varthabharthi

ರಾಷ್ಟ್ರೀಯ

ಮುಂದಿನ ಪ್ರಧಾನಿ ಯಾರೇ ಆದರೂ ಶೀಘ್ರವೇ ಪಾಕ್ ಪ್ರಧಾನಿಯನ್ನು ಭೇಟಿಯಾಗಬೇಕಿದೆ!

ವಾರ್ತಾ ಭಾರತಿ : 15 Apr, 2019

ಹೊಸದಿಲ್ಲಿ, ಎ.15: ಯಾರೇ ಭಾರತದ ಮುಂದಿನ ಪ್ರಧಾನಿಯಾದರೂ, ಸರ್ಕಾರ ರಚನೆ ಬಳಿಕ ಆದ್ಯತೆಯ ಮೇಲೆ ಕೈಗೊಳ್ಳಬೇಕಾದ ಮೊಟ್ಟಮೊದಲ ಕಾರ್ಯವೆಂದರೆ ನೆರೆಯ ರಾಷ್ಟ್ರ ಪಾಕಿಸ್ತಾನ ಬಗೆಗಿನ ನೀತಿಯನ್ನು ತ್ವರಿತವಾಗಿ ರೂಪಿಸುವುದು. ಜೂನ್ 14-15ರಂದು ಭಾರತದ ಮುಂದಿನ ಪ್ರಧಾನಿ ಮೊಟ್ಟಮೊದಲ ಬಹುಪಕ್ಷೀಯ ಶೃಂಗಸಭೆಗೆ ತೆರಳಲಿದ್ದಾರೆ. ಶಾಂಗೈ ಸಹಕಾರ ಸಂಘದ ಶೃಂಗಸಭೆ ಬಿಷ್‌ಕೆಕ್‌ನಲ್ಲಿ ಜೂನ್ 14 ಮತ್ತು 15ರಂದು ನಡೆಯಲಿದ್ದು, ಇಲ್ಲಿ ಮುಂದಿನ ಪ್ರಧಾನಿ, ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಜತೆ ಮೊಟ್ಟಮೊದಲ ಸಂವಾದ ನಡೆಸಬೇಕಾಗುತ್ತದೆ.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನವನ್ನು ಋಣಾತ್ಮಕ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಪುಲ್ವಾಮಾ ಉಗ್ರರ ದಾಳಿ ಮತ್ತು ಬಾಲಾಕೋಟ್ ವಾಯುದಾಳಿ ಬಳಿಕ, ಪಾಕಿಸ್ತಾನ ವಿಚಾರ ಭಾರತದ ಚುನಾವಣಾ ಪ್ರಚಾರದಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗುತ್ತಿದೆ. ಭಾರತದಲ್ಲಿ ಬಲಪಂಥೀಯ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಅರ್ಥದಲ್ಲಿ ಇಮ್ರಾನ್‌ಖಾನ್ ಮಾತನಾಡಿರುವುದು ಇತ್ತೀಚಿನ ಬೆಳವಣಿಗೆ.

ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿದ್ದ ಸೋಹೈಲ್ ಮೆಹಮ್ಮೂದ್ ಅವರು ಇಸ್ಲಾಮಾಬಾದ್‌ಗೆ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ತೆರಳುತ್ತಿದ್ದು ಅವರು ಭಾನುವಾರ "ಚುನಾವಣೆ ಬಳಿಕ ಭಾರತದ ಜತೆ ಮತ್ತೆ ಮಾತುಕತೆ ಆರಂಭವಾಗಲಿದೆ ಎಂಬ ನಿರೀಕ್ಷೆ ನಮ್ಮದು. ಈ ಪ್ರದೇಶದಲ್ಲಿ ಧೀರ್ಘಾವಧಿಯ ಶಾಂತಿ ಮತ್ತು ಭದ್ರತೆಗೆ ಇದು ಪೂರಕವಾಗುತ್ತದೆ" ಎಂದು ಹೇಳಿಕೆ ನೀಡಿದ್ದರು.

 ಶಾಂಗೈ ಸಹಕಾರ ಸಂಸ್ಥೆಯ ಶೃಂಗಸಭೆಯ ಹೊರತಾಗಿ ಜೂನ್‌ನಲ್ಲಿ ಹೊಸ ಪ್ರಧಾನಿ ಜಿ-20 ಶೃಂಗಸಭೆಗಾಗಿ ಒಸಾಕಾಗೆ ಪ್ರವಾಸ ಕೈಗೊಳ್ಳಬೇಕಾಗುತ್ತದೆ. 2019ರ ಉತ್ತರಾರ್ಧದಲ್ಲಿ ಭಾರತದ ಪ್ರಧಾನಿಗೆ ಅಂತರರಾಷ್ಟ್ರೀಯ ಬದ್ಧತೆಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ರಷ್ಯಾ ಜತೆಗೆ ವಾರ್ಷಿಕ ಶೃಂಗಸಭೆ ಮಾಸ್ಕೊದಲ್ಲಿ ನಡೆಯಲಿದ್ದು, ಭಾರತ- ಚೀನಾ ಅನೌಪಚಾರಿಕ ಎರಡನೇ ಶೃಂಗಸಭೆಯೂ ನಡೆಯಲಿದೆ. ಭಾರತ- ಅಮೆರಿಕ 2+2 ಮಾತುಕತೆಗಳು ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಬಳಿಕ ಜಪಾನಿ ಪ್ರಧಾನಿ ಶಿಂಝೊ ಅಬೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)