varthabharthi

ನಿಮ್ಮ ಅಂಕಣ

ಎಡ ಇಲ್ಲದ ಭಾರತದಲ್ಲಿ ಪ್ರಜೆಗಳಲ್ಲಿ ಬಲವೆಲ್ಲಿ?

ವಾರ್ತಾ ಭಾರತಿ : 23 Apr, 2019
ವಿಜಯ್ ಪ್ರಸಾದ್, ಸುಧನ್ವ ದೇಶಪಾಂಡೆ. ಅನು: ನಾ ದಿವಾಕರ

ರೈತರ, ಕಾರ್ಮಿಕರ, ಮಹಿಳೆಯರ ಮತ್ತು ದಲಿತರ ಧ್ವನಿವರ್ಧಕಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಯಾವುದೋ ಒಂದು ಎಡಪಂಥೀಯ ಸಂಘಟನೆ ಅಥವಾ ಎಡಪಂಥೀಯ ಚಳವಳಿಗಳು. ಎಡಪಂಥೀಯ ಚಳವಳಿಗಳು ಇಂದಿನ ಕಾಲದ ವಾಸ್ತವಗಳಿಗೆ ವಿಮುಖವಾಗಿವೆ ಅಥವಾ ಅಂಚಿಗೆ ತಳ್ಳಲ್ಪಟ್ಟಿವೆ ಎಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೂ 2018ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಹೋರಾಟದ ಕಣಕ್ಕಿಳಿದ ಜನಸಾಮಾನ್ಯರ ಆಂದೋಲನಗಳಲ್ಲಿ ಎಡಪಂಥೀಯರ ಪಾತ್ರ ಮಹತ್ವದ್ದಾಗಿತ್ತು.


ಭಾರತದಲ್ಲಿ ಇಬ್ಬರ ಪೈಕಿ ಒಬ್ಬರು ಪ್ರತಿ ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗುತ್ತಾರೆ. ಅಂದರೆ 70 ಕೋಟಿ ಜನ ಎನ್ನಬಹುದು. ಇದು ಮೆಕೆನ್ಸಿ ನೀಡಿರುವ ಅಂಕಿ ಅಂಶ. ಆದರೆ ಭಾರತದಲ್ಲಿರುವ ಬಿಕ್ಕಟ್ಟುಗಳನ್ನು ಗ್ರಹಿಸಲು ಯಾವುದೇ ಸಲಹೆಗಾರರು ಬೇಕಿಲ್ಲ. ದೇಶದ ರಸ್ತೆಗಳಲ್ಲಿ ವಾಸ್ತವದ ದರ್ಶನವಾಗುತ್ತದೆ. ರೈತರ ಆತ್ಮಹತ್ಯೆಯ ಹೆಚ್ಚಳದಿಂದ ಸಂಕೀರ್ಣವಾಗುತ್ತಿರುವ ಕೃಷಿ ಬಿಕ್ಕಟ್ಟು ಮತ್ತು ನಗರಗಳಲ್ಲಿ ಏರುತ್ತಿರುವ ಕೊಳೆಗೇರಿಗಳ ಸಂಖ್ಯೆಯಿಂದ ಸಾಬೀತಾಗುವ ನಗರದ ಸಮಸ್ಯೆಗಳು ಸಾಮಾನ್ಯ ಸಂಗತಿಗಳಾಗಿವೆ. ಭಾರತದ ಅರ್ಧಕ್ಕೂ ಹೆಚ್ಚು ಜನತೆ ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನೀತಿಗಳು ಯಾವುದೇ ರೀತಿಯಲ್ಲೂ ಪರಿಣಾಮಕಾರಿಯಾಗಿಲ್ಲ. ಜನಸಾಮಾನ್ಯರಲ್ಲಿ ಮೂಡಿರುವ ಅನಾಥ ಪ್ರಜ್ಞೆ ಹಲವು ಬಾರಿ ಆಕ್ರೋಶಕ್ಕೆ ಎಡೆಮಾಡಿಕೊಡುತ್ತದೆ.

 ದಲಿತರ, ರೈತರ ಮತ್ತು ಆದಿವಾಸಿಗಳ ದನಿಗಳನ್ನು ವ್ಯವಸ್ಥಿತವಾಗಿ ದಮನಿಸಲಾಗುತ್ತಿದೆ. ಬಹುಪಾಲು ರಾಜಕೀಯ ಪಕ್ಷಗಳು ಈ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದು, ರಾಜಕೀಯ ನಿರ್ಣಯಗಳಿಗೆ ಮಧ್ಯಮ ವರ್ಗಗಳೇ ನಿರ್ಣಾಯಕ ಎನ್ನುವ ರೀತಿಯಲ್ಲಿ ಮಧ್ಯಮ ವರ್ಗಗಳನ್ನು ಪೋಷಿಸುತ್ತಿವೆ. ವಾಸ್ತವ ಸಂಗತಿ ಎಂದರೆ 1991ರ ನಂತರದಲ್ಲಿ ಸರಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳ ಫಲಾನುಭವಿಗಳು ಈ ಮಧ್ಯಮ ವರ್ಗಗಳಲ್ಲ. ಬದಲಾಗಿ ಶೇ. 10ರಷ್ಟು ಶ್ರೀಮಂತರು ದೇಶದ ಶೇ. 75ರಷ್ಟು ಸಂಪತ್ತಿನ ಒಡೆಯರೂ, ಫಲಾನುಭವಿಗಳೂ ಆಗಿದ್ದಾರೆ. ದೇಶದ ಪ್ರಮುಖ ಉದ್ದಿಮೆಗಳ ಹಿತಾಸಕ್ತಿಯೇ ಕೇಂದ್ರ ಬಿಂದು ಆಗಿದೆ. ಆಂಧ್ರ ಪ್ರದೇಶದ ಪರಿಗಿ ಮಂಡಲದಲ್ಲಿ ಆತ್ಮಹತ್ಯೆಗೆ ಶರಣಾದ ಚಿನ್ನ ಬಾಲಯ್ಯ ಆಗಲಿ, ಬಿಹಾರದ ಗಯಾ ಜಿಲ್ಲೆಯಲ್ಲಿ ಗೌರವ ಹತ್ಯೆಗೆ ಬಲಿಯಾದ 16 ವರ್ಷದ ಬಾಲಕಿಯಾಗಲಿ ಗಣನೆಗೆ ಬರುವುದೇ ಇಲ್ಲ. ಇಂತಹ ನೂರಾರು, ಸಾವಿರಾರು ಜನರು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ.

 ರೈತರ, ಕಾರ್ಮಿಕರ, ಮಹಿಳೆಯರ ಮತ್ತು ದಲಿತರ ಧ್ವನಿವರ್ಧಕಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಯಾವುದೋ ಒಂದು ಎಡಪಂಥೀಯ ಸಂಘಟನೆ ಅಥವಾ ಎಡಪಂಥೀಯ ಚಳವಳಿಗಳು. ಎಡಪಂಥೀಯ ಚಳವಳಿಗಳು ಇಂದಿನ ಕಾಲದ ವಾಸ್ತವಗಳಿಗೆ ವಿಮುಖವಾಗಿವೆ ಅಥವಾ ಅಂಚಿಗೆ ತಳ್ಳಲ್ಪಟ್ಟಿವೆ ಎಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೂ 2018ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಹೋರಾಟದ ಕಣಕ್ಕಿಳಿದ ಜನಸಾಮಾನ್ಯರ ಆಂದೋಲನಗಳಲ್ಲಿ ಎಡಪಂಥೀಯರ ಪಾತ್ರ ಮಹತ್ವದ್ದಾಗಿತ್ತು. 2018ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರೈತರ ಸುದೀರ್ಘ ಪಾದಯಾತ್ರೆ ನಗರದ ಮಧ್ಯಮ ವರ್ಗಗಳ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಯನ್ನು ಗ್ರಹಿಸುವಂತೆ ಉತ್ತೇಜಿಸಿತ್ತು. ನೂರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ಮರುದಿನ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ ಎಂದು ಅರಿತ ರೈತ ಸಂಘಟನೆಗಳು ಆ ರಾತ್ರಿಯೇ ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತು ಆಝಾದ್ ಮೈದಾನಕ್ಕೆ ಹೋಗಿ ತಂಗಿದ್ದರು. ರೈತರ ಈ ಸೂಕ್ಷ್ಮ ಸಂವೇದನೆ ಮುಂಬೈ ನಗರವಾಸಿಗಳಿಂದ ಪ್ರಶಂಸೆಗೀಡಾಗಿತ್ತು. ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ರೈತರೇ ನಿಜ, ಆದರೆ ಈ ಆಂದೋಲನಕ್ಕೆ ರೂವಾರಿಯಾಗಿದ್ದುದು ಸಿಪಿಎಂ ಪಕ್ಷದ ಅಖಿಲ ಭಾರತ ಕಿಸಾನ್ ಸಭಾ. ಭಾರತದ ರೈತರು ಎದುರಿಸುತ್ತಿರುವ ಬಿಕ್ಕಟ್ಟು ಒಂದು ರೀತಿಯಲ್ಲಿ ಅಜ್ಞಾತ ಅವಸ್ಥೆಯಲ್ಲಿದ್ದು ರೈತರ ಆತ್ಮಹತ್ಯೆ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ಒಂದು ಸಂಘಟನೆ ಈ ಏಕಾಂತತೆಯನ್ನು ಹೋಗಲಾಡಿಸಿ ಇದಕ್ಕೆ ರಾಜಕೀಯ ಸ್ವರೂಪ ನೀಡುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ ಜನಸಾಮಾನ್ಯರು ಬಂಡವಾಳ ವ್ಯವಸ್ಥೆಯ ವ್ಯತ್ಯಯಗಳ ವಿರುದ್ಧ ಸಿಡಿದೆದ್ದಿದ್ದರೂ ನರೇಂದ್ರ ಮೋದಿ ಸರಕಾರ ಜನಸಾಮಾನ್ಯರಲ್ಲಿ ಮಡುಗಟ್ಟಿದ್ದ ಪ್ರಕ್ಷುಬ್ಧತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದೇಶವ್ಯಾಪಿ ಪ್ರತಿಭಟನೆ ನಡೆಸಿದ್ದರು, ಲಕ್ಷಾಂತರ ರೈತರು ದಿಲ್ಲಿಗೆ ಪಾದಯಾತ್ರೆ ನಡೆಸಿದ್ದರು, 2019ರ ಜನವರಿಯಲ್ಲಿ ದೇಶದ ಕಾರ್ಮಿಕರು ಸಾರ್ವತ್ರಿಕ ಮುಷ್ಕರ ಹೂಡಿದ್ದರು, ಇಂತಹ ಹಲವಾರು ಹೋರಾಟಗಳು ನಡೆಯುತ್ತಲೇ ಇವೆ. ಈ ಎಲ್ಲ ಪ್ರತಿಭಟನೆ ಮತ್ತು ಹೋರಾಟಗಳು ಎಡಪಂಥೀಯ ಕಾರ್ಮಿಕ ಸಂಘಟನೆಗಳ, ಕೃಷಿ ಕಾರ್ಮಿಕರ ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆದಿದ್ದವು. ಭಾರತದ ಸೂಕ್ಷ್ಮ ಪ್ರಜ್ಞೆಯ ಜನಸಾಮಾನ್ಯರ ಒತ್ತಾಸೆಗೆ ಪೂರಕವಾಗಿ ಎಡ ಪಕ್ಷಗಳು ಮತ್ತು ಎಡಪಂಥೀಯ ಧೋರಣೆಯುಳ್ಳ ಸಂಘಟನೆಗಳು ಗೋರಕ್ಷಕರ ವಿರುದ್ಧ, ಗೌರವ ಹತ್ಯೆಗಳ ರೂವಾರಿಗಳ ವಿರುದ್ಧ ಹೋರಾಟ ನಡೆಸುತ್ತಿವೆ. ರಾಜಸ್ಥಾನದಲ್ಲಿ ಎಡಪಕ್ಷಗಳು ಆಯೋಜಿಸಿದ್ದ ಕಿಸಾನ್ ರ್ಯಾಲಿ ಈ ನಿಟ್ಟಿನಲ್ಲಿ ಮಹತ್ತರವಾದದ್ದು ಮತ್ತು ಅತಿ ಹೆಚ್ಚು ಪರಿಣಾಮಕಾರಿಯಾದದ್ದು. ಈ ಹೋರಾಟಗಳು, ದಿಲ್ಲಿ ಮತ್ತು ಮಹಾರಾಷ್ಟ್ರದ ರೈತರ ಪಾದಯಾತ್ರೆಗಳು ಕೃಷಿ ಬಿಕ್ಕಟ್ಟನ್ನು ಆಡಳಿತ ವ್ಯವಸ್ಥೆಯ ಮುಂದಿರಿಸಿವೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸೋಲು ಅನುಭವಿಸುವುದಕ್ಕೆ ಈ ಹೋರಾಟಗಳು ಪ್ರಮುಖ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಜನಸಾಮಾನ್ಯರ ಈ ಕ್ರೋಡೀಕರಣವನ್ನು ಎಡಪಕ್ಷಗಳು ಚುನಾವಣಾ ಕಣದಲ್ಲಿ ಮತಗಳಾಗಿ ಪರಿವರ್ತಿಸಲು ಸಾಧ್ಯವಾಗದಿರುವುದು, ಭಾರತದ ಚುನಾವಣಾ ವ್ಯವಸ್ಥೆಯ ನ್ಯೂನತೆಗಳಿಗೆ ಒಂದು ನಿದರ್ಶನವಷ್ಟೆ. ಏಕೆಂದರೆ ಚುನಾವಣಾ ರಾಜಕಾರಣದಲ್ಲಿ ಜಾತಿ, ಸಮುದಾಯ ಮತ್ತು ಹಣಬಲ ಪ್ರಧಾನ ಪಾತ್ರ ವಹಿಸುತ್ತವೆ.

 ನೋಟು ಅಮಾನ್ಯೀಕರಣದ ಆಘಾತಕಾರಿ ಪರಿಣಾಮಗಳು ಮತ್ತು ಜಿಎಸ್‌ಟಿ ಜಾರಿಯಾದ ನಂತರ ಉದ್ಭವಿಸಿದ ಸಮಸ್ಯೆಗಳು, ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದ ಗುಂಪು ಹಲ್ಲೆಗಳು ಮತ್ತು ಕೋಮುವಾದಿ ಧ್ರುವೀಕರಣ, ಬೌದ್ಧಿಕ ಸಂಸ್ಥೆಗಳ ವಿಜ್ಞಾನ ವಿರೋಧಿ ಧೋರಣೆ, ಸಾರ್ವಜನಿಕ ಚರ್ಚೆಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿದ್ದ ಹಿಂಸಾತ್ಮಕ ಭಾಷೆ ಇವೆಲ್ಲವೂ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಿಸಿತ್ತು. ಏತನ್ಮಧ್ಯೆ ಕೇರಳದ ಎಡರಂಗ ಸರಕಾರ ಒಂದು ಪರ್ಯಾಯ ಸಂಕಥನ ಮಾರ್ಗ ಮತ್ತು ಚಟುವಟಿಕೆಯನ್ನು ಪ್ರೋತ್ಸಾಹಿಸಿತ್ತು. ಸಾಂಸ್ಕೃತಿಕ ಮಡಿವಂತಿಕೆಯನ್ನು ಭಂಗಗೊಳಿಸಲು ಸಣ್ಣ ಪ್ರಮಾಣದ ಕ್ರಮಗಳನ್ನು ಕೈಗೊಳ್ಳಲಾಯಿತು. ಸರಕಾರಿ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಲಾಯಿತು. ಇದರಿಂದ ಋತುಸ್ರಾವದ ಕಾರಣದಿಂದಲೇ ಸಾಮಾಜಿಕವಾಗಿ ಅಪಮಾನ ಎದುರಿಸುತ್ತಿದ್ದ ಮಹಿಳೆಯರಿಗೆ ಸಾಂತ್ವನ ನೀಡಿದಂತಾಗಿತ್ತು. ಕೊಚ್ಚಿಯ ಮೆಟ್ರೋ ಟಿಕೆಟ್ ನಿರ್ವಾಹಕರ ಹುದ್ದೆಗೆ ಕೆಲವು ತೃತೀಯ ಲಿಂಗಿಗಳನ್ನು ನೇಮಕ ಮಾಡಲಾಯಿತು. ಆರೆಸ್ಸೆಸ್‌ನ ವಿಭಜಕ ರಾಜಕಾರಣವನ್ನು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿತ್ತು.

ಈ ಸಂದರ್ಭದಲ್ಲೇ ಕೇರಳ ಎಂದೂ ಕಾಣದಂತಹ ಭೀಕರ ಪ್ರವಾಹವನ್ನು ಎದುರಿಸಬೇಕಾಯಿತು. ಕೇಂದ್ರ ಸರಕಾರದ ಅಲ್ಪಪ್ರಮಾಣದ ನೆರವು ಉಪಯುಕ್ತವಾಗಲಿಲ್ಲ. ನೈಸರ್ಗಿಕ ವಿಕೋಪಗಳನ್ನೂ ಬಿಜೆಪಿಯಂತಹ ಪಕ್ಷಗಳು ಹೇಗೆ ಪಕ್ಷಪಾತದಿಂದ ನಿರ್ವಹಿಸುತ್ತವೆ ಎಂದು ಈ ಪ್ರವಾಹಗಳ ಸಂದರ್ಭದಲ್ಲಿ ಕಾಣಬಹುದಿತ್ತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಡ ಜನತೆಯ ಪರಿಹಾರ ಮತ್ತು ಪುನರ್ವಸತಿ ಪೂರ್ಣವಾಗಲು ವರ್ಷಗಳೇ ಬೇಕಾಗುತ್ತದೆ.

ಕೇರಳದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಮ್ಮೆ ಪ್ರವಾಸ ಮಾಡಿದರೆ ಈ ಪ್ರವಾಹಗಳು ಸೃಷ್ಟಿಸಿರುವ ಆಘಾತಕಾರಿ ಅನಾಹುತದ ಪ್ರತ್ಯಕ್ಷ ದರ್ಶನವಾಗುತ್ತದೆ. ಆದರೆ ಈ ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪುನರ್ವಸತಿ ಕ್ರಮಗಳನ್ನು ನೋಡಿದರೆ ಅಚ್ಚರಿಯಾಗುವಂತಿತ್ತು. ರಾಜ್ಯದ ಜನಸಾಮಾನ್ಯರ ಸ್ಪಂದನೆ ಮತ್ತು ಇಲ್ಲಿನ ಜನಸಂಸ್ಕೃತಿಯ ಬೇರುಗಳು ಇಲ್ಲಿ ಸ್ಪಷ್ಟವಾಗಿ ಕಾಣುವಂತಿತ್ತು. ವಿವಿಧ ಗುಂಪುಗಳು ಸ್ವಪ್ರೇರಣೆಯಿಂದ ಸಂಘಟನಾತ್ಮಕವಾಗಿ ಪ್ರಕೃತಿ ವಿಕೋಪವನ್ನು ಎದುರಿಸಿ ಪರಸ್ಪರ ನೆರವಾಗಿದ್ದವು. ತಮ್ಮ ರಕ್ಷಣೆಯನ್ನೂ ಲೆಕ್ಕಿಸದೆ, ಜೀವ ಕೊಟ್ಟು ನೀರೊಳಗೆ ಧುಮುಕಿ ನೂರಾರು ಜನರನ್ನು ರಕ್ಷಿಸಿದ ಮೀನುಗಾರರ ಮಾನವೀಯ ಸ್ಪಂದನೆ ಮತ್ತು ಸ್ಥೈರ್ಯ ವರ್ಣಿಸಲಾಗದು. ಇದಕ್ಕೆ ಪೂರಕವಾಗಿದ್ದುದು ಕೇರಳದ ಎಡರಂಗ ಸರಕಾರದ ಧೋರಣೆ ಮತ್ತು ಮಾನವೀಯ ಸ್ಪಂದನ. ಯಾವುದೇ ಪಕ್ಷಪಾತ ಇಲ್ಲದೆ, ತಾರತಮ್ಯ ತೋರದೆ ಎಡರಂಗ ಸರಕಾರ ಪರಿಹಾರ ಕಾರ್ಯಗಳನ್ನು ಕ್ಷಿಪ್ರಗತಿ ಯಲ್ಲಿ ಕೈಗೊಂಡಿತ್ತು. ಇದಕ್ಕೆ ತದ್ವಿರುದ್ಧವಾಗಿ ಕೇಂದ್ರ ಮೋದಿ ಸರಕಾರ ಎಡಪಂಥೀಯ ಸರಕಾರವನ್ನು ಚುನಾಯಿಸಿದ ತಪ್ಪಿಗಾಗಿ ಕೇರಳದ ಜನತೆಯ ಸಮಸ್ಯೆಗಳಿಗೆ ವಿಮುಖವಾಗಿತ್ತು. ಮತ್ತೊಂದೆಡೆ ಹಿಂದುತ್ವ ಗುಂಪುಗಳು ಈ ಅನಾಹುತಕ್ಕೆ ಕೋಮುವಾದಿ ಸ್ವರೂಪವನ್ನು ನೀಡುವುದರಲ್ಲಿ ನಿರತವಾಗಿದ್ದವು.

ಒಮ್ಮೆ ಯೋಚಿಸಿ ನೋಡಿ, ಭಾರತದಲ್ಲಿ ಎಡಪಂಥೀಯ ಸಂಘಟನೆಗಳು ಇಲ್ಲದೆ ಹೋದರೆ ಕಾರ್ಮಿಕರ ಮತ್ತು ರೈತರ ದನಿಗಳಿಗೆ, ಅವಕಾಶವಂಚಿತ ಸಮುದಾಯಗಳ ದನಿಗಳಿಗೆ, ಜಿಗುಪ್ಸೆ ಹೊಂದಿದ ಪ್ರಜೆಗಳ ದನಿಗಳಿಗೆ ದನಿಗೂಡಿಸುವವರು ಯಾರು? ಉತ್ತಮ ಜೀವನಕ್ಕಾಗಿ ಈ ಶ್ರಮಜೀವಿಗಳು ಹೋರಾಡುವಾಗ ಇವರ ಆಕ್ರೋಶದ ದನಿಗಳಿಗೆ ಧ್ವನಿಯಾಗುವ ಮತ್ಯಾವುದೇ ಸಂಘಟನೆಗಳು ಇರುವುದೇ? ಶಬರಿಮಲೆ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದಾಗ ಇದನ್ನು ಜಾರಿಗೊಳಿಸಲು ಲಕ್ಷಾಂತರ ಮಹಿಳೆಯರ ಮಾನವ ಸರಪಳಿ ನಿರ್ಮಿಸುವ ಮೂಲಕ ಒಂದು ಆಂದೋಲನವನ್ನೇ ಹುಟ್ಟುಹಾಕುವ ಮಹತ್ಕಾರ್ಯವನ್ನು ಮತ್ಯಾರು ಮಾಡಲು ಸಾಧ್ಯವಿತ್ತು ? ವ್ಯಕ್ತಿಗತ ಸಂಪತ್ತಿನ ಕ್ರೋಡೀಕರಣವನ್ನು ಬದಿಗೊತ್ತಿ, ವಿಭಜಕ ತಂತ್ರಗಳನ್ನು ಮೀರಿ ವಿವೇಕಯುತವಾಗಿ ಹೋರಾಡಲು ಯಾರಿದ್ದಾರೆ? ಹಲವು ವರ್ಷಗಳ ಹಿಂದೆ ಉರ್ದು ಕವಿ ಅಕ್ಬರ್ ಅಲಹಾಬಾದಿ ‘‘ನೀವು ಸಾಮಾನ್ಯ ಜನರಂತಿದ್ದಿರಿ. ಸಾಕಷ್ಟು ಪ್ರಯಾಸ ಪಟ್ಟು ಮಾನವರಾಗಿದ್ದೀರಿ’’ ಎಂದು ಹೇಳಿದ್ದರು. ಈ ಪ್ರಯಾಸದ ಒಡಲಲ್ಲಿ ಎಡಪಂಥೀಯ ಚಿಂತನೆಗಳು ವಾಸಿಸುತ್ತವೆ. ಈ ಪ್ರಯತ್ನಗಳಿಲ್ಲದೆ ಹೋದರೆ ಮನುಕುಲ ಉಳಿಯಲು ಸಾಧ್ಯವೇ?

ಕೃಪೆ: thehindu.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)