varthabharthi

ಕರ್ನಾಟಕ

ರೈತರು-ಕೂಲಿ ಕಾರ್ಮಿಕರನ್ನು ಮೋದಿ ಸರಕಾರ ನಿರ್ಲಕ್ಷಿಸಿದೆ: ದೇಶಪಾಂಡೆ

ವಾರ್ತಾ ಭಾರತಿ : 15 Apr, 2019

ಹುಬ್ಬಳ್ಳಿ, ಎ.15: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ರೈತರು-ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸಿದ್ದು, ಕಳೆದ 5 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಮಿತಿ ಮೀರಿ ಬೆಳೆದಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಶೇ.2.1ರಷ್ಟಿದ್ದ ನಿರುದ್ಯೋಗದ ಪ್ರಮಾಣ ನರೇಂದ್ರ ಮೋದಿ ಆಡಳಿತದಲ್ಲಿ ಶೇ.6.1ಕ್ಕೆ ಏರಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಯ ಕಡೆಗೆ ಗಮನವನ್ನೇ ವಹಿಸಿಲ್ಲವೆಂದು ಆರೋಪಿಸಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಕೂಡ ರೈತರ 3ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನೆ ಮುಂದುವರೆಸಿರುವ ಬಿಜೆಪಿ ಸರಕಾರ, ಪುನಃ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಕೇಳುವುದಕ್ಕೆ ಯಾವ ನೈತಿಕತೆಯಿದೆ. ಈ ಐದು ವರ್ಷಗಳಲ್ಲಿ ಕೇವಲ ಸಾಮಾನ್ಯರಿಗೆ ಸುಳ್ಳು ಭರವಸೆಗಳನ್ನೆ ನೀಡುತ್ತಾ ಕಾಲ ಕಳೆದಿದ್ದಾರೆ ಎಂದು ಅವರು ಹೇಳಿದರು.

ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ನೀಡಲು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರಕಾರ ಕೇಂದ್ರಕ್ಕೆ 500ಕೋಟಿ ರೂ.ಸಾಲ ನೀಡಿದೆ. ಈ ಸತ್ಯಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ ಎಂದು ಅವರು ಹೇಳಿದರು.

ಸ್ವಾತಂತ್ರದ ಆರಂಭದ ಕಾಲಘಟ್ಟದಲ್ಲಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಚಾರಿತ್ರವನ್ನು ನೋಡಿ ಮತ ಹಾಕುತ್ತಿದ್ದರು. ಆದರೆ, ಈಗ ಕೇವಲ ಹಣ, ಜಾತಿ ಪ್ರಾಬಲ್ಯವೇ ನಡೆಯುತ್ತಿದೆ. ಪ್ರಜಾಪ್ರಭತ್ವದ ವ್ಯವಸ್ಥೆಗೆ ಇದು ಅಪಾಯಕಾರಿಯಾದದ್ದೆಂದು ಅವರು ಆತಂಕ ವ್ಯಕ್ತಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)