varthabharthi

ವಿಶೇಷ-ವರದಿಗಳು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ

ಕ್ಷೇತ್ರವನ್ನು ನಿರ್ಲಕ್ಷಿಸಿದವರಿಗೆ ಮತ್ತೆ ಓಟು ಕೊಡಲು ಜನ ಮೂರ್ಖರಲ್ಲ: ಪ್ರಮೋದ್ ಮಧ್ವಾರಾಜ್

ವಾರ್ತಾ ಭಾರತಿ : 15 Apr, 2019
ಸಂದರ್ಶನ: ಬಿ.ಬಿ.ಶೆಟ್ಟಿಗಾರ್

ಹಲವು ಕಾರಣಗಳಿಗಾಗಿ ರಾಜ್ಯದ ಗಮನ ಸೆಳೆದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಈಗ ಪರಾಕಾಷ್ಠೆಯನ್ನು ತಲುಪಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಎರಡು ಪಕ್ಷಗಳಿಗೆ ಸಂಪರ್ಕ ಸೇತುವೆಯಂತೆ ಚುನಾವಣಾ ಕಣದಲ್ಲಿರುವ ಏಕೈಕ ಕ್ಷೇತ್ರ ಇದಾಗಿದೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿ ತೆನೆ ಹೊತ್ತ ಮಹಿಳೆ ಚಿಹ್ನೆಯಡಿ ಸ್ಪರ್ಧಿಸಿರುವ ಕ್ಷೇತ್ರ ಇದಾಗಿದೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಉಭಯ ಜಿಲ್ಲೆಗಳಲ್ಲಿರುವ ಕಾಂಗ್ರೆಸ್ ಮತದಾರರ ಗೊಂದಲವನ್ನು ನಿವಾರಿಸುವ ಸವಾಲಿನೊಂದಿಗೆ ಮತಯಾಚಿಸುವ ಕೆಲಸವನ್ನು ಮಾಡುತ್ತಿರುವ ಪ್ರಮೋದ್ ಮೂರು ಭೌಗೋಳಿಕ ಪ್ರದೇಶಗಳಲ್ಲಿ (ಕರಾವಳಿ, ಮಲೆನಾಡು, ಬಯಲುಸೀಮೆ) ಹಬ್ಬಿಕೊಂಡಿರುವ ಎರಡು ಜಿಲ್ಲೆಗಳುದ್ದಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚರಿಸುತ್ತಿದ್ದಾರೆ. ಈ ನಡುವೆ ‘ವಾರ್ತಾಭಾರತಿ’ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

► ಚುನಾವಣಾ ಪ್ರಚಾರ ಕೊನೆಯ ಹಂತ ತಲುಪಿರುವ ಈ ಹೊತ್ತಿನಲ್ಲಿ ಜನರ ಒಲವು ಯಾವ ದಿಕ್ಕಿನಲ್ಲಿ ಸಾಗಿದೆ ಎಂಬ ಸುಳಿವೇನಾದರೂ ಸಿಕ್ಕಿದೆಯೇ?

ಕ್ಷೇತ್ರದ ಜನ ಬದಲಾವಣೆಯನ್ನು ಬಯಸಿದ್ದಾರೆ. ಅಭಿವೃದ್ಧಿ ಕೆಲಸ ಮಾಡುವವರಿಗೆ ಮತ ಕೊಡಬೇಕೆಂದು ನಿರ್ಧರಿಸಿದ್ದಾರೆ. ಖಂಡಿತ ಜನರ ಒಲವು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಪರವಾಗಿದೆ.

► ಕಳೆದ ಬಾರಿ ಮೋದಿ ಅಲೆಯಿಂದ ಗೆದ್ದಿರುವುದಾಗಿ ಹೇಳಿರುವ ಬಿಜೆಪಿ ಅಭ್ಯರ್ಥಿ ಈ ಬಾರಿ ಮೋದಿಯವರ ಹೆಸರನ್ನೇ ಮುಂದಿಟ್ಟು ಚುನಾವಣೆ ಎದುರಿಸುತ್ತಿರುವುದು ನಿರೀಕ್ಷಿತ ಪರಿಣಾಮ ಬೀರಲಿದೆ ಎಂದು ಭಾವಿಸುತ್ತೀರಾ?

ಕ್ಷೇತ್ರದ ಜನ ಖಂಡಿತ ಮೂರ್ಖರಲ್ಲ. ಪ್ರತಿ ಬಾರಿ ಮೋದಿ ಹೆಸರಿನಲ್ಲಿ ಅವರಿಗೆ ಓಟು ಕೊಟ್ಟು ಗೆಲ್ಲಿಸಿದ ವ್ಯಕ್ತಿ ಅವರನ್ನು ನಿರ್ಲಕ್ಷ ಮಾಡುವಾಗ ಪುನ: ಪುನ: ಓಟು ಕೊಡಲು ಜನ ಖಂಡಿತ ಮೂರ್ಖರಲ್ಲ.

► ನೀವು ಯಾವ ವಿಚಾರಗಳನ್ನು ಜನರ ಮುಂದಿಟ್ಟು ಮತ ಕೇಳುತಿದ್ದೀರಿ, ಅವುಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ?

ನಾನು 5 ವರ್ಷ ಕೆಲಸ ಮಾಡುವ ಎಂಪಿಯಾಗಿ ಕರ್ತವ್ಯ ನಿರ್ವಹಿಸುವ ಇಚ್ಛೆ ಇದೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಅದು ಕಾನೂನಾತ್ಮಕ ಇರಬಹುದು, ಅನುದಾನ ತರುವ ವಿಷಯ ಇರಬಹುದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಿ ಸಮಸ್ತ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಿ ಜನರ ಬೇಡಿಕೆಗಳಿಗೆ ತಕ್ಕಂತೆ ಕೆಲಸ ಮಾಡಲು ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ.

► ಎರಡೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವುದರಿಂದ ಎಷ್ಟರ ಮಟ್ಟಿಗೆ ಜನರ ಒಲವನ್ನು ಸಂಪಾದಿಸಿದ್ದೀರಿ ಹಾಗೂ ಕ್ಷೇತ್ರದಲ್ಲಿ ಮೋದಿ ಅಲೆ ಪರಿಣಾಮ ಕಾಣಿ ಸುತ್ತಿದೆಯೇ?

ಇದೊಂದು ಅತ್ಯಂತ ವಿಶಾಲವಾದ ಹಾಗೂ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪ್ರದೇಶ. ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಸಮಯದ ಅಭಾವದಿಂದ ಎಲ್ಲಾ ಕಡೆಗಳಿಗೂ ಹೋಗಲು ಆಗದಿದ್ದರೂ ಎಲ್ಲಾ ವಿಧಾನಸಭಾ ಕ್ಷೇತ್ರ ಹಾಗೂ ಎರಡೂ ಜಿಲ್ಲೆಗಳಲ್ಲಿ ಜನರ ಉತ್ತಮ ಪ್ರತಿಕ್ರಿಯೆ ಬರ್ತಾ ಇದೆ.

► ಕಾಂಗ್ರೆಸ್ ಅಭ್ಯರ್ಥಿ, ಜೆಡಿಎಸ್ ಚಿಹ್ನೆ ಕ್ಷೇತ್ರದ ಮತದಾರರನ್ನು ಅದರಲ್ಲೂ ಕಾಂಗ್ರೆಸ್‌ನ ಖಾಯಂ ಮತದಾರರನ್ನು ಗೊಂದಲಕ್ಕೆ ಸಿಲುಕಿಸಿದೆಯೇ. ಜನರ ಗೊಂದಲ ನಿವಾರಣೆಗೆ ಎರಡೂ ಪಕ್ಷಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ?

ಎರಡೂ ಪಕ್ಷಗಳ ಕಾರ್ಯಕರ್ತರು ಮನೆಮನೆಗೆ ತೆರಳಿ ವಿವರಣೆಯನ್ನು ಕೊಡುತ್ತಿದ್ದಾರೆ. ನಮ್ಮ ಎರಡೂ ಜಿಲ್ಲೆಗಳ ಜನ ತುಂಬಾ ಬುದ್ಧಿವಂತರು. ಅವರು ಈ ಚಿಹ್ನೆಯ ಗೊಂದಲಕ್ಕೆ ಖಂಡಿತ ಬಲಿಬೀಳುವುದಿಲ್ಲ. ಕಾಂಗ್ರೆಸ್- ಜೆಡಿಎಸ್-ಕಮ್ಯುನಿಸ್ಟ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾದ ನನ್ನ ‘ತೆನೆ ಹೊತ್ತ ಮಹಿಳೆ’ ಚಿಹ್ನೆಗೆ ಓಟು ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

► ಮಲ್ಪೆಯಿಂದ ಮೀನುಗಾರಿಕಾ ಬೋಟು ಹಾಗೂ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳು ಕಳೆಯಿತು. ಇದನ್ನು ಜಿಲ್ಲೆಯ ಮೀನುಗಾರರು ಈ ಬಾರಿ ಚುನಾವಣಾ ವಿಷಯವಾಗಿ ಮಾಡಿದ್ದಾರಾ, ಅವರ ಅಭಿಪ್ರಾಯ ಏನಿದೆ?

ಮೀನುಗಾರರು ನಾಪತ್ತೆಯಾದ ಪ್ರಕರಣದ ಬಗ್ಗೆ ಮೂರು ಜಿಲ್ಲೆಗಳ ಸುಮಾರು 50ಸಾವಿರ ಮೀನುಗಾರರು ಉಡುಪಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿ ಈವರೆಗೂ ಏನೂ ಮಾಡಿಲ್ಲ. ಕೇಂದ್ರ ಸರಕಾರ, ರಕ್ಷಣಾ ಸಚಿವಾಲಯದೊಂದಿಗೆ ಶೋಭಾ ಅವರೂ ಮೀನುಗಾರರಿಗೆ ನ್ಯಾಯ ಒದಗಿಸಿಕೊಡಲು ಸಂಪೂರ್ಣ ವಿಫಲರಾಗಿದ್ದಾರೆ.

► ನಿಮ್ಮ ವಿರುದ್ಧ ಕೇಳಿಬರುತ್ತಿರುವ ಮೃದುಹಿಂದುತ್ವ ಆರೋಪ ಪ್ರಚಾರದ ವೇಳೆ ಕೇಳಿಬಂದಿದೆಯಾ?

ಎರಡೂ ಜಿಲ್ಲೆಗಳಲ್ಲಿ ಇಂಥ ಆರೋಪ ಎಲ್ಲೂ ಕೇಳಿಬಂದಿಲ್ಲ.

► ಕಾಂಗ್ರೆಸ್-ಜೆಡಿಎಸ್‌ನ ನಾಯಕರು ಮತ್ತು ಕಾರ್ಯಕರ್ತರನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗಿದ್ದೀರಿ ಮತ್ತು ಜನರು ನಿಮ್ಮನ್ನು ಮತ್ತು ಜೆಡಿಎಸ್ ಚಿಹ್ನೆಯನ್ನು ಸ್ವೀಕರಿಸಿದ್ದಾರಾ?

ನಮ್ಮ ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರು ಹಾಲು-ಜೇನಿನ ರೀತಿಯಲ್ಲಿ ಮೈತ್ರಿಯನ್ನು ಒಪ್ಪಿದ್ದಾರೆ. ಮತ್ತೆ ನಮ್ಮ ಕಾರ್ಯಕರ್ತ ಬಂಧುಗಳಿಗೂ ಇದು ಮನವರಿಕೆಯಾಗಿದೆ. ಹಾಗೂ ಅವರು ಮತದಾರರನ್ನು ಮನವರಿಕೆ ಮಾಡುವ ಮನೋಭಾವದವರು. ಹೀಗಾಗಿ ಚಿಹ್ನೆಯು ಒಂದು ಸಮಸ್ಯೆಯಾಗಿ ಕಂಡುಬಂದಿಲ್ಲ.

► ಪ್ರಚಾರದ ವೇಳೆ ಎರಡು ಪಕ್ಷಗಳ ನಡುವಿನ ಭಿನ್ನಮತದ ಬಿಸಿ ಏನಾದರೂ ನಿಮ್ಮ ಅನುಭವಕ್ಕೆ ಬಂದಿದೆಯಾ?

ಇಲ್ಲ. ಇದ್ದ ಕೆಲ ಭಿನ್ನಮತವನ್ನು ಶಮನಗೊಳಿಸಲಾಗಿದೆ. ಈಗ ಪ್ರಚಾರ ನಿರಾಂತಕವಾಗಿ ನಡೆಯುತ್ತಿದೆ.

► ಚಿಕ್ಕಮಗಳೂರಿನಲ್ಲಿ ನಿಮಗೆ ಮತವನ್ನು ಸೆಳೆಯುವುದು ಅಷ್ಟು ಸುಲಭವಿಲ್ಲ ಎಂದು ಹೇಳಲಾ ಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ನಿಜವಾಗಿಯೂ ಚಿಕ್ಕಮಗಳೂರು ಭಾಗದಲ್ಲಿ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಾ ಇದೆ. ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಕೆಲಸ ಮಾಡದ ಶೋಭಾರನ್ನು ಮನೆಗೆ ಕಳುಹಿಸಲು ಚಿಕ್ಕಮಗಳೂರು ಜನತೆ ಸಿದ್ಧತೆ ಮಾಡಿಕೊಂಡಿದ್ದಾರೆ.

► ಅಲ್ಪಸಂಖ್ಯಾತರಿಗೆ ನಿಮ್ಮ ನಿಲುವುಗಳ ಬಗ್ಗೆ ಅಸಮಧಾನವಿತ್ತು. ಅದನ್ನು ಹೇಗೆ ಸರಿಪಡಿಸುತ್ತೀರಿ ?

ಈ ಬಗ್ಗೆ ಅಲ್ಪಸಂಖ್ಯಾತರೊಂದಿಗೆ ಮಾತುಕತೆ ನಡೆಸಿಯಾಗಿದೆ. ಯಾರೂ ಕೂಡಾ ನೂರಕ್ಕೆ ನೂರು ಸರಿಯಾಗಿರುವವರು ಇರುವುದಿಲ್ಲ. ಅಪ್ಪಿತಪ್ಪಿ ನನ್ನಿಂದ ಏನಾದರೂ ಮಾತುಗಳು ಬಂದಿದ್ದರೆ ಅದಕ್ಕಾಗಿ ಬೇಸರ ಮಾಡಿಕೊಳ್ಳದಂತೆ ಮನವಿ ಮಾಡಿಕೊಳ್ಳುತ್ತೇನೆ. ನನ್ನ ತಪ್ಪುಗಳೇನಾದರೂ ಇದ್ದರೆ ಅದನ್ನು ತಿದ್ದಿಕೊ ಳ್ಳುತ್ತೇನೆ. ಎಲ್ಲರನ್ನೂ (ಹಿಂದು, ಮುಸ್ಲಿಂ, ಕ್ರಿಶ್ಚಿಯನ್) ಪ್ರೀತಿಸುತ್ತೇನೆ. ಎಲ್ಲರನ್ನೂ ಜೊತೆಯಲ್ಲೇ ಕರೆದುಕೊಂಡು ಹೋಗುತ್ತೇನೆ. ಜೊತೆಯಾಗಿ ಎಲ್ಲರ ಸೇವೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಇದು ಎಲ್ಲರಿಗೂ ಮನವರಿಕೆಯಾಗಿದೆ.

► ಕ್ಷೇತ್ರದ ಜನ ನಿಮಗೇ ಏಕೆ ಮತಹಾಕಬೇಕು ಹಾಗೂ ನೀವು ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಹಾಕಿಕೊಂಡ ನೀಲನಕಾಶೆ ಏನು ?

ಉಡುಪಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಇರಬಹುದು. ರೈಲ್ವೆ ಅಭಿವೃದ್ಧಿ ಇರಬಹುದು, ಮೀನುಗಾರರ ಅಭಿವೃದ್ಧಿ ಇರಬಹುದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಇರಬಹುದು, ರೈತರ ಸಮಸ್ಯೆ ನಿವಾರಣೆ ಇರಬಹುದು, ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವುದು ಇರಬಹುದು, ಈ ಭಾಗದಲ್ಲಿ ಜನರ ಅನೇಕ ಜ್ವಲಂತ ಸಮಸ್ಯೆಗಳಿವೆ. ವಿಶೇಷವಾಗಿ ಮರಳುಗಾರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಇರಬಹುದು. ಇವುಗಳ ಬಗ್ಗೆ ನಾನು ಹೆಚ್ಚಿನ ಗಮನ ಸೆಳೆಯುತ್ತೇನೆ. ಏಕೆಂದರೆ ಕೇಂದ್ರದಲ್ಲಿ ಒಬ್ಬ ಸಂಸದನಾಗಿ ಕೆಲಸ ಮಾಡಲು ಅನುಕೂಲವಾಗುತ್ತೆ. ರಾಜ್ಯದಲ್ಲೂ ನಮ್ಮದೇ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರವಿದೆ. ಹೀಗಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವಾಗಿ ರೂಪಿಸುವ ನಮ್ಮ ಕನಸನ್ನು ನನಸು ಮಾಡಲು ಜನರ ಬೆಂಬಲ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)