varthabharthi

ರಾಷ್ಟ್ರೀಯ

ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ: 140ನೇ ಸ್ಥಾನಕ್ಕೆ ಕುಸಿದ ಭಾರತ

ವಾರ್ತಾ ಭಾರತಿ : 18 Apr, 2019

ಹೊಸದಿಲ್ಲಿ, ಎ.18: ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎರಡು ಸ್ಥಾನ ಕೆಳಕ್ಕೆ ಜಾರಿದ್ದು, 180 ದೇಶಗಳ ಪಟ್ಟಿಯಲ್ಲಿ 140ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ 2019ರಲ್ಲಿ ನಾರ್ವೆ ಪ್ರಥಮ ಸ್ಥಾನದಲ್ಲಿದ್ದರೆ ಏಶ್ಯಾದ ರಾಷ್ಟ್ರಗಳಾದ ಭಾರತ 140, ಪಾಕಿಸ್ತಾನ 142 ಮತ್ತು ಬಾಂಗ್ಲಾದೇಶ 150ನೇ ಸ್ಥಾನದಲ್ಲಿದೆ.

ಇದೀಗ ವಿಶ್ವದಾದ್ಯಂತ ಪತ್ರಕರ್ತರ ವಿರುದ್ಧ ದ್ವೇಷ ಭಾವನೆಯ ಪ್ರಕರಣ ಹೆಚ್ಚುತ್ತಿದ್ದು, ಕಳೆದ ವರ್ಷ ಭಾರತದಲ್ಲಿ ಕರ್ತವ್ಯ ನಿರ್ವಹಣೆಯ ಸಂದರ್ಭ ಕನಿಷ್ಟ 6 ಪತ್ರಕರ್ತರು ಹತರಾಗಿದ್ದಾರೆ ಎಂದು ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಬಿಡುಗಡೆಗೊಳಿಸಿದ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸರಿಂದ, ಮಾವೋವಾದಿ ಹೋರಾಟಗಾರರಿಂದ, ಕ್ರಿಮಿನಲ್‌ಗಳಿಂದ ಅಥವಾ ಭ್ರಷ್ಟ ರಾಜಕಾರಣಿಗಳಿಂದ ನಡೆಯುತ್ತಿರುವ ಪತ್ರಕರ್ತರ ವಿರುದ್ಧದ ಹಿಂಸಾಚಾರವು ಭಾರತದಲ್ಲಿ ಪ್ರಸಕ್ತ ಸಂದರ್ಭದಲ್ಲಿ ಎದ್ದುಕಾಣುವ ವೈಶಿಷ್ಟವಾಗಿದೆ.

2018ರಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕನಿಷ್ಟ 6 ಪತ್ರಕರ್ತರು ಹತರಾಗಿದ್ದಾರೆ. 7ನೇ ಪ್ರಕರಣದಲ್ಲಿ ಹಲವು ಅನುಮಾನಗಳಿವೆ ಎಂದು ಸೂಚ್ಯಂಕ ತಿಳಿಸಿದೆ. ಈ ಹತ್ಯಾಘಟನೆಗಳು ಭಾರತದ ಪತ್ರಕರ್ತರು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮವಲ್ಲದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುವವರು ಎದುರಿಸುತ್ತಿರುವ ಅಪಾಯವನ್ನು ಸೂಚಿಸುತ್ತವೆ ಎಂದು ವರದಿ ತಿಳಿಸಿದೆ.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬೆಂಬಲಿಗರಿಂದ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆಯ ಘಟನೆಗಳು ಹೆಚ್ಚಿವೆ. ಹಿಂದುತ್ವದ ವಿರುದ್ಧ ಧ್ವನಿ ಎತ್ತುವ ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಧೈರ್ಯ ತೋರುವ ಪತ್ರಕರ್ತರನ್ನು ಗುರಿಯಾಗಿಸಿ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ ಸೂಕ್ಷ್ಮ ಪ್ರದೇಶ ಎಂದು ಅಧಿಕಾರಿಗಳು ಪರಿಗಣಿಸಿರುವ ಕಾಶ್ಮೀರದಂತಹ ಸ್ಥಳಗಳಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಕಠಿಣವಾಗಿದೆ. ಇಲ್ಲಿ ವಿದೇಶಿ ಪತ್ರಕರ್ತರನ್ನು ನಿಷೇಧಿಸಲಾಗಿದೆ ಮತ್ತು ಇಂಟರ್‌ನೆಟ್ ಸಂಪರ್ಕ ಆಗಾಗ ಕಡಿತವಾಗುತ್ತದೆ ಎಂದು ವರದಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)