varthabharthi

ನಿಮ್ಮ ಅಂಕಣ

​ತುರ್ತು ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗ

ವಾರ್ತಾ ಭಾರತಿ : 23 Apr, 2019
ಪುನೀತ್ ಎನ್., ಅಶೋಕಪುರಂ, ಮೈಸೂರು

ನಮ್ಮ ಭಾರತವು ಪ್ರಜಾಪ್ರಭುತ್ವ ದೇಶ. ವಿವಿಧತೆಯಿಂದ ಏಕತೆಯನ್ನು ಬಯಸುವ ದೇಶ. ಜನ, ಭಾಷೆ, ಪ್ರದೇಶ ಮತ್ತು ಸಂಸ್ಕೃತಿ ಎಷ್ಟೇ ಭಿನ್ನವಾಗಿದ್ದರೂ ಅದನ್ನು ಒಂದು ಪಥದಲ್ಲಿ ಯಾರಿಗೂ ತಾರತಮ್ಯವಾಗದಂತೆ ಮುನ್ನಡೆಸುವ ಶಕ್ತಿ ನಮ್ಮ ಸಂವಿಧಾನಕ್ಕಿದೆ. ನಮ್ಮ ಜನರ ಆಶೋತ್ತರ ಮತ್ತು ಆಶಯ ಪೂರ್ವಕವಾಗಿ ಬೇಕಾಗುವ ಸವಲತ್ತುಗಳನ್ನು ನಮ್ಮ ಸಂವಿಧಾನ ನಿರ್ಮಾಣ ಮಾಡಿದೆ. ನಾವು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೊರಳಿದ್ದೇವೆ. ಇದರನ್ವಯ ಡಾ. ಅಂಬೇಡ್ಕರ್‌ರವರು ಹೇಳುತ್ತಾರೆ, ‘‘ಹಿಂದೆ ರಾಣಿ ಹೊಟ್ಟೆಯಲ್ಲಿ ರಾಜ ಹುಟ್ಟುತ್ತಿದ್ದರು, ಆದರೆ ಇಂದು ಮತಪೆಟ್ಟಿಗೆಯಲ್ಲಿ ರಾಜ ಹುಟ್ಟುತ್ತಾನೆ’’ ಎಂದು. ಇಲ್ಲಿ ಹುಟ್ಟುವ ಈ ರಾಜನನ್ನು ಆಯ್ಕೆ ಮಾಡಲು ಮತ್ತು ಪ್ರಶ್ನಿಸಲು ಪ್ರಜೆಯೇ ಸಾರ್ವಭೌಮ. ನಮ್ಮ ಸಾರ್ವಭೌಮತ್ವ ದೇಶದಲ್ಲಿ ಚುನಾವಣೆ ನಡೆಸಲು ಚುನಾವಣೆ ಆಯೋಗವು ಸಂವಿಧಾನದಡಿ ಪರಿಚ್ಛೇದ 324ರ ಅನ್ವಯ ಸಾಂವಿಧಾನಿಕ ಸಂಸ್ಥೆಯಾಗಿ ಕರ್ತವ್ಯ ನಿರ್ವಹಿಸುತ್ತದೆ. 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸವಾರಿ ಮತ್ತು ವ್ಯವಸ್ಥಿತ ದುರ್ಬಲ ಮಾಡುವಂತಹ ಘಟನಾವಳಿಗಳು ನಮ್ಮ ಮುಂದೆ ನಡೆದ ನಿರ್ದೇಶನಗಳಿವೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಮಾಧ್ಯಮ ಮತ್ತು ಜನತೆಯ ಮುಂದೆ ಬಂದು ತಮ್ಮ ನೋವನ್ನು ಹೇಳಿಕೊಂಡಿರುವುದು ಪ್ರಜಾಪ್ರಭುತ್ವದ ಮೇಲೆ ಇನ್ನೂ ಮಾಸದ ಗಾಯವಾಗಿಯೇ ಉಳಿದಿದೆ. ಈ ಎಲ್ಲದರ ಅವಲೋಕನದ ಸರಪಳಿಯಲ್ಲಿ ನಮ್ಮ ಮುಂದೆ ಮತ್ತೆ ಲೋಕಸಭೆ ಚುನಾವಣೆ ಎದುರಾಗಿದೆ. ಈ ಚುನಾವಣೆ ನಡೆಸಲು ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯ, ನ್ಯಾಯಪರತೆ, ನಿಷ್ಪಕ್ಷಪಾತ ಮತ್ತು ಸಾಮರ್ಥ್ಯವನ್ನು ಕೇಂದ್ರದ ಆಳುವ ಪಕ್ಷಕ್ಕೆ ರಾಜಿಯಾಗಲು ಗ್ರಹಿಸಲ್ಪಟ್ಟಿವೆ ಎಂಬ ಸಂಶಯ ಜನರಿಗೆ ಎದುರಾಗಿದೆ. ಏಕೆಂದರೆ, 27/03/2018ರಂದು ಡಿಆರ್‌ಡಿಒ (Defence Research and Development Organisation) ಭಾರತದ ಪ್ರಥಮ ಕೃತಕ ಉಪಗ್ರಹ ನಾಶ ತಂತ್ರಜ್ಞಾನ (India’s first anti-satellite weapon) ವನ್ನು ಯಶಸ್ವಿಗೊಳಿಸಿತ್ತು, ಈ ಹೆಜ್ಜೆಯಿಂದ ವಿಶ್ವದ ಎದುರು ಉಪಗ್ರಹ ನಾಶ ತಂತ್ರಜ್ಞಾನದಲ್ಲಿ ನಮ್ಮ ದೇಶ ನಾಲ್ಕನೇ ದೇಶವಾಗಿ ತಲೆ ಎತ್ತಿ ನಿಂತಿದೆ. ಇದರ ಹಿಂದೆ ಡಿಆರ್‌ಡಿಒರವರ ಹಗಲಿರುಳು ಪರಿಶ್ರಮ ಮತ್ತು ಜವಾಬ್ದಾರಿ ಅಡಗಿದೆ. ಆದರೆ ದೇಶದಲ್ಲಿ ಲೋಕಸಭೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸ್ವತಃ ಪ್ರಧಾನಿ ಮೋದಿಯವರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರೂ ಸಾರ್ವಜನಿಕವಾಗಿ ಮಾಧ್ಯಮದೆದುರು ಈ ತಂತ್ರಜ್ಞಾನ ಪರೀಕ್ಷೆಯ ಯಶಸ್ಸನ್ನು ತಮ್ಮ ಸರಕಾರದ ಸಾಧನೆಯೆಂಬಂತೆ ದೇಶಕ್ಕೆ ಘೋಷಿಸಿದ್ದಾರೆ.

ಇದಾದನಂತರ, ತೀವ್ರ ಒತ್ತಡ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಎಚ್ಚೆತ್ತ ಆಯೋಗವು ‘ಮೋದಿ: ಎ ಕಾಮನ್ ಮ್ಯಾನ್ಸ್ ಜರ್ನಿ’ ಎಂಬ ಚಿತ್ರಕ್ಕೆ ತಡೆಯೊಡಿದ್ದೆ. ಹಾಗೆಯೇ, ದಿನಾಂಕ 04.03.2019ರಂದು ಬಿಡುಗಡೆಯಾದ ‘ನಮೋ ಟಿವಿ’ ವಾಹಿನಿಯೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯಾವುದೇ ಔಪಚಾರಿಕ ಅನುಮತಿಯಿಲ್ಲದೆ ಪ್ರಧಾನ ನರೇಂದ್ರ ಮೋದಿಯವರ ಚಿತ್ರಣವನ್ನು ಪ್ರಸಾರ ಮಾಡುತ್ತಿತ್ತು, ಡಿಟಿಎಚ್ ಸೇವಾದಾರರಾದ ಟಾಟಾ ಸ್ಕೈ ಆರಂಭದಲ್ಲಿ ಅದನ್ನು ‘‘ಹಿಂದಿ ಸುದ್ದಿ ಸೇವಾ ಚಾನೆಲ್’’ ಎಂದು ಕರೆದಿದ್ದರು. ಮುಂದುವರಿದು, ಭಾರತದಲ್ಲಿ ರಾಜ್ಯಪಾಲರಿಗೆ ಸಂವಿಧಾನದಡಿ ಕಲಂ 153ರಲ್ಲಿ ತನ್ನದೇ ಆದ ವಿಶೇಷ ಗೌರವ ಮತ್ತು ಸ್ವಾಯತ್ತೆ ನೀಡಿದೆ.

ಇವರು ಯಾವುದೇ ಪಕ್ಷ ಅಥವಾ ಅಭ್ಯರ್ಥಿಪರ ನಿಲುವು ತಾಳಬಾರದು ಎಂದು ಹೇಳಿದೆ. ಆದರೆ, ರಾಜಸ್ಥಾನದ ರಾಜ್ಯಪಾಲರಾದ ಕಲ್ಯಾಣ್ ಸಿಂಗ್‌ರವರು ಒಂದು ಏಕ-ಪಕ್ಷದ ಪರ ಹೇಳಿಕೆಯನ್ನು ಚುನಾವಣೆ ಪ್ರಚಾರ ಸಂಬಂಧಿತವಾಗಿ ಹೇಳಿದ್ದಾರೆ. ಇದರ ವಿರುದ್ಧ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿತ್ತು. ಈ ಎಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರು ಸೇನೆಯ ಸಾಧನೆಯನ್ನು ಚುನಾವಣಾ ಉದ್ದೇಶಕ್ಕೆ ಬಳಸಬಾರದು ಎಂಬು ನಿಯಮ ಇದ್ದರೂ ಅದನ್ನು ಗಾಳಿಗೆ ತೂರಿ ಪುಲ್ವಾಮದಲ್ಲಿ ಮಡಿದ ಯೋಧರ ಹೆಸರಿನಲ್ಲಿ ಮತಕೇಳಿದ್ದಾರೆ. ಇದು ಅತ್ಯಂತ ದುರ್ಬಲ ಆಡಳಿತ ತೋರಿದ ಸರಕಾರದ ಮುಖ್ಯಸ್ಥರ ಹೊಣೆಗೇಡಿತನ ಎಂದರೂ ತಪ್ಪಾಗಲಾರದು. ಈ ಎಲ್ಲದರ ಉಲ್ಲಂಘನೆಯನ್ನು ನೋಡಿಯೂ ಚುನಾವಣೆ ಆಯೋಗ ಕಣ್ಣುಮುಚ್ಚಿಕೊಂಡಿರುವುದನ್ನು ಗಮನಿಸಿದರೆ ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಕಾದಿದೆ ಎಂದರ್ಥ.

ಇಷ್ಟೆಲ್ಲ ದೋಷಗಳ ನಡುವೆ ಆಯೋಗವು ಒಡಿಶಾದ ಸಂಬಲಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರನ್ನು ಪರಿಶೀಲಿಸಿದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್ ಅವರನ್ನು ಚುನಾವಣಾ ಆಯೋಗ ಕರ್ತವ್ಯದಿಂದ ಅಮಾನತು ಮಾಡಿದೆ. ಇದಕ್ಕೆ ನೀಡಿದ ಕಾರಣ ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ಭದ್ರತೆಯಲ್ಲಿ ಇರುವವರನ್ನು ಚುನಾವಣಾ ಸಂಚಾರಿ ತನಿಖಾ ದಳದ ಸಿಬ್ಬಂದಿ ಪರಿಶೀಲಿಸುವಂತಿಲ್ಲ, ಇದನ್ನು ಮುಹ್ಸಿನ್‌ರವರು ಉಲ್ಲಂಘಿಸಿದ್ದಾರೆ ಎಂದು ಕಾರಣ ನೀಡಿದೆ. ಆದರೆ 2014ರ ಎಪ್ರಿಲ್ 10ರಂದು ಹೊರಡಿಸಿರುವ ಅಧಿಸೂಚನೆಯ ಅನ್ವಯ ಎಸ್‌ಪಿಜಿ ಭದ್ರತೆ ಪಡೆದಿರುವ ವ್ಯಕ್ತಿಯು ಸರಕಾರಿ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಸಂದೇಹ ಬಂದಲ್ಲಿ, ಅದನ್ನು ಸಂಬಂಧಿತ ಸರಕಾರದ ಗಮನಕ್ಕೆ ತರುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸುವ ಅಧಿಕಾರವೂ ಆಯೋಗಕ್ಕೆ ಇದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಆದರೆ ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ವಾಹನಗಳನ್ನು ಪರಿಶೀಲಿಸುವಂತಿಲ್ಲ ಎಂದು ಆಯೋಗವು ತನ್ನ ಅಧಿಸೂಚನೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

1999ರಲ್ಲಿ ಆಯೊಗವು ಹೊರಡಿಸಿರುವ ‘ಸರಕಾರಿ ವಾಹನಗಳ ಬಳಕೆ’ ಮಾರ್ಗಸೂಚಿಯಲ್ಲೂ ‘‘ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳ ವಾಹನಗಳನ್ನು ಪರಿಶೀಲಿಸುವಂತಿಲ್ಲ’’ ಎಂಬುದರ ಉಲ್ಲೇಖವಿಲ್ಲ. ಹಾಗಾದರೆ, ಆಯೋಗವು ಏಕಪಕ್ಷೀಯವಾಗಿ ಅಧಿಕಾರ ಚಲಾಯಿಸುತ್ತಿದ್ದೇಯೇ? ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರಬೇಕಾದರೆ ಪ್ರಧಾನಿ ಮೋದಿಯವರಿಗೆ ಒಂದು ನ್ಯಾಯ ಸಾಮಾನ್ಯ ನಾಗರಿಕರಿಗೆ ಇನ್ನೊಂದು ನ್ಯಾಯವೇ! ಒಬ್ಬ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸುವಾಗ ಈ ರೀತಿಯ ನಿರ್ಬಂಧದಿಂದಾಗಿ ಯಾವ ರೀತಿಯ ಆಡಳಿತ ನೀಡಲು ತಾನೇ ಸಾಧ್ಯ. ಭಾರತವೆಂಬ ದೊಡ್ಡ ರಾಷ್ಟ್ರದಲ್ಲಿ ಚುನಾವಣೆಗಳನ್ನು ನಡೆಸಿದ ಆಯೋಗಕ್ಕೆ ತನ್ನದೇ ಆದ ಗೌರವ, ವಿಶ್ವಾಸ, ಕೀರ್ತಿ ಮತ್ತು ಯಶಸ್ಸು ಇದೆ. ಇದುವರೆಗೂ ಈ ಆಯೋಗವು ಪ್ರಶ್ನಾತೀತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿತ್ತು. ಆಯೋಗದ ನೀತಿ-ನಿಯಮಗಳನ್ನು ಪಕ್ಷಾತೀತವಾಗಿ ಗೌರವಿಸುತ್ತಾ ಬಂದಿದೆ. ಆದರೆ ಎಲ್ಲೋ ಒಂದು ಕಡೆ ಆಯೋಗವು ಕುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ ಎಂದು ಭಾಸವಾಗುತ್ತಿದೆ! 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)