕಿತು. ಅದನ್ನು ಒಂದು ಸೂಟ್‌ಕೇಸಿನಲ್ಲಿ ಅಳವಡಿಸಲಾಗಿತ್ತು.

ಅದು ನೀಡಿದ ಮಹತ್ವದ ಸುಳಿವನ್ನು ಬೆಂಬತ್ತಿದ ಪೊಲೀರು ಆ ಸೂಟ್‌ಕೇಸ್ ಮತ್ತು ಅದರಲ್ಲಿದ್ದ ಬಾಂಬ್‌ಗೆ ಬಳಸಿದ ಸಾಮಗ್ರಿಗಳನ್ನು ಎಲ್ಲಿ ಖರೀದಿಸಲಾಗಿದೆಯೆನ್ನುವುದನ್ನು ಪತ್ತೆ ಹಚ್ಚಲು ಪ್ರಾರಂಭಿಸಿದರು. ಅಂತಹ ಸಾಮಗ್ರಿಗಳ ಸ್ಟಾಕಿಸ್ಟುಗಳು, ವಿತರಕರು ಮತ್ತು ಚಿಲ್ಲರೆ ಮಾರಾಟಗಾರರನ್ನು ದೇಶಾದ್ಯಂತ ಬೆನ್ನು ಹತ್ತಿದ ಅವರ ವಿಚಾರಣೆ ಅವರನ್ನು ಮಧ್ಯಪ್ರದೇಶದ ಇಂದೋರಿಗೆ ಕರೆತಂದಿತು ಹಾಗೂ ಸುನಿಲ್ ಜೋಷಿ ಎಂಬ ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತ ಮತ್ತು ಆತನ ಇಬ್ಬರು ಸ್ನೇಹಿತರು ಅವೆಲ್ಲವನ್ನೂ ಇಂದೂರಿನ ಮಾರುಕಟ್ಟೆಯ ಅರ್ಧ ಕಿ.ಮೀ. ಆಸುಪಾಸಿನಲ್ಲೇ ಎಲ್ಲವನ್ನೂ ಖರೀದಿಸಿರುವುದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷಿಗಳೆಲ್ಲವೂ ದೊರಕಿದವು. ಆದರೆ ಇನ್ನೇನು ಸುನಿಲ್ ಜೋಷಿಯ ಬಂಧನ ಮಾಡಬೇಕು ಎನ್ನುವ ವೇಳೆಗೆ ಆತ ಕೊಲೆಗೀಡಾದ ಮತ್ತು ಉಳಿದಿಬ್ಬರೂ ತಲೆಮರೆಸಿಕೊಂಡರು. ಆದರೆ ಅದೇ ವೇಳೆಗೆ 2008ರಲ್ಲಿ ಮಹಾರಾಷ್ಟದ ಮಾಲೇಗಾಂವ್ ಸ್ಫೋಟದ ವಿಚಾರಣೆ ನಡೆಸುತ್ತಿದ್ದ ಹೇಮಂತ್ ಕರ್ಕರೆಯವರು ಸ್ಫೋಟಕ್ಕೆ ಬಳಸಿದ ಸ್ಕೂಟರ್ ‘ಅಭಿನವ್ ಭಾರತ್’ ಸಂಸ್ಥೆಯ ಪ್ರಗ್ಯಾ ಸಿಂಗ್‌ಗೆ ಸೇರಿದ್ದೆಂದು ಪತ್ತೆ ಹಚ್ಚಿದ್ದರು. ಸಂಜೋತಾ ಸ್ಫೋಟದಲ್ಲಿ ಈ ಸಂಸ್ಥೆ ಮತ್ತು ಕರ್ನಲ್ ಪುರೋಹಿತ್ ಕೂಡಾ ಭಾಗವಹಿಸಿದ್ದೂ ಖಚಿತವಾಯಿತು. ಅವರಿಬ್ಬರ ಬಂಧನವೂ ಆಯಿತು.

ಸಾಕ್ಷಿಗಳು ಬಲವಾಗಿದ್ದರಿಂದ ತೀರಾ ಇತ್ತೀಚಿನವರೆಗೆ ಅಂದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವವರೆಗೂ ಅವರಿಬ್ಬರಿಗೂ ಜಾಮೀನು ಕೂಡಾ ಸಿಕ್ಕಿರಲಿಲ್ಲ. ಈ ಮಧ್ಯೆ ಹೈದಾರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ನಭ ಕುಮಾರ್ ಅಲಿಯಾಸ್ ಸ್ವಾಮೀ ಅಸೀಮಾನಂದ ಅವರು ಮ್ಯಾಜಿಸ್ಟ್ರೇಟ್ ಮುಂದೆ ಸ್ವಇಚ್ಚೆಯಿಂದ ತಪ್ಪೊಪ್ಪಿಗೆ ಹೇಳಿಕೆಯನ್ನಿತ್ತು ಮಾಲೇಗಾಂವ್, ಅಜ್ಮೀರ್, ಸಂಜೋತಾ ಸ್ಫೋಟಗಳಲ್ಲಿ ತನ್ನ ಹಾಗೂ ಅಭಿನವ್ ಭಾರತ್‌ನ ಇತರ ಸಹಚರರ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ತನಿಖಾ ತಂಡವು 244 ಸಾಕ್ಷಿಗಳನ್ನು ಕಲೆಹಾಕಿದ್ದರು.

ಆದರೆ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲವೂ ಉಲ್ಟಾ ಆಗಲು ಪ್ರಾರಂಭಿಸಿತು. 2015ರ ವೇಳೆಗೆ ಮಾಲೇಗಾಂವ್ ಸ್ಫೋಟದ ಆರೋಪಿ ಭಯೋತ್ಪಾದಕರ ವಿರುದ್ಧ ಸರಕಾರದ ಪರವಾಗಿ ವಾದ ಮಾಡುತ್ತಿದ್ದ ವಕೀಲೆ ರೋಹಿಣಿ ಸಾಲ್ಯಾನ್ ಅವರ ಮೇಲೆ ಪ್ರಕರಣವನ್ನು ಆರೋಪಿಗಳ ಪರವಾಗಿ ತಿರುಚುವಂತೆ ‘ಉನ್ನತ ಸ್ಥಾನ’ಗಳಿಂದ ಒತ್ತಡ ಬರಲು ಪ್ರಾರಂಭವಾಯಿತು. ಈ ಒತ್ತಡವನ್ನು ವಿರೋಧಿಸುತ್ತಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ಅಸೀಮಾನಂದ ತಾನೇ ಕೊಟ್ಟ ಸ್ವಪ್ರೇರಿತ ಹೇಳಿಕೆಯನ್ನು ವಾಪಸ್ ಪಡೆದುಕೊಂಡರು. ಸಂಜೋತಾ ಪ್ರಕರಣದ 244 ಸಾಕ್ಷಿಗಳಲ್ಲಿ 44 ಪ್ರಮುಖ ಸರಕಾರಿ ಸಾಕ್ಷಿಗಳು ಉಲ್ಟಾ ತಿರುಗಿ ಆರೋಪಿಗಳ ಪರವಾಗಿ ಸಾಕ್ಷ್ಯ ನುಡಿದರು. ಅಷ್ಟು ಮಾತ್ರವಲ್ಲ. ಪೊಲೀಸರು ಅಗತ್ಯವಿದ್ದ ಪೂರಕ ಸಾಕ್ಷಿಗಳನ್ನೂ ಒದಗಿಸಲಿಲ್ಲ ಮತ್ತು ತಮ್ಮ ಸಾಕ್ಷ್ಯ ಹಾಗೂ ಪುರಾವೆಗಳನ್ನು ಪಾಟಿ ಸವಾಲುಗಳಲ್ಲಿ ಸಮರ್ಥಿಸಿಕೊಳ್ಳಲೂ ಇಲ್ಲ. ಹೀಗಾಗಿ ಸರಕಾರವೇ ಪರೋಕ್ಷವಾಗಿ ಈ ಭಯೋತ್ಪಾದನಾ ಆರೋಪಿಗಳು ಬಚಾವಾಗಲು ಸಹಾಯ ಮಾಡಿತು. ಇದನ್ನು ಖುದ್ದು ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರೇ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ. ಇಂತಹ ಘನಘೋರ ಕೃತ್ಯವೊಂದು ಶಿಕ್ಷೆಗೊಳಗಾಗದೆ ಪಾರಾಗಲು ಸರಕಾರಿ ಅಭಿಯೋಜಕರು ಮತ್ತು ತನಿಖಾ ಅಧಿಕಾರಿಗಳು ತೋರಿದ ನಿರ್ಲಕ್ಷ್ಯವೇ ಕಾರಣವೆಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.

ಹೀಗೆ ಸಂಜೋತಾ ಪ್ರಕರಣದ ಆರೋಪಿತರು ನೇರವಾಗಿ ಆರೆಸ್ಸೆಸ್‌ನೊಂದಿಗೆ ನಂಟು ಹೊಂದಿದ್ದರೆಂದು ಹರ್ಯಾಣದ ಪೊಲೀಸರೇ ಹೇಳಿದ್ದಾರೆ. ಮತ್ತೊಂದು ಕಡೆ ಹಿಂದೂಗಳ ಹೆಸರಲ್ಲಿ ಮತ್ತು ಹಿಂದೂ ರಾಷ್ಟ್ರದ ಹೆಸರಲ್ಲಿ ನೂರಾರು ಯುವಕರನ್ನು ಸನಾತನ ಸಂಸ್ಥೆ, ಹಿಂದೂ ಜನ ಜಾಗೃತಿ ಸಂಸ್ಥೆಗಳು ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಬಿಜೆಪಿ ಸರಕಾರವಿರುವ ಮಹಾರಾಷ್ಟ್ರದ ಪೊಲೀಸರೇ ವಿನಃ ಬಿಜೆಪಿ ವಿರೋಧಿಗಳಲ್ಲ. ಹೀಗಾಗಿ ಹಿಂದೂಗಳ ಹೆಸರಲ್ಲಿ ಯಾವ ಹಿಂದೂಗಳು ಭಯೋತ್ಪಾದನೆ ಮಾಡುತ್ತಿಲ್ಲ ಎಂಬ ಮೋದಿಯವರ ಹೇಳಿಕೆಯು ಘನಘೋರ ಕ್ರೌರ್ಯದ ಮೇಲೆ ಸುಳ್ಳಿನ ಹೊದಿಕೆ ಹೊದಿಸುವ ಪ್ರಯತ್ನವಾಗಿದೆ. ಅಷ್ಟು ಮಾತ್ರವಲ್ಲ ಸನಾತನ ಸಂಸ್ಥೆಯ ಮುಖ್ಯಸ್ಥ ಜಯಂತ್ ಅಠಾವಳೆಯವರನ್ನು ಸ್ವಯಂ ಮೋದಿಯವರೇ ಹಿಂದೂ ಸಮಾಜ ಸಂರಕ್ಷಕ ಎಂದು 2013ರಲ್ಲಿ ಹಾಡಿ ಹೊಗಳಿರುವ ವರದಿಗಳು ಅವರ ವೆಬ್‌ಸೈಟಿನಲ್ಲಿ ಈಗಲೂ ರಾರಾಜಿಸುತ್ತಿವೆ. ಅದರ ಪ್ರಧಾನ ಕಾರ್ಯಾಲಯವಿರುವುದು ಗೋವಾದ ಪೋಂಡಾದಲ್ಲಿ. 2007ರಲ್ಲಿ ಈ ಸಂಸ್ಥೆಯ ಕಾರ್ಯಕರ್ತರು ಸ್ಕೂಟರಿನಲ್ಲಿ ಬಾಂಬ್ ಒಂದನ್ನು ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡು ಇಬ್ಬರು ಸತ್ತಿದ್ದರು.

ಆಗ ಗೋವಾದ ಗ್ರಾಮಸ್ಥರು ಸಂಸ್ಥೆ ಕಾರ್ಯಾಲಯವನ್ನು ಖಾಲಿ ಮಾಡಬೇಕೆಂದು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆದರೂ ಅಂದಿನಿಂದ ಇಂದಿನವರೆಗೆ ಯಾವುದೇ ಸರಕಾರ ಗೋವಾದಲ್ಲಿ ಅಧಿಕಾರಕ್ಕೆ ಬಂದರೂ ಅದು ಸರಕಾರಿ ರಕ್ಷಣೆಯಲ್ಲಿ ನಿರಾತಂಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಬಚ್ಚಿಡಲಾಗದಂಥ ಸಾಕ್ಷ್ಯಾಧಾರಗಳು ಪತ್ತೆಯಾದಾಗ ನಿರ್ವಾಹವಿಲ್ಲದೆ ಸನಾತನ ಭಯೋತ್ಪಾದನೆಯನ್ನು ಬಿಜೆಪಿ ಸರಕಾರ ಒಪ್ಪಿಕೊಂಡಿದೆ. ಆದರೆ ಆರೆಸ್ಸೆಸ್ ಮತ್ತದರ ಪರಿವಾರ ಅದಕ್ಕೆ ನೀಡುವ ಪರೋಕ್ಷ ಬೆಂಬಲಗಳು ಮುಂದುವರಿಯುತ್ತಿವೆ ಎನ್ನುವುದಕ್ಕೆ ಗೌರಿ ಹತ್ಯೆ ಪ್ರಕರಣದಲ್ಲಿ ಅವರಿಗೆ ಸಿಗುತ್ತಿರುವ ಕಾನೂನು ಬೆಂಬಲ, ಅವರನ್ನು ಬೆಂಬಲಿಸಿ ಇತರ ಹಿಂದೂ ಸಂಘಟನೆಗಳು ಮತ್ತು ಪಕ್ಷಗಳು ನೀಡುತ್ತಿರುವ ಹೇಳಿಕೆಗಳಿಗಿಂತ ಹೆಚ್ಚಿನ ಪುರಾವೆಯ ಅಗತ್ಯವಿಲ್ಲ. ಹಿಂದೂ ಧರ್ಮದ ಹೆಸರಿನಲ್ಲಿ ಗಾಂಧಿ ಹತ್ಯೆಯ ಕಾಲದಿಂದಲೂ ಆರೆಸ್ಸೆಸ್ ಭಯೋತ್ಪಾದನೆ ಮಾಡಿಕೊಂಡೇ ಬಂದಿದೆ. ಬಿಜೆಪಿ ಸರಕಾರಗಳ ನೇರ ಬೆಂಬಲ ಮತ್ತು ಕಾಂಗ್ರೆಸನ್ನು ಒಳಗೊಂಡಂತೆ ಇತರ ಎಲ್ಲಾ ಪಕ್ಷಗಳಲ್ಲಿರುವ ತನ್ನ ಸೈದ್ಧಾಂತಿಕ ಮಿತ್ರರ ಪರೋಕ್ಷ ಸಹಕಾರದೊಂದಿಗೆ ಅದು ತನ್ನ ಪ್ರಭಾವ, ಪ್ರಚಾರ ಮತ್ತು ಭಯೋತ್ಪಾದನೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಹೀಗಾಗಿ ಧರ್ಮದ ಹೆಸರಿನ ಈ ಅನಾಗರಿಕ ಭಯೋತ್ಪಾದನೆಗೆ ಪಕ್ಷಾತೀತ ಬೆಂಬಲ ಮುಂದುವರಿಯುತ್ತದೆಯೋ ಇಲ್ಲವೋ ಎಂಬುದು ನಾಗರಿಕ ಸಮಾಜ ಅದರ ವಿರುದ್ಧ ಎಷ್ಟು ಕ್ರಿಯಾಶೀಲವಾಗಿ ಪ್ರತಿರೋಧಿಸುತ್ತದೆ ಎಂಬುದನ್ನೇ ಆಧರಿಸಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)