varthabharthi

ಗಲ್ಫ್ ಸುದ್ದಿ

ವೈರಲ್ ಸಂದೇಶದ ಬಗ್ಗೆ ಸಿಜಿಐ ಸ್ಪಷ್ಟನೆ

ಯುಎಇಯಲ್ಲಿರುವ ಭಾರತೀಯರಿಗೆ ಆನ್‌ಲೈನ್ ಮತದಾನಕ್ಕೆ ಅವಕಾಶವಿದೆಯೇ ?

ವಾರ್ತಾ ಭಾರತಿ : 15 Apr, 2019

ದುಬೈ, ಎ.15: 2019ರ ಲೋಕಸಭಾ ಚುನಾವಣೆಗಾಗಿ ಯುಎಇಯಲ್ಲಿನ ಭಾರತೀಯ ವಲಸಿಗರಿಗೆ ಆನ್‌ಲೈನ್ ಮತದಾನಕ್ಕೆ ಅವಕಾಶವಿಲ್ಲ ಎಂದು ದುಬೈನಲ್ಲಿನ ಕಾನ್ಸುಲ್-ಜನರಲ್ ಆಫ್ ಇಂಡಿಯಾ(ಸಿಜಿಐ) ವಿಪುಲ್ ಅವರು ತಿಳಿಸಿದ್ದಾರೆ. ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಆನ್‌ಲೈನ್ ಮತದಾನ ಮಾಡಲು ಸಾಧ್ಯವಾಗಬಹುದು ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.

ಅನಿವಾಸಿ ಭಾರತೀಯರು ಆನ್‌ಲೈನ್ ಮೂಲಕ ಮತದಾನ ಮಾಡಬಹುದು ಎಂಬ ತಪ್ಪು ಮಾಹಿತಿಗಳು ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ಭಾರತೀಯ ವಲಸಿಗರು ದೂರಿಕೊಂಡಿದ್ದರು.

2019ರ ಚುನಾವಣೆಗಾಗಿ ಇ-ವೋಟಿಂಗ್‌ಗೆ ಅವಕಾಶವಿಲ್ಲ ಎಂದು ವಿಪುಲ್‌ರನ್ನು ಉಲ್ಲೇಖಿಸಿ ಇಲ್ಲಿಯ ಮಾಧ್ಯಮವೊಂದು ವರದಿ ಮಾಡಿದೆ.

ಯಾರೇ ಆದರೂ ತಮ್ಮ ಹೆಸರನ್ನು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್(ಎನ್‌ವಿಎಸ್‌ಪಿ)ನಲ್ಲಿ ನೊಂದಾಯಿಸಿಕೊಳ್ಳಬಹುದು ಮತ್ತು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ ವಿಪುಲ್,ತಮಗೆ ಸಂಬಂಧಿಸಿದ ಮತಗಟ್ಟೆಗೆ ಖುದ್ದಾಗಿ ಭೇಟಿ ನೀಡಿ ಮತದಾನ ಮಾಡುವುದು ಮತದಾರರಿಗಿರುವ ಏಕೈಕ ಮಾರ್ಗವಾಗಿದೆ ಎಂದರು.

ಹಲವಾರು ಭಾರತೀಯ ವಲಸಿಗರು ತಿಳಿಸಿರುವಂತೆ ಆನ್‌ಲೈನ್ ಮತದಾನ ಕುರಿತ ಪೋಸ್ಟ್‌ಗಳು ಕಳೆದ ಜನವರಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೆಲವರು ಈ ಪೋಸ್ಟ್‌ಗಳನ್ನು ನಂಬಿದ್ದರೆ ಇತರರು ಭಾರತೀಯ ಚುನಾವಣಾ ಆಯೋಗದ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿ ಇವು ಸುಳ್ಳು ಸುದ್ದಿಗಳು ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)