varthabharthi

ವಿಶೇಷ-ವರದಿಗಳು

ತನ್ನ ಸೋಲುಗಳನ್ನು ಮರೆಮಾಚಲು 'ನೆಹರೂರನ್ನು ದೂರುತ್ತಿರುವ ಬಿಜೆಪಿ'

ವಾರ್ತಾ ಭಾರತಿ : 22 Apr, 2019
ರಾಮ್ ಪುನಿಯಾನಿ

ಬಿಜೆಪಿಯ ವಿಭಾಜಕ, ಕೋಮುವಾದಿ ಕಾರ್ಯಸೂಚಿಗೆ, ಅಜೆಂಡಾಕ್ಕೆ ಬದಲಾಗಿ ನೆಹರೂರವರ ಆಧುನಿಕ ಭಾರತದ ಕುರಿತಾದ ದೂರದೃಷ್ಟಿಯೇ ಆಧುನಿಕ ಭಾರತದ ನಿರ್ಮಾಣಕ್ಕೆ ನಾಂದಿಯಾಯಿತೆಂದು ಬಿಜೆಪಿಗೂ ತಿಳಿದಿದೆ. ಆದ್ದರಿಂದಲೇ ಅದು ಈಗ ತನ್ನ ಎಲ್ಲಾ ಸೋಲುಗಳಿಗೂ ನೆಹರೂರನ್ನೇ ಹೊಣೆಯಾಗಿಸಲು ಪ್ರಯತ್ನಿಸುತ್ತಿದೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಪರಿಶೀಲಿಸಿದರೆ ಅದು ಈ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಎಷ್ಟರಮಟ್ಟಿಗೆ ಈಡೇರಿಸಿದೆ ಎನ್ನುವುದರ ಉಲ್ಲೇಖವೇ ಕಾಣಿಸುವುದಿಲ್ಲ. ಅದೇ ಆಶ್ವಾಸನೆಗಳನ್ನು ಅತಿ-ರಾಷ್ಟ್ರೀಯತೆಯ ಇನ್ನಷ್ಟು ತೀವ್ರವಾದ ಬೆರಕೆಯೊಂದಿಗೆ ಪುನರುಚ್ಚರಿಸಿರುವುದು ಅಲ್ಲಿ ಎದ್ದು ಕಾಣುತ್ತದೆ. ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಬಿಜೆಪಿ ನಾಯಕರು ತಮ್ಮ ಸರಕಾರದ ಎಲ್ಲ ಸೋಲುಗಳಿಗೆ ಜವಾಹರಲಾಲ್ ನೆಹರೂರವರೇ ಕಾರಣ ಎನ್ನುತಿದ್ದಾರೆ. ತಮ್ಮ ಎಲ್ಲ ವೈಫಲ್ಯಗಳನ್ನೂ ನೆಹರೂರವರ ತೆಲೆಗೆ ಕಟ್ಟಲು ಹೆಣಗಾಡುತ್ತಿದ್ದಾರೆ. ಇದನ್ನು ಕಂಡು ಕಾಂಗ್ರೆಸ್‌ನ ಮಹಾ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಸಾರ್ವಜನಿಕ ಸಭೆಯೊಂದರಲ್ಲಿ ನರೇಂದ್ರ ಮೋದಿಯನ್ನು ಟೀಕಿಸುತ್ತ ಹೇಳಿದರು; ‘‘ಅವರಿಗೆ (ಮೋದಿಗೆ) ನಮ್ಮ ಕುಟುಂಬದ ಗೀಳು ಹಿಡಿದಿದೆ. ನೆಹರೂ ಇದನ್ನು ಮಾಡಿದರು, ಇಂದಿರಾಗಾಂಧಿ ಅದನ್ನು ಮಾಡಿದರು ಎನ್ನುತ್ತಾರೆ. ಆದರೆ ಮೋದೀಜಿ ನೀವು ಏನು ಮಾಡಿದಿರಿ ಹೇಳಿ’’ ಇತರ ದೇಶಗಳಿಗೆ ಸಂಬಂಧಿಸಿದಂತೆ ಅವರ ರಾಜತಾಂತ್ರಿಕತೆ ಮತ್ತು ವಿದೇಶ ನೀತಿಯ ಸೋಲುಗಳಿಗೆ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅವರು ನೆಹರೂರವರೇ ಕಾರಣ ಎನ್ನುತ್ತಿದ್ದಾರೆ.

ಪುಲ್ವಾಮದ ಬಾಲಕೋಟ್ ದಾಳಿಯ ಬಳಿಕ ವಿಶ್ವಸಂಸ್ಥೆಯು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿತು. ಜೈಶೆ ಮುಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್‌ನ ವಿರುದ್ಧ ಅಂತರ್‌ರಾಷ್ಟ್ರೀಯ ನಿಷೇಧಗಳನ್ನು ಹೇರಬೇಕೆಂಬ ಅಭಿಪ್ರಾಯ ಮೂಡಿಬಂತು. ಆದರೆ ಚೀನಾ ಅದಕ್ಕೆ ತಡೆಯೊಡ್ಡಿತು. ಈ ವಿಷಯವನ್ನು ಕೈಗೆತ್ತಿಕೊಂಡು ಚೀನಾದೊಂದಿಗೆ ಮಾತುಕತೆ ನಡೆಸಲು ಮೋದಿ ವಿಫಲರಾದರು. ಆ ಮೂಲಕ ಈ ಭಯೋತ್ಪಾದಕ ಸಂಘಟನೆಯ ವಿರುದ್ಧ ಚೀನಾದ ಬೆಂಬಲ ಪಡೆಯಲು ಮೋದಿಯವರಿಂದ ಸಾಧ್ಯವಾಗಲಿಲ್ಲವೆಂದು ರಾಹುಲ್‌ಗಾಂಧಿ ಮೋದಿಯನ್ನು ಟೀಕಿಸಿದರು. ಈ ಟೀಕೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ ವಕ್ತಾರರಾದ ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚೀನಾ ಇರಲು ನೆಹರೂರವರೇ ಕಾರಣ ಎಂದರು. ‘‘ನಿಮ್ಮ ಅಜ್ಜ ಭಾರತ ಬೆಲೆತೆರುವಂತೆ ಮಾಡಿ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವನ್ನು ‘ಉಡುಗೊರೆಯಾಗಿ’ ನೀಡದೆ ಇರುತ್ತಿದ್ದಲ್ಲಿ ಇಂದು ಚೀನಾ ಅಲ್ಲಿ ಇರುತ್ತಿರಲಿಲ್ಲ’’ ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದರು. ಅವರ ಪ್ರಕಾರ ಭಾರತದ ಮೊದಲ ಪ್ರಧಾನಿ ನೆಹರೂರವರೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾಕ್ಕೆ ಸೀಟು ತೆಗೆಸಿಕೊಟ್ಟವರು. ಹೀಗೆ ಹೇಳಲು ರವಿಶಂಕರ್ ಪ್ರಸಾದ್, ಶಶಿ ತರೂರ್ ಅವರ ‘ನೆಹರೂ: ದಿಇನ್‌ವೆಂಶನ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಆಧಾರವಾಗಿ ಬಳಸಿಕೊಂಡರು. ಆದರೆ, ಇದು ತರೂರ್‌ರವರು ತಮ್ಮ ಪುಸ್ತಕದಲ್ಲಿ ಏನು ಹೇಳಿದ್ದಾರೋ ಅದನ್ನು ಸಂಪೂರ್ಣವಾಗಿ ತಿರುಚಿ ನೀಡಿದ ಹೇಳಿಕೆ ಮತ್ತು ಮಂಡಿಸಿದ ವಾದವಾಗಿದೆ.

ಇತಿಹಾಸದ ಸತ್ಯಗಳನ್ನು, ವಾಸ್ತವಗಳನ್ನು ತಿರುಚಿರುವುದು, ತಿರುಚಿ ತಮಗೆ ಬೇಕಾದಂತೆ ಅರ್ಥೈಸುವುದು ಬಿಜೆಪಿ ಮತ್ತು ಅದರ ಸಹವರ್ತಿಗಳು ಬಳಸುವ ವಿಧಾನಗಳಲ್ಲಿ ಒಂದು. ಇತ್ತೀಚಿನ ವಾಸ್ತವವನ್ನು ಕೂಡಾ ಅವರು ತಿರುಚುತ್ತಾರೆ. ಇಂದಿನ ಮುಸ್ಲಿಮರನ್ನು ರಾಕ್ಷಸರೆಂದು, ಖಳನಾಯಕರೆಂದು ಬಿಂಬಿಸಲು ಅವರು ಮಧ್ಯಯುಗದ ಇತಿಹಾಸವನ್ನು ಹೇಗೆ ತಿರುಚಿದ್ದಾರೆಂಬುದು ಎಲ್ಲರಿಗೂ ತೋರಿಸಲು ಅವರು ಈ ದೇಶದ ಮೂಲ ನಿವಾಸಿಗಳೆಂದು ತೋರಿಸಲು ಅವರು ಹೇಗೆ ಭಾರತದ ಇತಿಹಾಸವನ್ನು ತಿರುಚಿದ್ದಾರೆ ಎಂದೂ ನಮಗೆಲ್ಲ ತಿಳಿದಿದೆ. ಈಗ ಸಮಕಾಲೀನ ಇತಿಹಾಸ, ಕಳೆದ ಕೆಲವು ದಶಕಗಳ ಹಿಂದಿನ ಇತಿಹಾಸ ಕೂಡಾ ಅವರ ಕೈಯಲ್ಲಿ ತಿರುಚಲ್ಪಟ್ಟಿದೆ, ವಿಕೃತಗೊಳಿಸ್ಪಟ್ಟಿದೆ. ಅವರು ತಮಗೆ ಇತಿಹಾಸ ತಿಳಿಯದೆ, ಅಜ್ಞಾನದಿಂದಾಗಿ ಹೀಗೆ ಇತಿಹಾಸವನ್ನು ವಿಕೃತಗೊಳಿಸುತ್ತಿರುವುದಲ್ಲ; ಉದ್ದೇಶ ಪೂರ್ವಕವಾಗಿಯೇ ಅವರು ಹೀಗೆ ಇತಿಹಾಸವನ್ನು ತಿರುಚುತ್ತಿದ್ದಾರೆ. ದ್ವಿತೀಯ ಮಹಾಯುದ್ಧದ ಕೊನೆಯಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದಾಗ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗಿ ಐದು ಬೃಹತ್ ರಾಷ್ಟ್ರಗಳು ಆಯ್ಕೆಯಾದವು. ಅಮೆರಿಕ, ಬ್ರಿಟನ್, ರಶ್ಯಾ, ಫ್ರಾನ್ಸ್ ಮತ್ತು ಚೀನಾ ಆ ಐದು ರಾಷ್ಟ್ರಗಳು. ಅವುಗಳಿಗೆ ವಿಟೊ ಅಧಿಕಾರವನ್ನು ನೀಡಲಾಯಿತು. ಆಗ ಚೀನಾವನ್ನು ಚಿಯಾಂಗ್ ಶೈ ಶೇಕ್ ಆಳುತ್ತಿದ್ದರು ಮತ್ತು ಆಗ ಚೀನಾವನ್ನು ರಿಪಬ್ಲಿಕ್ ಆಫ್ ಚೈನಾ(ಆರ್‌ಒಸಿ) ಎಂದು ಕರೆಯಲಾಗುತ್ತಿತ್ತು. ಮಾವೊತ್ಸೆ ತುಂಗ್‌ರವರ ಕ್ರಾಂತಿ ಯಶಸ್ವಿಯಾದಾಗ ಚಿಯಾಂಗ್ ಶೈ ಶೇಕ್ ತೈವಾನ್‌ಗೆ ಪಲಾಯನ ಮಾಡಿದರು. ಮತ್ತು ತನ್ನ ಸರಕಾರವನ್ನು ಆರ್‌ಒಸಿ ಎಂದೇ ಕರೆಯುವುದನ್ನು ಮುಂದುವರಿಸಿದರು. ಅದೇ ವೇಳೆ, ಚೀನಾದ ಕಮ್ಯುನಿಸ್ಟ್ ಪಕ್ಷವು ಚೀನಾದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)ಯನ್ನು ಸ್ಥಾಪಿಸಿತು. ಚಿಯಾಂಗ್ ಶೈ ಶೇಕ್‌ರವರ ತೈವಾನ್‌ನ ಜನತೆಯನ್ನು ಹೊರತುಪಡಿಸಿ ಉಳಿದ ಸಮಗ್ರ ಚೀನೀ ಜನ ಸಂಖ್ಯೆ ಪಿಆರ್‌ಸಿಯ ಭಾಗವಾಯಿತು. ಶಶಿ ತರೂರ್‌ರವರು ಸರಣಿ ಟ್ವೀಟ್‌ಗಳಲ್ಲಿ ಅಂದು ನಡೆದ ಘಟನೆಗಳ ನಿಜವಾದ ಕ್ರಮಾನುಗತಿಯನ್ನು ಸ್ಪಷ್ಟಪಡಿಸಿದರು. ಚೀನಾದಲ್ಲಿ ಸರಕಾರ ಬದಲಾದದ್ದರಿಂದ ಕಮ್ಯುನಿಷ್ಟ್ ಚೀನಾವನ್ನು (ಪಿಆರ್‌ಸಿ) ವಿಶ್ವಸಂಸ್ಥೆಗೆ ಸೇರಿಸಿಕೊಂಡು ಅದಕ್ಕೆ ಭದ್ರತಾ ಮಂಡಲಿಯ ಖಾಯಂ ಸದಸ್ಯತ್ವವನ್ನು ನೀಡಬೇಕೆಂದು ನೆಹರೂರವರು ವಿಶ್ವ ಸಂಸ್ಥೆಯ ಭದ್ರತಾ ಮಂಡಲಿಯ ಇತರ ಖಾಯಂ ನಾಲ್ಕು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.

ಹಾಗಾಗಿ ಅಲ್ಲಿಯ ತನಕ ತೈವಾನ್ ಹೊಂದಿದ್ದ ಖಾಯಂ ಸದಸ್ಯತ್ವವು ಪಿಆರ್‌ಸಿಗೆ ದೊರಕಿತು. ಈ ಎಲ್ಲಾ ಬೆಳವಣಿಗೆಗಳನ್ನು ಶಶಿ ತರೂರು ತನ್ನ ಸರಣಿ ಟ್ವೀಟ್‌ಗಳಲ್ಲಿ ಸ್ಪಷ್ಟಪಡಿಸಿ ವಿವರಿಸಿದರು. ಆರ್‌ಒಸಿ(ತೈವಾನ್) ವಿಶ್ವ ಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರವಾಗಿ ಮುಂದುವರಿಯುವುದಕ್ಕೆ ವ್ಯಕ್ತವಾದ ವಿರೋಧವನ್ನು ವಿಶ್ವಸಂಸ್ಥೆ ಅರ್ಥ ಮಾಡಿಕೊಂಡಿತ್ತಾದರೂ, ಅದು ಕಮ್ಯುನಿಷ್ಟ್ ಚೀನಾವನ್ನು ಭದ್ರತಾ ಮಂಡಲಿಯ ಸದಸ್ಯನನ್ನಾಗಿ ಮಾಡುವುದು ಆ ನಾಲ್ಕು ಖಾಯಂ ಸದಸ್ಯ ರಾಷ್ಟ್ರಗಳಿಗೆ ಇಷ್ಟವಿರಲಿಲ್ಲ. ಆಗ ಚೀನಾದ ಖಾಯಂ ಸದಸ್ಯತ್ವವನ್ನು ಭಾರತ ತೆಗೆದುಕೊಳ್ಳಲಿ ಎಂದು ಸೂಚಿಸಲಾಯಿತು. ಆದರೆ ಇದು ತಪ್ಪು, ಹೀಗೆ ಮಾಡಿದಲ್ಲಿ ಚೀನಾಕ್ಕೆ ಆಗಿರುವ ಒಂದು ಅನ್ಯಾಯದ ಮೇಲೆ ಇನ್ನೊಂದು ಅನ್ಯಾಯ ಮಾಡಿದಂತಾಗುತ್ತದೆಂದು ನೆಹರೂಗೆ ಅನ್ನಿಸಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಿಪಬ್ಲಿಕ್ ಆಫ್ ಚೈನಾದ ಖಾಯಂ ಸದಸ್ಯತ್ವದ ಸ್ಥಾನವನ್ನು ಭಾರತ ಅಲಂಕರಿಸಿದಲ್ಲಿ ಚೀನಾಕ್ಕೆ ಅನ್ಯಾಯದ ಮೇಲೆ ಪುನಃ ಅನ್ಯಾಯ ಎಸಗಿದಂತಾಗುತ್ತದೆ ಎಂದು ನೆಹರೂರಿಗೆ ಅನ್ನಿಸಿದ್ದರಿಂದ, ಆರ್‌ಒಸಿಯ ಸ್ಥಾನವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾಕ್ಕೆ ನೀಡಬೇಕೆಂದು ಅವರು ಹೇಳಿದರು. ಮುಂದೊಂದು ದಿನ ಭಾರತವು ಭದ್ರತಾ ಮಂಡಳಿಯಲ್ಲಿ ತನ್ನದೇ ಆದ ಸಾಮರ್ಥ್ಯದ ಹಾಗೂ ಪ್ರಭಾವದ ನೆಲೆಯಲ್ಲಿ ವಿಶ್ವ ಸಂಸ್ಥೆಯಲ್ಲಿ ಖಾಯಂ ಸ್ಥಾನ ಪಡೆಯಬೇಕೆಂಬುದು ನೆಹರೂರವರ ಅಭಿಪ್ರಾಯವಾಗಿತ್ತು.

ಶಶಿ ತರೂರ್ ಹೇಳುವ ಪ್ರಕಾರ ಮತ್ತು ಅಂದಿನ ವಾಸ್ತವಗಳು ಸ್ಪಷ್ಟಪಡಿಸುವಂತೆ ಭಾರತವು ವಿಶ್ವಸಂಸ್ಥೆಯಲ್ಲಿ ಆ ಸ್ಥಾನದಲ್ಲಿ ಕುಳಿತಿರುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಸ್ಥಾನವನ್ನು ಚೀನಾಕ್ಕೆ ನೀಡುವ ಬದಲಾಗಿ ಭಾರತಕ್ಕೆ ನೀಡಬೇಕಾಗಿದ್ದಲ್ಲಿ ವಿಶ್ವಸಂಸ್ಥೆಯ ಸನದಿಗೆ ಒಂದು ತಿದ್ದುಪಡಿ ತರಬೇಕಾಗಿತ್ತು ಮತ್ತು ಅಮೆರಿಕ ಅಂತಹ ಯಾವುದೇ ತಿದ್ದುಪಡಿಗೆ ಅನುಮತಿ ನೀಡಲು ಸಿದ್ಧವಿರಲಿಲ್ಲ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕಮ್ಯುನಿಷ್ಟ್ ಚೀನಾಕ್ಕೆ ಕೂಡಲೇ ಖಾಯಂ ಸದಸ್ಯತ್ವ ನೀಡಲಿಲ್ಲ. ಬಹಳ ನಂತರ ಚಿಯಾಂಗ್ ಶೈಶೇಕ್‌ರವರ ಸರಕಾರವನ್ನು ಬದಲಾಯಿಸಿದ ಬಳಿಕವಷ್ಟೇ ಕಮ್ಯುನಿಷ್ಟ್ ಚೀನಾಕ್ಕೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡಲಾಗಿತ್ತು. ಚೀನಾ ವಿಶ್ವಸಂಸ್ಥೆಯಂತಹ ಒಂದು ಜಾಗತಿಕ ಸಂಘಟನೆಯ ಸದಸ್ಯ ರಾಷ್ಟ್ರವಾಗುವಂತೆ ನೋಡಿಕೊಳ್ಳುವುದಷ್ಟೆ ನೆಹರೂರಿಗೆ ಮುಖ್ಯ ಪ್ರಶ್ನೆಯಾಗಿತ್ತು.

ಅಲ್ಲದೆ ಅವರಿಗೆ ಒಂದೆಡೆ ಅಮೆರಿಕದ ಮತ್ತು ಇನ್ನೊಂದೆಡೆ ರಶ್ಯಾದ ವಿಭಿನ್ನ ಆಸಕ್ತಿಗಳ, ವಿವಿಧ ಹಿತಾಸಕ್ತಿಗಳ ಅರಿವು ಇತ್ತು. ಚೀನಾಕ್ಕೆ (ಪಿಆರ್‌ಸಿಗೆ)ಖಾಯಂ ಸದಸ್ಯತ್ವ ನೀಡಲು ನೆಹರೂ ಏನೂ ಆಗಿರಲಿಲ್ಲ ಮತ್ತು ಅವರಿಗೆ ಅದನ್ನು ನೀಡುವ ಯಾವ ಅಧಿಕಾರವೂ ಇರಲಿಲ್ಲ. ಇತಿಹಾಸವನ್ನು ತಿರುಚುವ, ವಿಕೃತಗೊಲಿಸುವ ಬಿಜೆಪಿಯ ಸರಣಿ ಅಭಿಯಾನದಲ್ಲಿ ತೀರ ಇತ್ತೀಚೆಗಿನ ಸೇರ್ಪಡೆ ಎಂದರೆ ಕಾಂಗ್ರೆಸ್ ಪಕ್ಷದಿಂದಾಗಿ ಭಾರತದ ವಿಭಜನೆಯಾಯಿತೆಂದು ಅದು ಹೇಳುತ್ತಿರುವುದು. ಇದು ಕಳೆದ ಹಲವು ದಶಕಗಳಲ್ಲಿ ಬಿಜೆಪಿ ಮತ್ತು ಅದರ ನಾಯಕರು ಹೇಳುತ್ತ ಬಂದಿರುವ ಸುಳ್ಳುಗಳಲ್ಲೆ ಅತ್ಯಂತ ಮೂರ್ಖತನದ, ಅತ್ಯಂತ ಅಸಂಗತವಾದ, ಹಾಸ್ಯಾಸ್ಪದವಾದ ಹಾಗೂ ಎಂದೂ ನಂಬಲು ಸಾಧ್ಯವೇ ಇಲ್ಲದಂತಹ ಹಸಿ ಹಸಿ ಸುಳ್ಳು. ಇದು ದೇಶ ವಿಭಜನೆಯ ದುರಂತ. ಪ್ರಕ್ರಿಯೆಯ ಕುರಿತು ಮೋದಿಯವರಿಗೆ ಇರುವ ಅಜ್ಞಾನವನ್ನಷ್ಟೇ ತೋರಿಸುವುದಲ್ಲದೆ ಮೋದಿಯ ಸಹಚರರು, ಸಹವರ್ತಿಗಳು ತಮ್ಮ ದೃಷ್ಟಿಕೋನಕ್ಕೆ ಬೇಕಾದ ಹಾಗೆ ತಮಗೆ ಲಾಭವಾಗುವ ಹಾಗೆ ತಮ್ಮ ಪೂರ್ವಾಗ್ರಹಗಳನ್ನು ಹೇಗೆ ಗಟ್ಟಿಗೊಳಿಸುತ್ತಾರೆ, ಹೇಗೆ ದೃಢಪಡಿಸಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಭಾರತದ ವಿಭಜನೆಯ ದುರಂತ ಸಂಭವಿಸಲು ಮುಖ್ಯ ಕಾರಣ ಬ್ರಿಟಿಷರ ಒಡೆದು ಆಳುವ ನೀತಿ ಮತ್ತು ಇದಕ್ಕೆ ನೆರವು ನೀಡಿದ ಸಾವರ್ಕರ್‌‘ದ್ವಿ ರಾಷ್ಟ್ರ’ ಸಿದ್ಧಾಂತ. ಸಾವರ್ಕರ್‌ರ ಎರಡು ರಾಷ್ಟ್ರಸಿದ್ಧಾಂತದ ಪ್ರಕಾರ ಭಾರತದಲ್ಲಿ ಎರಡು ರಾಷ್ಟ್ರಗಳಿವೆ, ಮುಸ್ಲಿಂ ರಾಷ್ಟ್ರ ಮತ್ತು ಹಿಂದೂ ರಾಷ್ಟ್ರ. ಈ ಸಿದ್ಧಾಂತಕ್ಕೆ ಮುಸ್ಲಿಂ ಲೀಗ್‌ನ ಸಿದ್ಧಾಂತವೂ ಬೆಂಬಲ ನೀಡಿತು. ಮುಸ್ಲಿಂ ಲೀಗ್‌ನ ಸಿದ್ಧಾಂತದ ಪ್ರಕಾರ ಮುಸ್ಲಿಮರ ಮೇಲುವರ್ಗ, ಗಣ್ಯವರ್ಗ ಕಳೆದ ಹಲವು ಶತಮಾನಗಳಿಂದ ಒಂದು ಮುಸ್ಲಿಂ ರಾಷ್ಟ್ರವಾಗಿಯೆ ಇದೆ. ನೆಹರೂ-ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸುತ್ತಿರುವ ದ್ವೇಷ ಪೂರಿತವಾದ ಪ್ರಚಾರವನ್ನು, ಅಭಿಯಾನವನ್ನು ಕೆಲವು ಮುಗ್ಧರು, ನಿಜವಾದ ಇತಿಹಾಸವನ್ನು ತಿಳಿಯದವರು ನಂಬಬಹುದು, ನಂಬಿ ಮೋಸ ಹೋಗಲೂಬಹುದು. ಆದರೆ ಸಮಕಾಲೀನ ಇತಿಹಾಸದತ್ತ ನಾವು ಕಣ್ಣು ಹಾಯಿಸಿದರೂ ಸಾಕು, ಕಳೆದ ಕೆಲವು ದಶಕಗಳಲ್ಲಿ (ನೆಹರೂ-ಕಾಂಗ್ರೆಸ್ ಯುಗದಲ್ಲಿ) ದೇಶವು ಎಲ್ಲಾ ರಂಗಗಳಲ್ಲಿ ಸಾಧಿಸಿದ ಸರ್ವಾಂಗೀಣ ಪ್ರಗತಿ ನಮಗೆ ತಿಳಿಯುತ್ತದೆ.

ಅದು ಶಿಕ್ಷಣ ರಂಗವಿರಬಹುದು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ರಂಗವಿರಬಹುದು; ಅಥವಾ ಆಧುನಿಕ ಉದ್ಯಮಗಳಿಗೆ ಹಾಕಿದ ಶಂಕುಸ್ಥಾಪನೆಗಳು ಅಥವಾ ಆಧುನಿಕ ನೀರಾವರಿ ರಂಗವಿರಬಹುದು. ಭಾರತವನ್ನು ಒಂದು ಕೃಷಿ ಆಧಾರಿತ ಅರ್ಥ ವ್ಯವಸ್ಥೆಯಿಂದ ಇಂದಿನ ಔದ್ಯಮಿಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗಕ್ಕೆ ರೂಪಾಂತರಗೊಳಿಸುವಲ್ಲಿ ನೆಹರೂ ನಾಯಕತ್ವ ಬಹಳ ಮುಖ್ಯವಾದ ಪಾತ್ರ ವಹಿಸಿತು. ಎಲ್ಲಾ ಐಐಟಿಗಳು, ಎಐಐಎಮ್‌ಎಸ್‌ಗಳು, ಸಿಎಸ್‌ಐಆರ್, ಬಿಎಆರ್‌ಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳು ಹಾಗೂ ಸಾರ್ವಜನಿಕ ರಂಗದ ಸರಣಿ ಉದ್ದಿಮೆಗಳು, ಆಧುನಿಕ ಭಾರತದ ನಿರ್ಮಾತೃ ಜವಾಹರಲಾಲ್ ನೆಹರೂರವರ ಸಾಧನೆಗಳು, ಅವರು ಭಾರತಕ್ಕೆ ನೀಡಿದ ಕೊಡುಗೆಗೆಳ ಪುರಾವೆಗಳಾಗಿವೆೆ. ನೆಹರೂರವರು ಜಾಗತಿಕ ಚದುರಂಗ ಪಟದಲ್ಲಿ ನಮ್ಮ ಸ್ಥಾನವೇನೆಂಬುದನ್ನು ಗುರುತಿಸುವಲ್ಲಿ ಯಶಸ್ವಿಯಾದದ್ದಷ್ಟೇ ಅಲ್ಲದೆ, ದೇಶದ ಪ್ರಗತಿಗೆ ಹಲವು ರಂಗಗಳಲ್ಲಿ ಆಧುನೀಕರಣ ಅತಿ ಮುಖ್ಯವೆಂಬುದನ್ನು ಕೂಡ ಮನಗಂಡಿದ್ದರು. ಬ್ರಿಟಿಷರು ಭಾರತವನ್ನು ಕೊಳ್ಳೆಹೊಡೆಯುವ, ಲೂಟಿಮಾಡುವ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಈ ದೇಶದ ಸಂಪತ್ತನ್ನು ಹಾಗೂ ನಮ್ಮ ಅಮೂಲ್ಯ ಸಂಪನ್ಮೂಲಗಳನ್ನು ಬರಿದು ಮಾಡಿದ ಬಳಿಕ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ್ದರು. ಅಂತಹ ಪಾತಾಳದಿಂದ ಭಾರತವನ್ನು ಮೇಲಕ್ಕೆ ಎತ್ತಿದವರು ನೆಹರೂ. ಆಧುನಿಕ ಪ್ರಜಾಸತ್ತಾತ್ಮಕ ಭಾರತದ ಕೇಂದ್ರ ಬಿಂದು ನೆಹರೂ ಎಂದು ಬಿಜೆಪಿಗೆ ತಿಳಿದಿರುವುದರಿಂದಲೇ ಅದು ಮತ್ತು ಅದರ ನಾಯಕರು ಸತ್ಯ ಸಂಗತಿಗಳನ್ನು, ನಿಜವಾದ ಇತಿಹಾಸವನ್ನು ತಿರುಚುವ ಮೂಲಕ ನೆಹರೂರನ್ನು ಟೀಕಿಸುವ, ದೂರುವ ಅಭಿಯಾನದಲ್ಲಿ ನಿರತರಾಗಿದ್ದಾರೆ. ಬಿಜೆಪಿಯ ವಿಭಾಜಕ, ಕೋಮುವಾದಿ ಕಾರ್ಯಸೂಚಿಗೆ, ಅಜೆಂಡಾಕ್ಕೆ ಬದಲಾಗಿ ನೆಹರೂರವರ ಆಧುನಿಕ ಭಾರತದ ಕುರಿತಾದ ದೂರದೃಷ್ಟಿಯೇ ಆಧುನಿಕ ಭಾರತದ ನಿರ್ಮಾಣಕ್ಕೆ ನಾಂದಿಯಾಯಿತೆಂದು ಬಿಜೆಪಿಗೂ ತಿಳಿದಿದೆ. ಆದ್ದರಿಂದಲೇ ಅದು ಈಗ ತನ್ನ ಎಲ್ಲಾ ಸೋಲುಗಳಿಗೂ ನೆಹರೂರನ್ನೇ ಹೊಣೆಯಾಗಿಸಲು ಪ್ರಯತ್ನಿಸುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)