varthabharthi

ರಾಷ್ಟ್ರೀಯ

60 ವರ್ಷದ ರೈತ ಮಹಿಳೆಯ ಅಳಲು

ಮೋದಿ ರ‍್ಯಾಲಿಗೆ ಬೆಳೆ ನಾಶಗೈದರು, ವರ್ಷ ಕಳೆದರೂ ಪರಿಹಾರ ಕೊಡಲು ಮರೆತರು

ವಾರ್ತಾ ಭಾರತಿ : 19 Apr, 2019

ಕಚ್ನಾರ್ (ವಾರಣಾಸಿ, ಉತ್ತರಪ್ರದೇಶ), ಎ. 18: “ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಲು ನಿರ್ಮಿಸಲಾದ ಎರಡು ಹೆಲಿಪ್ಯಾಡ್‌ಗಳಿಂದ ನನ್ನ ಬೆಳೆ ನಾಶವಾಯಿತು. ಬೆಳೆ ನಾಶಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ನಾವು ಇದುವರೆಗೆ ಪರಿಹಾರ ಸ್ವೀಕರಿಸಿಲ್ಲ” ಎಂದು ವಾರಣಾಸಿ ರಜತಲಾಬ್ ಸಮೀಪದ ಕಚ್ನಾರ್ ಗ್ರಾಮದ 60 ಹರೆಯದ ರೈತ ಮಹಿಳೆ ಚಮೇಲಿ ದೇವಿ ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಗೆ ಆಗಮಿಸಿದ್ದರು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮೋದಿ ಅವರು ದೀರ್ಘ ಭಾಷಣ ಮಾಡಿದರು. ಅನಂತರ ಅವರು ಹೆಲಿಕಾಪ್ಟರ್ ಏರಿ ಹಾರಿ ಹೋದರು. ಆದರೆ, ನಮಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಹೆಲಿಪ್ಯಾಡ್ ನಿರ್ಮಾಣಕ್ಕೆ ಬಳಸಿದ್ದ ಇಟ್ಟಿಗೆಯನ್ನು ಕೂಡ ಸರಕಾರಿ ಅಧಿಕಾರಿಗಳು ಕೊಂಡೊಯ್ದರು” ಎಂದು ಅವರು ಆರೋಪಿಸಿದ್ದಾರೆ.

 2018 ಜುಲೈ 14ರಂದು ರಜತಲಾಬ್‌ನ ವಾರಣಾಶಿಯ ಸಮೀಪ ಇರುವ ಕಚ್ನಾರ್ ಗ್ರಾಮದಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. ಈ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಮೋದಿ ಅವರು 449.29 ಕೋಟಿ ರೂಪಾಯಿಯ 20 ಯೋಜನೆಗಳನ್ನು ಘೋಷಿಸಿದ್ದರು ಹಾಗೂ 487.66 ಕೋಟಿ ರೂಪಾಯಿ ವೆಚ್ಚದ ಯೋಜನೆ (ವೀಡಿಯೊ ಕಾನ್ಫರೆನ್ಸ್ ಮೂಲಕ) ಯನ್ನು ಉದ್ಘಾಟಿಸಿದ್ದರು. ಮೋದಿ ರ್ಯಾಲಿಗೆ ಸುಮಾರು 10 ಎಕರೆ ಭೂಮಿ ಬಳಸಲಾಗಿತ್ತು. ವೇದಿಕೆಯನ್ನು ವಿಶೇಷವಾಗಿ ನಿರ್ಮಿಸಲಾಗಿತ್ತು.

ಸಾವಿರಾರು ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಮೂರು ಹೆಲಿಪ್ಯಾಡ್ ಹಾಗೂ ಪ್ರತ್ಯೇಕ ಪಾರ್ಕಿಂಗ್ ಪ್ರದೇಶ ನಿರ್ಮಾಣ ಮಾಡಲಾಗಿತ್ತು. ರ್ಯಾಲಿಗೆ 7 ಮಂದಿ ರೈತರ ಕೃಷಿ ಭೂಮಿ ಬಳಸಲಾಗಿತ್ತು. ಗಿರಿಜಾ, ಖಾಟನ್ ಲಾಲ್, ಮಿಠಾಯಿ ಲಾಲ್, ಚಮೇಲಿ ದೇವಿ ಕೃಷಿ ಭೂಮಿ ಇದರಲ್ಲಿ ಒಳಗೊಂಡಿತ್ತು. ಆದರೆ, ಇವರಲ್ಲಿ ಯಾರಿಗೂ ಇದುವರೆಗೆ ಪರಿಹಾರ ದೊರಕಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)