varthabharthi

ರಾಷ್ಟ್ರೀಯ

ಅಲಹಾಬಾದ್ ವಿವಿ ಹಾಸ್ಟೆಲ್‌ಗಳಲ್ಲಿ ಕಚ್ಛಾ ಬಾಂಬ್, ನಕಲಿ ಪಿಸ್ತೂಲ್ ಪತ್ತೆ !

ವಾರ್ತಾ ಭಾರತಿ : 18 Apr, 2019

ಲಕ್ನೊ, ಎ. 17: ಅಲಹಾಬಾದ್ ವಿಶ್ವವಿದ್ಯಾನಿಲಯದ ಎರಡು ಹಾಸ್ಟೆಲ್‌ಗಳಲ್ಲಿ ಉತ್ತರಪ್ರದೇಶ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಕಚ್ಚಾ ಬಾಂಬ್ ತಯಾರಿ ಸಾಮಗ್ರಿ, ನಕಲಿ ಪಿಸ್ತೂಲ್ ಹಾಗೂ ಹಲವು ಖಾಲಿ ಸಾರಾಯಿ ಸೀಸೆಗಳು ಪತ್ತೆಯಾಗಿವೆ.

ರವಿವಾರ ರಾತ್ರಿ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಗುಂಡಿನಿಂದ ಮೃತಪಟ್ಟ ಬಳಿಕ ತಾರಾಚಂದ್ ಹಾಗೂ ಪಿ.ಸಿ. ಬ್ಯಾನರ್ಜಿ ಹಾಸ್ಟೆಲ್‌ಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ನಡುವೆ ತಾರಾಚಂದ್ ಹಾಸ್ಟೆಲ್‌ನ ವಿದ್ಯಾರ್ಥಿಗಳ ಗುಂಪೊಂದು ಮಂಗಳವಾರ ವಿವಾಹ ಸಮಾರಂಭವೊಂದರಲ್ಲಿ ದಾಂಧಲೆ ನಡೆಸಿದೆ. ಎರಡೂ ಹಾಸ್ಟೆಲ್‌ಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವ ವ್ಯಕ್ತಿಗಳ 106 ಕೊಠಡಿಗಳಿಗೆ ಕ್ಷಿಪ್ರ ಕಾರ್ಯ ಪಡೆಯ ಸಿಬ್ಬಂದಿ ಬೀಗ ಮುದ್ರೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸ್ಟೆಲ್ ಕೊಠಡಿಗಳನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿರುವ ವಿದ್ಯಾರ್ಥಿ ನಾಯಕ ಅಭಿಷೇಕ್ ಸಿಂಗ್ ಅವರ ಚಾಲಕ ಸಹಿತ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾರಾಚಂದ್ ಹಾಸ್ಟೆಲ್‌ನಿಂದ 20 ಬೈಕ್ ಹಾಗೂ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲಹಾಬಾದ್ ವಿಶ್ವದ್ಯಾನಿಲಯ ಕ್ಯಾಂಪಸ್‌ನಲ್ಲಿ ಹಿಂಸಾಚಾರ ಹಾಗೂ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಮಂಗಳವಾರ ಕಳವಳ ವ್ಯಕ್ತಪಡಿಸಿದ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)