varthabharthi

ವಿಶೇಷ-ವರದಿಗಳು

ಬಿಸಿಲಿನ ತಾಪಕ್ಕೆ ದಿನಕ್ಕೆ 4 ಸೆ.ಮೀ.ನಷ್ಟು ನೀರು ಆವಿ!

ಮಂಗಳೂರಿನಲ್ಲಿ ನೀರಿಗಾಗಿ ಪರದಾಟ ಆರಂಭ

ವಾರ್ತಾ ಭಾರತಿ : 21 Apr, 2019

ಸಾಂದರ್ಭಿಕ ಚಿತ್ರ

► 4 ದಿನ ನೀರು -2 ದಿನ ನೀರಿಲ್ಲ

► ಮುಂಗಾರುಪೂರ್ವ ಮಳೆ ಬಾರದಿದ್ದರೆ ಸಮಸ್ಯೆ ಉಲ್ಬಣ

ಮಂಗಳೂರು, ಎ.20: ಬಿಸಿಲಿನ ತಾಪಮಾನ ದಿನೇದಿನೇ ಹೆಚ್ಚುತ್ತಿದ್ದು, ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ಕಡಿತ ಆರಂಭಿಸಿದೆ. ಇದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ನೀರಿಗಾಗಿ ಪರದಾಟ ಆರಂಭವಾಗಿದೆ.

ಸದ್ಯ ನಗರ ಪಾಲಿಕೆಯು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರ ಆದೇಶದಂತೆ ನಾಲ್ಕು ದಿನ (96 ಗಂಟೆ) ನೀರು ಪೂರೈಕೆ ಹಾಗೂ ಎರಡು ದಿನಗಳ (48 ಗಂಟೆ) ನೀರು ಕಡಿತಕ್ಕೆ ತೀರ್ಮಾನಿಸಿದೆ. ಈಗಾಗಲೇ ಎ.18ರ ಸಂಜೆಯಿಂದ ಎ.20ರ ಬೆಳಗ್ಗೆಯವರೆಗೆ ನೀರು ಕಡಿತ ಮಾಡಲಾಗಿದ್ದು, ಇಂದು ಸಂಜೆಯ ವೇಳೆ ಕೆಲವು ಕಡೆಗಳಿಗೆ ನೀರು ಪೂರೈಕೆ ಆರಂಭವಾಗಿದೆ. ಎ.23ರ ರಾತ್ರಿಯವರೆಗೆ ನೀರು ಪೂರೈಕೆಯಾಗಲಿದೆ. ಎ. 24ರಂದು ಬೆಳಗ್ಗೆಯಿಂದ 25ರವರೆಗೆ ಮತ್ತೆ ನೀರು ಸ್ಥಗಿತಗೊಳ್ಳಲಿದೆ. 26ರಂದು ಮತ್ತೆ ಆರಂಭವಾಗಿ ನಾಲು್ಕ ದಿನಗಳ ಕಾಲ ನೀರು ದೊರೆಯಲಿದೆ.

ಬಿಸಿಲಿನ ತಾಪಮಾನ ಜೋರಾಗಿರುವುದರಿಂದ ನೀರು ತೀವ್ರವಾಗಿ ಆವಿಯಾಗುತ್ತಿದೆ. ಈಗಾಗಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದಿದ್ದು, ಶನಿವಾರ ನೀರಿನ ಮಟ್ಟ 5.3 ಮೀಟರ್‌ನಷ್ಟಿತ್ತು. ಇರುವ ನೀರನ್ನು ಮಳೆಗಾಲ ಆರಂಭವಾಗುವ ವರೆಗೆ ನಗರದ ಜನತೆಗೆ ಪೂರೈಕೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಸದ್ಯ ನೀರಿನ ರೇಶನಿಂಗ್ ಅನಿವಾರ್ಯವಾಗಿದೆ.

ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಲಿಂಗೇಗೌಡ ಹೇಳುವಂತೆ, ಪ್ರಖರ ಬಿಸಿಲಿಗೆ ತುಂಬೆ ಅಣೆಕಟ್ಟಿನ ನೀರಿನಲ್ಲಿ ದಿನವೊಂದಕ್ಕೆ 4 ಸೆಂ.ಮೀ.ನಷ್ಟು ಪ್ರಮಾಣ ಆವಿಯಾಗುತ್ತಿದೆ. ಸಾಮಾನ್ಯವಾಗಿ ನೀರು ಆವಿಯಾಗುವ ಪ್ರಮಾಣ 1 ಸೆಂ. ಮೀ. ಆಗಿರುತ್ತದೆ. ತೀವ್ರತರದ ನೀರಿನ ಈ ಆವಿಯಾಗುವಿಕೆ ಅಧಿಕಾರಿಗಳನ್ನೂ ಆತಂಕಕ್ಕೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ಎ.11ರಿಂದಲೇ ನೀರಿನ ರೇಷನಿಂಗ್ ನಡೆಸಲು ಪಾಲಿಕೆ ಯೋಜಿಸಿತ್ತು. ಬಳಿಕ ಚುನಾವಣೆಯ ವರೆಗೆ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಯಿತು. ಎ.18ರ ಸಂಜೆ 6ರಿಂದ ನೀರಿನ ರೇಷನಿಂಗ್ ಆರಂಭವಾಗಿದೆ ಎಂದರು.

48 ಗಂಟೆ ನೀರು ಸ್ಥಗಿತ: ಎ.18ರ ಸಂಜೆ 6ಕ್ಕೆ ನೀರು ಸ್ಥಗಿತಗೊಂಡಿದ್ದು, 20ರಂದು ಬೆಳಗ್ಗೆ 6ಕ್ಕೆ ನೀರು ಪೂರೈಕೆ ಆರಂಭಿಸಲಾಗಿದೆ. ಚುನಾವಣೆ, ಗುಡ್‌ರೈ್ೆಡೆ ಮುಂತಾದ ಕಾರಣಗಳಿಂದಾಗಿ ಮೊದಲ ರೇಷನಿಂಗ್ ಕಾರ್ಯದಲ್ಲಿ 36 ಗಂಟೆಯಷ್ಟೇ ನೀರು ಸ್ಥಗಿತಗೊಳಿಸಲಾಗಿದೆ. ಮುಂದೆ ಇದನ್ನು 48 ಗಂಟೆಗೆ ವಿಸ್ತರಿಸಲಾಗುತ್ತದೆ. ಎ.20ರ ಬೆಳಗ್ಗೆ 6ರಿಂದ 96 ಗಂಟೆ ಕಾಲ ಅಂದರೆ 4 ದಿನಗಳ ಕಾಲ ನಿರಂತರ ನೀರು ಪೂರೈಕೆ ನಡೆಯಲಿದೆ. ಆನಂತರ ಎರಡು ದಿನ ಸ್ಥಗಿತಗೊಳಿಸಲಾಗುವುದು ಎಂದು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಲಿಂಗೇಗೌಡ ತಿಳಿಸಿದ್ದಾರೆ.

ಮೇ 14ರವರೆಗೆ ಮುಂದುವರಿಕೆ: ನೀರಿನ ರೇಷನಿಂಗ್ ಪ್ರಕ್ರಿಯೆ ಮೇ 14ರವರೆಗೆ ಮುಂದುವರಿಯಲಿದೆ. ಈ ನಡುವೆ ಮಳೆ ಬಂದಲ್ಲಿ ಮತ್ತು ನೀರಿನ ಪ್ರಮಾಣ ಹೆಚ್ಚಾದಲ್ಲಿ ನೀರು ಪೂರೈಕೆ ನಿರಂತರವಾಗಿ ಇರಲಿದೆ. ಇಲ್ಲವಾದಲ್ಲಿ ಈಗಿನ ರೇಷನಿಂಗ್ ಪ್ರಕ್ರಿಯೆಯಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರು ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದವರಿಗೆ ತೀವ್ರ ಸಮಸ್ಯೆ: ಬಹುತೇಕವಾಗಿ ನಗರಗಳಲ್ಲಿ ಜನರು ನೀರು ಸಂಗ್ರಹಕ್ಕಾಗಿ ಸಂಪ್, ಓವರ್ ಹೆಡ್ ಟ್ಯಾಂಕ್ ಅಥವಾ ದೊಡ್ಡ ಡ್ರಮ್‌ಗಳನ್ನು ಬಳಸುತ್ತಾರೆ. ಆದರೆ ಕೆಲವು ಮನೆಗಳಲ್ಲಿ ಅಂತಹ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅಂಥವರು ನೀರಿನ ರೇಷನಿಂಗ್‌ನಿಂದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ನಗರದ ಹಲವೆಡೆ ಇಂತಹ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿವೆ.

ಮಂಗಳೂರಿನ ಭೌಗೋಳಿಕ ವಾತಾವರಣಕ್ಕೆ ಸಂಬಂಧಿಸಿ ಎರಡು ದಿನಗಳಿಗೊಮ್ಮೆ ನೀರು ಬಿಟ್ಟು ಎರಡು ದಿನ ಸ್ಥಗಿತಗೊಳಿಸುವ ಪ್ರಕ್ರಿಯೆ ಸಾಧ್ಯವಾಗು ವುದಿಲ್ಲ. ಕೆಲವೆಡೆ ಒಂದು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ಇನ್ನು ಕೆಲವೆಡೆ ಬೆಳಗ್ಗೆ ಮತ್ತು ಸಂಜೆ ಕನಿಷ್ಠ ನಾಲ್ಕೈದು ಗಂಟೆ ಕಾಲ ನೀರು ಸರಬರಾಜು ಮಾಡಲಾಗುತ್ತಿದೆ. ಈ ರೀತಿ ಇರುವಾಗ ಎರಡು ದಿನ ನೀರು ಪೂರೈಕೆ ಮಾಡಿ ಎರಡು ದಿನ ಸ್ಥಗಿತಗೊಳಿಸುವಂತಿಲ್ಲ. ಸರಬರಾಜಾಗುವ ಪೈಪ್‌ಲೈನ್‌ಗಳಲ್ಲಿ ಒಂದೊಮ್ಮೆ ನೀರು ಸಂಪೂರ್ಣ ಬರಿದಾದರೆ, ಏರ್‌ಲ್ಯಾಕ್ ಆಗಿ ಬಿಡುತ್ತದೆ. ಬಳಿಕ ಟ್ಯಾಂಕ್‌ನಲ್ಲಿ ನೀರಿದ್ದರೂ ಕೊನೆಯ ಭಾಗಕ್ಕೆ ನೀರು ತಲುಪುವುದಿಲ್ಲ. ಐದಾರು ಸಾವಿರ ಕಿ.ಮೀ. ಉದ್ದದ ಪೈಪ್‌ಪೈಲ್ ಆಗಿರುವುದರಿಂದ ಎಲ್ಲಾ ಕಡೆ ನೀರು ಪೂರೈಕೆ ಆಗಬೇಕಾದರೆ ನಾವು ಈ ರೀತಿಯ ವ್ಯವಸ್ಥೆ ಮಾಡಲೇ ಬೇಕಾಗುತ್ತದೆ. ನಮ್ಮಲ್ಲಿ ವಲಯ ವರ್ಗೀಕರಣ ಆಗದೆ ತಾಂತ್ರಿಕವಾಗಿ ಸಮಸ್ಯೆಗಳಿರುವುದರಿಂದ ಒಂದು ಪ್ರದೇಶಕ್ಕೆ ಒಂದು ದಿನ ಇನ್ನೊಂದು ಪ್ರದೇಶಕ್ಕೆ ಇನ್ನೊಂದು ದಿನ ನೀರು ಪೂರೈಕೆ ಮಾಡಲು ಕೂಡಾ ಸಾಧ್ಯ ಆಗುತ್ತಿಲ್ಲ. 2ನೆ ಹಂತದ ಎಡಿಬಿ ಯೋಜನೆ 24್ಡ

7 ನೀರು ಪೂರೈಕೆಯಡಿ ವಲಯ ವರ್ಗೀಕರಣಕ್ಕೆ ಟೆಂಡರ್ ಆಗಿದ್ದು, ಮೇ 10ರಂದು ಟೆಂಡರ್ ತೆರೆಯಲಾಗುವುದು. ಅದರಲ್ಲಿ ಇಡೀ ನಗರಕ್ಕೆ ವಲಯ ವರ್ಗೀಕರಣ ಆಗಿ, ಓವರ್ ಟ್ಯಾಂಕ್ ವ್ಯವಸ್ಥೆಯೂ ಲಭಿಸಲಿದೆ. ಆಗ ಟ್ಯಾಂಕ್ ಹಾಗೂ ಪೈಪ್‌ಲೈನ್ ಎಲ್ಲವೂ ಪ್ರತ್ಯೇಕಗೊಳ್ಳಲಿದೆ. ಆಗ ನೀರು ಪೂರೈಕೆ ಸುಗಮವಾಗಲಿದೆ. ಪ್ರಸಕ್ತ ವ್ಯವಸ್ಥೆಯಲ್ಲಿ ಬಜಾಲ್, ಜಲ್ಲಿಗುಡ್ಡೆ, ಜಪ್ಪಿನಮೊಗರು ಅಂತಹ ಪ್ರದೇಶಗಳಲ್ಲಿ ಪೈಪ್‌ಲೈನ್ ಮೂಲಕ 10 ಗಂಟೆ ನೀರು ಪೂರೈಕೆಯಾದರೂ ಅದು ತಲುಪುವಾಗ ತಡವಾಗಿ ಕನಿಷ್ಠ ಒಂದು ಗಂಟೆಯೂ ನೀರು ಸಿಗುವುದಿಲ್ಲ. ಇಂದು ನೀರು ಪಂಪಿಂಗ್ ಬೆಳಗ್ಗೆ ಆಗಿ ನೀರು ಪೂರೈಕೆ ಆರಂಭವಾಗಿದ್ದರೂ ಆ ಪ್ರದೇಶಗಳಿಗೆ ನೀರು ಸಿಗುವುದು ರಾತ್ರಿ ಹೊತ್ತಿಗೆ. ಈ ನಡುವೆ ಸ್ಥಗಿತ ಮಾಡಿದರೆ ಅಂತಹ ಪ್ರದೇಶಗಳಿಗೆ ನೀರೇ ಸಿಗುವುದಿಲ್ಲ. 2017ರಲ್ಲಿ ಈ ರೀತಿ ಸಮಸ್ಯೆ ಆಗಿತ್ತು. ಆ ಬಳಿಕ 4 ದಿನ ನೀರು ಬಿಟ್ಟು ಎರಡು ದಿನಗಳ ಸ್ಥಗಿತ ಮಾಡಿದಾಗ ಸಮಸ್ಯೆ ಬಹಳಷ್ಟು ಬಗೆಹರಿದಿತ್ತು. ಅದಕ್ಕಾಗಿಯೇ ಈ ಬಾರಿ ಈ ರೀತಿಯ ವ್ಯವಸ್ಥೆ ಆರಂಭದಿಂದಲೇ ಮಾಡಲಾಗಿದೆ. ನಿಜ, ಕೆಲವು ಮನೆಗಳಲ್ಲಿ ನೀರಿನ ಸಂಗ್ರಹದ ವ್ಯವಸ್ಥೆ ಇಲ್ಲದಿರುವುದರಿಂದ ಅಂಥವರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಮನಪಾ ಅಧಿಕಾರಿಗಳ ಅಭಿಪ್ರಾಯ. ಸಮಸ್ಯೆಯಾಗದಂತೆ ಕ್ರಮಕ್ಕೆ ವೇದವ್ಯಾಸ ಸೂಚನೆ: ನಗರದಲ್ಲಿ ನೀರಿನ ರೇಷನ್ ಜನರಿಗೆ ಸಮಸ್ಯೆ ಯಾಗುತ್ತಿದ್ದು, ಈ ಬಗ್ಗೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹವಿಲ್ಲ ಎಂಬ ಕಾರಣ ಮುಂದಿಟ್ಟು ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಜನರಿಗೆ ಸಮರ್ಪಕ ರೀತಿಯಲ್ಲಿ ನೀರನ್ನು ಒದಗಿಸುವುದು ಪಾಲಿಕೆಯ ಕರ್ತವ್ಯ. ಆದ್ದರಿಂದ ನಗರದಲ್ಲಿ ಏಲ್ಲಿಯೂ ನೀರಿನ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಬೇಕು. ಅಗತ್ಯವಿರುವೆಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಇಂದು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಸಕರ ಕಚೇರಿಯಲ್ಲ್ಲಿ ಸಹಾಯವಾಣಿ: ನೀರಿನ ಸಮಸ್ಯೆ ಸ್ಪಂದನೆಗಾಗಿ ಶಾಸಕರ ಕಚೇರಿಯಲ್ಲಿ ಪ್ರತ್ಯೇಕ ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲಿ ಬಂದ ಎಲ್ಲ ದೂರುಗಳನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಸಕಾಲದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಜೀವಜಲ: ಮಿತ ಬಳಕೆ ಮಾಡಿ

ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತಗ್ಗುತ್ತಿದೆ. ನೀರು ಪೋಲನ್ನು ತಡೆಗಟ್ಟಿ ನೀರು ಉಳಿತಾಯಕ್ಕೆ ಒತ್ತು ನೀಡಿ. ವಾಹನಗಳನ್ನು ತೊಳೆಯುವುದಕ್ಕೆ ಕುಡಿಯುವ ನೀರು ಉಪಯೋಗಿಸದಿರಿ. ಸ್ನಾನಕ್ಕೆ, ಬಟ್ಟೆ ಒಗೆಯಲು ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡದಿರಿ. ಯಾವುದೇ ರೀತಿಯಲ್ಲಿ ನೀರಿನ ಸೋರಿಕೆ ಆಗದಂತೆ ಎಚ್ಚರ ವಹಿಸಿ ಜೀವ ಜಲ ಉಳಿಸಲು ನಾವೂ ಸಹಕಾರಿಯಾಗೋಣ

ರೇಶನಿಂಗ್ ಮಾಡದೆ (ಪ್ರತಿನಿತ್ಯ ನೀರು ಪೂರೈಕೆ ಮಾಡಿದ್ದಲ್ಲಿ)ನಮ್ಮ ಲೆಕ್ಕಾಚಾರ ಪ್ರಕಾರ 32 ದಿನಗಳಿಗೆ ಸದ್ಯ ತುಂಬೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹ ನಗರಕ್ಕೆ ಪೂರೈಕೆ ಮಾಡಲು ಸಾಧ್ಯ ಆಗಲಿದೆ. ರೇಶನಿಂಗ್ ಮಾಡಿದರೆ ಮೇ ಅಂತ್ಯದವರೆಗೆ ಕೊಡಲು ಸಾಧ್ಯವಾಗುವ ರೀತಿಯಲ್ಲಿ ಸದ್ಯ ವ್ಯವಸ್ಥೆ ಮಾಡಲಾಗಿದೆ. ಮುಂಗಾರು ಬಹುತೇಕವಾಗಿ ಜೂನ್‌ನಲ್ಲಿ ಆರಂಭವಾಗುತ್ತದೆ. ಹಾಗಾಗಿ ಮೇ 30ರವರೆಗೆ 40 ದಿನಗಳಿವೆ. ಎರಡೆರಡು ದಿನಗಳ ಕಡಿತ ಮಾಡಿದರೆ 32 ದಿನಗಳಿಗೆ ನೀರು ಪೂರೈಕೆ ಮಾಡಬಹುದು. ನಡುವೆ ಮಳೆ ಬಂದಲ್ಲಿ ರೇಶನಿಂಗ್ ನಿಲ್ಲಿಸಿ ಪ್ರತಿನಿತ್ಯ ಪೂರೈಕೆ ಮಾಡಲಾಗುವುದು. ಎಎಂಆರ್ ಅಣೆಕಟ್ಟಿನಲ್ಲಿ ನೀರು ಹೆಚ್ಚಳವಾಗಿ ತುಂಬೆ ಅಣೆಕಟ್ಟಿನಲ್ಲಿ 6 ಮೀಟರ್‌ಗೆ ನೀರು ಸಂಗ್ರಹವಾದಲ್ಲಿ ಸಮಸ್ಯೆ ಆಗದು. ಎಎಂಆರ್ ಡ್ಯಾಮ್ ಬರಿದಾಗಿತ್ತು. ಸದ್ಯ ಕೆಲ ದಿನಗಳಲ್ಲಿ ಒಂದು ಮೀಟರ್ ನೀರು ಸಂಗ್ರಹವಾಗಿದೆ. ಮಳೆ ಬರುವವರೆಗೆ ಸಾರ್ವಜನಿಕರು ನಮ್ಮಂದಿಗೆ ಸಹಕರಿಸಬೇಕು.

ಲಿಂಗೇಗೌಡ, ಕಾರ್ಯಪಾಲಕ ಇಂಜಿನಿಯರ್, ಮನಪಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)