ವಿವಿಧ ಹುದ್ದೆಗಳ ಭರ್ತಿಗೆ ಕುಸ್ತಿ ಒಕ್ಕೂಟ ನಿರ್ಧಾರ
2020ರ ಒಲಿಂಪಿಕ್ಸ್ ಗೆ ಪೂರ್ವಸಿದ್ಧತೆ
ಹೊಸದಿಲ್ಲಿ, ಎ.11: ಮುಂಬರುವ 2020ರ ಒಲಿಂಪಿಕ್ಗೆ ಸಿದ್ಧತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಕುಸ್ತಿ ಒಕ್ಕೂಟವು (ಡಬ್ಲುಎಫ್ಐ) ಗುರುವಾರ ಮಾನಸಿಕ ಸ್ಥಿತಿ ಸುಧಾರಣಾ ಕೋಚ್, ಫಿಸಿಯೊ ಹಾಗೂ ನ್ಯೂಟ್ರಿಶನ್ ತಜ್ಞರು ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಪುರುಷರ ಫ್ರೀಸ್ಟೈಲ್, ಗ್ರೀಕೊ ರೋಮನ್ ಹಾಗೂ ಮಹಿಳಾ ತಂಡ ಈ ಮೂರು ವಿಭಾಗಗಳಲ್ಲಿ ಸಹಾಯಕ ಸಿಬ್ಬಂದಿಯನ್ನು ಹೆಚ್ಚಿಸಲು ಒಕ್ಕೂಟ ನಿರ್ಧರಿಸಿದೆ.
ಈ ವಿಷಯ ದೃಢಪಡಿಸಿರುವ ಡಬ್ಲುಎಫ್ಐ, ರಾಷ್ಟ್ರೀಯ ತಂಡಕ್ಕೆ ವೃತ್ತಿಪರ ವ್ಯವಸ್ಥಾಪಕರನ್ನು ನೇಮಿಸಲಾಗುವುದು’’ ಎಂದೂ ಹೇಳಿದೆ. ಟಾಟಾ ಮೋಟರ್ಸ್ ಹಾಗೂ ತನ್ನ ವಾಣಿಜ್ಯ ಪಾಲುದಾರ ಸ್ಪೋರ್ಟಿ ಸೋಲುಶನ್ಸ್ ಗಳ ಸಹಯೋಗದೊಂದಿಗೆ ಡಬ್ಲುಎಫ್ಐ ಈಗಾಗಲೇ ಎಲ್ಲ ವಯಸ್ಸು ವಿಭಾಗಗಗಳ ಪ್ರಮುಖ ಕುಸ್ತಿಪಟುಗಳಿಗೆ ವಾರ್ಷಿಕ ಗುತ್ತಿಗೆ ಅಲ್ಲದೆ ಆಯ್ಕೆಯಾದ ಜೂನಿಯರ್ ಅಥ್ಲೀಟ್ಗಳಿಗೆ ಸ್ಟೈಪಂಡ್ನ್ನು ನೀಡುತ್ತಿದೆ.
ಉದ್ಯೋಗಿಗಳ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಡಬ್ಲುಎಫ್ಐ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ‘‘2020ರ ಒಲಿಂಪಿಕ್ ಗೇಮ್ಸ್ ಗಮನದಲ್ಲಿಟ್ಟುಕೊಂಡು ಆಟಗಾರರನ್ನು ತಯಾರುಗೊಳಿಸುವ ಉದ್ದೇಶದಿಂದ ಈ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪರಿಣತ ತರಬೇತುದಾರರು ಒಲಿಂಪಿಕ್ಸ್ ಸಿದ್ಧತಾ ಶಿಬಿರಗಳಲ್ಲಿ ಆಟಗಾರರೊಂದಿಗೆ ವೃತ್ತಿ ನಿರ್ವಹಿಸಲಿದ್ದಾರೆ’’ ಎಂದು ತಿಳಿಸಿದ್ದಾರೆ.