varthabharthi


ಸಂಪಾದಕೀಯ

ನದಿ ಮೂಲ, ಋಷಿ ಮೂಲದಷ್ಟೇ ನಿಗೂಢ ರಾಜಕೀಯ ಪಕ್ಷಗಳ ದೇಣಿಗೆಗಳ ಮೂಲ!

ವಾರ್ತಾ ಭಾರತಿ : 23 Apr, 2019

ಇಂದು ಧರ್ಮ ಮತ್ತು ರಾಜಕೀಯ ಭಾರೀ ದೊಡ್ಡ ಉದ್ದಿಮೆಯಾಗಿ ಪರಿವರ್ತನೆಯಾಗಿದೆ. ಧರ್ಮವೆನ್ನುವುದು ರಾಜಕೀಯದೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರೆ ರಾಜಕೀಯ ಧರ್ಮದ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ. ಈ ದೇಶದ ಬೃಹತ್ ಉದ್ಯಮಿಗಳು ಈ ಎರಡು ಉದ್ಯಮಗಳಲ್ಲಿ ಒಂದರಲ್ಲಾದರೂ ತಮ್ಮ ಬಂಡವಾಳವನ್ನು ತೊಡಗಿಸಿರುತ್ತಾರೆ. ಹಿರಿಯ ರಾಜಕಾರಣಿಯೊಬ್ಬರು ಈ ದೇಶದಲ್ಲಿರುವ ಮಠ, ದೇವಸ್ಥಾನಗಳನ್ನು ‘ಕಪ್ಪು ಹಣದ ಸ್ವಿಸ್ ಬ್ಯಾಂಕ್’ ಎಂದು ಕರೆದಿದ್ದರು. ಇದರಲ್ಲಿ ಅತಿಶಯೋಕ್ತಿಯಿಲ್ಲ. ರಾಜಕಾರಣಿಗಳು, ಬೃಹತ್ ಉದ್ಯಮಿಗಳು ತಮ್ಮ ತಮ್ಮ ಹಣವನ್ನು ಬಚ್ಚಿಡಲು ಸ್ವಿಸ್ ಬ್ಯಾಂಕ್‌ಗಿಂತಲೂ ಭದ್ರವಾದ ಸ್ಥಳ ಇಂದು ಮಠ ಮಾನ್ಯಗಳು. ಎಲ್ಲ ಉದ್ಯಮಿಗಳೂ ವಿವಿಧ ರಾಜಕೀಯ ಪಕ್ಷಗಳಿಗೆ ತಮ್ಮದೂ ಎಂದು ಒಂದಿಷ್ಟು ಹಣ ಹೂಡುತ್ತಾರೆ. ಗೆದ್ದರೆ ಹೂಡಿದ ಹಣಕ್ಕೆ ದುಪ್ಪಟ್ಟನ್ನು ಬಾಚಿಕೊಳ್ಳುತ್ತಾರೆ. ನರೇಂದ್ರ ಮೋದಿಯ ಹಿಂದಿರುವ ಅನಿಲ್ ಅಂಬಾನಿ, ಅದಾನಿ ಹೇಗೆ ಈ ದೇಶವನ್ನು ಪರೋಕ್ಷವಾಗಿ ಆಳುತ್ತಿದ್ದಾರೆ ಎನ್ನುವುದು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಪಕ್ಷಗಳಿಗೆ ಹೂಡುವ ಈ ಬಂಡವಾಳಗಳಿಗೆ ರಾಜಕೀಯ ಪಕ್ಷಗಳು ‘ದೇಣಿಗೆ’ ಎಂಬ ಸುಂದರ ಪದವನ್ನು ಬಳಸುತ್ತಾ ಬಂದಿವೆೆ ಮತ್ತು ಈ ದೇಣಿಗೆಯ ಮೂಲವನ್ನು ಪ್ರಶ್ನಿಸಬಾರದು ಎಂದೂ ಅದು ಒತ್ತಾಯಿಸುತ್ತವೆ. ಭಾರತದ ಚುನಾವಣೆಯಲ್ಲಿ ಹರಿಯುವ ಹಣದ ಹಿನ್ನೆಲೆಯನ್ನು ನಾವು ಗಮನಿಸೋಣ. ಭಾರತದ ಚುನಾವಣಾ ಆಯೋಗವು 1952ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಹಿಡಿದು 2014ರವರೆಗೆ ನಡೆದ ಚುನಾವಣೆಗಳಲ್ಲಿ ಆಗಿರಬಹುದಾದ ವೆಚ್ಚಗಳ ಒಂದು ಅಂದಾಜನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ 1952ರಲ್ಲಿ ಒಂದು ಲೋಕಸಭಾ ಕ್ಷೇತ್ರಕ್ಕೆ ತಲಾ 2.6 ಲಕ್ಷ ರೂ. ವೆಚ್ಚವಾಗಿದ್ದರೆ 2014ರ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಸರಾಸರಿ 7.13 ಕೋಟಿ ರೂ. ವೆಚ್ಚವಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಅಂದರೆ 1952ಕ್ಕೆ ಹೋಲಿಸಿದಲ್ಲಿ ತಲಾವಾರು ವೆಚ್ಚವು 274 ಪಟ್ಟು ಹೆಚ್ಚಾಗಿದೆ. ಈ ಪರಿ ಹೆಚ್ಚಳವನ್ನು ಗಮನಿಸಿದ ಯಾರಿಗೇ ಆದರೂ ಭಾರತದ ರಾಜಕೀಯ ಪಕ್ಷಗಳ ಹಿಂದೆ ಯಾರೋ ಅತ್ಯಂತ ದಯಾಳು ಮತ್ತು ನಿಗೂಢ ಪ್ರಾಯೋಜಕರು ಇರಲೇ ಬೇಕೆಂಬ ಅನುಮಾನ ಬಾರದೇ ಇರದು.

ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಬರ್ಕ್‌ಲಿ ವಿಶ್ವವಿದ್ಯಾನಿಲಯವು ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡಿನ 2,577 ರಾಜಕಾರಣಿಗಳ ಚುನಾವಣಾ ವೆಚ್ಚಗ ಬಗ್ಗೆ ಒಂದು ಅಧ್ಯಯನವನ್ನು ನಡೆಸಿದೆ. ಅದರ ವರದಿಯ ಪ್ರಕಾರ ಹಾಲಿ ಸಂಸತ್ ಸದಸ್ಯರು ಲೋಕಸಭೆಗೆ ಮರುಚುನಾವಣೆಯನ್ನು ಬಯಸಿ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ವೆಚ್ಚಗಳು ಅತಿ ಹೆಚ್ಚಿರುತ್ತದೆ ಮತ್ತು ಅದು ಅವರ ಆದಾಯದ ಶೇ.44-47ರಷ್ಟಾಗುತ್ತದೆ. ಈ ಹಣ ಎಲ್ಲಿಂದ ಬರುತ್ತದೆ? ಯಾಕಾಗಿ ಅವರು ಈ ದೇಣಿಗೆಗಳನ್ನು ಪಕ್ಷಗಳಿಗೆ ನೀಡುತ್ತಾರೆ? ಕೊಡುವವರು ಯಾರು? ಅವರ ಹಿನ್ನೆಲೆ ಏನು? ಇದನ್ನು ತಿಳಿದುಕೊಳ್ಳುವ ಹಕ್ಕು ಖಂಡಿತ ಮತದಾರರಿಗಿದೆ. ಯಾವ ಸಂಸ್ಥೆಗಳು ಪಕ್ಷಗಳಿಗೆ ದೇಣಿಗೆಯನ್ನು ನೀಡುತ್ತದೆಯೋ ಆ ಸಂಸ್ಥೆಗೆ ಪಕ್ಷಗಳು ಋಣಿಯಾಗಿರಲೇಬೇಕಾಗುತ್ತದೆ. ಅಂಬಾನಿಯಂತಹ ಒಂದು ಕಾರ್ಪೊರೇಟ್ ಸಂಸ್ಥೆ ದೇಣಿಗೆಯನ್ನು ನೀಡಿದರೆ, ಅವರು ಅದನ್ನು ಹಲವು ಪಟ್ಟು ವಸೂಲಿ ಮಾಡದೇ ಇರುವುದಿಲ್ಲ. ಭ್ರಷ್ಟರು ದೇಣಿಗೆಗಳನ್ನು ನೀಡಿದರೆ ಸರಕಾರ ಆ ಭ್ರಷ್ಟರ ಪರವಾಗಿ ಕೆಲಸ ಮಾಡುತ್ತದೆ. ಯಾವ ಪಕ್ಷಗಳಿಗೆ ಯಾವ ಮೂಲಗಳಿಂದ ದೇಣಿಗೆ ಬಂದಿದೆ ಎನ್ನುವ ಆಧಾರದಿಂದ ಆ ಪಕ್ಷ ಯಾರ ಪರವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಆದರೆ ಎನ್‌ಡಿಎ ಸರಕಾರ ಜಾರಿ ಮಾಡಿರುವ ಎಲೆಕ್ಟೋರಲ್ ಬಾಂಡ್ ಯೋಜನೆಯು ಪಾರದರ್ಶಕತೆಯನ್ನು ನಿರಾಕರಿಸುತ್ತದೆ. ಈವರೆಗೆ ಚುನಾವಣಾ ಧನಸಂಪನ್ಮೂಲದ ನಿಯಮಗಳನ್ನು ಪರೋಕ್ಷವಾಗಿ ಉಲ್ಲಂಘಿಸುತ್ತಿದ್ದ ಚುನಾವಣಾ ರಾಜಕೀಯ ಪಕ್ಷಗಳ ವಂಚನೆಗೆ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆಯು ಈಗ ಶಾಸನಾತ್ಮಕ ರಕ್ಷಣೆಯನ್ನೇ ಒದಗಿಸುತ್ತದೆ. ಈ ವ್ಯವಸ್ಥೆಯ ಅತ್ಯಂತ ಕಳವಳ ಹುಟ್ಟಿಸುವ ಸಂಗತಿಯೆಂದರೆ ಇದರಡಿ ಹಣ ನೀಡುವವರ ಮತ್ತು ಪಡೆದುಕೊಳ್ಳುವವರಿಬ್ಬರ ಕಪ್ಪುಹಣದ ಆದಾಯಗಳು ಶಾಸನಬದ್ಧವಾಗಿ ಬಿಳಿಯಾಗಿಬಿಡುತ್ತವೆ. ಉದಾಹರಣೆಗೆ ಎನ್‌ಡಿಎ ಸರಕಾರವು 2016ರ ಹಣಕಾಸು ಕಾಯ್ದೆಯಲ್ಲಿನ ವಿದೇಶಿ ಮೂಲಕ್ಕೆ ಸಂಬಂಧಿಸಿದ ಕಾನೂನನ್ನು ಸಡಿಲಗೊಳಿಸಿ ಶೆಲ್ ಕಂಪೆನಿಗಳಿಂದಲೂ ರಾಜಕೀಯ ದೇಣಿಗೆ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದೆ.

ಮತ್ತೊಂದು ಕಡೆ ವಿದೇಶಿ ದೇಣಿಗೆಯ ಪ್ರಮಾಣಕ್ಕೆ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದಲ್ಲದೆ ಅದನ್ನು 42 ವರ್ಷಗಳಷ್ಟು ಹಿಂದಿನ ಚುನಾವಣೆಗಳವರೆಗೂ ಪೂರ್ವಾನ್ವಯವಾಗುವಂತೆ 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಗೆ ತಿದ್ದುಪಡಿ ಮಾಡುವ ಮೂಲಕ ಈ ಹಿಂದಿನ ಚುನಾವಣೆಗಳಲ್ಲಿ ಹೀಗೆ ಅಕ್ರಮವಾಗಿ ದೇಣಿಗೆಯನ್ನು ಪಡೆದುಕೊಂಡಿದ್ದರ ಬಗ್ಗೆ ನ್ಯಾಯಾಲಯಗಳು ನಡೆಸುತ್ತಿದ್ದ ವಿಚಾರಣೆಯಿಂದಲೂ ರಾಜಕೀಯ ಪಕ್ಷಗಳು ಪಾರಾಗುವಂತೆ ನೋಡಿಕೊಂಡಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಈ ಬಗೆಯ ಅಕ್ರಮಗಳನ್ನು ಎಸಗಿದ್ದವೆಂದು ದೆಹಲಿ ನ್ಯಾಯಾಲಯ ಹೇಳಿತ್ತು.

ಅಷ್ಟು ಮಾತ್ರವಲ್ಲದೆ 20,000 ರೂ.ಗಿಂತ ಕಡಿಮೆ ಮೊತ್ತದ ದೇಣಿಗೆಗಳ ಅನಾಮಧೇಯತೆಗೆ ಅವಕಾಶ ಮಾಡಿಕೊಡುವಂತೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು 1961ರ ಆದಾಯ ತೆರಿಗೆ ಕಾಯ್ದೆಗಳಿಗೂ ತಿದ್ದುಪಡಿ ತರಲಾಗಿದೆ. ಆದರೆ ದೇಣಿಗೆ ಕೊಡುವವರು ಈ ಪ್ರಮಾಣದ ಮೊತ್ತವನ್ನು ಎಷ್ಟು ಬಾರಿ ದೇಣಿಗೆ ಕೊಡಬಹುದು ಎಂಬ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ವಿಪರ್ಯಾಸವೆಂದರೆ ನೋಟು ನಿಷೇಧದ ಮೂಲಕ ಕಪ್ಪುಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆವೆಂದು ಕೊಚ್ಚಿಕೊಳ್ಳುವ ಸರಕಾರವೇ ಇಂತಹ ತಿದ್ದುಪಡಿಗಳನ್ನೂ ಜಾರಿಗೆ ತಂದಿರುವುದು. ಈ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆಯ ವಿರುದ್ಧ ಈಗಾಗಲೇ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿವೆ.

ಆದರೆ ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ರೂ.70 ಲಕ್ಷಕ್ಕೆ ಆಯೋಗ ಏರಿಸಿದೆ. ಇದು ಅಭ್ಯರ್ಥಿಗಳ ನಡುವೆ ಅಸಮಾನತೆಯ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಇಷ್ಟಕ್ಕೂ 70 ಲಕ್ಷ ರೂ. ಏರಿಕೆಗೆ ಆಯೋಗದ ಬಳಿ ಸರಿಯಾದ ಸಮರ್ಥನೆಯೂ ಇಲ್ಲ. ಅಭ್ಯರ್ಥಿಗಳು ಹೆಚ್ಚು ಹೆಚ್ಚು ಹಣ ವೆಚ್ಚ ಮಾಡುವುದಕ್ಕೆ ಅವಕಾಶ ಸಿಕ್ಕಂತೆಯೇ, ಹಣವನ್ನು ಹೂಡುವವರ ಸಂಖ್ಯೆಯೂ ಅಧಿಕವಾಗುತ್ತದೆ. ಅಂದರೆ ಚುನಾವಣೆಗಳಲ್ಲಿ ಅಕ್ರಮ ಹಣಗಳು ಹೆಚ್ಚು ಹೆಚ್ಚು ಸೇರಿಕೊಳ್ಳುತ್ತವೆ. ನೋಟು ನಿಷೇಧದ ಬಳಿಕ, ಬಿಜೆಪಿಗೆ ಹರಿದು ಬಂದ ದೇಣಿಗೆಯ ಮೊತ್ತ ಅಧಿಕವಾಗಿದೆ ಎಂದು ವರದಿಗಳು ಹೇಳುತ್ತಿವೆ. ಇಂದು ಜಗತ್ತಿನ ಅತಿ ದೊಡ್ಡ ಶ್ರೀಮಂತ ಪಕ್ಷವೆಂಬ ಹೆಗ್ಗಳಿಕೆಯನ್ನು ಅದು ಹೊಂದಿದೆ. ಬಿಜೆಪಿ ಮುಖಂಡರು ನೋಟು ನಿಷೇಧವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳೂ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಇಂತಹ ಹೊತ್ತಿನಲ್ಲಿ, ದೇಣಿಗೆಗೆ ಸಂಬಂಧಪಟ್ಟಂತೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದೆಂದರೆ, ಚುನಾವಣೆಯ ಪಾರದರ್ಶಕತೆಯನ್ನು ಕಾಯ್ದುಕೊಂಡಂತೆ. ಇಂದು ನಾವು ಪ್ರಮುಖವಾಗಿ ಗುರುತಿಸಬೇಕಾಗಿರುವುದು, ಯಾವ ಪಕ್ಷ ಅಧಿಕ ಸ್ಥಾನವನ್ನು ಪಡೆದಿದೆ ಎನ್ನುವುದನ್ನಲ್ಲ, ಯಾರ ದೇಣಿಗೆಯಿಂದ ಯಾವ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುವುದರ ಕಡೆಗೆ ಕಣ್ಣು ಹಾಯಿಸಬೇಕಾಗಿದೆ. ಆಗ ಮಾತ್ರ, ಈ ದೇಶವನ್ನು ನಿಜಕ್ಕೂ ಆಳುತ್ತಿರುವವರು ಯಾರು ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಇಂದು ರಾಜಕೀಯ ಪಕ್ಷಗಳು ಧಾರ್ಮಿಕ ಸಂಸ್ಥೆಗಳ ಜೊತೆಗೆ ಅನೈತಿಕ ಮೈತ್ರಿ ಮಾಡಿಕೊಂಡಿರುವುದರಿಂದ; ಹಣ ಬೇರೆ ಬೇರೆ ಮೂಲಗಳಿಂದ, ಬೇರೆ ಬೇರೆ ಹೆಸರಲ್ಲಿ ಹರಿದು ಬರುತ್ತವೆ. ರಾಜಕೀಯ ಪಕ್ಷಗಳಿಗೆ ಹಣವನ್ನು ದಾಟಿಸಲು ಧಾರ್ಮಿಕ ಸಂಸ್ಥೆಗಳನ್ನು ದೇಶದಲ್ಲಿ ವ್ಯಾಪಕವಾಗಿ ದುರುಪಯೋಗಗೊಳಿಸಲಾಗುತ್ತಿದೆ. ಆದುದರಿಂದ, ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿರುವ ಆರ್ಥಿಕ ಸಂಬಂಧದ ಕುರಿತಂತೆಯೂ ಆಯೋಗ ಎಚ್ಚರಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)