varthabharthi

ರಾಷ್ಟ್ರೀಯ

‘ಮಾನವ ಗುರಾಣಿ’ ಪ್ರಕರಣದಲ್ಲಿ ಸುದ್ದಿಯಾಗಿದ್ದ ಫಾರೂಕ್ ಅಹ್ಮದ್ ದಾರ್‌ಗೆ ಚುನಾವಣಾ ಕರ್ತವ್ಯ

ವಾರ್ತಾ ಭಾರತಿ : 18 Apr, 2019

ಶ್ರೀನಗರ, ಎ. 18: ಸೇನೆಯಿಂದ ಮಾನವ ಗುರಾಣಿಯಾಗಿ ಜೇಪ್ ಗೆ ಕಟ್ಟಲ್ಪಟ್ಟಿದ್ದ ಫಾರೂಕ್ ಅಹ್ಮದ್ ದಾರ್ ಅವರನ್ನು ಬುಡ್ಗಾಂವ್‌ನ ಉತ್ಲಿಗಾಂವ್ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಫಾರೂಕ್ ಅಹ್ಮದ್ ದಾರ್ ಅವರನ್ನು ಸೇನೆ ಮಾನವ ಗುರಾಣಿಯಾಗಿ ಬಳಸಿದ್ದ ಘಟನೆ 2017 ಎಪ್ರಿಲ್ 9ರಂದು ನಡೆದಿತ್ತು. ಅಂದು ಶ್ರೀನಗರದಲ್ಲಿ ಉಪ ಚುನಾವಣೆ ಕೂಡ ನಡೆದಿತ್ತು.

ಫಾರೂಕ್ ಅಹ್ಮದ್ ದಾರ್ ಆರೋಗ್ಯ ಇಲಾಖೆಯಲ್ಲಿ ಜಾಡಮಾಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಬುಡ್ಗಾಂವ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ನಝೀರ್ ಅಹ್ಮದ್ ಹೇಳಿದ್ದಾರೆ. ಸೇನಾ ವಾಹನದ ಬಾನೆಟ್‌ಗೆ ದಾರ್ ಅವರನ್ನು ಕಟ್ಟಿದ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯ ಚಿತ್ರ ಎಲೆಕ್ಟ್ರಾನಿಕ್ಸ್ ಹಾಗೂ ಪತ್ರಿಕೆಗಳಲ್ಲಿ ಪ್ರಮುಖ ವಿಷಯವಾಗಿ ಪ್ರಕಟವಾಗಿತ್ತು.

2017 ಎಪ್ರಿಲ್ 9ರಂದು ಉಪ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲು ಸಹೋದರಿ ಮನೆಗೆ ತೆರಳುತ್ತಿದ್ದ ಸಂದರ್ಭ ಸೇನೆ ದಾರ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಅನಂತರ ಅವರನ್ನು ಸೇನಾ ಜೀಪ್‌ಗೆ ಕಟ್ಟಿ 28 ಗ್ರಾಮಗಳಲ್ಲಿ ಪರೇಡ್ ನಡೆಸಿತ್ತು.

 “ನಾನು ಮಾಡಿದ ತಪ್ಪಾದರೂ ಏನು? ಮತಗಟ್ಟೆಗೆ ತೆರಳಿ ಮತ ಚಲಾಯಿಸಿರುವುದು ತಪ್ಪೇ?” ಎಂದು ದಾರ್ ಪ್ರಶ್ನಿಸಿದ್ದರು. ದಾರ್ ಅವರನ್ನು ಸೇನಾ ಜೀಪಿಗೆ ಕಟ್ಟಿರುವ ಘಟನೆ ಶ್ರೀನಗರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಗ್ರಾಮದ ಜನರ ಮನಸ್ಸಿನಲ್ಲಿ ಈಗಲೂ ಹಚ್ಚ ಹಸಿರಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)