varthabharthi


ಅನುಗಾಲ

ಚುನಾವಣೆಯೆಂದರೆ ಯುದ್ಧವೇ? ಸ್ಪರ್ಧೆಯೇ?

ವಾರ್ತಾ ಭಾರತಿ : 11 Apr, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸದ್ಯದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಇತರ ಯಾವ ನಾಯಕರಿಗೂ ಪಾತ್ರವಿಲ್ಲ. ಈಗಿನ ಪ್ರಚಾರ ಭರಾಟೆಯು ಮಾಸ್ಟರ್ ಹಿರಣ್ಯಯ್ಯನವರ ನಾಟಕಗಳಂತಿದೆ. ಅವರೊಬ್ಬರೇ ಮಾತನಾಡುವುದು; ಉಳಿದವರು ತಲೆಯಾಡಿಸುವುದು, ಇಲ್ಲವೇ ಹೌದು, ಅಲ್ಲ ಮತ್ತಿತರ ಚುಟುಕು ಮಾತುಗಳೊಂದಿಗೆ ವಾಕ್ಯಸಂಪರ್ಕಸೇತುವಿನಂತೆ ವರ್ತಿಸುವುದು. ಯಾವೊಬ್ಬ ಅಭ್ಯರ್ಥಿಗೂ ತನ್ನ ದುಡಿಮೆ, ಸೇವೆ, ಯೋಗ್ಯತೆ ಇವುಗಳ ಆಧಾರದಲ್ಲಿ ಮತ ಕೇಳುವ ಧೈರ್ಯವಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಮೋದಿಯ ಮುಖವಾಡವನ್ನು ಧರಿಸಿಯೇ ಮತಯಾಚಿಸುವ ದುರಂತ ಅನಿವಾರ್ಯ ಉಂಟಾಗಿದೆ.


ಶೀರ್ಷಿಕೆಯ ಪ್ರಶ್ನೆ ಉದ್ಭವಿಸಿರುವುದು ಈ ದೇಶದ ಪ್ರಧಾನಿಯವರ ವೀರೋಚಿತ ಮಾತುಗಳಿಂದ ಮತ್ತು ಕೆಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ರಣಕಹಳೆಯ ರೀತಿಲ್ಲಿ ಪ್ರಸಾರ ಮಾಡುತ್ತಿರುವ ಅಷ್ಟೇ ಉನ್ಮತ್ತ ವರದಿಗಳಿಂದ. ಇದಕ್ಕೆ ಪೂರಕವಾಗಿ ಕೆಲವು ಭಟ್ಟಂಗಿಗಳು ದೇಶಸೇವೆಯ ಹೆಸರಿನಲ್ಲಿ ಹಿಂಸೆಯನ್ನು, ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಆದರೆ ಇವೆಲ್ಲವೂ ಮೋದಿಯವರೆಂಬ ಏಕವ್ಯಕ್ತಿಕೇಂದ್ರಿತವೆಂದು ಬಗೆದರೆ ಇದರ ಹಿನ್ನೆಲೆ ಅರ್ಥವಾಗುತ್ತದೆ.

2014ಲ್ಲಿ ಮೋದಿ ಮೂಡಿಸಿದ ಸಂಚಲನ ವಿರೋಧ ಪಕ್ಷಗಳ ಮಾತ್ರವಲ್ಲ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರ ಜೀವಸತ್ವವನ್ನೇ ಹಿಂಡಿ ಹಿಪ್ಪೆಯಾಗಿಸುವಂತಿತ್ತು. ಇನ್ನು ದೇಶದ ಮತ್ತು ಪಕ್ಷದ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಮೋದಿಯ ಆರೋಗ್ಯದ ಬಗ್ಗೆ ಮಾತ್ರ ಚಿಂತಿಸಿದರೆ ಸಾಕು ಮತ್ತು ಎಲ್ಲಿಯ ವರೆಗೆ ಮೋದಿ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೋ ಅಲ್ಲಿಯ ವರೆಗೆ ಒಂದು ಗರಿಕೆ ಹುಲ್ಲೂ ಈ ದೇಶದಲ್ಲಿ ಹುಟ್ಟಲಾರದು ಎಂಬಷ್ಟು ಪ್ರಚಾರ ಅವರಿಗೆ ದೊರಕಿತ್ತು. ಮೋದಿ ನೀಡಿದ ಭರವಸೆಗಳು ಮತ್ತು ಅವರ ಮಾತಿನ ವರಸೆಗಳು ಶ್ರೀಸಾಮಾನ್ಯನಿಗೆ ಭಾರತ ಮುಂದಿನ ಐದು ವರ್ಷಗಳಲ್ಲಿ ವಿಶ್ವದಲ್ಲಿ ಒಂದನೆಯ ಸ್ಥಾನಕ್ಕೇರುತ್ತದೆಯೆಂಬ ವಿಶ್ವಾಸ ಮೂಡಿಸಿತು. 2014ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆಯನ್ನೇರುವ ವಿಶ್ವಾಸವಿರಲಿಲ್ಲ. ಆದ್ದರಿಂದಲೇ ಅದು ಇತರ ಅನೇಕ ಪ್ರಾದೇಶಿಕ ಮತ್ತು ಕಿರಿಯ ಪಕ್ಷಗಳೊಂದಿಗೆ ಮೈತ್ರಿರಂಗವನ್ನು ರೂಪಿಸಿತು. ಇಷ್ಟಾದರೂ ಅದು ‘ನ ಭೂತೋ ನ ಭವಿಷ್ಯತಿ’ ಎಂಬ ಬಹುಮತವನ್ನು ಪಡೆದಿರಲಿಲ್ಲ. ಇದಕ್ಕಿಂತ ಎಷ್ಟೋ ಹೆಚ್ಚು ಸಾಧನೆಯನ್ನು ಕಾಂಗ್ರೆಸ್ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕಾಲದಲ್ಲಿ ಮಾಡಿತ್ತು. (ಹಾಗೆ ನೋಡಿದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನೆಹರೂ ಯುಗವೂ ಇಷ್ಟು ಸಾಧನೆಯನ್ನು ಮಾಡಿರಲಿಲ್ಲ.) ಆದರೆ ಭಾಜಪದ ಗೆಲುವಿಗಿಂತಲೂ ಕಾಂಗ್ರೆಸಿನ ಸೋಲು ಯುಗಪರಿವರ್ತನೆಯನ್ನುಂಟುಮಾಡಿದೆಯೆಂದೇ 2014ರ ಚುನಾವಣಾ ಫಲಿತಾಂಶವು ಸಾರಿತ್ತು.

2019ರ ಚುನಾವಣೆಯು ಭಾರತೀಯ ಜನತಾ ಪಕ್ಷಕ್ಕೆ ಸುಲಭದ ಕಳವಳವಾಗಬೇಕಾಗಿತ್ತು. ಪ್ರಾಯಃ ಕಾಂಗ್ರೆಸ್ ಅಳಿದು ಹೋಗುತ್ತದೆಂದು ಭಾರತೀಯ ಜನತಾ ಪಕ್ಷವು ಇತರ ಯಾವ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯ ಉದ್ಭವಿಸದೆಂದು ರಾಜಕೀಯ ಪಂಡಿತರ ಲೆಕ್ಕಾಚಾರವಿತ್ತು; ಮೈತ್ರಿ ಪಕ್ಷಗಳಿಗೆ ಆತಂಕವಿತ್ತು. ಇಂದಿರಾ ಯುಗದ ಉತ್ತರಾರ್ಧದಲ್ಲಿ ಕಾಂಗ್ರೆಸಿನಲ್ಲಿ ಸೃಷ್ಟಿಯಾದ ಏಕವ್ಯಕ್ತಿ ರಾಜಕೀಯ 2014ರಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಸೃಷ್ಟಿಯಾಗಿತ್ತು. ಭಾರತೀಯ ಜನತಾ ಪಕ್ಷದಲ್ಲಿರುವ ಎಲ್ಲಾ ಸಂಸದರೂ ಹಿರಿಯ ಕಿರಿಯ ನಾಯಕರೂ ಮೋದಿಯ ತಾಳಕ್ಕೆ ಕುಣಿಯುವ ಅನಿವಾರ್ಯವುಂಟಾಗಿತ್ತು. ಭಾರತೀಯ ಜನತಾ ಪಕ್ಷದ ಯಾವುದೇ ಸಭೆಯಲ್ಲಿ ಸಚಿವರೂ ಸಂಸದರೂ ಸೇರಿದಂತೆ ಇತರ ನಾಯಕರು ವಿದ್ಯಾರ್ಥಿಗಳು ಶಿಕ್ಷಕರ ಮುಂದೆ ನಿಂತು ಗಿಣಿಪಾಠ ಒಪ್ಪಿಸಿದಂತೆ ಮೋದಿಯ ಮುಂದೆ ವರ್ತಿಸುತ್ತಿದ್ದರು. ಕಳೆದ ಐದು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷ ಇತರ ಯಾವುದೇ ಪಕ್ಷಗಳಿಗಿಂತಲೂ ಅಧಿಕವಾಗಿ ತನ್ನತನವನ್ನೂ ಪ್ರಜಾಪ್ರಭುತ್ವವನ್ನೂ ಕಳೆದುಕೊಂಡಿರುವುದು ನಿಚ್ಚಳವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಪಕ್ಷ ರಾಜಕಾರಣಕ್ಕೆ ಮಾರಕವಾಗುವಂತೆ ದೇಶದ ಹಾಗೂ ಅಂತರ್‌ರಾಷ್ಟ್ರೀಯ ಭೂಪಟದಲ್ಲಿ ಮೋದಿಯನ್ನು ನೆಲೆಗೊಳಿಸುವ ಪ್ರಯತ್ನವು ನಡೆಯಿತೇ ಹೊರತು ಭಾರತೀಯ ಜನತಾ ಪಕ್ಷವನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರೀ ಆತಂಕವನ್ನುಂಟುಮಾಡುವ ಹಿನ್ನಡೆಯನ್ನು ಭಾರತೀಯ ಜನತಾ ಪಕ್ಷವು ತಾನಾಗಿಯೇ ತಂದುಕೊಂಡಿತು.

ಆದರೆ ಈ ಅವಧಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತನ್ನ ಅಸ್ತಿತ್ವಕ್ಕೆ ಇದೊಂದು ಹಿನ್ನಡೆಯೆಂದು ಅನ್ನಿಸಲೇ ಇಲ್ಲ. ಏಕೆಂದರೆ 2004ರಲ್ಲಿ ಅಧಿಕಾರವನ್ನು ಕಳೆದು ಕೊಂಡ ಭಾರತೀಯ ಜನತಾ ಪಕ್ಷಕ್ಕೆ ಹೇಗಾದರೂ ಅಧಿಕಾರಕ್ಕೆ ಬರುವ ಮತ್ತು ಅದನ್ನು ಹೇಗಾದರೂ ಉಳಿಸಿಕೊಳ್ಳುವ ಗುರಿಯಿತ್ತೇ ವಿನಾ ಪ್ರಜಾಪ್ರಭುತ್ವದ ರಕ್ಷಣೆಯಲ್ಲ; ಜನಹಿತವಲ್ಲ. ಕಾಂಗ್ರೆಸ್ ಎಷ್ಟೇ ಅಶಕ್ತವಾದಾಗಲೂ ಅದು ತನ್ನ ರಾಷ್ಟ್ರವ್ಯಾಪಿ ಛಾಯೆಯನ್ನು ಬಿಟ್ಟುಕೊಡದಿರುವುದು ಸ್ಪಷ್ಟವಿದ್ದರೂ ಮೋದಿ ತಾನು ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಿಯೇ ಸಿದ್ಧ ಮತ್ತು ಕಾಂಗ್ರೆಸಿನ ಕುರಿತ ಟೀಕೆಯೇ ಜನರ ಆವಶ್ಯಕತೆ ಎಂಬ ಋಣಾತ್ಮಕ ರಾಜಕೀಯಕ್ಕೆ ಹೊರಟದ್ದೇ ಮೋದಿ ರಾಜಕೀಯದ ಬಹು ದೊಡ್ಡ ಲೋಪವೆಂದು ಕಾಣುತ್ತದೆ. (ಈಗ ಮೋದಿಯವರು ತಾನು ಕಾಂಗ್ರೆಸ್ ಮುಕ್ತ ಎಂದು ಹೇಳಿದ್ದು ಕಾಂಗ್ರೆಸ್ ಎಂಬ ಸಂಸ್ಕೃತಿಯ ಕುರಿತೇ ಹೊರತು ಪಕ್ಷದ ಕುರಿತಲ್ಲ ಮತ್ತು ಕಾಂಗ್ರೆಸ್ ಕೂಡಾ ಕಾಂಗ್ರೆಸ್ ಸಂಸ್ಕೃತಿಯಿಂದ ಹೊರಬರಬೇಕಿದೆ ಎಂದು ಹೇಳುತ್ತಿದ್ದಾರೆ!) ದೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಹೊರತಾಗಿ ಇನ್ಯಾವ ಪಕ್ಷಗಳಿಗೂ 2014ರ ವರೆಗೆ ರಾಷ್ಟ್ರೀಯ ಪಕ್ಷವೆಂದು ಕರೆಸಿಕೊಳ್ಳಬಲ್ಲ ಯೋಗ್ಯತೆಯಿರಲಿಲ್ಲ.

ಆದರೆ 2014ರಲ್ಲಿ ಅಧಿಕಾರಕ್ಕೆ ಬಂದದ್ದರಿಂದ ಭಾರತೀಯ ಜನತಾ ಪಕ್ಷವೂ ರಾಷ್ಟ್ರೀಯ ಪಕ್ಷವೆಂದು ಅನ್ನಿಸತೊಡಗಿತು. (ಚುನಾವಣಾ ಆಯೋಗವು ಮಾನ್ಯ ಮಾಡುವ ಅಂಕಿ-ಅಂಶಗಳು ಬೇರೆಯೇ ಇವೆ. ಅವು ಕಾಯ್ದೆ ಪುಸ್ತಕದ ಬದನೆಕಾಯಿಗಳೇ ಹೊರತು ಜನಮಾನಸದ ಮಡಕೆಯಲ್ಲಿ ಬೇಯುವವಲ್ಲ!) 2014ರ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಉತ್ತರ ಭಾರತದ ಕೆಲವು ದೊಡ್ಡ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಗೆದ್ದ ಸ್ಥಾನಗಳು ಅದನ್ನು ಬಹುಮತಕ್ಕೆ ಕೊಂಡೊಯ್ಯುವಲ್ಲಿ ಅನ್ನುವುದಕ್ಕಿಂತಲೂ ಮೋದಿಯನ್ನು ಪ್ರಧಾನಿಯಾಗಿಸುವಲ್ಲಿ ಸಫಲವಾದವು. ಯುಗಪರಿವರ್ತನೆಯ ಚುನಾವಣೆಯೆಂದು ಬಿಂಬಿತವಾದ ಈ ಚುನಾವಣೆ ನಡೆದ ಕೆಲವು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಶೂನ್ಯ ಸಂಪಾದನೆಯನ್ನು ಮಾಡಿದ್ದು ಈ ವೈಭವೋಪೇತ ಗೆಲುವಿನ ಪ್ರಭೆಯೆದುರು ಮಂಕಾಗಿ ಕಾಣಿಸದಾಯಿತು. ಕಳೆದ ಅವಧಿಯಲ್ಲಿ ಈ ನಿರ್ವಾತವನ್ನು ಹೋಗಲಾಡಿಸಲು ಮೋದಿ ಯಾವ ರಚನಾತ್ಮಕ ಪ್ರಯತ್ನವನ್ನೂ ಮಾಡಿಲ್ಲ. ಬದಲಾಗಿ, ದೇವರು, ಧರ್ಮ, ಮತ, ಜಾತಿ ಮುಂತಾದ ಭಾವಾವೇಶದ ಅಂಶಗಳನ್ನೇ ಬಿತ್ತಿ ಒಂದಷ್ಟು ಮಂದಿಗೆ ಭ್ರಮೆ ಹುಟ್ಟಿಸಲು ಯಶಸ್ವಿಯಾಯಿತೇ ವಿನಾ ತನ್ನನುಕೂಲದ ಬೆಳೆಗೆ ಹೊಲವನ್ನು ಹಸನುಗೊಳಿಸಲು ಸಾಧ್ಯವಾಗಿಲ್ಲ. ನೋಟುಗಳ ಅಮಾನ್ಯೀಕರಣದಂತಹ ಭಾರೀ ವಿತ್ತನೀತಿಗಳು ಅವಸರದ ಅರ್ಥಶಾಸ್ತ್ರವಾಯಿತೇ ಹೊರತು ಅರಿವಿನ ಅನುಷ್ಠಾನವಾಗಲಿಲ್ಲ.

ಪಾಕಿಸ್ತಾನವನ್ನು ಗುಮ್ಮನಂತೆ ಚಿತ್ರಿಸುವಲ್ಲಿ ಮೋದಿ ಜನರಲ್ಲಿ ಆತಂಕವನ್ನು ಉಂಟುಮಾಡಿ ತಾನೇ ಜಗದ್ರಕ್ಷಕನೆಂಬಂತೆ ಮೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಿಲ್ಲವೆಂಬುದು ಅವರಿಗೇ ಅರಿವಾದಂತಿದೆ. ಅವರ ಕೆಲವು ಒಲವಿನ ಒಳರಂಗದ ವ್ಯಕ್ತಿಗಳು ಭಟ್ಟಂಗಿತನವನ್ನು ಮೆರೆದು ತಮ್ಮ ಅಧಿಕಾರವನ್ನು ಮುಂದುವರಿಸಿಕೊಳ್ಳಲು ಸಫಲರಾದರೇ ವಿನಾ ಪಕ್ಷದ ಘನತೆಯನ್ನು ವಿಸ್ತರಿಸುವಲ್ಲಿ ವಿಫಲರಾದರು. ಇದರಿಂದಾಗಿ ಅಳಿದುಹೋಗುತ್ತದೆಂದು ನಿರೀಕ್ಷಿಸಲಾಗಿದ್ದ ಕಾಂಗ್ರೆಸ್ ಉಪಾಂತ್ಯವೆಂದು ಬಿಂಬಿಸಲಾದ ಐದು ರಾಜ್ಯಗಳ ಚುನಾವಣೆಯೆಂಬ ಒಂದು ಮಳೆ ಬಂದದ್ದೇ ತಡ, ಚಿಗುರಿ ಈ ಪೈಕಿ ಮೂರು ರಾಜ್ಯಗಳ ಅಧಿಕಾರವನ್ನು ತನ್ನದಾಗಿಸಿಕೊಂಡಿತು. ಇದು ಅನಿರೀಕ್ಷಿತವಾಗಿಯೇನೂ ಇರಲಿಲ್ಲ. ಮೋದಿ ಕಾಂಗ್ರೆಸನ್ನು ಟೀಕಿಸುವುದನ್ನು ಗಮನಿಸಿದ್ದರೆ ಅವರ ನೈಜ ಆತಂಕ ಕಾಂಗ್ರೆೆಸ್ ಪಕ್ಷವೇ ಎಂದು ಅರ್ಥವಾಗುತ್ತಿತ್ತು. ರಾಜಕಾರಣದ ಅನುಭವವೇ ಇಲ್ಲದ ಮತ್ತು ಚೆಲ್ಲಾಪಿಲ್ಲಿಯಾಗಿ ವಿಚ್ಛಿದ್ರಗೊಳ್ಳಬಹುದಾಗಿದ್ದ ಕಾಂಗ್ರೆಸ್ ಪಕ್ಷದ ನಾಮ್ ಕಾ ವಾಸ್ತೇ ನಾಯಕರಾಗಿದ್ದ ರಾಹುಲ್ ಗಾಂಧಿಯನ್ನು ಅಳಿವು-ಉಳಿವಿನ ರಾಜಕೀಯದ ಅನಿವಾರ್ಯಕ್ಕೆಳೆದು ತಂದು ತನ್ನ ಪ್ರತಿಸ್ಫರ್ಧಿಯ ಹಂತಕ್ಕೇರಿಸಿದ್ದು ಮೋದಿಯ ಬಹುದೊಡ್ಡ ಸಾಧನೆಗಳಲ್ಲೊಂದು. ಇದಕ್ಕಿಂತ ಮೊದಲು ನಡೆದ ಗುಜರಾತ್, ಗೋವಾ, ಕರ್ನಾಟಕ ಮುಂತಾದ ಚುನಾವಣೆಗಳಲ್ಲೂ ಕಾಂಗ್ರೆಸ್ ಗಣನೀಯ ಗೆಲುವನ್ನು ಸಂಪಾದಿಸಿದರೂ ಅದನ್ನು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದ ಒಳದಾರಿಗಳ ಮೂಲಕ ಸೋಲಿಸಿ ಅಧಿಕಾರ ಹಿಡಿಯಲು ಯತ್ನಿಸಿದಾಗ ಮೋದಿ ತನ್ನ ಅನಿರೀಕ್ಷಿತ ಸೋಲಿನ ಕಾರಣಗಳನ್ನು ಹುಡುಕಬೇಕಾಗಿತ್ತು. ಆದರೆ ಅಧಿಕಾರಾನ್ವೇಷಣೆಯ ಅವಸರದಲ್ಲಿ ಮೋದಿಯವರಿಗೆ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕೆಂದು ಅನ್ನಿಸಲೇ ಇಲ್ಲ. ಇದರಿಂದಾಗಿ ಹೊಟ್ಟೆ ಬೆಳೆಯಿತೇ ವಿನಾ ಒಳಗಿನ ಆರೋಗ್ಯವಲ್ಲ.

 ಜೊತೆಗೇ ಮೋದಿ ಪ್ರಾದೇಶಿಕ ಪಕ್ಷಗಳ ಕುರಿತು ವಿಪರೀತ ಅಸಡ್ಡೆ ಮತ್ತು ನಿರ್ಲಕ್ಷ್ಯವನ್ನು ತೋರಿದರು. ಮಾಯಾವತಿ, ಮಮತಾ ಮತ್ತಿತರ ನಾಯಕ (ನಾಯಕಿ!) ರ ಸಾಮರ್ಥ್ಯವನ್ನು ಟೀಕಿಸುವಲ್ಲಿ ಅವರು ದೇಶದ ಪ್ರಧಾನಿಯ ಘನತೆಯ ಮಟ್ಟವಿರಲಿ, ಒಂದು ಗ್ರಾಮ ಪಂಚಾಯತ್‌ನ ಮಟ್ಟವನ್ನೂ ಏರಲಿಲ್ಲ. ಕೀಳಾಗಿ ವರ್ತಿಸಿದರೆ ವಿರೋಧ ಪಕ್ಷಗಳಿಗೇನೂ ದೋಷವುಂಟಾಗುವುದಿಲ್ಲ. ಆದರೆ ಅಧಿಕಾರಸ್ಥರಿಗೆ ಅದೇ ತಿರುಗೇಟು ನೀಡುತ್ತದೆ.

ಇದೆಲ್ಲದರ ನೆರಳು 2019ರ ಚುನಾವಣೆಯಲ್ಲಿ ಕಾಣುತ್ತದೆ. ಇತರ ಪಕ್ಷಗಳನ್ನು ಬಿಟ್ಟು ಚುನಾವಣೆಯನ್ನೆದುರಿಸುವ ಧೈರ್ಯ ಮತ್ತು ಸಾಮರ್ಥ್ಯ ತನಗಿಲ್ಲವೆಂದು ಮೋದಿ ಕಾರ್ಯತಃ ಒಪ್ಪಿಕೊಂಡಿದ್ದಾರೆ. ರಾಜಕೀಯದಲ್ಲಿ ಔದಾರ್ಯದ ಪ್ರಶ್ನೆಯಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಆದ್ದರಿಂದಲೇ ನಿತೀಶ್‌ಕುಮಾರ್ ಚುನಾವಣಾ ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಸಮಾನತೆಯನ್ನು ಸಂಪಾದಿಸಿದ್ದು; ಅಣ್ಣಾ ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಿರಿಯಣ್ಣನಾದದ್ದು; ಮೊನ್ನೆಯ ವರೆಗೂ ಸಮಾಜವಾದಿ ಪಕ್ಷದಲ್ಲಿದ್ದ ನಟಿ ಜಯಪ್ರದ ಪಕ್ಷಾಂತರಗೊಂಡ ತಕ್ಷಣವೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದದ್ದು. 2014ರ ಅಬ್ಬರ ಮತ್ತು ಉಬ್ಬರವನ್ನು ಉಳಿಸಿಕೊಳ್ಲಲಾಗಿಲ್ಲವೆಂಬ ವ್ಯಥೆ ಮೋದಿಯವರನ್ನು ಕಾಡುತ್ತಲೇ ಇದೆಯೆಂದು ಅವರ ನಡೆ-ನುಡಿಯಿಂದ ಗೊತ್ತಾಗುತ್ತದೆ. ಭಾಷಣ ಮತ್ತು ಘೋಷಣೆಗಳ ಅಲಂಕಾರದಿಂದ ಜನರನ್ನು ಆಕರ್ಷಿಸಲು ಸಾಧ್ಯವಿಲ್ಲವೆಂಬುದು ಅವರಿಗೆ ಮನದಟ್ಟಾಗಿದ್ದರೂ ಅದರ ಹೊರತಾದ ದಾರಿಗಳನ್ನು ಅವರೇ ಮುಚ್ಚಿಕೊಂಡಿದ್ದಾರೆ. ಇದನ್ನು ಅವರ ಭಾವಾವೇಷದ ಧಾಟಿಯಿಂದ ಗೊತ್ತುಮಾಡಿಕೊಳ್ಳಬಹುದು.

ಪುಲ್ವಾಮದಂತಹ ಘಟನೆಗಳು ನಮ್ಮ ಸೈನ್ಯಶಕ್ತಿಗೆ ಜಾಹೀರಾತಾಗಬಹುದೇ ಹೊರತು ಪ್ರಧಾನಿಗಲ್ಲ. ಆದರೆ ಮೋದಿ ಮತದಾರರಲ್ಲಿ ಅವರ ಪ್ರಥಮ ಪ್ರಾಶಸ್ತ್ಯದ ಮತ ಸೈನಿಕರಿಗೆ ಎಂಬಂತೆ ಮಾತನಾಡಿ ಗೂಢಾರ್ಥದಲ್ಲಿ ಅದಕ್ಕೆ ತಾನೇ ಕಾರಣವೆಂದು ತನ್ನ ಕೈಗಳನ್ನು ನೀಳವಾಗಿಸಿ ತಮ್ಮ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ಸದ್ಯದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಇತರ ಯಾವ ನಾಯಕರಿಗೂ ಪಾತ್ರವಿಲ್ಲ. ಈಗಿನ ಪ್ರಚಾರ ಭರಾಟೆಯು ಮಾಸ್ಟರ್ ಹಿರಣ್ಯಯ್ಯನವರ ನಾಟಕಗಳಂತಿದೆ. ಅವರೊಬ್ಬರೇ ಮಾತನಾಡುವುದು; ಉಳಿದವರು ತಲೆಯಾಡಿಸುವುದು, ಇಲ್ಲವೇ ಹೌದು, ಅಲ್ಲ ಮತ್ತಿತರ ಚುಟುಕು ಮಾತುಗಳೊಂದಿಗೆ ವಾಕ್ಯಸಂಪರ್ಕಸೇತುವಿನಂತೆ ವರ್ತಿಸುವುದು. ಯಾವೊಬ್ಬ ಅಭ್ಯರ್ಥಿಗೂ ತನ್ನ ದುಡಿಮೆ, ಸೇವೆ, ಯೋಗ್ಯತೆ ಇವುಗಳ ಆಧಾರದಲ್ಲಿ ಮತ ಕೇಳುವ ಧೈರ್ಯವಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಮೋದಿಯ ಮುಖವಾಡವನ್ನು ಧರಿಸಿಯೇ ಮತಯಾಚಿಸುವ ದುರಂತ ಅನಿವಾರ್ಯ ಉಂಟಾಗಿದೆ. ದೇಶದ ಅಷ್ಟೂ ಸ್ಥಾನಗಳ ಚುನಾವಣೆಯು ಮೋದಿ ವರ್ಸಸ್ (ವಿರುದ್ಧ) ಇತರ ಪಕ್ಷಗಳು ಎಂಬಂತಾಗಿದೆ. ಇದು ಮೋದಿಯವರಿಗೂ ಗೊತ್ತು; ಪ್ರತಿಪಕ್ಷಗಳಿಗೂ ಗೊತ್ತು.

ಇದರಿಂದಾಗಿ ಪ್ರಕೃತ ಭಾರತೀಯ ಜನತಾ ಪಕ್ಷವು ಚುನಾವಣೆಯಲ್ಲಿ ಸ್ಫರ್ಧಿಸುತ್ತಿಲ್ಲವೆಂಬಂತಹ ಸನ್ನಿವೇಶ ಸೃಷ್ಟಿಯಾಗಿದೆ. ಪಕ್ಷದ ಹೆಸರಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯನ್ನನುಭವಿಸುತ್ತಿದೆ. ಭಾರತೀಯ ಜನತಾ ಪಕ್ಷಕ್ಕೆ ಮತ್ತು ಮೋದಿಗಿರುವ ನಿಜವಾದ ಉದ್ದೇಶ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೇರಿಸುವುದಲ್ಲ; ಮೋದಿ ಮತ್ತೆ ಪ್ರಧಾನಿಯಾಗುವುದು. ಪಕ್ಷ ಈ ಅಧಿಕಾರದ ನೆಪ ಮತ್ತು ಮೆಟ್ಟ್ಟಿಲು ಮಾತ್ರ. ಆದ್ದರಿಂದಲೇ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಸಿಬಿಐ, ಆರ್‌ಬಿಐ, ಆಯಕರ ಇಲಾಖೆ ಕೊನೆಗೆ ಚುನಾವಣಾ ಆಯೋಗದಂತಹ ಸ್ವಾಯತ್ತ ಸರಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದ್ದರೂ, ಪ್ರಧಾನಿ ಪೀಠಕ್ಕೆ ತಕ್ಕುದಲ್ಲದ ಯುದ್ಧೋನ್ಮಾದವನ್ನು ಮೋದಿ ಪ್ರಕಟಪಡಿಸುತ್ತಿದ್ದರೂ ಅವರದೇ ಪಕ್ಷ ಸುಮ್ಮನಿದೆ. ಅಡ್ವಾಣಿಯಂತಹವರು ಭಾಜಪದ ನೀತಿಯನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಭಾವಿಸಬಾರದೆಂದು ಹೇಳಿದರೂ, ದೇಶ ಮೊದಲು, ಪಕ್ಷ ಆನಂತರ, ತಾನು ಕೊನೆಗೆ ಎಂದು ಹೇಳಿದರೂ ಅದು ಮಹಾಭಾರತದ ವ್ಯಾಸರ ಕೊನೆಯ ಹತಾಶ ಮಾತುಗಳಾಗಿವೆಯೇ ವಿನಾ ಮೋದಿಯವರ ತಾನು ಮೊದಲು, ಪಕ್ಷ ಆನಂತರ, ದೇಶ ಕೊನೆಗೆ ಎಂಬ (ಅ)ನೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)