varthabharthi

ಕರಾವಳಿ

ಹೆಬ್ರಿ: ಗ್ರಾಮೀಣ ಪ್ರದೇಶದ ಪ್ರತಿಭೆ ರಈಸಾ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 3ನೆ ಸ್ಥಾನ

ವಾರ್ತಾ ಭಾರತಿ : 15 Apr, 2019

ಹೆಬ್ರಿ, ಎ.15: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನ ಪುರಸ್ಕೃತ ಪ್ರತಿಭಾನ್ವಿತ ವಿದ್ಯಾರ್ಥಿನಿ ರಈಸಾ, ಈ ಬಾರಿಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 592 (ಶೇ.98.66) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೆ ಸ್ಥಾನ ಪಡೆದುಕೊಂಡಿದ್ದಾರೆ.

ತೀರಾ ಗ್ರಾಮೀಣ ಪ್ರದೇಶವಾಗಿರುವ ಹಿರಿಯಡ್ಕ ಸಮೀಪದ ಪುತ್ತಿಗೆ ನಿವಾಸಿಯಾಗಿರುವ ರಈಸಾ, ಗ್ರಾಮೀಣ ಪ್ರದೇಶದಲ್ಲಿಯೇ ಇರುವ ಹೆಬ್ರಿಯ ಕಿನ್ನಿ ಗುಡ್ಡೆಯ ಎಸ್‌ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತು ಈ ಮಹತ್ತರ ಸಾಧನೆ ಮಾಡಿದ್ದಾರೆ.

ಎ.ಉಮ್ಮರಬ್ಬ ಹಾಗೂ ರುಕ್ಸನಾ ದಂಪತಿಯ ಪುತ್ರಿ ರಈಸಾ, ಇಂಗ್ಲಿಷ್‌ನಲ್ಲಿ 99, ಹಿಂದಿಯಲ್ಲಿ 96, ಭೌತಶಾಸ್ತ್ರದಲ್ಲಿ 98, ಗಣಿತದಲ್ಲಿ 99, ರಾಸಾಯನ ಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ತಂದೆ ಎ.ಉಮ್ಮರಬ್ಬ ಉದ್ಯಮಿಯಾಗಿದ್ದು, ತಾಯಿ ರುಕ್ಸನಾ ಗೃಹಿಣಿಯಾಗಿದ್ದಾರೆ. ಸಹೋದರ ಮಶ್ಕೂರ್ ಅಹ್ಮದ್ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ರಈಸಾ ಮಣಿಪಾಲ ಮಾಧವ ಕೃಪಾದಲ್ಲಿ 10ನೆ ತರಗತಿಯವರೆಗೆ ಶಿಕ್ಷಣ ಮುಗಿಸಿದ್ದರು.

ಟೈಮ್‌ಟೇಬಲ್ ಇಲ್ಲದ ಓದು

‘ರಾಜ್ಯಕ್ಕೆ ಮೂರನೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ನನ್ನ ಈ ಸಾಧನೆಗೆ ಮುಖ್ಯ ಕಾರಣ ನನ್ನ ಹೆತ್ತವರು. ಅದೇ ರೀತಿ ಉಪನ್ಯಾಸಕರು, ಆಡಳಿತ ಮಂಡಳಿ ಕೂಡ ನನಗೆ ತುಂಬಾ ಪ್ರೋತ್ಸಾಹ ನೀಡಿದೆ ಎಂದು ರ್ಯಾಂಕ್ ವಿಜೇತೆ ರಈಸಾ ಪ್ರತಿಕ್ರಿಯಿಸಿದ್ದಾರೆ.

‘ಓದುವುದಕ್ಕೆ ನಾನು ಯಾವುದೇ ಟೈಮ್ ಟೇಬಲ್ ಹಾಕಿಕೊಂಡಿರಲಿಲ್ಲ. ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಮಧ್ಯೆ ಮನಸ್ಸಾದರೆ ಬಂದು ಓದಿ ಕೊಳ್ಳುತ್ತಿದ್ದೆ. ಅದಕ್ಕಾಗಿ ಸಮಯವನ್ನು ಯಾವತ್ತೂ ಕೂಡ ನಿಗದಿಪಡಿಸಿರಲಿಲ್ಲ. ಮನೆಯವರು ಕೂಡ ಓದುವ ವಿಚಾರದಲ್ಲಿ ನನ್ನ ಮೇಲೆ ಯಾವತ್ತೂ ಕೂಡ ಒತ್ತಡ ಹಾಕಿಲ್ಲ ಎಂದು ಅವರು ತಿಳಿಸಿದರು.

ಅಗತ್ಯಕ್ಕೆ ಬೇಕಾಗಿ ವಾಟ್ಸಾಪ್ ಬಳಕೆ ಮಾಡುತ್ತಿದ್ದೆ ಹೊರತು ಫೆಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದರೂ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ. ನನ್ನ ಖಾತೆ ನನ್ನ ತಾಯಿ ಮೊಬೈಲ್‌ನಲ್ಲಿ ತೆರೆದಿರುವುದರಿಂದ ಅದನ್ನು ಅವರೇ ನೋಡಿಕೊಳ್ಳುತ್ತಿದ್ದರು ಎಂದು ಅವರು ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ

‘ಈ ತಿಂಗಳಲ್ಲಿ ನಡೆಯುವ ಸಿಇಟಿ ಹಾಗೂ ಮುಂದಿನ ತಿಂಗಳು ನಡೆಯುವ ನೀಟ್ ಪರೀಕ್ಷೆಯನ್ನು ಎದುರಿಸಿ ಅದರಲ್ಲಿ ಬರುವ ಅಂಕಗಳ ಆಧಾರದಲ್ಲಿ ನಾನು ನನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇದ್ದರೂ ನನ್ನ ಯಾವುದೇ ನಿರ್ಧಾರವೂ ಅಂಕಗಳ ಮೇಲೆ ಅವಲಂಬಿ ಸಿರುತ್ತದೆ. ಅದೇ ರೀತಿ ಜೆಇಇ ಪರೀಕ್ಷೆಯನ್ನು ಮೊದಲ ಹಂತದಲ್ಲಿ ಬರೆದು ಅರ್ಹತೆ ಪಡೆದಿದ್ದೇನೆ. ಎರಡನೆ ಹಂತದ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ’ ಎಂದು ರಈಸಾ ತಿಳಿಸಿದರು.

‘ನನ್ನ ಶಾಲೆಯಲ್ಲಿನ ಕಲಿಕೆಗೆ ಪೂರಕವಾದ ವಾತಾವರಣ ನನಗೆ ಪ್ರೇರಣೆ ಯಾಗಿದೆ. ನಾನು ಸ್ವತಃ ಅಧ್ಯಯನದ ಮೂಲಕ ಪರೀಕ್ಷೆ ಎದುರಿಸಿದ್ದೆ. ಕಾಲೇಜಿ ನಲ್ಲಿಯೇ ಎಲ್ಲ ರೀತಿಯ ಕೋಚಿಂಗ್ ದೊರೆಯುತ್ತಿದ್ದುದರಿಂದ ನನಗೆ ಯಾವುದೇ ಹೆಚ್ಚುವರಿ ಕೋಚಿಂಗ್ ಹಾಗೂ ಟ್ಯೂಶನ್‌ನ ಅಗತ್ಯವೇ ಕಂಡು ಬಂದಿರಲಿಲ್ಲ’ ಎಂದು ಅವರು ಹೇಳಿದರು.

‘ಯಾವುದೇ ಸಂದೇಹ ಇದ್ದರೂ ಉಪನ್ಯಾಸಕರ ಜೊತೆ ಚರ್ಚಿಸಿ ಬಗೆಹರಿಸುತ್ತಿದ್ದೆ. ಅವರು ಯಾವ ಸಮಯದಲ್ಲೂ ನನಗೆ ಲಭ್ಯ ಇರುತ್ತಿದ್ದರು. ಹಾಗಾಗಿ ಅವರ ಪ್ರೋತ್ಸಾಹವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಕಾಲೇಜು ಗ್ರಾಮೀಣ ಪ್ರದೇಶದಲ್ಲಿದ್ದರೂ ಇಲ್ಲಿಯೇ ನನ್ನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಕೋಚಿಂಗ್ ದೊರೆತಿರುವುದು’ ಎಂದರು.

ಚಿತ್ರಕಲೆಯಲ್ಲಿ ಮಹತ್ತರ ಸಾಧನೆ

ಚಿತ್ರಕಲೆ ರಈಸಾ ಅವರದ್ದು ಆಸಕ್ತಿದಾಯಕ ಕ್ಷೇತ್ರ. ಪ್ರಾಥಮಿಕ ಶಿಕ್ಷಣದ ಸಂದರ್ಭ ಸಹಪಾಠಿಗಳಿಂದ ಪ್ರೇರಣೆಗೊಂಡ ರಈಸಾ, ಚಿತ್ರಕಲೆ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದು ಮಹತ್ತರ ಸಾಧನೆ ಮಾಡಿದ್ದಾರೆ.

ಆರಂಭದಲ್ಲಿ ರಈಸಾ ಚಿತ್ರಕಲಾ ತರಗತಿಗೆ ತೆರಳದೆಯೇ ಮನೆಯಲ್ಲಿಯೇ ಚಿತ್ರ ಬಿಡಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಆಸಕ್ತಿ ಹೆಚ್ಚಾದಾಗ ಕಲಾವಿದರಾದ ಪೆರ್ಡೂರಿನ ಸುರೇಶ್ ಜೊತೆ, ನಂತರ ಹಿರಿಯಡ್ಕದ ಪ್ರಸಾದ್ ಜೊತೆ ಚಿತ್ರಕಲೆ ಅಭ್ಯಾಸ ಮಾಡಿದರು.

ಈಗಾಗಲೇ ಹಲವು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚಿತ್ರಕಲೆಯಲ್ಲಿ ಭಾಗ ವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಅದಕ್ಕಾಗಿ ರಈಸಾ ಬೆಂಗಳೂರಿನಲ್ಲಿ ಗೃಹ ಸಚಿವರಿಂದ ಸನ್ಮಾನಿತಗೊಂಡಿದ್ದರು.

ಪೆರ್ಡೂರಿನಲ್ಲಿ ಹುಟ್ಟೂರ ಸನ್ಮಾನ, ಅರಣ್ಯ ಇಲಾಖೆಯವರ ಸನ್ಮಾನ, ಕಾರ್ಕಳದಲ್ಲಿ ನಡೆದ ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

‘ಚಿತ್ರಕಲೆ ನನ್ನ ಆಸಕ್ತಿದಾಯಕ ಕ್ಷೇತ್ರವಾಗಿರುವುದರಿಂದ ಅದನ್ನು ಮುಂದು ವರೆಸುತ್ತೇನೆ. ಸದ್ಯ ಥೀಮ್ ಡ್ರಾಯಿಂಗ್ ಮಾಡುತ್ತಿದ್ದು, ಮುಂದೆ ಪೊಟ್ರೈಟ್ ಚಿತ್ರವನ್ನು ಕೂಡ ಕಲಿಯಲು ಆಸಕ್ತಳಾಗಿದ್ದೇನೆ ಎಂದು ರಈಸಾ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)