varthabharthi

ರಾಷ್ಟ್ರೀಯ

2 ದಶಕಗಳ ನಂತರ ವೇದಿಕೆ ಹಂಚಿಕೊಂಡ ಮುಲಾಯಂ-ಮಾಯಾವತಿ: ಮೋದಿ ವಿರುದ್ಧ ವಾಗ್ದಾಳಿ

ವಾರ್ತಾ ಭಾರತಿ : 19 Apr, 2019

ಮೈನ್‌ಪುರಿ (ಉತ್ತರಪ್ರದೇಶ), ಎ. 19: ಎರಡು ದಶಕಗಳ ಕಾಲದ ದ್ವೇಷಕ್ಕೆ ಅಂತ್ಯ ಹಾಡಿರುವ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ಬಿಎಸ್ಪಿ ವರಿಷ್ಠೆ ಮಾಯಾವತಿ ಶುಕ್ರವಾರ ಇಲ್ಲಿನ ಕ್ರಿಶ್ಚಿಯನ್ ಕಾಲೇಜಿನ ಮೈದಾನದಲ್ಲಿ ನಡೆದ ಚುನಾವಣಾ ರ್ಯಾಲಿ ಸಂದರ್ಭ ವೇದಿಕೆ ಹಂಚಿಕೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ಮಾಯಾವತಿ, ಎಸ್ಪಿ ಪೋಷಕ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಹಿಂದುಳಿದ ವರ್ಗಗಳ ನಕಲಿ ನಾಯಕನಲ್ಲ. ಹಿಂದುಳಿದ ವರ್ಗಗಳ ನಿಜವಾದ ನಾಯಕ ಎಂದರು. 1995ರ ರಾಜ್ಯ ಕುಖ್ಯಾತ ಗೆಸ್ಟ್ ಹೌಸ್ ಘಟನೆಯ ಬಳಿಕ ಎಸ್ಪಿಯೊಂದಿಗೆ ಬಿಎಸ್ಪಿ ನಾಯಕಿ ಮೈತ್ರಿ ಕಡಿದುಕೊಂಡಿದ್ದರು. ಮುಲಾಯಂ ಸಿಂಗ್ ಅವರು ತನ್ನ ಸಂಕ್ಷಿಪ್ತ ಭಾಷಣದಲ್ಲಿ ‘‘ಬಹುಕಾಲದ ಬಳಿಕ ನಾನು ಹಾಗೂ ಮಾಯಾವತಿ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದೇವೆ. ನಾವು ಅವರನ್ನು ಸ್ವಾಗತಿಸುತ್ತೇವೆ ಹಾಗೂ ಕೃತಜ್ಞತೆ ಸಲ್ಲಿಸುತ್ತೇವೆ.’’ ಎಂದು ಹೇಳಿದರು.

ಅಲ್ಲದೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಮಾಯಾವತಿ ಅವರು ತಮ್ಮ ಭಾಷಣದಲ್ಲಿ ಎಸ್ಪಿಯೊಂದಿಗೆ ಕೈಜೋಡಿಸಿರುವುದನ್ನು ಸಮರ್ಥಿಸಿಕೊಂಡರು. ಕೆಲವು ಬಾರಿ ಪಕ್ಷದ ಹಾಗೂ ಜನರ ಹಿತಾಸಕ್ತಿಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ‘‘ರಾಜ್ಯ ಗೆಸ್ಟ್ ಹೌಸ್ ಪ್ರಕರಣದ ಹೊರತಾಗಿಯೂ ಮುಲಾಯಂ ಸಿಂಗ್‌ಜಿ ಅವರ ಚುನಾವಣಾ ಪ್ರಚಾರಕ್ಕೆ ನಾನು ಯಾಕೆ ಬಂದಿದ್ದೇನೆ ಎಂದು ಜನರಿಗೆ ಅಚ್ಚರಿ ಆಗಿರಬಹುದು. ಕೆಲವೊಮ್ಮೆ ಜನಹಿತ ಹಾಗೂ ಪಕ್ಷದ ಹಿತಾಸಕ್ತಿಗಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಮಾಯಾವತಿ ಹೇಳಿದರು.

 ಸಮಾಜದ ಎಲ್ಲ ವರ್ಗದ ಜನರನ್ನು ಮುಲಾಯಂ ಸಿಂಗ್ ಯಾದವ್ ತನ್ನೊಂದಿಗೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅವರು ಹಿಂದುಳಿದವರ ನಿಜವಾದ ನಾಯಕ. ಅವರು ಮೋದಿ ಅವರಂತೆ ಹಿಂದುಳಿದ ವರ್ಗಗಳ ನಕಲಿ ನಾಯಕನಲ್ಲ ಎಂದು ಮಾಯಾವತಿ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)