varthabharthi

ಸಂಪಾದಕೀಯ

ಇವರಿಗೇಕೆ ರಾಜಕೀಯ ಪ್ರಣಾಳಿಕೆಯಲ್ಲಿ ಜಾಗವಿಲ್ಲ?

ವಾರ್ತಾ ಭಾರತಿ : 8 Apr, 2019

ಎಷ್ಟೋ ಕಿಲೋಮೀಟರ್ ಎತ್ತರದಲ್ಲಿರುವ ಉಪಗ್ರಹಗಳನ್ನು ಉಡಾಯಿಸುವ ಕ್ಷಿಪಣಿಗಳನ್ನು ನಾವು ಕಂಡು ಹಿಡಿದಿದ್ದೇವೆ. ಆದರೆ ಎರಡು ಮೀಟರ್ ಕೆಳಗಿರುವ ಶೌಚಗುಂಡಿಗೆ ಇಳಿದು ಅದನ್ನು ಶುಚಿಗೊಳಿಸುವ ಯಂತ್ರಗಳನ್ನು ಮಾತ್ರ ನಮಗೆ ಕಂಡು ಹಿಡಿಯಲಾಗಿಲ್ಲ. ಆಕಾಶಕ್ಕೆ ನೆಗೆದ ಉಪಗ್ರಹವನ್ನು ದೇಶದ ಪ್ರಧಾನಮಂತ್ರಿ ಬಣ್ಣಿಸುತ್ತಿರುವ ಸಂದರ್ಭದಲ್ಲಿ ದಿಲ್ಲಿಯ ಶೌಚಗುಂಡಿಯಲ್ಲಿ ಮೂವರು ಪೌರಕಾರ್ಮಿಕರು ಮೃತಪಟ್ಟರು. ಭಾರತದ ಅಭಿವೃದ್ಧಿಯ ಒಡೆದ ಕನ್ನಡಿಯಲ್ಲಿ ಈ ದುರಂತ ಯಾವತ್ತೂ ಪ್ರತಿಬಿಂಬಿಸಲೇ ಇಲ್ಲ. ಚುನಾವಣೆಯಲ್ಲಿ ರಾಜಕಾರಣಿಗಳು ಭರವಸೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸ್ವಚ್ಛತಾ ಆಂದೋಲನದ ಗರಿಯನ್ನು ತನ್ನ ಮುಂಡಾಸಿಗೆ ಸಿಕ್ಕಿಸಿಕೊಂಡು ಪ್ರಧಾನಿ ಮೋದಿ ದೇಶಾದ್ಯಂತ ಓಡಾಡುತ್ತಿದ್ದಾರೆ. ಆದರೆ ಶೌಚಗುಂಡಿಯಲ್ಲಿ ದಿನ ನಿತ್ಯ ಸಾಯುತ್ತಿರುವ ಪೌರಕಾರ್ಮಿಕರು ಈ ದೇಶದ ಸ್ವಚ್ಛತಾ ಆಂದೋಲನಕ್ಕೆ ಕಳಂಕ ಎಂದು ಅನ್ನಿಸಿಲ್ಲ. ಅನ್ನಿಸಿದ್ದಿದ್ದರೆ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಇದಕ್ಕೊಂದು ಪರಿಹಾರವಿರುತ್ತಿತ್ತು. ಬಹುಶಃ ಶೌಚಗುಂಡಿಯಲ್ಲಿ ಮೃತರಾಗುತ್ತಿರುವವರು ಮತದಾರರು ಎಂದೂ ರಾಜಕಾರಣಿಗಳು ಭಾವಿಸಿದಂತಿಲ್ಲ.

ಇದೀಗ ರಾಜಕಾರಣಿಗಳು ಬಿಡುಗಡೆ ಮಾಡಬೇಕಾದ ಪ್ರಣಾಳಿಕೆಯನ್ನು ಸಫಾಯಿ ಕರ್ಮಚಾರಿ ಸಂಘಟನೆಗಳು ಬಿಡುಗಡೆ ಮಾಡಿವೆ. ರಾಜಕೀಯ ಪಕ್ಷಗಳು ಈ ಪ್ರಣಾಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿವೆ. ಇಂದು ಆರೋಗ್ಯಕರ ಭಾರತ ಉಳಿಯಬೇಕಾದರೆ ಮೊತ್ತ ಮೊದಲು ಸರಕಾರ ಪೌರ ಕಾರ್ಮಿಕರ ಕಡೆಗೆ ದೃಷ್ಟಿ ಹರಿಸಬೇಕು. ಈ ದೇಶ ಒಂದಿಷ್ಟು ಆರೋಗ್ಯವನ್ನು, ಶುಚಿತ್ವವನ್ನು ಉಳಿಸಿಕೊಂಡಿದ್ದರೆ ಅದರ ನೇರ ಪಾಲುದಾರರು ಪೌರಕಾರ್ಮಿಕರು. ಮನುಷ್ಯ ಘನತೆಯನ್ನೇ ಪಕ್ಕಕ್ಕಿಟ್ಟು ಶೌಚಗುಂಡಿಗೆ ಇಳಿದು ತಮ್ಮ ಪ್ರಾಣವನ್ನೇ ಅರ್ಪಿಸಿದ ಈ ಮಹಾತ್ಮರಿಲ್ಲದೇ ಇದ್ದಿದ್ದರೆ ಈ ದೇಶ ಗಬ್ಬು ನಾರತೊಡಗುತ್ತಿತ್ತು. ನರೇಂದ್ರ ಮೋದಿಯವರ ಶುಚಿತ್ವ ಆಂದೋಲನ ಹಳ್ಳ ಹಿಡಿಯುತ್ತಿತ್ತು. ಇಂದು ಶುಚಿತ್ವ ಆಂದೋಲನದ ಹೆಸರಿನಲ್ಲಿ ಕಚೇರಿಯೊಳಗೆ ಕುಳಿತ ಅಧಿಕಾರಿಗಳು ಹಣ ದೋಚುತ್ತಿದ್ದಾರೆಯೇ ಹೊರತು, ಶುಚಿತ್ವ ಆಂದೋಲನದ ಸೇನಾಳುಗಳ ಬದುಕಿನಲ್ಲಿ ಯಾವ ಪರಿಣಾಮವೂ ಬೀರಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಐವರು ಪೌರ ಕಾರ್ಮಿಕರ ಪಾದ ತೊಳೆದು ಮಾಧ್ಯಮಗಳಲ್ಲಿ ಸುದ್ದಿಯಾದರು. ಆದರೆ ಹಾಗೆ ಪಾದ ತೊಳೆಸಿಕೊಂಡ ಕಾರ್ಮಿಕರ ಬದುಕಿನಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಲಿಲ್ಲ. ಅವರು ಸಮಾಜದಲ್ಲಿ ನಿಕೃಷ್ಟ ಜೀವನ ನಡೆಸುತಿದ್ದಾರೆ. ಮಲ ಹೊರುವ ಪದ್ಧತಿಯ ಹಿಂದೆ ಸಾಮಾಜಿಕ ಮೇಲು-ಕೀಳುಗಳು ತಳಕು ಹಾಕಿಕೊಂಡಿವೆ. ಪೌರಕಾರ್ಮಿಕರಲ್ಲಿ ಬಹುತೇಕ ಜನರು ದಲಿತರೇ ಆಗಿದ್ದಾರೆ.

ನಿರ್ದಿಷ್ಟ ಜಾತಿಯ ಜನರು ಇಂತಹದೇ ಕೆಲಸಕ್ಕಿರುವವರು ಎನ್ನುವವನ ಮನಸ್ಥಿತಿಯೇ ಭಾರತದಲ್ಲಿ ಶೌಚಗುಂಡಿಗೆ ಇನ್ನೂ ಮನುಷ್ಯರೇ ಇಳಿಯುವಂತಹ ಸ್ಥಿತಿ ಇದೆ. ಇಂತಹ ಕೆಲಸ ನಿರ್ವಹಿಸುವವರನ್ನು ಮನುಷ್ಯರೆಂದು ಸರಕಾರ ಗುರುತಿಸಿದ್ದೇ ಇಲ್ಲ. ಕನಿಷ್ಠ ಸಮಾಜದ ಹಿರಿಯ ನಾಗರಿಕರಾದರೂ ಈ ಬಗ್ಗೆ ಸರಕಾರವನ್ನು ಒತ್ತಾಯಿಸುವುದು ಕರ್ತವ್ಯವಾಗಿದೆ. ಬೆಳಗ್ಗೆ ನಗರಕ್ಕೆ ಕಾಲಿಟ್ಟಾಗ ನಗರ ಹಾರ್ದಿಕವಾಗಿ ನಮ್ಮನ್ನು ಸ್ವಾಗತಿಸುತ್ತದೆಯೆಂದರೆ ಅದಕ್ಕೆ ಕಾರಣ, ಸೂರ್ಯ ಮೂಡುವ ಮೊದಲೇ ನಗರವನ್ನು ಶುಚಿಗೊಳಿಸಿರುವ ಪೌರಕಾರ್ಮಿಕರು. ಒಂದೆರಡು ದಿನ ಈ ಕಾರ್ಮಿಕರೇನಾದರೂ ಮುಷ್ಕರ ಮಾಡಿದರೆ ನಗರವೆನ್ನುವುದು ಚರಂಡಿಯಾಗಿ ಪರಿವರ್ತನೆಹೊಂದುತ್ತದೆ. ತಮ್ಮ ತಮ್ಮ ನಿವಾಸಗಳಲ್ಲೂ ಜನರು ಮೂಗು ಮುಚ್ಚಿ ಓಡಾಡಬೇಕಾಗುತ್ತದೆ. ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಸುರಿದು ಹೊಲಸು ಮಾಡುವವರು ಕೆಳಜಾತಿಯವರೇ ಹೊರತು, ಆ ಹೊಲಸನ್ನು ಶುಚಿಗೊಳಿಸಿ ನಗರವನ್ನು ಮನುಷ್ಯರಿಗೆ ಸಹ್ಯವಾಗುವಂತೆ ಮಾಡುವ ಪೌರ ಕಾರ್ಮಿಕರಲ್ಲ. ಆದುದರಿಂದ ಈ ಕಾರ್ಮಿಕರ ಬದುಕು ಸುಧಾರಣೆ ಮಾಡುವುದಕ್ಕಾಗಿಯೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಯೋಜನೆಗಳನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಮುತುವರ್ಜಿಯಿಂದ ಸರಕಾರ ಈಡೇರಿಸಬೇಕು. ಭಾರತೀಯ ಸಂವಿಧಾನದ 21ನೇ ವಿಧಿಯಡಿ ನೀಡಲಾಗುತ್ತಿರುವ ಉಚಿತ ಶಿಕ್ಷಣ, ಆರೋಗ್ಯ ಸುರಕ್ಷೆ, ಘನತೆಯ ಉದ್ಯೋಗ ಮತ್ತು ಜೀವನೋಪಾಯ ಹಾಗೂ ಇತರ ಸೌಲಭ್ಯಗಳನ್ನು ಖಾತರಿ ಪಡಿಸುವ ಆರ್ -21 ಕಾರ್ಡ್ ನೀಡಬೇಕು. ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರ ಕ್ಷೇಮಾಭ್ಯುದಯಕ್ಕಾಗಿ ಕೇಂದ್ರದ ಬಜೆಟ್‌ನಲ್ಲಿ ಶೇ. 1ರಷ್ಟು ನಿಧಿಯನ್ನು ಮೀಸಲಿಡಬೇಕು ಹಾಗೂ ಇಂತಹ ಕಾರ್ಮಿಕರ ಪುನರ್ವಸತಿ ಕಾರ್ಯಕ್ಕಾಗಿ ಪ್ರಧಾನಿ ನೇತೃತ್ವದಲ್ಲಿ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಬೇಕು.

55 ವರ್ಷ ಮೀರಿದ ಸ್ವಚ್ಛತಾ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು. ಶೌಚಗುಂಡಿಗೆ ಮನುಷ್ಯರನ್ನು ಇಳಿಸುವ ಪ್ರವೃತ್ತಿ ಸಂಪೂರ್ಣ ಇಲ್ಲವಾಗಬೇಕು. ಅದಕ್ಕಾಗಿ ಅತ್ಯಾಧುನಿಕ ಯಂತ್ರಗಳನ್ನು ಬಳಸುವ ಮೂಲಕ ನಾವೂ ಅಭಿವೃದ್ಧಿಯಾಗಿದ್ದೇವೆ ಎನ್ನುವುದನ್ನು ಸರಕಾರ ವಿಶ್ವಕ್ಕೆ ಸಾಬೀತು ಮಾಡಬೇಕು. ವಿಪರ್ಯಾಸವೆಂದರೆ ಈಗ ಇರುವ ಸವಲತ್ತುಗಳೇ ಮಧ್ಯವರ್ತಿಗಳ ದೆಸೆಯಿಂದ ಪೌರಕಾರ್ಮಿಕರಿಗೆ ತಲುಪುತ್ತಿಲ್ಲ. ಪ್ರಾಥಮಿಕ ಅಗತ್ಯವಾದ ಕೈಗವಚ, ಬೂಟು ಇತ್ಯಾದಿಗಳ ಹೆಸರಲ್ಲಿ ಮಧ್ಯವರ್ತಿಗಳು ಹಣವನ್ನು ದೋಚುತ್ತಾರೆ. ಲೆಕ್ಕ ಪುಸ್ತಕಗಳಲ್ಲಿ ಇವೆಲ್ಲವನ್ನು ನೀಡಿದ ದಾಖಲೆಗಳಿವೆ. ಆದರೆ ಕಾರ್ಮಿಕರಿಗೆ ಇವಾವುದೂ ತಲುಪಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಿಡಿತದಿಂದ ಪೌರಕಾರ್ಮಿಕರಿಗೆ ಮುಕ್ತಿ ಸಿಗಬೇಕಾಗಿದೆ. ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಮೃತಪಟ್ಟ ಕಾರ್ಮಿಕರನ್ನು ಅತ್ಯಂತ ಘನತೆಯಿಂದ ನಡೆಸಿ, ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರವನ್ನು ನಡೆಸುವ ಪರಿಪಾಠ ಆರಂಭವಾಗಬೇಕು. ಆಗ ಈ ಪೌರ ಕಾರ್ಮಿಕರ ಕೆಲಸದ ಮಹತ್ವ ಸಮಾಜವನ್ನು ತಲುಪಬಹುದು. ಪೌರ ಕಾರ್ಮಿಕರ ಕುಟುಂಬವನ್ನು ಜಾತಿಯ ನೆಲೆಯಲ್ಲಿ ನೋಡದೆ ಒಬ್ಬ ಸೇನಾನಿಯ ಕುಟುಂಬವನ್ನು ನೋಡಿದಂತೆ ಗೌರವದಿಂದ ನೋಡುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)