varthabharthi

ವಿಶೇಷ-ವರದಿಗಳು

ಡಯರ್ ನೀಡಿದ ಹನ್ನೊಂದನೆಯ ಕಮಾಂಡ್‌ಮೆಂಟ್

‘‘ನೀನು ಚಳವಳಿ ಮಾಡಬೇಡ’’

ವಾರ್ತಾ ಭಾರತಿ : 21 Apr, 2019
ಡಾ. ಬಿ. ಭಾಸ್ಕರ ರಾವ್

ನ್ಯಾಯಯುತವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಚಳವಳಿ ನಡೆಸುವವರನ್ನು ಭಯೋತ್ಪಾದಕ, ನಕ್ಸಲ್, ದೇಶದ್ರೋಹಿ ಎಂದು ಜೈಲಿಗೆ ಅಟ್ಟುವ ಪ್ರಭುತ್ವ ಗಳು ಡಯರ್‌ನ ಹಾಗೆ ನೀನು ಚಳವಳಿ ಮಾಡಬೇಡ; ಚಳವಳಿ ಮಾಡಿದರೆ ‘‘ಶೂಟ್ ಮಾಡುತ್ತೇನೆ’’ ಎಂದು ಹೇಳುತ್ತಿರುವಾಗ ಡಯರ್ ಇಂದಿಗೂ ನಮ್ಮ ಸಮಾಜವನ್ನು ಹಲವು ರೀತಿಗಳಲ್ಲಿ ಕಾಡುತ್ತಲೇ ಇದ್ದಾನೆ ಅನ್ನಿಸುವುದಿಲ್ಲವೇ?

‘‘ಅಮೃತಸರದ ಪರಿಸ್ಥಿತಿಯನ್ನು ತಿಳಿದಿದ್ದ ಬಹಳಷ್ಟು ಜನ ನಾನು ಮಾಡಿದ್ದು ಸರಿ ಎನ್ನುತ್ತಾರೆ...ಆದರೆ ಇತರ ಬಹಳಷ್ಟು ಜನ ನಾನು ಮಾಡಿದ್ದು ತಪ್ಪು ಎನ್ನುತ್ತಾರೆ. ನಾನೀಗ ಸತ್ತು ನಾನು ಮಾಡಿದ್ದು ಸರಿಯೋ ತಪ್ಪೋ ಎಂದು ನನ್ನ ಸೃಷ್ಟಿಕರ್ತನಿಂದಷ್ಟೆ ತಿಳಿಯ ಬಯಸುತ್ತೇನೆ.’’

-ಸಾಯುವ ಮೊದಲು ಡಯರ್ ಮರಣ ಶಯ್ಯೆಯಲ್ಲಿ ಮಲಗಿಕೊಂಡು ಹೇಳಿದನೆನ್ನಲಾದ ಮಾತುಗಳು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಅಪರಾಧಿ ,‘ಅಮೃತಸರದ ಕಟುಕ’ ತನ್ನ ಉದ್ದೇಶದ ಬಗ್ಗೆ ಮತ್ತು ತಾನು ನಿರಾಯುಧರಾದ ಜನರ ಮೇಲೆ ಗುಂಡಿನ ಮಳೆ ಗರೆಯವಂತೆ ಆಜ್ಞೆ ನೀಡಿ ಸುಮಾರು 500 ಮಂದಿಯ ಹತ್ಯೆಗೆ ಕಾರಣವಾದದ್ದರ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡಿದ್ದ. ಮೊದಲು ತಾನು ದೋಷಮುಕ್ತನಾಗಬೇಕೆಂಬ ದೃಷ್ಟಿಯಿಂದ ಮೃದು ಧೋರಣೆ ತಳೆದಿದ್ದ. ಆತ ತನಗೆ ಬ್ರಿಟಿಷ್ ಜನತೆಯ ಹಾಗೂ ಸರಕಾರದ ಒಂದು ವಲಯದಿಂದ ಬೆಂಬಲ ವ್ಯಕ್ತವಾಗುತ್ತಿದ್ದಂತೆ ತಾನು ಮಾಡಿದ್ದು ಸಂಪೂರ್ಣವಾಗಿ ಸರಿ ಎಂದು ಸಮರ್ಥಿಸಿಕೊಂಡಿದ್ದ. ಜಲಿಯನ್ ವಾಲಾಬಾಗ್‌ನಲ್ಲಿ ನೆರೆದಿದ್ದ ಸುಮಾರು 20 ಸಾವಿರ ಜನರು ದಂಗೆಕೋರರು; ಅವರ ಮೇಲೆ ಗುಂಡು ಹಾರಿಸುವಂತೆ ತಾನು ನೀಡಿದ ಆಜ್ಞೆಯ ಹಿಂದೆ ಆ ಜನರನ್ನು ಶಿಕ್ಷಿಸಲು ಗರಿಷ್ಠ ಸಂಖ್ಯೆಯಲ್ಲಿ ಕೊಲ್ಲುವುದಷ್ಟೇ ಅಲ್ಲದೆ ಪಂಜಾಬಿನಾದ್ಯಂತ ಬೇರೆ ಎಲ್ಲಿಯೂ ಜನರು ದಂಗೆ ಏಳದಂತೆ ತಡೆಯುವುದು ಕೂಡ ತನ್ನ ಉದ್ದೇಶವಾಗಿತ್ತು ಎಂದ. ಅವನು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಅವಮಾನಿತನಾಗಿ ಇಂಗ್ಲೆಂಡಿಗೆ ಮರಳಿದ ಬಳಿಕ ಅಮೃತಸರ ನರಮೇಧದ ವಿಚಾರಣೆ ನಡೆಸಿದ್ದ ಹಂಟರ್ ಆಯೋಗದ ಮುಂದೆ ಅವನ ಪರವಾಗಿ ವಾದಿಸಿದ ವಕೀಲರು, ಅವನು ಮಾಡಿದ್ದು ಪೂರ್ವನಿರ್ಧರಿತ ಮತ್ತು ಉದ್ದೇಶಪೂರ್ವಕವೇ ಆದರೂ, ಆತ ಒಂದು ದಂಗೆಯನ್ನು ಎದುರಿಸುತ್ತಿದ್ದ. ಆದ್ದರಿಂದ ಆ ನೆಲೆಯಲ್ಲಿ ಎಷ್ಟು ಸುತ್ತು ಬೇಕಾದರೂ ಗುಂಡುಗಳನ್ನು ಹಾರಿಸುವುದು ಸರಿ ಎಂದೇ ವಾದಿಸಿದ್ದರು.

 1921ರ ಜನವರಿ 21ರಂದು ‘ಗ್ಲೋಬ್’ ಎಂಬ ಪತ್ರಿಕೆಯಲ್ಲಿ ಡಯರ್ ಒಂದು ಲೇಖನ ಪ್ರಕಟಿಸಿದ. ‘‘ದಿ ಪೆರಿಲ್ ಟು ದಿ ಎಂಪಾಯರ್’’(ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯ) ಎಂಬ ಆ ಲೇಖನದಲ್ಲಿ ‘‘ಭಾರತಕ್ಕೆ ಸ್ವ-ಆಡಳಿತ ಬೇಕಾಗಿಲ್ಲ. ಅದಕ್ಕೆ ಸ್ವಯಮಾಡಳಿತ ಅರ್ಥವಾಗುವುದಿಲ್ಲ’’ ಎಂದು ಆತ ಬರೆದಿದ್ದ. ಆತನನ್ನು ಭಾರತದಲ್ಲಿ ಸ್ವಾತಂತ್ರಕ್ಕಾಗಿ ನಡೆಯುತ್ತಿದ್ದ ಪ್ರತಿಭಟನೆಗಳು, ಚಳವಳಿಗಳು ಮತ್ತು 1857ರಲ್ಲಿ ನಡೆದಿದ್ದ ‘ಸಿಪಾಯಿ ದಂಗೆ’ ಎಷ್ಟರಮಟ್ಟಿಗೆ ಕಾಡಿದ್ದವು ಎಂಬುದನ್ನು ಹೇಳುವ ಒಂದು ಮಾತು ಕೂಡ ಆ ಲೇಖನದಲ್ಲಿದೆ: ‘‘ಭಾರತದಲ್ಲಿ ಹನ್ನೊಂದನೆಯ ಒಂದು ಆಜ್ಞೆ ಇರಬೇಕು, ‘ನೀನು ಚಳವಳಿ ಮಾಡಬೇಡ’.’’

ಬೈಬಲ್‌ನಲ್ಲಿ ಬರುವ ‘ಟೆನ್ ಕಮಾಂಡ್‌ಮೆಂಟ್ಸ್ ’(ಹತ್ತು ಆಜ್ಞೆಗಳು) ಎಲ್ಲರಿಗೂ ಗೊತ್ತು. ಆದರೆ ಡಯರ್ ಆ ಹತ್ತಕ್ಕೆ ಇನ್ನೂ ಒಂದು ಕಮಾಂಡ್‌ಮೆಂಟನ್ನು ಸೇರಿಸುತ್ತಾನೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದಂತೆಯೇ ‘‘ಪ್ರತಿಭಟಿಸಬೇಡ, ಚಳವಳಿ ಮಾಡಬೇಡ’’ ಎನ್ನುವುದು ಭಾರತೀಯರಿಗೆ ತಿಳಿಸಿ ಹೇಳಬೇಕಾದ ಒಂದು ಕಮಾಂಡ್‌ಮೆಂಟ್ ಎಂದು ಡಯರ್ ಭಾವಿಸಿದ್ದ! ಆದರೆ ಇಂದಿಗೂ ಈ ಕಮಾಂಡ್‌ಮೆಂಟ್ ಆವಶ್ಯಕ ಮತ್ತು ಸರಿ ಎನ್ನುವ ಜನ; ಭಿನ್ನಾಭಿಪ್ರಾಯ, ಪ್ರತಿಭಟನೆ, ಪ್ರಶ್ನೆಗಳನ್ನು ಕೇಳುವುದು ದೇಶದ್ರೋಹಕ್ಕೆ ಸಮಾನ ಎನ್ನುವ ನಾಯಕರು; ಮತ್ತು ಭಿನ್ನಮತ, ಅಭಿವ್ಯಕ್ತಿ ಸ್ವಾತಂತ್ರ, ಪ್ರಜಾಪ್ರಭುತ್ವದ ಜೀವಾಳ ಎಂದು ಸಾರುವ ಸಂವಿಧಾನದ ವಿರೋಧಿಗಳು ಇನ್ನೂ, ಡಯರ್ ಸತ್ತು 90 ವರ್ಷಗಳ ಬಳಿಕವೂ, ಭಾರತದಲ್ಲಿ ಹಾಗೂ ವಿಶ್ವದ ಹಲವು ಭಾಗಗಳಲ್ಲಿ ಇದ್ದಾರೆ.ಮುಂದೆಯೂ ಇರುತ್ತಾರೆ. ಇದು ಇತಿಹಾಸದ ವ್ಯಂಗ್ಯ ಮತ್ತು ಒಂದು ವಿರೋಧಾಭಾಸವಿರಬಹುದೇ?

ಡಯರ್, ಹಂಟರ್ ಆಯೋಗ ತನ್ನ ಮೇಲೆ ಹೊರಿಸಿದ ಆಪಾದನೆಗಳಿಗೆ ನೀಡಿದ ಅಧಿಕೃತ ಉತ್ತರದಲ್ಲಿ ‘‘ಗುಂಡು ಹಾರಿಸದೆ ಅಲ್ಲಿ ನೆರೆದಿದ್ದ ಗುಂಪನ್ನು ನಾನು ಚದುರಿಸುವುದು ಸಾಕಷ್ಟು ಸಾಧ್ಯವಿತ್ತು ಅಂತ ನನಗೆ ಅನ್ನಿಸುತ್ತದೆ. ಆದರೆ (ಹಾಗೆ ಮಾಡಿದ್ದಲ್ಲಿ)ಅವರು ಚದರಿ ಹೋಗಿ ಮತ್ತೆ ಪುನಃ ಮರಳಿ ಬಂದು ನಕ್ಕು ಬಿಡುತ್ತಿದ್ದರು ಮತ್ತು ನಾನು ನನ್ನನ್ನೇ ಒಬ್ಬ ಮೂರ್ಖನನ್ನಾಗಿ ಮಾಡಿಕೊಂಡಂತಾಗುತ್ತಿತ್ತು’’ ಎಂದಿದ್ದಾನೆ.

ಬ್ರಿಟಿಷ್ ಭಾರತವನ್ನು ‘‘ಉಳಿಸುವುದಕ್ಕಾಗಿ’’ ತಾನು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಸಬೇಕಾಯಿ ತೆಂದು ವಾದಿಸಿದ ಡಯರ್, ಯಾವುದೇ ಒಂದು ಪ್ರಭುತ್ವ ತನ್ನನ್ನು ವಿರೋಧಿಸುವವರನ್ನು ನಿರ್ದಯವಾಗಿ ದಮನಿಸುವಾಗ ಬಳಸುವ ಪರಿಭಾಷೆಯಲ್ಲೇ ಮಾತಾಡಿದ್ದ: ‘‘ಅದು ಜನರ ಗುಂಪನ್ನು ಚದುರಿಸುವ ಒಂದು ಪ್ರಶ್ನೆಯಾಗಿಯಷ್ಟೇ ಉಳಿಯಲಿಲ್ಲ, ಬದಲಾಗಿ ಮಿಲಿಟರಿ ದೃಷ್ಟಿಕೋನದಿಂದ ನೋಡುವಾಗ, ಸಾಕಷ್ಟು ನೈತಿಕ ಪರಿಣಾಮ ಬೀರುವ ಒಂದು ವಿಷಯವಾಗಿತ್ತು; ಅಲ್ಲಿ ಇದ್ದವರ ಮೇಲಷ್ಟೇ ನೈತಿಕ ಪರಿಣಾಮ ಬೀರುವುದಿಲ್ಲ. ಇನ್ನಷ್ಟು ನಿಖರವಾಗಿ ಹೇಳುವುದಾದರೆ ಪಂಜಾಬಿನಾದ್ಯಂತ ಪರಿಣಾಮ ಬೀರುವ ಒಂದು ಪ್ರಶ್ನೆಯಾಗಿತ್ತು. ಅಲ್ಲಿ ಮಿತಿಮೀರಿದ ದೌರ್ಜನ್ಯ ಪ್ರಶ್ನೆಯೇ ಇರಲು ಸಾಧ್ಯವಿರಲಿಲ್ಲ. ದಂಗೆಕೋರರು (ಸರಕಾರಕ್ಕೆ)ಸವಾಲೆಸೆದಿದ್ದರು ಮತ್ತು ಅವರಿಗೆ ಶಿಕ್ಷೆ ನೀಡುವುದೇ ಆದಲ್ಲಿ ಅದು ಸಂಪೂರ್ಣವಾಗಿರಬೇಕಾಗಿತ್ತು, ಯಾವ ಮುಲಾಜೂ ಇಲ್ಲದ ಹಾಗೂ ತಕ್ಷಣ ನೀಡುವ ಶಿಕ್ಷೆಯಾಗಿರಬೇಕಾಗಿತ್ತು.’’

ಆ ದಿನ ಮಧ್ಯಾಹ್ನ ಆತ ತನ್ನ ಸೈನಿಕರೊಂದಿಗೆ ಜಲಿಯನ್ ವಾಲಾಬಾಗ್ ಮೈದಾನವನ್ನು ಪ್ರವೇಶಿಸಿದಾಗ ಅಲ್ಲಿ ನೆರೆದ ಜನರ ಮೇಲೆ ‘ತಕ್ಷಣ’ ಗುಂಡುಹಾರಿಸುವ ಉದ್ದೇಶ ಆತನಿಗೆ ಇದ್ದಿರಲಿಲ್ಲ ಎಂದೂ ವಾದಿಸಿದವರಿದ್ದಾರೆ.ಆದರೆ ಡಯರ್ ಜನರಿಗೆ ಯಾವುದೇ ಮುನ್ಸೂಚನೆ ನೀಡದೆ ಕೇವಲ ಐದು ನಿಮಿಷಗಳೊಳಗಾಗಿ ಅಲ್ಲಿಂದ ದುರಿ ಹೋಗಬೇಕೆಂದು ಘೋಷಿಸಿ, ನಾಲ್ಕು ನಿಮಿಷಗಳು ಕಳೆಯುವಷ್ಟರಲ್ಲೆ ಗುಂಡು ಹಾರಿಸಲು ಆಜ್ಞೆ ನೀಡಿದ್ದ.ಅಲ್ಲಿ ಸೇರಿದ್ದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಇರುವುದನ್ನು ಗಮನಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಹಾನಿಯಾಗದಿರಲಿ ಎಂಬ ಉದ್ದೇಶದಿಂದ ಅವರಿಗೆ ಗುಂಡು ತಾಗದಂತೆ ಕೋವಿಗಳನ್ನು ಸ್ವಲ್ಪ ಎತ್ತರಕ್ಕೆ ಹಿಡಿದು ಗುಂಡು ಹಾರಿಸುತ್ತಿದ್ದುದನ್ನು ಗಮನಿಸಿದ ಡಯರ್ ಅವರನ್ನು ಉದ್ದೇಶಿಸಿ ಕಿರುಚಿ ಹೇಳಿದ ಮಾತು ‘‘ಫಯರ್ ಲೋ ವಾಟ್ ಹ್ಯಾವ್ ಬೀನ್ ಬ್ರಾಟ್ ಹಿಯರ್ ಫಾರ್’’ (ಕೋವಿಗಳನ್ನು ಕೆಳಕ್ಕೆ ಮಾಡಿ ಜನರಿಗೆ ನೆರವಾಗಿ ಗುಂಡು ತಾಗುವಂತೆ ಫಯರ್ ಮಾಡಿ. ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದದ್ದು ಮತ್ಯಾಕೆ ಅಂದುಕೊಂಡಿದ್ದೀರಿ?’’)

ಇಷ್ಟೇ ಅಲ್ಲದೆ ಸೈನಿಕರು ಗುಂಡು ಹಾರಿಸುವ ರೀತಿಯನ್ನು ಗಮನಿಸುತ್ತಾ ಅವರಿಗೆ ಸೂಕ್ತ ನಿರ್ದೇಶನ ನೀಡುತ್ತ ಅತ್ತಿಂದಿತ್ತ ಚಲಿಸುತ್ತಿದ್ದ ಡಯರ್, ಮೈದಾನ ದಿಂದ ಹೊರ ಹೋಗಲು ಇದ್ದ ಅಗಲ ಕಿರಿದಾದ ದ್ವಾರಗಳಲ್ಲಿ ಯಾವ ದ್ವಾರದ ಮೂಲಕ ಅತ್ಯಂತ ಹೆಚ್ಚು ಜನರು ಹೊರಗೆ ಓಡುವಾಗ ನೂಕುನುಗ್ಗಲು ಉಂಟಾಯಿತೋ ಆ ಜನರ ಗುಂಪಿನ ಮೇಲೆ ಕೋವಿಗಳನ್ನು ಕೇಂದ್ರೀಕರಿಸಿ ಫಯರ್ ಮಾಡುವಂತೆ ಆಜ್ಞೆ ನೀಡುತ್ತಿದ್ದ. ಅಂದರೆ ಆತನ ಉದ್ದೇಶವೇ ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ಕೊಂದು ಪಂಜಾಬಿನಾದ್ಯಂತ ಜನರು ಹೆದರಿಕೊಳ್ಳುವಂತೆ ಮಾಡುವುದಾಗಿತ್ತು.

ಹೀಗೆ ಜನರನ್ನು ಹೆದರಿಸುವ, ಬೆದರಿಸುವ ತನ್ನ ಉದ್ದೇಶದ ಈಡೇರಿಕೆಗಾಗಿ ಆತ ಬೆದರಿಕೆಯ ಭಾಷೆಯನ್ನೂ ಬಳಸಿದ್ದ. ಹತ್ಯಾಕಾಂಡಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪರಿಶೀಲಿಸುವಾಗ ನನ್ನ ಗಮನ ಸೆಳೆದ ಡಯರ್‌ನ ಅಂತಹ ಭಾಷೆಯ ತುಣುಕೊಂದು ಇಲ್ಲಿದೆ. ಇದು ಹತ್ಯಾಕಾಂಡ ನಡೆದ (1919ರ ಎಪ್ರಿಲ್ 13)ಮರುದಿನ (ಎಪ್ರಿಲ್14 ರಂದು)ಅಮೃತಸರದ ಜನರನ್ನು ಉದ್ದೇಶಿಸಿ ಡಯರ್ ಉರ್ದುವಿನಲ್ಲಿ ನೀಡಿದ ಹೇಳಿಕೆ. (ಈಗ ಪಾಕಿಸ್ತಾನದ ಭಾಗವಾಗಿರುವ ಪಂಜಾಬಿನ ಮುರೀ ಎಂಬಲ್ಲಿ ಜನಿಸಿದ ಆತನಿಗೆ ಉರ್ದು ಚೆನ್ನಾಗಿ ತಿಳಿದಿತ್ತು).

‘‘ನಾನೊಬ್ಬ ಸಿಪಾಯಿ ಮತ್ತು ಸೈನಿಕ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ನಿಮಗೆ ಯುದ್ಧ ಬೇಕೋ? ಶಾಂತಿ ಬೇಕೋ? ನಿಮಗೆ ಯುದ್ಧ ಬೇಕೆಂದಾದರೆ ಅದಕ್ಕೆ ಸರಕಾರ ಸಿದ್ಧವಾಗಿದೆ ಮತ್ತು ನೀವು ಶಾಂತಿ ಬಯಸುವಿರಾದರೆ, ನನ್ನ ಆಜ್ಞೆಗಳನ್ನು ಪಾಲಿಸಿ ಮತ್ತು ನಿಮ್ಮ ಎಲ್ಲ ಅಂಗಡಿಗಳನ್ನು ತೆರೆಯಿರಿ, ತೆರೆಯದಿದ್ದರೆ ನಾನು ನಿಮಗೆ ಶೂಟ್ ಮಾಡುತ್ತೇನೆ. ನನಗೆ ಫ್ರಾನ್ಸ್‌ನ ಯುದ್ಧ ಭೂಮಿಯಾಗಲಿ ಅಥವಾ ಅಮೃತಸರವಾಗಲಿ-ಎರಡೂ ಒಂದೇ. ಹೇಳಿ ನಿಮಗೆ ಬೇಕಾ ಯುದ್ಧ? ಶಾಂತಿ ಬೇಕೆಂದಾದರೆ, ಎಲ್ಲ ಅಂಗಡಿಗಳನ್ನು ತಕ್ಷಣ ತೆರೆಯಿರಿ ಎನ್ನುವುದಷ್ಟೇ ನಾನು ನಿಮಗೆ ಮಾಡುವ ಆಜ್ಞೆ... ನೀವು ನನ್ನ ಆಜ್ಞೆ ಪಾಲಿಸಿ ಅಂಗಡಿಗಳನ್ನು ತೆರೆಯದಿದ್ದಲ್ಲಿ ಅಂಗಡಿಗಳನ್ನು ಬಲಪ್ರಯೋಗದ ಹಾಗೂ ಕೋವಿಗಳ ಮೂಲಕ ತೆರೆಯಲಾಗುವುದು. ನಿಮ್ಮಲ್ಲಿ ಬದ್ಮಾಶ್ ಯಾರೆಂದು ನೀವು ನನಗೆ ವರದಿ ಮಾಡಬೇಕು. ನಾನು ಅವರನ್ನು ಶೂಟ್ ಮಾಡುತ್ತೇನೆ. ಇಂಗ್ಲಿಷರನ್ನು ಕೊಲ್ಲುವ ಮೂಲಕ ನೀವು ಒಂದು ಕೆಟ್ಟ ಕೃತ್ಯ ಎಸಗಿದ್ದೀರಿ. ಅದಕ್ಕೆ ಪ್ರತಿಯಾಗಿ ನಿಮ್ಮ ಮೇಲೆೆ ಮತ್ತು ನಿಮ್ಮ ಮಕ್ಕಳ ಮೇಲೆ ಪ್ರತೀಕಾರ ಮಾಡಲಾಗುವುದು.’’

ಡಯರ್ ಇಲ್ಲಿ ಉಲ್ಲೇಖಿಸುವ ‘ಇಂಗ್ಲಿಷರ ಕೊಲೆ’ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯುವ ಮೊದಲು ಅಮೃತಸರದಲ್ಲಿ ನಡೆದ ಮೂವರು ಬ್ರಿಟಿಷರ ಹತ್ಯೆ. ಮೂವರು ಬ್ರಿಟಿಷ್ ಬ್ಯಾಂಕ್ ಉದ್ಯೋಗಿಗಳನ್ನು ಜನರ ಗುಂಪೊಂದು ಥಳಿಸಿ ಕೊಂದಿತ್ತು. ಅಲ್ಲದೆ ಡಯರ್‌ನ ತೀವ್ರಕೋಪಕ್ಕೆ ಕಾರಣವಾದ ಬ್ರಿಟಿಷ್ ಮಹಿಳೆಯೊಬ್ಬಳ ಮೇಲಿನ ಒಂದು ಹಲ್ಲೆ ಕೂಡ ನಡೆದಿತ್ತು: ಅಮೃತಸರದ ಬಾಲಕಿಯರ ಮಿಷನ್ ಡೇ ಸ್ಕೂಲ್‌ನ ಮಿಸ್ ಮಾರ್ಸೆಲಾ ಶೆರ್‌ವುಡ್ ಎಂಬಾಕೆ ತನ್ನ ಶಾಲೆಗಳನ್ನು ಮುಚ್ಚಲು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಅಗಲ ಕಿರಿದಾದ ಬೀದಿಯೊಂದರಲ್ಲಿ ಗುಂಪೊಂದು ಆಕೆಯನ್ನು ಥಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಆ ಬೀದಿಯಲ್ಲಿ ಹೋಗುವ ಜನರು ಬೆಳಗ್ಗೆ 6ರಿಂದ ರಾತ್ರಿ 8ರ ನಡುವೆ 180 ಮೀಟರ್ ಉದ್ದದ ಆ ಬೀದಿಯಲ್ಲಿ ತಮ್ಮ ಹೊಟ್ಟೆಯನ್ನು ನೆಲಕ್ಕೆ ತಾಗಿಸಿ ತೆವಳಿಕೊಂಡು ಹೋಗಬೇಕೆಂದು ಆಜ್ಞೆ ಮಾಡಿದ್ದ ಡಯರ್, ಶೆರ್‌ವುಡ್ ಮೇಲೆ ದಾಳಿ ನಡೆದ ಸ್ಥಳವನ್ನು ‘ಪವಿತ್ರ’ವೆಂದು ಘೋಷಿಸಿದ್ದ!

ತನ್ನ ಸ್ವಾಮಿ ನಿಷ್ಠೆಯನ್ನು ಮೆರೆಯುವಲ್ಲಿ ಡಯರ್ ಎಷ್ಟೊಂದು ತೀವ್ರ ಕಾಳಜಿ ತೋರಿದ್ದನೆಂದರೆ ಅವನು ಹತ್ಯಾಕಾಂಡದಲ್ಲಿ ಮೃತಪಟ್ಟವರ ಶವಗಳ ಸಂಖ್ಯೆ ಎಷ್ಟೆಂದು ಎಣಿಸುವ ಗೋಜಿಗೆ ಕೂಡ ಹೋಗಿರಲಿಲ್ಲ. ಮೃತಪಟ್ಟವರಲ್ಲಿ 337 ಮಂದಿ ಗಂಡಸರು, 41 ಮಂದಿ ಬಾಲಕರು ಮತ್ತು 6 ವಾರಗಳ ಒಂದು ಶಿಶು ಕೂಡ ಸೇರಿತ್ತು. ಇದ್ಯಾವುದರಿಂದಲೂ ವಿಚಲಿತನಾಗದ ಡಯರ್‌ಗೆ ಅವನ ಬದುಕಿನ ಕೊನೆಯ ವರ್ಷಗಳಲ್ಲಿ ಹಲವು ಬಾರಿ ಲಕ್ವ ಹೊಡೆದು ಮಾತು ಬಿದ್ದು ಹೋಗಿ ಮಿದುಳಿನ ರಕ್ತಸ್ರಾವದಿಂದ ಮೃತಪಟ್ಟ. ಕುತೂಹಲದ ವಿಷಯವೆಂದರೆ ಆತ ಸಾಯುವ ಏಳು ವರ್ಷಗಳ ಮೊದಲು ಇಂಗ್ಲೆಂಡಿಗೆ ಮರಳಿದಾಗ ಬ್ರಿಟನಿನಲ್ಲಿ ಆತನಿಗೆ ವೀರೋಚಿತ ಸ್ವಾಗತ ನೀಡಲಾಯಿತು. ‘‘ಭಾರತವನ್ನು ರಕ್ಷಿಸಿದ ವ್ಯಕ್ತಿ’’ ಎಂಬ ಲೇಖನ ಪ್ರಕಟಿಸಿ ಆತನ ಬರ್ಬರ ಕೃತ್ಯವನ್ನು ಸಮರ್ಥಿಸಿದ ಬಲಪಂಥೀಯ ಪತ್ರಿಕೆ ‘ಮಾರ್ನಿಂಗ್ ಪೋಸ್ಟ್’ ಆತನಿಗಾಗಿ ಚಂದಾ ಎತ್ತಲು ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಸಂಗ್ರಹವಾದ 26,000 ಪೌಂಡ್‌ಗಳ ನಿಧಿಯನ್ನು (ಇಂದಿನ ಮಾರುಕಟ್ಟೆ ವೌಲ್ಯದಲ್ಲಿ ಸುಮಾರು 23 ಕೋಟಿ ರೂಪಾಯಿ)ಆತನಿಗೆ ಅರ್ಪಿಸಲಾಯಿತು.ಅದೇ ವೇಳೆ ಹತ್ಯಾಕಾಂಡದಲ್ಲಿ ಮಡಿದ ಭಾರತೀಯರ ಬಂಧುಗಳು ಸರಕಾರದ ಪರಿಹಾರಕ್ಕಾಗಿ ಹೋರಾಡಿ ಅಂತಿಮವಾಗಿ ಅವರಿಗೆ ದೊರೆತ ಪರಿಹಾರ 500 ರೂ.(ಇಂದಿನ ವೌಲ್ಯ ಸುಮಾರು 1.5 ಲಕ್ಷ ರೂಪಾಯಿ).

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ಹದಿನಾಲ್ಕು ತಿಂಗಳುಗಳ ಬಳಿಕ 1920ರ ಜುಲೈ 8ರಂದು ಹತ್ಯಾಕಾಂಡಕ್ಕೆ ಸಂಬಂಧಿಸಿ ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಸುದೀರ್ಘವಾಗಿ ಮಾತಾಡಿದ ಭಾರತದ ರಾಜ್ಯಾಂಗ ಕಾರ್ಯದರ್ಶಿ ಎಡ್ವಿನ್ ಸ್ಯಾಮ್ಯುವೆಲ್ ಮೊಂಟೆಗ್ಯೂ ತನ್ನ ಹೇಳಿಕೆಯಲ್ಲಿ ಡಯರ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿ ಮಾತನಾಡುತ್ತಾನೆ. ಡಯರ್ ಮಾಡಿದ್ದು ಭಯೋತ್ಪಾದನೆ ಎನ್ನುತ್ತ, ಮತ್ತೆ ಮತ್ತೆ ‘ಟೆರರಿಸಂ’ಎಂಬ ಪದವನ್ನೇ ಬಳಸುತ್ತ, ಆತ ಕೇಳುವ ಪ್ರಶ್ನೆ ಇದು: ‘‘ನೀವು ಭಾರತದ ಮೇಲೆ ನಿಮ್ಮ ಹಿಡಿತವನ್ನು ಭಯೋತ್ಪಾದನೆ, ಜನಾಂಗೀಯಅವಮಾನ, ಶರಣಾಗತಿ ಮತ್ತು ಬೆದರಿಕೆಯ ಮೂಲಕ ಉಳಿಸಿಕೊಳ್ಳುತ್ತೀರೋ ಅಥವಾ ನೀವು ಸಹೃದಯತೆ ಮತ್ತು ನಿಮ್ಮ ಭಾರತೀಯ ಸಾಮ್ರಾಜ್ಯದ ಜನರ ಹೆಚ್ಚುತ್ತಿರುವ ಸಹೃದಯತೆಯ (ಗುಡ್‌ವಿಲ್)ಮೂಲಕ ಉಳಿಸಿಕೊಳ್ಳುತ್ತೀರೋ?’’

ವಿಶ್ವದ ನಾನಾ ಭಾಗಗಳನ್ನು ಹಲವು ರೀತಿಯ ಭಯೋತ್ಪಾದನೆ ಹಲವು ರೀತಿಗಳಲ್ಲಿ ಕಾಡುತ್ತಿರುವಾಗ ಮೊಂಟೆಗ್ಯೂ ಅಂದು ಕೇಳಿದ ಪ್ರಶ್ನೆ ಇವೊತ್ತು ನಾವು ಕೂಡ ಕೇಳಬಹುದಾದ ಪ್ರಶ್ನೆಯೇ.

ನ್ಯಾಯಯುತವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಚಳವಳಿ ನಡೆಸುವವ ರನ್ನು ಭಯೋತ್ಪಾದಕ, ನಕ್ಸಲ್, ದೇಶದ್ರೋಹಿ ಎಂದು ಜೈಲಿಗೆ ಅಟ್ಟುವ ಪ್ರಭುತ್ವ ಗಳು ಡಯರ್‌ನ ಹಾಗೆ ನೀನು ಚಳವಳಿ ಮಾಡಬೇಡ; ಚಳವಳಿ ಮಾಡಿದರೆ ‘‘ಶೂಟ್ ಮಾಡುತ್ತೇನೆ’’ ಎಂದು ಹೇಳುತ್ತಿರುವಾಗ ಡಯರ್ ಇಂದಿಗೂ ನಮ್ಮ ಸಮಾಜವನ್ನು ಹಲವು ರೀತಿಗಳಲ್ಲಿ ಕಾಡುತ್ತಲೇ ಇದ್ದಾನೆ ಅನ್ನಿಸುವುದಿಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)