varthabharthi

ರಾಷ್ಟ್ರೀಯ

ಗುಜರಾತ್ ಹತ್ಯಾಕಾಂಡದ ಸಂತ್ರಸ್ತೆ

ಬಿಲ್ಕಿಸ್ ಬಾನೊಗೆ 50 ಲಕ್ಷ ರೂ., ಸರಕಾರಿ ಉದ್ಯೋಗ ನೀಡಿ: ಗುಜರಾತ್ ಸರಕಾರಕ್ಕೆ ಸುಪ್ರೀಂ ಆದೇಶ

ವಾರ್ತಾ ಭಾರತಿ : 23 Apr, 2019

ಹೊಸದಿಲ್ಲಿ, ಎ.23: ಗುಜರಾತ್ ನಲ್ಲಿ 2002ರಲ್ಲಿ ನಡೆದ ದಂಗೆಗಳ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹಾಗೂ  ಕುಟುಂಬದ ಎಲ್ಲಾ ಸದಸ್ಯರನ್ನೂ ಕಳೆದುಕೊಂಡ ಬಿಲ್ಕಿಸ್ ಬಾನೋ ಪ್ರಕರಣದ ತೀರ್ಪನ್ನು ಇಂದು ನೀಡಿದ ಸುಪ್ರೀಂ ಕೋರ್ಟ್ ಬಿಲ್ಕೊಸ್ ಬಾನೊ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರಕಾರಕ್ಕೆ ಆದೇಶಿಸಿದೆ.

ಅವರಿಗೆ ಉಳಿದುಕೊಳ್ಳಲು ಮನೆಯಿಲ್ಲ ಹಾಗೂ 2002ರಿಂದ ಅಲೆಮಾರಿ ಜೀವನವನ್ನು ಆಕೆ ನಡೆಸುತ್ತಿದ್ದಾರೆಂದು ಅರಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಆಕೆಗೆ ವಸತಿ ಹಾಗೂ ಸರಕಾರಿ ಉದ್ಯೋಗ ನೀಡುವಂತೆಯೂ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾಗಿ, ನಾಲ್ಕು ಮಂದಿಯ ಪಿಂಚಣಿ ತಡೆ ಹಿಡಿದಿರುವುದಾಗಿ ಹಾಗೂ ಐದನೇ ಅಧಿಕಾರಿಗೆ ಹಿಂಭಡ್ತಿ ನೀಡಿರುವ ಬಗ್ಗೆ ಗುಜರಾತ್ ಸರಕಾರ ಸುಪ್ರೀಂ ಕೋರ್ಟಿಗೆ ಮಾಹಿತಿ ಮಾಡಿದೆ.

ರಾಜ್ಯ ಸರಕಾರ ತನಗೆ ಆಫರ್ ಮಾಡಿದ್ದ 5 ಲಕ್ಷ ರೂ. ಪರಿಹಾರವನ್ನು ತಿರಸ್ಕರಿಸಿದ್ದ ಬಿಲ್ಕಿಸ್ ಬಾನೊ ತನಗೆ ಉತ್ತಮ ಪರಿಹಾರ ದೊರೆಯಬೇಕು ಹಾಗೂ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ ಹಾಗೂ ಬಾಂಬೆ ಹೈಕೋರ್ಟಿನಿಂದ ತಪ್ಪಿತಸ್ಥರೆಂದು ಘೋಷಿತರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ  ಅಪೀಲು ಸಲ್ಲಿಸಿದ್ದರು.

ಮಾರ್ಚ್ 3, 2002ರಂದು ಅಹ್ಮದಾಬಾದ್ ನ ರಂಢಿಕ್ಪುರ್ ಎಂಬ ಗ್ರಾಮದಲ್ಲಿ ಬಿಲ್ಕಿಸ್ ಬಾನೊ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಆಕೆಯ ಕುಟುಂಬದ 14 ಸದಸ್ಯರನ್ನು ಹತ್ಯೆಗೈಯ್ಯಲಾಗಿತ್ತು. ಹತ್ಯೆಗೀಡಾದವರಲ್ಲಿ ಬಿಲ್ಕಿಸ್ ಬಾನೋರ ಮೂರು ವರ್ಷದ ಪುತ್ರಿ ಸಲೇಹ ಕೂಡ ಸೇರಿದ್ದಳು. ಆಕೆಯ ತಲೆಯನ್ನು ದುಷ್ಕರ್ಮಿಗಳು ಬಂಡೆಯೊಂದಕ್ಕೆ ಜಜ್ಜಿದ್ದರು.

ಆ ಸಂದರ್ಭ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆ ಸತ್ತಿದ್ದಾಳೆಂದು ಭಾವಿಸಿ ದುಷ್ಕರ್ಮಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಮೇಲೆ ಅತ್ಯಾಚಾರಗೈದ 11 ಮಂದಿಯನ್ನು 2008ರಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಬಾಂಬೆ ಹೈಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಸಾಕ್ಷ್ಯಗಳನ್ನು ತಿದ್ದಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಲೆತ್ನಿಸಿ ತನಿಖೆಯ ಹಾದಿ ತಪ್ಪಿಸಲೆತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದ್ದರೂ ಇಲಾಖೆ ಅವರ ವಿರುದ್ಧ ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)