varthabharthi

ಸಂಪಾದಕೀಯ

ಚೌಕಿದಾರ್ ಬೆಂಬಲಕ್ಕೆ ನಿಂತ ಪಾಕಿಸ್ತಾನ!

ವಾರ್ತಾ ಭಾರತಿ : 11 Apr, 2019

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಮೋದಿಯ ಪರವಾಗಿ ನೀಡಿರುವ ಹೇಳಿಕೆಯೊಂದು ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದೆ. ‘‘ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು’’ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಮೋದಿಯ ಪಾಲಿಗೆ ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪ. ಕಳೆದ ಚುನಾವಣೆಯ ಸಂದರ್ಭದಲ್ಲಿ, ಯಾವ ಆಧಾರವೂ ಇಲ್ಲದೆ ಬಿಜೆಪಿಯು ‘ಮೋದಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಸಹಾಯ ಯಾಚಿಸಿದೆ’ ಎಂದು ಆರೋಪಿಸಿತ್ತು. ಇದೀಗ ನೋಡಿದರೆ, ಮೋದಿಯ ಆಯ್ಕೆಗಾಗಿ ಪಾಕಿಸ್ತಾನ ಬಹಿರಂಗವಾಗಿ ಕರೆ ನೀಡಿದೆ. ಮೋದಿ ಯಾಕೆ ಮರು ಆಯ್ಕೆಯಾಗಬೇಕು ಎನ್ನುವ ಇಮ್ರಾನ್ ಖಾನ್ ಮಾತು ತಳ್ಳಿ ಹಾಕುವಂತದ್ದೆೇನೂ ಅಲ್ಲ. ಭಾರತ-ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆ ಅಡೆತಡೆಯಿಲ್ಲದೆ ಮುಂದುವರಿಯಬೇಕಾದರೆ ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾದರೆ ಅನುಕೂಲ ಎನ್ನುವ ವಾದವನ್ನು ಅವರು ಮಂಡಿಸಿದ್ದಾರೆ. ಮೋದಿ ಆಯ್ಕೆಯಾಗುತ್ತಾರೆಯೋ ಇಲ್ಲವೋ, ಆದರೆ ಶಾಂತಿಮಾತುಕತೆಗಾಗಿ ಇಮ್ರಾನ್ ಅವರ ಹಂಬಲಿಕೆಯನ್ನು ನಾವು ಗೌರವಿಸ ಬೇಕಾಗುತ್ತದೆ. ಒಂದು ವೇಳೆ ಮೋದಿಯಲ್ಲದೆ, ಬೇರೆ ನಾಯಕರು ಪ್ರಧಾನಿಯಾಗಿ ಶಾಂತಿಮಾತುಕತೆ ನಡೆಸಿದರೆ ಅದನ್ನು ಮುಂದಿಟ್ಟು ಸಂಘಪರಿವಾರ ವಿರೋಧ ಪಕ್ಷಗಳನ್ನು ಹಣಿಯಬಹುದು. ಮೋದಿ ಪ್ರಧಾನಿಯಾದಲ್ಲಿ, ಅನಿವಾರ್ಯವಾಗಿ ಸಂಘಪರಿವಾರ ತಟಸ್ಥವಾಗಬೇಕಾಗುತ್ತದೆ ಎನ್ನುವುದು ಅವರ ತರ್ಕ. ಈ ತರ್ಕಕ್ಕೆ ಒಂದು ಹಿನ್ನೆಲೆಯೂ ಇದೆ. ಇತರ ರಾಜಕೀಯ ಪಕ್ಷಗಳು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಮುಂದಾದಾಗೆಲ್ಲ ಅದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ. ನಮ್ಮ ಸೈನಿಕರ ರುಂಡ ಕತ್ತರಿಸಿದ ಪ್ರಕರಣವನ್ನು ಬಿಜೆಪಿಯು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯವಿಷಯವನ್ನಾಗಿಸಿತು. ಪಾಕಿಸ್ತಾನದ ಶತ್ರುತ್ವವನ್ನು ಮುಂದಿಟ್ಟುಕೊಂಡೇ ಮತಯಾಚಿಸಿತು.

ಆದರೆ ಮೋದಿ ಪ್ರಧಾನಿಯಾದದ್ದೇ, ಪಾಕಿಸ್ತಾನದ ಅಂದಿನ ಪ್ರಧಾನಿ ನವಾಝ್ ಶರೀಫ್ ಅವರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಗಡಿಯಲ್ಲಿ ಉದ್ವಿಗ್ನ ವಾತಾವರಣವಿದ್ದಾಗ, ಪ್ರಧಾನಿ ಮೋದಿಯವರು ಅನಿರೀಕ್ಷಿತವಾಗಿ ನವಾಝ್ ಶರೀಫ್ ಅವರ ಮೊಮ್ಮಗಳ ಮದುವೆಯಲ್ಲಿ ಭಾಗವಹಿಸಿದರು. ಉಡುಗೊರೆಗಳನ್ನು ಕೊಟ್ಟು ಬಂದರು. ಬಿಜೆಪಿಯ ಕಾರ್ಯಕರ್ತರಾಗಲಿ, ಸಂಘಪರಿವಾರವಾಗಲಿ ಮೋದಿಯವರ ಈ ನಡೆಯನ್ನು ಖಂಡಿಸಲಿಲ್ಲ. ಇದೇ ಕೆಲಸವನ್ನು ಕಾಂಗ್ರೆಸ್ ಸರಕಾರವೆೆೇನಾದರೂ ಮಾಡಿದ್ದಿದ್ದರೆ ಸಂಘಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಬೀದಿ ರಂಪ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿಯೇತರ ಸರಕಾರಗಳು ಶಾಂತಿ ಮಾತುಕತೆಯ ಪ್ರಸ್ತಾವವಿಟ್ಟರೆ ಸಂಘಪರಿವಾರ ಮಾತುಕತೆ ಯಶಸ್ವಿಯಾಗಲು ಅವಕಾಶ ನೀಡದು ಎನ್ನುವುದು ಇಮ್ರಾನ್ ಖಾನ್ ಅವರ ದೂರದೃಷ್ಟಿ ಯುಳ್ಳ ಮಾತು. ಇದೇ ಸಂದರ್ಭದಲ್ಲಿ ಮೋದಿ ಭಾರತದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ಪಾಕಿಸ್ತಾನದ ಆಶಯಕ್ಕೆ ಇನ್ನೊಂದು ಆಯಾಮವನ್ನೂ ನೀಡಬಹುದು. ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಶಾಸ್ತ್ರಿಯಂತಹ ನಾಯಕರ ಕಾಲದಲ್ಲಿ ಭಾರತ ಆಧುನಿಕವಾಗಿ ಚಿಂತಿಸುತ್ತಿತ್ತು. ಈ ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ಅಭಿವೃದ್ಧಿಯಾಗುವುದರ ಹಿಂದೆ ನೆಹರೂರಂತಹ ನಾಯಕರ ದೂರದೃಷ್ಟಿಯಿತ್ತು. ‘ಬೃಹತ್ ಅಣೆಕಟ್ಟುಗಳೇ ಆಧುನಿಕ ಭಾರತದ ದೇವಾಲಯಗಳು’ ಎಂದು ನೆಹರೂ ಘೋಷಿಸಿದ್ದರು. ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ರೈತರು, ಸೈನಿಕರ ಯೋಗಕ್ಷೇಮದ ಕುರಿತಂತೆ ಶಾಸ್ತ್ರಿ ಚಿಂತಿಸಿದ್ದರು. ಭೂಸುಧಾರಣೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಕ್ರಾಂತಿಕಾರಿ ಯೋಜನೆಗಳ ಮೂಲಕ ಬಡವರ್ಗದ ಪರವಾಗಿ ಇಂದಿರಾಗಾಂಧಿ ಯೋಜನೆ ರೂಪಿಸಿದ್ದರು. ಆದರೆ ಮೋದಿ ಪ್ರಧಾನಿಯಾದ ದಿನದಿಂದ ಭಾರತ ಹಿಂದಕ್ಕೆ ಚಲಿಸುತ್ತಿದೆ. ಮೋದಿಯ ಹೆಸರಿನಲ್ಲಿ ಈ ದೇಶವನ್ನು ಕಳೆದ ನಾಲ್ಕು ವರ್ಷಗಳಿಂದ ಆಳುತ್ತಿರುವುದು ಅನಿಲ್ ಅಂಬಾನಿ, ಅದಾನಿಯಂತಹ ಉದ್ಯಮಿಗಳು.

ನೋಟು ನಿಷೇಧಂತಹ ಕ್ರಮಗಳಿಂದ ಭಾರತದ ಗ್ರಾಮೀಣ ಉದ್ಯಮ ಸಂಪೂರ್ಣ ಕುಸಿಯಿತು. ಭಾರತದ ಅಭಿವೃದ್ಧಿಗೆ ಭಾರೀ ಧಕ್ಕೆಯಾಗಿದೆ. ವಿಜ್ಞಾನ, ಆರೋಗ್ಯ ಕ್ಷೇತ್ರಗಳಿಗೆ ಹೂಡಬಹುದಾದ 3000 ಕೋಟಿ ರೂಪಾಯಿಗಳನ್ನು ತನ್ನ ‘ಭಾವನಾತ್ಮಕ ರಾಜಕೀಯ’ಕ್ಕೆ ಬಿಜೆಪಿ ಪೋಲು ಮಾಡಿತು. ಭಾರತದ ಅಭಿವೃದ್ಧಿಗೆ ಯಾವ ರೀತಿಯಲ್ಲೂ ಸಹಾಯ ಮಾಡದ ಕಂಚಿನ, ಅನುತ್ಪಾದಕ ಪ್ರತಿಮೆಯೊಂದಕ್ಕೆ ಸಹಸ್ರಾರು ಕೋಟಿ ರೂಪಾಯಿ ಚೆಲ್ಲಿದ ಮೋದಿ, ಮಗದೊಂದೆಡೆ ಪೋಲಿಯೊ ಲಸಿಕೆಗೆ ಹಣ ಸಾಲದೆ ವಿದೇಶದ ಮುಂದೆ ಕೈ ಚಾಚುವ ಮಟ್ಟಕ್ಕೆ ಇಳಿಯಿತು. ರೈತರ ಸಾಲಮನ್ನಾ ಮಾಡಲು ಸರಕಾರದ ಬಳಿ ಹಣವಿಲ್ಲ, ಆದರೆ ಶಿವಾಜಿ ಪಾರ್ಕಿಗಾಗಿ ಹೆಸರಲ್ಲಿ ಕೋಟ್ಯಂತರ ಹಣವನ್ನು ಚೆಲ್ಲಲು ಅದು ಸಿದ್ಧವಿದೆ. ಜನಸಾಮಾನ್ಯರ ಸಾಮಾಜಿಕ ಬದುಕನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿ, ಅವರನ್ನು ಭಾವನಾತ್ಮಕವಾಗಿ ಮರುಳು ಮಾಡುತ್ತಾ ಕಾಲ ಕಳೆಯಿತು. ಪರಿಣಾಮವಾಗಿ ದೇಶಾದ್ಯಂತ ನಿರುದ್ಯೋಗ ಹೆಚ್ಚಿದೆ. ಸಣ್ಣ ಉದ್ದಿಮೆಗಳು ನಾಶವಾಗಿವೆ. ‘ಹಾಲ್’ನಂತಹ ಸಂಸ್ಥೆಗಳು ರಿಲಯನ್ಸ್‌ಗಾಗಿ ಬಲಿಯಾಗಿವೆ. ಜಿಯೋ ಬಂತು, ನಮ್ಮದೇ ಬಿಎಸ್‌ಎನ್‌ಎಲ್ ನಾಶವಾಯಿತು. ಲಾಭದಾಯಕವಾಗಿದ್ದ ಸಾರ್ವಜನಿಕ ಸಂಸ್ಥೆಗಳನ್ನೆಲ್ಲ ಮೋದಿ ಸರಕಾರ ಒಂದೊಂದಾಗಿ ಮುಚ್ಚುತ್ತಾ ಬಂತು. ಮೋದಿ ಆಡಳಿತದಲ್ಲಿ ಭಾರತ ಆರ್ಥಿಕವಾಗಿ ಅರಾಜಕತೆಗೆ ತಲುಪಿರುವುದು ಪಾಕಿಸ್ತಾನದ ಗಮನಕ್ಕೆ ಬಂದಿದೆ. ತನ್ನ ‘ಶತ್ರು’ವೆಂದು ಗುರುತಿಸಲ್ಪಟ್ಟಿರುವ ಭಾರತವನ್ನು ಅಲ್ಲಿಯದೇ ನಾಯಕ ನಾಶ ಮಾಡಲು ಪಣ ತೊಟ್ಟಿರುವಾಗ ಆ ನಾಯಕನ ಬೆಂಬಲಕ್ಕೆ ಪಾಕಿಸ್ತಾನ ನಿಲ್ಲುವುದು ಸಹಜವೇ ಆಗಿದೆ.

ಮೋದಿಯನ್ನು ಪಾಕಿಸ್ತಾನ ಪ್ರೀತಿಸಲು ಇನ್ನೊಂದು ಕಾರಣವಿದೆ. ಭಾರತದಲ್ಲಿ ಯಾವ ರಾಜಕೀಯ ಪಕ್ಷಗಳೂ ಈವರೆಗೆ ಸೇನೆಯನ್ನು ರಾಜಕೀಕರಣಗೊಳಿಸಿರಲಿಲ್ಲ. ಮೊತ್ತ ಮೊದಲ ಬಾರಿಗೆ ಮೋದಿ ನೇತೃತ್ವದ ಸರಕಾರ ಸೇನೆಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತು. ಸೇನೆಯನ್ನು ದುರ್ಬಳಕೆಗೊಳಿಸಿದ್ದರಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕುಂದುಂಟಾಗಿದೆ. ಸೇನೆಯೊಳಗೆ ಹಿಂದುತ್ವವನ್ನು ತುರುಕಿಸುವ ಸಂಘಪರಿವಾರದ ಪ್ರಯತ್ನ, ಪಾಕಿಸ್ತಾನದ ಪಾಲಿಗೆ ಸಿಹಿ ವಿಷಯವಾಗಿದೆ. ಸೇನೆ ರಾಜಕೀಯಕ್ಕೆ ಕಾಲಿಡುವುದೆಂದರೆ, ಭವಿಷ್ಯದಲ್ಲಿ ಅದು ಸರಕಾರದೊಳಗೆ ಹಸ್ತಕ್ಷೇಪ ನಡೆಸುವುದೆಂದೇ ಅರ್ಥ. ಅಂದರೆ ಭಾರತವು ಮೋದಿ ನೇತೃತ್ವದಲ್ಲಿ ಪಾಕಿಸ್ತಾನವಾಗುವುದಕ್ಕೆ ಹೊರಟಿದೆ. ಮೋದಿ ಅವಧಿಯಲ್ಲಿ ವಿಜ್ಞಾನ ಬದಿಗೆ ಸರಿದು, ಅಲ್ಲಿಗೆ ಗೊಡ್ಡು ಪುರಾಣಗಳು ಬಂದು ಸೇರಿದವು. ಆರೋಗ್ಯ ಕ್ಷೇತ್ರಕ್ಕೆ ಸುರಿಯುವ ಹಣವನ್ನು ಪತಂಜಲಿಯಂತಹ ನಕಲಿ ಸಾಧುಗಳು ದೋಚಿದರು. ಗೋರಕ್ಷಕರ ಹೆಸರಲ್ಲಿ ಥಳಿತಗಳು ಹೆಚ್ಚಿವೆ. ವಿಭಜನೆಯ ರಾಜಕಾರಣ ಮುನ್ನೆಲೆಗೆ ಬಂದಿದೆ. ಪಾಕಿಸ್ತಾನಕ್ಕೂ ಬೇಕಾಗಿರುವುದು ಭಾರತ ಜಾತಿ, ಧರ್ಮದ ಹೆಸರಲ್ಲಿ ವಿಭಜನೆಯಾಗಬೇಕು ಎನ್ನುವುದಾಗಿರುವುದರಿಂದ, ಅವರ ಅಜೆಂಡಾಗಳನ್ನು ಜಾರಿಗೆ ತರುತ್ತಿರುವ ಮೋದಿಯನ್ನು ಅದು ಬೆಂಬಲಿಸುವುದು ಸಹಜ. ಭಾರತವನ್ನು ಸೋಲಿಸಬೇಕಾದರೆ ಅದನ್ನು ಇನ್ನೊಂದು ಪಾಕಿಸ್ತಾನವಾಗಿ ಬದಲಾಯಿಸಬೇಕು. ಅಂದರೆ, ಪಾಕಿಸ್ತಾನ ಹಸಿರು ಮೂಲಭೂತವಾದಿಗಳ ಕೈಗೆ ಸಿಕ್ಕಿದಂತೆಯೇ ಭಾರತ ಕೇಸರಿ ಮೂಲಭೂತವಾದಿಗಳ ಕೈಯಲ್ಲಿ ನರಳಬೇಕು. ಈ ಮೂಲಕ ಕಾಶ್ಮೀರವೂ ಸೇರಿದಂತೆ ದೇಶಾದ್ಯಂತ ಅರಾಜಕತೆ ಸೃಷ್ಟಿಯಾಗಬೇಕು. ಯಾವುದೇ ಖರ್ಚಿಲ್ಲದೆ ತನ್ನ ಶತ್ರು ರಾಷ್ಟ್ರವನ್ನು ಮೋದಿಯ ಮೂಲಕ ನಾಶ ಮಾಡಬಹುದು ಎಂದಾದರೆ ಪಾಕಿಸ್ತಾನ ಮೋದಿಯನ್ನು ಬೆಂಬಲಿಸದೇ ಇನ್ನೇನು ಮಾಡೀತು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)