varthabharthi


ಸಿನಿಮಾ

ಕವಲು ದಾರಿ: ಕವಲು ದಾರಿಯಲ್ಲಿ ಪ್ರೇಕ್ಷಕರ ಗೊಂದಲದ ಸವಾರಿ

ವಾರ್ತಾ ಭಾರತಿ : 14 Apr, 2019

ಒಬ್ಬ ಯುವ ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಸೇರಿಕೊಂಡು ಮೂವತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದನ್ನು ಭೇದಿಸುವ ಕತೆಯೇ ಕವಲುದಾರಿ.

 ಚಿತ್ರದಲ್ಲಿ ಶ್ಯಾಮ್ ಎನ್ನುವ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ತಾನು ಖಾಕಿ ತೊಟ್ಟು ಕ್ರೈಮ್ ವಿಭಾಗದಲ್ಲಿ ತನಿಖೆಗಳನ್ನು ಮಾಡಬೇಕು ಎನ್ನುವ ಆಕಾಂಕ್ಷೆ ಇರುತ್ತದೆ. ಆ ಸಮಯದಲ್ಲೇ ಆತನ ಟ್ರಾಫಿಕ್ ಏರಿಯಾದ ರಸ್ತೆ ಕಾಮಗಾರಿ ನಡುವೆ ಮಾನವ ದೇಹಗಳ ಅಸ್ಥಿಪಂಜರಗಳು ಪತ್ತೆಯಾಗುತ್ತವೆ. ಅವುಗಳ ಬಗ್ಗೆ ಸ್ವತಃ ಆಸಕ್ತಿ ಹೊಂದುವ ಶ್ಯಾಮ್‌ಗೆ ಅವು ಮೂವತ್ತು ವರ್ಷಗಳ ಹಿಂದಿನ ಪಳೆಯುಳಿಕೆಗಳು ಎನ್ನುವುದು ಅರಿವಾಗುತ್ತದೆ. ಅಂದು ಆ ಪ್ರಕರಣದ ತನಿಖೆ ಮಾಡಿದ್ದಂಥ ಪೊಲೀಸ್ ಅಧಿಕಾರಿ ಮುತ್ತಣ್ಣ ಈಗ ನಿವೃತ್ತರಾಗಿರುತ್ತಾರೆ. ಅವರ ಮತ್ತು ಪತ್ರಕರ್ತ ಕುಮಾರ್ ಎನ್ನುವ ಇನ್ನೊಬ್ಬರ ಸಹಾಯದೊಂದಿಗೆ ಅಸ್ಥಿಪಂಜರಗಳ ಹಿಂದಿನ ಕತೆಯನ್ನು, ನಿಜವಾದ ಕೊಲೆಗಾರರನ್ನು ಬೆನ್ನು ಹತ್ತತೊಡಗುತ್ತಾರೆ. ಅಂತ್ಯದಲ್ಲಿ ಅಪರಾಧಿಗಳ ಜಾಲ ಇಂದಿಗೂ ಹೇಗೆ ಸಕ್ರಿಯವಾಗಿದೆ ಎನ್ನುವುದನ್ನು ತೋರಿಸುವವರೆಗೆ ಕತೆ ಮುಂದುವರಿಯುತ್ತದೆ. ಸೂಕ್ಷ್ಮವಾದ ತಿರುವುಗಳನ್ನು ಹೊಂದಿರುವ ಥ್ರಿಲ್ಲರ್ ಚಿತ್ರವಾಗಿ ಸಿನೆಮಾ ಗಮನ ಸೆಳೆಯುತ್ತದೆ.

ಘಟನೆ ಮೂವತ್ತು ವರ್ಷಗಳ ಹಿಂದಿನದು. ತನಿಖೆ ಮಾಡಲು ಮುನ್ನುಗ್ಗುವ ವ್ಯಕ್ತಿ, ಆ ಅಧಿಕಾರವಿರದಂಥ ಟ್ರಾಫಿಕ್ ಪೊಲೀಸ್! ಸಹಕಾರ ನೀಡಲು ಮುಂದಾಗುವಾತ ನಿವೃತ್ತ ಪೊಲೀಸ್. ಮತ್ತೋರ್ವ ಮಾಧ್ಯಮದ ಕಡೆಯಿಂದ ಸರ್ಕ್ಯುಲೇಶನ್ ಇರದ ಪತ್ರಿಕೆಯ ವರದಿಗಾರ!! ಹೀಗೆ ಒಂದಷ್ಟು ಅಶಕ್ತವೆನಿಸುವ ಅಂಶಗಳ ಕೂಡುವಿಕೆ ಜೊತೆಯಲ್ಲೇ ಚಿತ್ರದ ಆರಂಭವಾಗುತ್ತದೆ. ಸಾಮಾನ್ಯವಾಗಿ ಹೀಗೆ ಆರಂಭವಾಗುವ ಚಿತ್ರಗಳು ಮಧ್ಯಂತರದ ವೇಳೆಗಾದರೂ ಪ್ರಾಬಲ್ಯ ಪಡೆಯುತ್ತವೆ. ಆದರೆ ಇಲ್ಲಿ

ನಿಜವಾದ ತನಿಖೆಯೇ ಮುಂದುವರಿಯು ತ್ತಿದೆ ಎಂಬಂತೆ ಘಟನೆಗಳು ನೀರಸವಾಗಿ ಸಾಗುತ್ತದೆ. ಹಾಗಾಗಿ ಚಿತ್ರ ನಿರಾಶೆ ಮೂಡಿಸಲು ಶುರು ಮಾಡುತ್ತದೆ.
ಮಧ್ಯಂತರ ಬಳಿಕದ ಬೆಳವಣಿಗೆಗಳು ಇನ್ನೇನು ಕುತೂಹಲ ಮೂಡಿಸುತ್ತವೆ ಎನ್ನುವ ಹೊತ್ತಲ್ಲಿ ಕ್ಲೈಮ್ಯಾಕ್ಸ್‌ನ ಇಪ್ಪತ್ತು ನಿಮಿಷಗಳ ಕಾಲ ಎಳೆದಾಡಿದಂತಹ ಅನುಭವ ನೀಡುತ್ತದೆ. ನಿರ್ದೇಶನದ ಕಲೆ ತಿಳಿಯದೆ ಚಿತ್ರವನ್ನು ಎಳೆದಾಡಿದರೆ ನಿರ್ದೇಶಕನನ್ನು ದೂಷಿಸಬಹುದು. ಆದರೆ ಎಲ್ಲವೂ ಗೊತ್ತಿದ್ದೂ ಬೇಕೆಂದೇ ಅಶಕ್ತ ಘಟನೆಯೊಂದನ್ನು ಅಶಕ್ತವಾಗಿಯೇ ತೋರಿಸುವ ಪ್ರಯತ್ನಕ್ಕೆ ಮುಂದಾದ ನಿರ್ದೇಶಕ ಮತ್ತು ನಿರ್ಮಾಪಕರ ಛಾತಿಯನ್ನು ಮೆಚ್ಚಬಹುದಷ್ಟೇ. ಆದರೆ ಕಮರ್ಷಿಯಲ್ ಚಿತ್ರಗಳ ನಾಯಕ ಪವರ್‌ಸ್ಟಾರ್ ಪುನೀತ್ ಗೂ ಈ ಚಿತ್ರದ ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರಿಗೂ ಸಂಬಂಧ ಕಲ್ಪಿಸಿ ಚಿತ್ರ ನೋಡುವ ಅಭಿಮಾನಿಗಳ ಲೆಕ್ಕಾ ಚಾರ ತಪ್ಪುವುದು ಖಚಿತ. ಯಾಕೆಂದರೆ ಅವರ ಚಿತ್ರಗಳ ವೇಗ, ಪವರ್ ಇಲ್ಲಿಲ್ಲ.

ಶ್ಯಾಮ್ ಎನ್ನುವ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ರಿಷಿ ನಟಿಸಿದ್ದಾರೆ. ನಿವೃತ್ತ ಪೊಲೀಸ್ ಮುತ್ತಣ್ಣನಾಗಿ ಅನಂತನಾಗ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ತಣ್ಣನೆಯ ನಟನೆಯ ನಡುವೆ ಎಂದಿನಂತೆ ಗಮನ ಸೆಳೆಯುವ ಅಭಿನಯ ನೀಡುವವರು ಪತ್ರಕರ್ತ ಕುಮಾರ್ ಪಾತ್ರಧಾರಿ ಅಚ್ಯುತ್ ಕುಮಾರ್. ಉಳಿದಂತೆ ಅತಿಥಿ ಪಾತ್ರವಾಗಿ ಬಂದರೂ ಕೂಡ, ಸಿನೆಮಾ ನಟಿ ಮಾಧುರಿ ಎನ್ನುವ ಪಾತ್ರದಲ್ಲಿ ಸುಮನ್ ರಂಗನಾಥ್ ನೀಡುವ ಓವರ್ ಆ್ಯಕ್ಟಿಂಗ್ ಪಾತ್ರ ಅದೇ ಕಾರಣದಿಂದ ಗುರುತಿಸಿಕೊಳ್ಳುತ್ತದೆ. ಅಚ್ಯುತ್ ಕುಮಾರ್ ಪುತ್ರಿಯಾಗಿ ನಟಿಸಿರುವ ರೋಶಿನಿ ಪ್ರಕಾಶ್ ಅವರಿಗೂ ಮುಗ್ಧ ಸೌಂದರ್ಯ ಪ್ರದರ್ಶನಕ್ಕೆ ಮಾತ್ರ ಅವಕಾಶ ದೊರಕಿದೆ. ಮೈಲೂರು ಶ್ರೀನಿವಾಸ್ ಎನ್ನುವ ರಾಜಕಾರಣಿಯಾಗಿ ಸಂಪತ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದ ಮೂಡ್‌ಗೆ ತಕ್ಕಂತೆ ಇದೆ. ಹಿನ್ನೆಲೆ ಸಂಗೀತ ಮತ್ತೆ ‘ಟಗರು’ ಚಿತ್ರದ ರಿಂಗಣ ನೆನಪಿಸುತ್ತದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚೆನ್ನಾಗಿದೆ. ಎಪ್ಪತ್ತರ ದಶಕದ ಘಟನೆಯನ್ನು ತೋರಿಸಿರುವ ರೀತಿ, ಕಲಾ ನಿರ್ದೇಶನ ಮೊದಲಾದವು ಪ್ರೇಕ್ಷಕರಾದ ನಮಗೆ ಎಪ್ಪತ್ತರ ದಶಕದ ಚಿತ್ರವನ್ನು ನೋಡಿದ ಅನುಭವ ತರುತ್ತದೆ. ಚಿತ್ರದ ಸಂಭಾಷಣೆಗಳು ಸಹಜ ಸೂಕ್ಷ್ಮವಾಗಿರುವ ಕಾರಣ ಚಿತ್ರವನ್ನು ಮಲ್ಟಿಪ್ಲೆಕ್ಸ್ ಮಂದಿರಗಳಲ್ಲೇ ನೋಡುವುದು ಉತ್ತಮ. ಒಟ್ಟಿನಲ್ಲಿ ಕವಲುದಾರಿ ಮುಗಿಯುವ ಹೊತ್ತಿಗೆ ಕತೆಯ ಬಗ್ಗೆ ನಿಮ್ಮೆಳಗೆ ಮೂಡಿದ ಗೋಜಲುಗಳು ಪರಿಹಾರವಾದಲ್ಲಿ ಚಿತ್ರ ನೋಡಿದ್ದು ಸಾರ್ಥಕವಾದ ಹಾಗೆ.

ತಾರಗಣ: ರಿಷಿ, ರೋಶಿನಿ ಪ್ರಕಾಶ್, ಅನಂತನಾಗ್
ನಿರ್ದೇಶನ: ಹೇಮಂತ್ ರಾವ್
ನಿರ್ಮಾಣ: ಪಿಆರ್‌ಕೆ ಪ್ರೊಡಕ್ಷನ್ಸ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)