varthabharthi

ಸಂಪಾದಕೀಯ

ನರೇಗಾ ಕಾರ್ಮಿಕರ ಬದುಕು ಅವ್ಯವಸ್ಥೆಯ ನರಕವಾಗದಿರಲಿ

ವಾರ್ತಾ ಭಾರತಿ : 13 Apr, 2019

ಕೆಲವೊಮ್ಮೆ ಗುಡ್ಡ ಕುಸಿತ ಸುದ್ದಿಯಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಗುಡ್ಡ ಕುಸಿದು ಕಾರ್ಮಿಕರು ಸತ್ತರೆ ಸುದ್ದಿಯಾಗುವುದಿಲ್ಲ. ಈ ದೇಶದಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿರುವ ಕಟ್ಟಡಗಳಲ್ಲಿ ಕಾರ್ಮಿಕರ ಬೆವರು ಮಾತ್ರ ಅಂಟಿಕೊಂಡಿರುವುದಲ್ಲ, ಅವರ ರಕ್ತವೂ ಮೆತ್ತಿಕೊಂಡಿದೆ. ಗುಡ್ಡ ಕುಸಿದು ಜೀವಂತ ಸಮಾಧಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕರ ಸಾವು ಇವುಗಳು ಪ್ರತಿದಿನ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ತದನಂತರದ ವಿವರಗಳು ಸಿಕ್ಕುವುದೇ ಇಲ್ಲ. ಈ ಕಟ್ಟ ಡ ಕಾರ್ಮಿಕರಲ್ಲಿ ಬಹುತೇಕ ಮಂದಿ ಅಸಂಘಟಿತ ವಲಯಕ್ಕೆ ಸೇರಿದವರು. ಆದುದರಿಂದ ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕುವುದು ತೀರಾ ಕಡಿಮೆ. ಇವರಿಗಾಗಿ ಹೋರಾಟ ಮಾಡುವವರಾಗಲಿ, ಗುತ್ತಿಗೆದಾರರ ಜುಟ್ಟು ಹಿಡಿದು ಪರಿಹಾರ ಕೇಳುವವರಾರೂ ಇಲ್ಲದಿರುವುದರಿಂದ ಕೊಟ್ಟ ಹಣವನ್ನು ಪಡೆದುಕೊಂಡು ಸಂಬಂಧಿಕರು ಮರಳಿ ಊರು ಸೇರುತ್ತಾರೆ. ಇತ್ತೀಚೆಗೆ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ವೈ.ತಿಪ್ಪಗುಟ್ಟ ಗ್ರಾಮದಲ್ಲಿ, ನರೇಗಾ ಕಾಮಗಾರಿಯ ಸ್ಥಳದಲ್ಲಿ ಬುಧವಾರ ದಿಬ್ಬ ಕುಸಿದು 10 ಮಂದಿ ಜೀವಂತ ಸಮಾಧಿಯಾದರು. ಹೀಗೆ ಸಮಾಧಿಯಾದವರೆಲ್ಲರೂ ಮಹಿಳಾ ಕಾರ್ಮಿಕರು.

ವಿಶೇಷವೆಂದರೆ ಇವರು ನರೇಗಾ ಯೋಜನೆಯ ಕಾರ್ಮಿಕರು. ಘಟನೆ ನಡೆದಿರುವುದು ಕೆಲಸ ನಡೆಯುವ ಸಂದರ್ಭದಲ್ಲಿ ಅಲ್ಲ. ಅವರು ಗುಡ್ಡದ ತಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಗುಡ್ಡ ಅವರ ಮೇಲೆ ಕುಸಿದಿದೆ. ಘಟನೆಯಲ್ಲಿ 10 ಮಂದಿ ಕಾರ್ಮಿಕ ಮಹಿಳೆಯರು ಜೀವಂತ ಸಮಾಧಿಯಾದರೆ, ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನರೇಗಾ ಯೋಜನೆಯಡಿ ಕಂದಕವೊಂದನ್ನು ನಿರ್ಮಿಸುವ ಕಾಮಗಾರಿಯಲ್ಲಿ ಅವರು ತೊಡಗಿದ್ದರು. ಬಿರುಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಈ ಮಹಿಳಾ ಕಾರ್ಮಿಕರು, ಬೆಟ್ಟದ ತಪ್ಪಲಿನ ಬುಡದಲ್ಲಿ ನೆರಳಿನಲ್ಲಿ ವಿಶ್ರಮಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಇಂದು ನರೇಗಾ ಕಾರ್ಮಿಕರು ಎಂತಹ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ, ಎಲ್ಲೆಲ್ಲಿಂದಲೋ ವಲಸೆ ಬಂದ ಕಾರ್ಮಿಕರನ್ನು ಸಂಬಂಧಪಟ್ಟವರು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶವನ್ನು ಈ ದುರಂತ ಬಹಿರಂಗಪಡಿಸಿದೆ. ಗುಡ್ಡದ ಒಂದು ಭಾಗವನ್ನು ಕೆಲವು ವರ್ಷಗಳ ಹಿಂದೆ ನಡೆದ ಕಾಮಗಾರಿಯೊಂದರ ವೇಳೆ ಜೆಸಿಬಿಯಿಂದ ಕೊರೆದುಹಾಕಲಾಗಿತ್ತು. ಸಮರ್ಪಕ ನೆರಳಿನ ಕೊರತೆಯಿಂದಾಗಿ ನರೇಗಾ ಕಾರ್ಮಿಕರು ಕೆಲವು ತಿಂಗಳುಗಳಿಂದ ಈ ಸ್ಥಳವನ್ನು ವಿಶ್ರಾಂತಿಯ ಸ್ಥಳವಾಗಿ ಬಳಸಿಕೊಳ್ಳುತ್ತಿದ್ದರು.

ತೆಲಂಗಾಣದಲ್ಲಿ ಹಲವು ವರ್ಷಗಳಿಂದ ದಲಿತ ಬಹುಜನ ರಂಗ ಮತ್ತಿತರ ಮಾನವಹಕ್ಕು ಸಂಘಟನೆಗಳು , ನರೇಗಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆಗಾಗಿ ಪ್ಲಾಸ್ಟಿಕ್ ಶೀಟ್‌ಗಳ ಬದಲಿಗೆ ಬಟ್ಟೆ ಶಾಮಿಯಾನಗಳನ್ನು ಒದಗಿಸುವಂತೆ ಆಗ್ರಹಿಸುತ್ತಾ ಬಂದಿವೆ. ಪ್ಲಾಸ್ಟಿಕ್‌ಶೀಟ್‌ಗಳಿಂದ ನೆರಳು ದೊರೆಯಲು ಸಾಧ್ಯವಿಲ್ಲ. ಬದಲಿಗೆ ಅವುಗಳಿಂದ ಸೆಕೆ ಇನ್ನಷ್ಟು ಉಲ್ಬಣಿಸುತ್ತದೆ. ಹೀಗಾಗಿ ಕಾರ್ಮಿಕರು ಅವುಗಳನ್ನು ಬೇಸಿಗೆಯ ಕಾಲದಲ್ಲಿ ಬಳಸಿಕೊಳ್ಳಲು ಒಪ್ಪುವುದಿಲ್ಲ. ಕೆಲವೆಡೆ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಪ್ಲಾಸ್ಟಿಕ್‌ಶೀಟ್‌ಗಳನ್ನು ಕೂಡಾ ಒದಗಿಸದಿರುವುದರಿಂದ ಅವರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತದೆ. ನರೇಗಾ ಕಾರ್ಮಿಕರನ್ನು ಮೂಲಭೂತ ಸೌಕರ್ಯಗಳು ಹಾಗೂ ಸುರಕ್ಷತಾ ವ್ಯವಸ್ಥೆಯನ್ನು ಒದಗಿಸದೆಯೇ ದುಡಿಸಲಾಗುತ್ತಿದ್ದು, ಇದು ಕಾರ್ಮಿಕರ ಮಾನವಹಕ್ಕುಗಳ ಉಲ್ಲಂಘನೆಯ ಘೋರ ಕೃತ್ಯವಾಗಿದೆ. ಜೊತೆಗೆ ಇಂತಹ ಅವ್ಯವಸ್ಥೆ ಅವರನ್ನು ಇನ್ನಷ್ಟು ಭೀಕರ ದುರಂತಗಳಿಗೆ ದೂಡುತ್ತದೆ ಎನ್ನುವುದನ್ನು ತೆಲಂಗಾಣ ಘಟನೆ ಹೇಳಿದೆ. ತೆಲಂಗಾಣದಲ್ಲಿ ನರೇಗಾ ಕಾರ್ಮಿಕರ ದಾರುಣ ಸಾವಿನ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ನರೇಗಾ ಸಂಘರ್ಷ ಮೋರ್ಚಾವು ಆಗ್ರಹಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ಧನ ನೀಡುವಂತೆಯೂ ಆಗ್ರಹಿಸಿದೆ. ಇದರ ಜೊತೆಗೆ ಕಾರ್ಮಿಕರ ಕುಟುಂಬಗಳಿಗೆ ತಕ್ಷಣವೇ ನರೇಗಾದ ಶೆಡ್ಯೂಲ್ ಐಐರ ಸೆಕ್ಷನ್ 26ರಲ್ಲಿ ಪ್ರಸ್ತಾವಿಸಲಾಗಿರುವ ಎಲ್ಲಾ ಸವಲತ್ತುಗಳು ಹಾಗೂ ಹಕ್ಕುಗಳನ್ನು ಒದಗಿಸಬೇಕೆಂದು ಅದು ಪಟ್ಟುಹಿಡಿದಿದೆ.

    ನರೇಗಾ ಕಾಮಗಾರಿ ನಡೆಯುವ ಪ್ರತಿಸ್ಥಳದಲ್ಲೂ ಬಟ್ಟೆಯ ಡೇರೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಹಾಗೂ ದುಡಿಯುವ ಸ್ಥಳದಲ್ಲಿ ನರೇಗಾ ಕಾರ್ಮಿಕರಿಗೆ ನೀಡಲಾಗುವ ಸೌಲಭ್ಯಗಳು ಹಾಗೂ ಹಕ್ಕುಗಳ ಬಗ್ಗೆ ಪೂರ್ಣ ಮಟ್ಟದ ಪರಿಶೀಲನೆಯಾಗಬೇಕಿದೆ. ಘಟನೆಗೆ ಸಂಬಂಧಿಸಿ ಸರಕಾರವು ತ್ವರಿತವಾಗಿ ಕಾರ್ಯಪ್ರವೃತ್ತವಾಗಿ, ಮೂಲಭೂತ ಕಾರ್ಮಿಕ ಹಾಗೂ ಮಾನವಹಕ್ಕುಗಳ ಉಲ್ಲಂಘನೆಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ.
 ಭಾರತದಾದ್ಯಂತ ನರೇಗಾ ಕಾರ್ಮಿಕರು ಮೂಲಭೂತ ಸೌಕರ್ಯಗಳು ಹಾಗೂ ಭದ್ರತಾ ಕ್ರಮಗಳಿಲ್ಲದೆ ಅತ್ಯಂತ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನವೂ ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ಹಾಗೂ ಅತ್ಯಂತ ಪ್ರತಿಕೂಲಕರ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಗ್ರಾಮೀಣ ಕಾರ್ಮಿಕರಿಗೆ ಭದ್ರತೆ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಭಾರತ ಸರಕಾರವು ಮತ್ತೆಮತ್ತೆ ವಿಫಲವಾಗುತ್ತಿರುವುದು ದುರದೃಷ್ಟಕರ. ಈ ಘೋರ ದುರಂತವು ನಮ್ಮ ಸರಕಾರದ ಆಡಳಿತಾತ್ಮಕ ವ್ಯವಸ್ಥೆಯ ಸಂವೇದನಾ ಶೂನ್ಯತೆಯನ್ನು ಅನಾವರಣಗೊಳಿಸಿದೆ ಹಾಗೂ ಕಾರ್ಮಿಕರ ಹಿತಾಸಕ್ತಿಗಳನ್ನು ಯಾವತ್ತೂ ನಿರ್ಲಕ್ಷಿಸುತ್ತಲೇ ಬರುತ್ತಿರುವ ಕೇಂದ್ರ ಸರಕಾರದ ಇಚ್ಛಾಶಕ್ತಿಯ ಕೊರತೆಯನ್ನು ಕೂಡಾ ಎತ್ತಿ ತೋರಿಸಿದೆ.
    ಇದೇ ವೇಳೆ ತೆಲಂಗಾಣದಲ್ಲಿ ಸಂಭವಿಸಿದಂತಹ ದುರಂತವು ಮುಂದೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕೂಡಾ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲಿದೆ. ದುಡಿಯುವ ಸ್ಥಳದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಇನ್ನಷ್ಟು ಬಡಕಾರ್ಮಿಕರು ಬಲಿಯಾಗುವುದನ್ನು ತಪ್ಪಿಸಬೇಕಾಗಿದೆ. ಕೆಲಸದ ಸ್ಥಳಗಳಲ್ಲಿ ನರೇಗಾ ಕಾರ್ಮಿಕರ ಭದ್ರತೆ ಹಾಗೂ ಸುರಕ್ಷತೆಗಳಿಗೆ ಕನಿಷ್ಠ ಮಾನದಂಡನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)