varthabharthi

ಸಂಪಾದಕೀಯ

ಮೋದಿಯ ಹತಾಶೆಯ ಮಾತುಗಳು

ವಾರ್ತಾ ಭಾರತಿ : 15 Apr, 2019

ಲೋಕಸಭಾ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ತಮ್ಮ ಅಳಿವು ಉಳಿವಿನ ಈ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಹತಾಶರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿಯವರು ಮಾಡುತ್ತಿರುವ ವಿವೇಚನಾಶೂನ್ಯ ಭಾಷಣಗಳಲ್ಲಿ ಅವರ ಹತಾಶೆ ಎದ್ದು ಕಾಣುತ್ತಿದೆ.ಗಡಿಯಲ್ಲಿ ಹೋರಾಡುತ್ತ ಬಲಿದಾನ ಮಾಡಿದ ಯೋಧರ ಪ್ರಾಣತ್ಯಾಗವನ್ನು ತಮ್ಮ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮೋದಿ ಈ ಹಿಂದಿನ ಸರಕಾರಗಳನ್ನು ಹೇಡಿ ಸರಕಾರಗಳೆಂದು ಕರೆಯುತ್ತಿದ್ದಾರೆ. ತಮ್ಮ ಸರಕಾರ ಪಾಕಿಸ್ತಾನದ ಒಳಗೆ ನುಗ್ಗಿ ಏಟಿಗೆ ತಿರುಗೇಟು ನೀಡಿತು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ತಾವು ಪ್ರಧಾನಿಯಾಗಿರುವುದರಿಂದ ಭಾರತ ಸುರಕ್ಷಿತವಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಾಕಿಸ್ತಾನದ ಉಗ್ರಗಾಮಿಗಳ ಜೊತೆ ಸೇರುತ್ತಿದ್ದಾರೆ ಎಂದು ಅತ್ಯಂತ ಕೀಳುಮಟ್ಟದ ಪ್ರಚಾರ ನಡೆಸಿದ್ದಾರೆ.

ಕಳೆದ ಐದು ವರ್ಷಗಳ ತಮ್ಮ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಪ್ರಧಾನ ಮಂತ್ರಿ ಪದೇ ಪದೇ ಪಾಕಿಸ್ತಾನದ ನಾಮಸ್ಮರಣೆ ನಡೆಸಿದ್ದಾರೆ. ತಮ್ಮ ಸರಕಾರದ ಗುಪ್ತಚರ ಇಲಾಖೆಯ ಲೋಪದಿಂದ ಪುಲ್ವಾಮದಲ್ಲಿ ನಲವತ್ತು ಸೈನಿಕರು ಸಾವಿಗೀಡಾದರು. ಅದನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನ ನಡೆಸಿದ ಪ್ರಧಾನಿ ತಮ್ಮ ಸ್ಥಾನದ ಘನತೆ ಗೌರವಗಳನ್ನು ಮರೆತು ಮಾತಾಡುತ್ತಿದ್ದಾರೆ.

ಪ್ರಧಾನ ಮಂತ್ರಿಯವರು ನೋಟು ಅಮಾನ್ಯೀಕರಣದ ಪರಿಣಾಮದ ಬಗ್ಗೆ, ಜಿಎಸ್‌ಟಿ ಬಗ್ಗೆ, ನಿರುದ್ಯೋಗ ನಿವಾರಣೆಯಲ್ಲಿ ತಮ್ಮ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಯಾಕೆ ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಜನರಿಗೆ ವಿವರಿಸಿ ಜನರ ಕ್ಷಮೆ ಯಾಚಿಸಬೇಕಾಗಿತ್ತು.ಆದರೆ ಮೋದಿಯವರ ಭಾಷಣದಲ್ಲಿ ಅಂಥ ಜನತಾಂತ್ರಿಕ ವಿನಯ ಕಾಣುತ್ತಿಲ್ಲ.

ಶನಿವಾರ ಮಂಗಳೂರಿನಲ್ಲಿ ಮಾಡಿದ ಪ್ರಧಾನಿ ಭಾಷಣದಲ್ಲಿ ಹೊಸದೇನೂ ಇರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆ ವಂಶೋದಯ ಮತ್ತು ಅಂತ್ಯೋದಯದ ನಡುವಿನ ಸಂಘರ್ಷ ಎಂದು ಮೋದಿಯವರು ಹೇಳಿದ ಮಾತನ್ನು ಕೇಳಿ ಜನ ನಗುತ್ತಾರೆ. ಕುಟುಂಬ ರಾಜಕಾರಣಕ್ಕಾಗಿ ದೇವೇಗೌಡರನ್ನು, ಗಾಂಧಿ ಮನೆತನವನ್ನು ಟೀಕಿಸುವ ಮೋದಿಯವವರು ತಮ್ಮ ಪಕ್ಷದ ಕಡೆ ಹೊರಳಿ ನೋಡಬೇಕು. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗನನ್ನು ಚುನಾವಣೆಗೆ ನಿಲ್ಲಿಸಿಲ್ಲವೇ? ಹಾವೇರಿಯಿಂದ ಉದಾಸಿಯವರ ಮಗ ಶಿವಕುಮಾರ ಉದಾಸಿ ಸ್ಪರ್ಧಿಸಿಲ್ಲವೇ? ಚಿಕ್ಕೋಡಿಯಿಂದ ನಿಪ್ಪಾಣಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಸ್ಪರ್ಧಿಸಿಲ್ಲವೇ? ಹಾಗಿದ್ದರೆ ವಂಶೋದಯ ರಾಜಕಾರಣದಿಂದ ಬಿಜೆಪಿ ಮುಕ್ತವಾಗಿದೆಯೇ ?

ಪ್ರಧಾನಿ ಮೋದಿಯವರಿಗೆ ತಾನೇನು ಮಾತಾಡುತ್ತಿದ್ದೇನೆಂಬ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಮಂಗಳೂರಿನ ಸಭೆಯಲ್ಲಿ ಮಾತನಾಡಿದ ಮೋದಿಯವರು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತಂದಿರುವ ಕೇರಳದ ಎಡರಂಗ ಸರಕಾರವನ್ನು ಟೀಕಿಸಿದರು. ಕೇರಳದಲ್ಲಿ ಅಯ್ಯಪ್ಪನ ಹೆಸರು ಹೇಳಿದರೆ ಜೈಲಿಗೆ ಹಾಕುತ್ತಾರೆ ಎಂದು ಹೇಳುವ ಮೋದಿಯವರು ಸುಪ್ರಿೀಂ ಕೋರ್ಟ್ ಆದೇಶವನ್ನು ಚುನಾಯಿತ ಸರಕಾರವೊಂದು ಜಾರಿಗೆ ತರಬೇಕೋ ತರಬಾರದೋ ಎಂಬ ಪ್ರಶ್ನೆಗೆ ಮೊದಲು ಉತ್ತರ ಕೊಡಲಿ.

ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನ ಮಂತ್ರಿಗಳೇ ಈ ರೀತಿ ವಿವೇಚನೆಯಿಲ್ಲದೇ ದಾರಿ ತಪ್ಪಿ ಮಾತಾಡುತ್ತಿರುವಾಗ ಅವರ ಸಂಪುಟದ ಮಂತ್ರಿಗಳು ಪಕ್ಷದ ನಾಯಕರು ಇನ್ನೂ ಮುಂದೆ ಹೋಗಿದ್ದಾರೆ. ಈ ಬಾರಿ ನನಗೆ ಮತ ನೀಡದಿದ್ದರೆ ಸರಿಯಿರುವುದಿಲ್ಲ ಎಂದುಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಮುಸಲ್ಮಾನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿಯ ಇನ್ನೊಬ್ಬ ಸಂಸದ ಸಾಕ್ಷಿ ಮಹಾರಾಜ್ ಮತದಾರರಿಗೆ ಶಾಪ ಕೊಡುವ ಧಮ್ಕಿ ಹಾಕಿದ್ದಾರೆ. ಇದಕ್ಕಿಂತ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭಾರತೀಯ ಸೇನೆಯನ್ನು ಮೋದಿ ಸೇನೆಯೆಂದು ಕರೆದರು. ಹೀಗೆ ಬಿಜೆಪಿ ನಾಯಕರು ಬಾಯಿ ತಪ್ಪಿ ಮಾತಾಡುತ್ತಿದ್ದಾರೆ.

ಬಿಜೆಪಿ ನಾಯಕರಿಗೆ ಚುನಾವಣಾ ಆಯೋಗದ ಹೆದರಿಕೆಯೂ ಇಲ್ಲದಂತಾಗಿದೆ. ಪ್ರಧಾನಿ ಮೋದಿ ಅವರೇ ತಾಳ್ಮೆ ಕಳೆದುಕೊಂಡು ವಿವೇಚನೆ ಇಲ್ಲದ ಮಾತನಾಡುತ್ತಿರುವುದರಿಂದ ಅವರ ಪಕ್ಷದ ನಾಯಕರು, ಕಾರ್ಯಕರ್ತರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.
ಐಟಿ ದಾಳಿಯನ್ನು ಸಮರ್ಥಿಸಿಕೊಂಡ ಪ್ರಧಾನಿ ಲೂಟಿ ಮಾಡದಿದ್ದರೆ ಐಟಿ ಭಯವೇಕೆ ಎಂದು ಪ್ರತಿಪಕ್ಷ ನಾಯಕರನ್ನು ಟೀಕಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಲೂಟಿಕೋರರಿಲ್ಲವೇ? ಅವರ ಮೇಲೇಕೆ ಐಟಿ ದಾಳಿ ಮಾಡುವುದಿಲ್ಲ? ರಾಜಕೀಯ ಎದುರಾಳಿಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯವನ್ನು ಮೋದಿ ಸರಕಾರ ಬಳಸಿಕೊಳ್ಳುತ್ತಿಲ್ಲವೇ? ಇದನ್ನು ಬಹಿರಂಗ ಸಭೆಯಲ್ಲಿ ಸಮರ್ಥಿಸಿಕೊಳ್ಳುವ ಮೋದಿಯವರ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)