varthabharthi

ಬೆಂಗಳೂರು

ದ್ವಿತೀಯ ಪಿಯು ಫಲಿತಾಂಶ: ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ

ವಾರ್ತಾ ಭಾರತಿ : 15 Apr, 2019

ಬೆಂಗಳೂರು, ಎ.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಕಟಿಸಿರುವ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಪರೀಕ್ಷೆ ಬರೆದ 1,49,262 ವಿದ್ಯಾರ್ಥಿಗಳ ಪೈಕಿ 93,860 ಮಂದಿ ಉತ್ತೀರ್ಣರಾಗುವ ಮೂಲಕ ಶೇ.62.88ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ನಗರ ಪ್ರದೇಶದಲ್ಲಿ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,20,657 ಮಂದಿ ತೇರ್ಗಡೆಯಾಗುವ ಮೂಲಕ ಶೇ.61.38 ಫಲಿತಾಂಶ ದಾಖಲಾಗಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 6,71,653 ವಿದ್ಯಾರ್ಥಿಗಳ ಪೈಕಿ 4,14,583 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 61.73 ಶೇ. ಫಲಿತಾಂಶ ದಾಖಲಾಗಿದೆ.

ಬಾಲಕಿಯರದ್ದೇ ಮೇಲುಗೈ
 ಎಂದಿನಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರದೆ ಒಟ್ಟು 3,33,985 ವಿದ್ಯಾರ್ಥಿನಿಯರ ಪೈಕಿ 2,27,879 ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕರ ಪೈಕಿ ಪರೀಕ್ಷೆಗೆ ಹಾಜರಾದ 3,37,668 ವಿದ್ಯಾರ್ಥಿಗಳ ಪೈಕಿ 1,86,690 ಮಂದಿ ತೇರ್ಗಡೆಯಾಗಿದ್ದಾರೆ.

54,823 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆ, 80,357 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 52,106 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ 2,17,776 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 1,44,983 ಮಂದಿ ಉತ್ತೀರ್ಣರಾಗುವ ಮೂಲಕ 66.58 ಶೇ., ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ 2,53,865 ಮಂದಿ ಪರೀಕ್ಷೆ ಬರೆದಿದ್ದು, 1,68,531 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 66.39 ಶೇ. ಫಲಿತಾಂಶ ಹಾಗೂ ಕಲಾ ವಿಭಾಗದಲ್ಲಿ 2,00,022 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,01,073 ಮಂದಿ ತೇರ್ಗಡೆಯಾಗುವ ಮೂಲಕ 50.63 ಶೇ. ಫಲಿತಾಂಶ ದಾಖಲಿಸಿದೆ.

ಕನ್ನಡ ಮಾಧ್ಯಮದಲ್ಲಿ 1,61,923 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಆಂಗ್ಲ ಮಾಧ್ಯಮದಲ್ಲಿ 2,52,664 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ.100 ಫಲಿತಾಂಶ

15 ಸರಕಾರಿ ಪಪೂ ಕಾಲೇಜು, 1 ಅನುದಾನಿತ, 63 ಅನುದಾನರಹಿತ ಹಾಗೂ 1 ವಿಭಜಿತ ಪದವಿ ಪೂರ್ವ ಕಾಲೇಜು 100 ಶೇ. ಫಲಿತಾಂಶ ದಾಖಲಿಸಿದೆ.

ಶೂನ್ಯ ಫಲಿತಾಂಶ
3 ಸರಕಾರಿ ಪಪೂ ಕಾಲೇಜು, 1 ಅನುದಾನಿತ, 94 ಅನುದಾನರಹಿತ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)