varthabharthi

ರಾಷ್ಟ್ರೀಯ

ಕೇಸರಿ ಪಕ್ಷದ ವಿವಾದಾತ್ಮಕ ನಾಯಕ ರಾಜಾ ಸಿಂಗ್ ರ ಮತ್ತೊಂದು ವಿವಾದ

ಪಾಕ್ ಸೇನೆಯ ಹಾಡಿನ ಟ್ಯೂನ್ ನಕಲು ಮಾಡಿ ಭಾರತೀಯ ಸೇನೆಗೆ ಸಮರ್ಪಿಸಿದ ಬಿಜೆಪಿ ಶಾಸಕ!

ವಾರ್ತಾ ಭಾರತಿ : 15 Apr, 2019

ಹೊಸದಿಲ್ಲಿ, ಎ.15: ತೆಲಂಗಾಣದ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಪಾಕ್ ಸೇನೆಯ ಹಾಡನ್ನು ನಕಲಿ ಮಾಡಿ ಭಾರತೀಯ ಸೇನೆಗೆ ಸಮರ್ಪಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ವಾದ ವಿವಾದಗಳು ನಡೆಯುತ್ತಿವೆ.

‘ಟೈಗರ್ ರಾಜಾ ಸಿಂಗ್’ ಎಂಬ ಟ್ವಿಟ್ಟರ್ ಹ್ಯಾಂಡಲ್ ಹಾಗೂ ‘ನಾವು ಹಿಂದು ರಾಷ್ಟ್ರ ಸ್ಥಾಪಿಸೋಣ’ ಎಂಬ ಬರಹವಿರುವ ಕವರ್ ಫೋಟೋ ಹೊಂದಿರುವ ರಾಜಾ ಸಿಂಗ್  ಭಾರತೀಯ ಸೇನೆಗೆ ಸಮರ್ಪಿಸಿ ಒಂದು ಹಾಡನ್ನು ಪೋಸ್ಟ್ ಮಾಡಿದ್ದರು. “ಹಿಂದುಸ್ತಾನ ಝಿಂದಾಬಾದ್' ಎಂದು ಡಿಸ್ಕೋ ಧಾಟಿಯಲ್ಲಿ ಹಾಡನ್ನು ಹಾಡಿದ್ದರು. ಹಾಡಿನ ಪ್ರೊಮೋವೀಡಿಯೋವನ್ನು ಎಪ್ರಿಲ್ 12ರಂದು ಪೋಸ್ಟ್ ಮಾಡಿದ್ದ ರಾಜಾ ಇಡೀ ಹಾಡನ್ನು ಎಪ್ರಿಲ್ 14ರಂದು ಬಿಡುಗಡೆಗೊಳಿಸಿದ್ದರು.

ಪಾಕಿಸ್ತಾನದಲ್ಲಿರುವ ಹಲವರು ಇದು ಪಾಕಿಸ್ತಾನ ತನ್ನ ಮಿಲಿಟರಿಯನ್ನು ಹೊಗಳಿ  ಪಾಕಿಸ್ತಾನ ದಿನವಾದ ಮಾರ್ಚ್ 23ರಂದು ಬಿಡುಗಡೆಗೊಳಿಸಲಾದ ಹಾಡಿನ ನಕಲು ಎಂದುಹೇಳಲಾರಂಭಿಸಿದ್ದರು.

ಪಾಕಿಸ್ತಾನ ಸೇನಾ ಪಡೆಯ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಕೂಡ ಟ್ವೀಟ್ ಮಾಡಿ ``ನೀವು ನಕಲು ಮಾಡಿರುವುದು ಖುಷಿಯಾಗಿದೆ, ಆದರೆ ನಕಲು ಮಾಡಿಸತ್ಯವನ್ನೂ ಹೇಳಿ'' ಎಂದಿದ್ದಾರೆ.

ಇದಕೆ ಪ್ರತಿಕ್ರಿಯೆಯಾಗಿ ರಾಜಾ ಸಿಂಗ್ ``ನನ್ನ ಹಾಡು ಹಿಂದುಸ್ತಾನ್ ಝಿಂದಾಬಾದ್ ಬಗ್ಗೆ ಪಾಕ್ ಮಾಧ್ಯಮ ಕೂಡ ವರದಿ ಮಾಡುತ್ತಿರುವುದು ಖುಷಿಯಾಗಿದೆ'' ಎಂದಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಮೇಜರ್ ಜನರಲ್ ಗಫೂರ್, “ಪಾಕಿಸ್ತಾನ ಮಾಧ್ಯಮ ಈ ಹಾಡಿನ ಬಗ್ಗೆ ವರದಿ ಮಾಡುತ್ತಿಲ್ಲ, ಜಗತ್ತಿನ ಇತರೆಡೆ ಇದನ್ನು ಬೇರೊಂದು ರೀತಿಯಲ್ಲಿಹೇಳಲಾಗುತ್ತಿದೆ. ನನ್ನ ಈ ಹಿಂದಿನ ಟ್ವೀಟ್ ನ ಎರಡನೇ ವಾಕ್ಯ `ನಕಲು ಮಾಡಿ, ಸತ್ಯವನ್ನೂ ಹೇಳಿ' ಈಗಲೂ ಅನ್ವಯವಾಗುತ್ತದೆ. ಈ ಸುಳ್ಳು ಒಂದು ಅಚ್ಚರಿಯಲ್ಲ'' ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)