varthabharthi

ನಿಧನ

ಗೋಳ್ತಮಜಲು: ಹಜಾಜ್ ಸಮೂಹ ಸಂಸ್ಥೆಯ ಸ್ಥಾಪಕ ಅಬ್ದುಲ್ ಖಾದರ್ ಹಾಜಿ ನಿಧನ

ವಾರ್ತಾ ಭಾರತಿ : 22 Apr, 2019

ಬಂಟ್ವಾಳ, ಎ.22: ಹಜಾಜ್ ಸಮೂಹ ಸಂಸ್ಥೆಗಳ ಸ್ಥಾಪಕ, ಹಿರಿಯ ಸಾಹಿತಿ, ಕವಿ, ಸಾಮಾಜಿಕ, ಧಾರ್ಮಿಕ ಮುಖಂಡ, ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಹಾಜಿ ಜಿ.ಅಬ್ದುಲ್ ಖಾದರ್(87) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಬ್ದುಲ್ ಖಾದರ್ ಹಾಜಿ ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯಲ್ಲಿ ಸುದೀರ್ಘ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಇವರು ‘ಅಬ್ಬೊನು ಹಾಜಿ’ ಎಂದೇ ಚಿರಪರಿಚಿತರಾಗಿದ್ದರು. ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾದರ್ ಹಾಜಿಯವರನ್ನು ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಬ್ದುಲ್ ಖಾದರ್ ಹಾಜಿ ಜಿಲ್ಲೆಯ ಹಿರಿಯ ಬ್ಯಾರಿ, ಕನ್ನಡ ಸಾಹಿತಿ ಕವಿಯಾಗಿದ್ದಾರೆ. ಅವರ ಹಲವಾರು ಲೇಖನ, ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಹೆಸರಲ್ಲಿ ಅಭಿನಂದನಾ ಗ್ರಂಥವೊಂದು ಬಿಡುಗಡೆಯಾಗಿದೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದುಡಿದಿದ್ದಾರೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯಿಂದಲೂ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹಜಾಜ್ ಉದ್ಯಮದ ಜೊತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಬಡ/ಅಶಕ್ತರ ಶ್ರೇಯೋಭಿವೃದ್ಧಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಲ್ಲಡ್ಕ ಜುಮಾ ಮಸೀದಿ ಹಾಗೂ ಗೋಳ್ತಮಜಲು ಜುಮಾ ಮಸೀದಿಯ ಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡಿದ್ದಾರೆ. ಹಜಾಜ್ ಸಂಸ್ಥೆ ಮೂಲಕ ಫ್ಯಾಮಿಲಿ ಟ್ರಸ್ಟ್ ರಚಿಸಿ 'ಜೆಮ್ ಪಬ್ಲಿಕ್ ಸ್ಕೂಲ್' ಸ್ಥಾಪಿಸಿ ನಾಡಿನ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುತ್ತಿದ್ದರು. ಗೋಳ್ತಮಜಲಿನಲ್ಲಿ ಸರಕಾರಿ ಪ್ರೌಢಶಾಲೆ ಪ್ರಾರಂಭಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಜಾತಿ ಧರ್ಮವಿಲ್ಲದೆ ನಾಡಿನ ಯುವಕರನ್ನು ಒಗ್ಗೂಡಿಸಿ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಉಭಯ ರಾಜ್ಯಾದ್ಯಂತ ಕಬಡ್ಡಿ ಪಂದ್ಯಾಟದಲ್ಲಿ ಹೆಸರುವಾಸಿಯಾಗಿದೆ. ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿ ಕರಾವಳಿ ಜಿಲ್ಲಾದ್ಯಂತ ಹೆಸರುವಾಸಿಯಾಗಿದ್ದರು

ಮೃತರು ಪತ್ನಿ, ಆರು ಮಂದಿ ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂಜೆ 5 ಗಂಟೆಗೆ ಕಲ್ಲಡ್ಕ ಜುಮಾ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)