ಸಿಂಧು ಸೆಮಿಗೆ, ಸೈನಾ ಮನೆಗೆ
ಸಿಂಗಾಪುರ ಓಪನ್
ಸಿಂಗಾಪುರ, ಎ.12: ಸೋಲಿನ ಭೀತಿಯಿಂದ ಪಾರಾದ ಸಿಂಧು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಜಯಿಸಿ ಸಿಂಗಾಪುರ ಓಪನ್ನ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಇನ್ನೊಂದೆಡೆ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಎಂಟರ ಘಟ್ಟದ ಪಂದ್ಯದಲ್ಲಿ ನೇರ ಗೇಮ್ಗಳಿಂದ ಸೋತು ಶುಕ್ರವಾರ ಟೂರ್ನಿಯಿಂದ ಹೊರ ನಡೆದಿದ್ದಾರೆ.
ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ವಿಶ್ವದ ನಂ.18 ಹಾಗೂ 2017ರ ಬಿಡಬ್ಲುಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ಕಂಚು ವಿಜೇತೆ ಚೀನಾದ ಕಾಯ್ ಯಾನ್ಯಾನ್ ವಿರುದ್ಧ 21-13, 17-21, 21-14 ಗೇಮ್ಗಳಿಂದ ಗೆಲುವು ಸಾಧಿಸಿದರು. ಮೊದಲ ಗೇಮ್ನಲ್ಲಿ 5-5ರ ಸಮಬಲವಿದ್ದಾಗ ಸಿಂಧು, ಚೀನಾದ ಆಟಗಾರ್ತಿಯ ಸರ್ವ್ ಮುರಿದರು. ಆದರೆ ಎರಡನೇ ಗೇಮ್ನಲ್ಲಿ 11-6ರ ಮುನ್ನಡೆ ಸಾಧಿಸಿ ಯಾನ್ಯಾನ್ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಗೇಮ್ನ ಮಧ್ಯಂತರ ವಿರಾಮದಲ್ಲಿ ಸಿಂಧು 11-5ರ ಮುನ್ನಡೆಯಲ್ಲಿದ್ದರು. ಮುನ್ನಡೆ ಪಡೆಯುತ್ತಲೇ ಮುಂದುವರಿದ ಅವರು ಕೊನೆಗೆ ಪಂದ್ಯವನ್ನು ಜಯಿಸಿ ಬೀಗಿದರು.
ಇಂಡಿಯನ್ ಓಪನ್ ಸೇರಿ ಈ ಋತುವಿನಲ್ಲಿ ಎರಡನೇ ಬಾರಿ ಸಿಂಧು ಸೆಮಿಫೈನಲ್ಗೆ ತಲುಪಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಅವರು, ವಿಶ್ವದ ನಂ.1 ಆಟಗಾರ್ತಿ ಜಪಾನ್ನ ನೊರೊಮಿ ಒಕುಹರಾ ವಿರುದ್ಧ ಸೆಣಸಲಿದ್ದಾರೆ.
ಮತ್ತೊಂದೆಡೆ ಎರಡನೇ ಶ್ರೇಯಾಂಕದ ಒಕುಹರಾ, ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಎದುರು ಗೆಲ್ಲಲು ಹೆಚ್ಚು ಬೆವರು ಹರಿಸಲಿಲ್ಲ. ಲಂಡನ್ ಒಲಿಂಪಿಕ್ಸ್ ಕಂಚು ವಿಜೇತ ಸೈನಾ 21-8, 21-13 ನೇರ ಗೇಮ್ಗಳಿಂದ ಎದುರಾಳಿ ಒಕುಹರಾಗೆ ಶರಣಾದರು.