varthabharthi

ವಿಶೇಷ-ವರದಿಗಳು

ಪ್ರಧಾನಿ ಮೋದಿಗೆ ಗುಜರಾತ್ ದಲಿತ ಮುಖಂಡ ಮಕ್ವಾನ್ ಪ್ರಶ್ನೆ

ದಲಿತ ಯೋಧನ ಅಂತಿಮ ಸಂಸ್ಕಾರ ಊರ ಸ್ಮಶಾನದಲ್ಲಿ ಮಾಡಲು ಬಿಡದವರು ದೇಶದ್ರೋಹಿಗಳಲ್ಲವೇ ?

ವಾರ್ತಾ ಭಾರತಿ : 14 Apr, 2019

ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರ ತವರು ರಾಜ್ಯ ಗುಜರಾತ್ ನ ಪ್ರಮುಖ ದಲಿತ ಹಕ್ಕು ಹೋರಾಟಗಾರ ಮಾರ್ಟಿನ್ ಮಕ್ವಾನ್ ಅವರು ದಲಿತರ ವಿರುದ್ಧ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ವಿರುದ್ಧ ಏಕೆ ಮೌನವಾಗಿದ್ದೀರಿ ಹಾಗು ದಲಿತ ಯೋಧರಿಗೆ ಆಗುತ್ತಿರುವ ಅನ್ಯಾಯ , ಅವಮಾನಗಳ ಬಗ್ಗೆ ಏಕೆ ನೀವು ಧ್ವನಿ ಎತ್ತುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. 

ಮೋದಿ ಆಡಳಿತದ ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ ದಲಿತರು ಹಾಗು ಆದಿವಾಸಿಗಳ ವಿರುದ್ಧ ನಡೆದಿರುವ  319 ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿರುವ ತನ್ನ ಹೊಸ ಕೃತಿ "Bhed Bharat" ಬಿಡುಗಡೆಗೆ ಮುನ್ನ ಮಕ್ವಾನ್ ಅವರು ಪ್ರಧಾನಿಗೆ ಈ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ತಾನು ಯಾವ ಕಾರಣಕ್ಕಾಗಿ ಬಿಜೆಪಿಗೆ ಮತ ನೀಡುತ್ತಿಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. 

ಮೋದಿ ಆಡಳಿತದ ಅವಧಿಯಲ್ಲಿ ದಲಿತರು ಹಾಗು ಆದಿವಾಸಿಗಳ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ ಎಂದು ಆರೋಪಿಸಿರುವ ಅವರು ಸೇನೆಯಲ್ಲಿರುವ ದಲಿತರ ವಿರುದ್ಧ ಅನ್ಯಾಯ, ಅವಮಾನದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದ್ದು ಅವುಗಳ ಕುರಿತ ಮೋದಿ ಮೌನವನ್ನು ಖಂಡಿಸಿದ್ದಾರೆ. 

2016 ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಯಲ್ಲಿ ಎಂಟು ಮಂದಿ ಯೋಧರು ಬಲಿಯಾದ ಬಗ್ಗೆ ಹೇಳಿರುವ ಮಕ್ವಾನ್ ಅವರು ಆ ಎಂಟು ಮಂದಿಯ ಪೈಕಿ ಏಳು ಹುತಾತ್ಮರಿಗೆ ಪೂರ್ಣ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು. ಆದರೆ ವೀರ ಸಿಂಗ್ ಎಂಬ ದಲಿತ ಯೋಧನ ಅಂತಿಮ ಸಂಸ್ಕಾರ ಊರಿನ ಸ್ಮಶಾನದಲ್ಲಿ ನಡೆಸಲು ಬಿಡಲಿಲ್ಲ. ಹುತಾತ್ಮ  ಯೋಧನಿಗೆ ಹೀಗೆ ಅವಮಾನ ಮಾಡಿದ ಈ ಊರಿನವರು ದೇಶದ್ರೋಹಿಗಳಲ್ಲವೇ? ಎಂದು ಮಕ್ವಾನ್ ಪ್ರಶ್ನಿಸಿದ್ದಾರೆ.   

ಮೇ 28, 2018 ರಲ್ಲಿ ತಮಿಳುನಾಡಿನ ಶಿವಗಂಗೆಯಲ್ಲಿ ದೈವೀಂದ್ರನ್ ಎಂಬ ದಲಿತ ಯೋಧನ ತಂದೆಯ ಸಹಿತ ಮೂವರು ದಲಿತರನ್ನು ಕೊಂದು ಹಲವರಿಗೆ ಗಂಭೀರವಾಗಿ ಹಲ್ಲೆ ಮಾಡಿದ ಪ್ರಕರಣವನ್ನು ನೆನಪಿಸಿರುವ ಮಕ್ವಾನ್ ಅವರು " ನಾನು ದೇಶವನ್ನು ರಕ್ಷಿಸುತ್ತೇನೆ, ಆದರೆ ನನ್ನ ಕುಟುಂಬವನ್ನು ರಕ್ಷಿಸುವುದು ಯಾರು ?" ಎಂದು ಕೇಳಿದ್ದೇ ಆ ಯೋಧನ ತಪ್ಪಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  

ಬಿಜೆಪಿ 84 ಎಸ್ಸಿ ಕ್ಷೇತ್ರಗಳ ಪೈಕಿ  41 ಹಾಗು  47 ಎಸ್ಟಿ ಕ್ಷೇತ್ರಗಳ ಪೈಕಿ 26 ಸ್ಥಾನಗಳನ್ನು ಕಳೆದ ಚುನಾವಣೆಯಲ್ಲಿ ಗೆದ್ದಿದೆ. ಅವರ ಮಿತ್ರಪಕ್ಷಗಳೂ ಸೇರಿ ಒಟ್ಟು 83 ದಲಿತ ಸಂಸದರು ಅವರ ಮೈತ್ರಿಕೂಟದಿಂದ ಗೆದ್ದಿದ್ದಾರೆ. ಆದರೆ ಇಷ್ಟು ಸ್ಥಾನ ಗೆದ್ದು ಕೊಟ್ಟ ದಲಿತರಿಗೆ ಅವರ ವಿರುದ್ಧ ದೌರ್ಜನ್ಯ ಹೆಚ್ಚಿಸಿದ್ದೇ ಮೋದಿ ಸರಕಾರ ನೀಡಿದ ಪ್ರತಿಫಲ ಎಂದವರು ಆರೋಪಿಸಿದ್ದಾರೆ. ಎಸ್ಸಿ ಎಸ್ಟಿಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಿರುವುದು ಮಾತ್ರವಲ್ಲದೆ ದಲಿತರಿಗೆ ನೀಡುವ ಮೆಟ್ರಿಕ್ ಬಳಿಕದ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಹಾಕಿದೆ ಎಂದು ಮಕ್ವಾನ್ ಗಂಭೀರ ಆರೋಪ ಮಾಡಿದ್ದಾರೆ. ಇದು ದಲಿತರ ವಿರುದ್ಧ ವ್ಯವಸ್ಥಿತ ಪಕ್ಷಪಾತವಲ್ಲದೆ ಇನ್ನೇನು? ಎಂದವರು ಪ್ರಶ್ನಿಸಿದ್ದಾರೆ. 

ಈ ಬಾರಿಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಅಸ್ಪ್ರಶ್ಯತೆ ಹಾಗು ದಲಿತರು ಆದಿವಾಸಿಗಳ ವಿರುದ್ಧದ ದೌರ್ಜನ್ಯ ನಿರ್ಮೂಲನೆ ಮಾಡುವ ವಿಷಯ ಏಕೆ ಇಲ್ಲ ಎಂದು ಪ್ರಶ್ನಿಸಿರುವ ಮಕ್ವಾನ್ ಮನುಷ್ಯರೇ ಮಲ ಹೊರುವ ಪದ್ಧತಿ ನಿಲ್ಲಿಸುವ ಬಗ್ಗೆಯೂ ಪ್ರಣಾಳಿಕೆಯಲ್ಲಿ ಉಲ್ಲೇಖವಿಲ್ಲ ಎಂದು ಕಿಡಿ ಕಾರಿದ್ದಾರೆ. 

"ನನಗೆ ಬೇಕಾದರೆ ಗುಂಡಿಕ್ಕಿ, ಆದರೆ ದಲಿತ ಸೋದರರನ್ನು ಟಾರ್ಗೆಟ್ ಮಾಡಬೇಡಿ " ಎಂದು ಸಾರ್ವಜನಿಕಾಗಿ ಹೇಳಿದ ನೀವು ಗೋರಕ್ಷಕರ ದೌರ್ಜನ್ಯಗಳ ಕುರಿತು ವರದಿ ಕಳಿಸುವಂತೆ ರಾಜ್ಯ ಸರಕಾರಗಳಿಗೆ ಹೇಳಿದಿರಿ. ಎಷ್ಟು ವರದಿ ನಿಮಗೆ ಬಂದಿದೆ? ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಎಂದು ಪ್ರಶ್ನಿಸಿರುವ ಮಕ್ವಾನ್ " ನಿಮ್ಮ ಒಬ್ಬ ಸಚಿವ ಜಾಮೀನು ಪಡೆದು ಬಂದ ಗೋರಕ್ಷಕರಿಗೆ ಹಾರ ಹಾಕಿ ಸನ್ಮಾನಿಸಿದ್ದಾರೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ವಚ್ಛ ಭಾರತ ಅಭಿಯಾನ ಹಾಗು ಗುಜರಾತ್ ಅನ್ನು ಬಹಿರಂಗ ಬಹಿರ್ದೆಸೆ ಮುಕ್ತ ಎಂದು ಘೋಷಿಸಿರುವ ಬಗ್ಗೆ ಪ್ರಶ್ನಿಸಿರುವ ಮಕ್ವಾನ್  " 12,000 ರೂ ಬಿಡುಗಡೆಯಾದಲ್ಲಿ ಕೇವಲ ಪ್ರತಿಯೊಂದು ಶೌಚಾಲಯಕ್ಕೆ  ಕೇವಲ  3,000 ರೂ ಗಿಂತ ಹೆಚ್ಚು ಖರ್ಚು ಮಾಡಿಲ್ಲ. ಇದರಿಂದಾಗಿ ಮುರಿದು ಬಿದ್ದಿರುವ , ಶಿಥಿಲಗೊಂಡಿರುವ, ಸರಿಯಾದ ಯಾವುದೇ ಮೂಲ  ಸೌಲಭ್ಯಗಳು ಇಲ್ಲದ  ನೂರಾರು ಶೌಚಾಲಯಗಳ  ಫೋಟೋ ನನ್ನ ಬಳಿ ಇವೆ. ಇಂತಹ ಅತ್ಯಂತ ಕೆಟ್ಟ ಶೌಚಾಲಯಗಳನ್ನು ಕೊಟ್ಟಿರುವ ಜನರು ಈಗ ಮೈದಾನಕ್ಕೆ ಹೋಗಿಯೇ ಬಹಿರ್ದೆಸೆ ಮುಗಿಸುವ ಅನಿವಾರ್ಯತೆಯಲ್ಲಿದ್ದಾರೆ ಎಂದವರು ದೂರಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)