600 ರೂ.ಗೆ ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್, ಟಿವಿ ಕಾಂಬೊ!: ಈ ಆಫರ್ ಯಾವ ಸಂಸ್ಥೆಯದ್ದು ಗೊತ್ತಾ?
ಮುಂಬೈ, ಎ.23: ಪ್ರತಿ ತಿಂಗಳು 600 ರೂ.ಗೆ ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್, ಟಿವಿ ಕಾಂಬೊ ಆಫರ್ ನೀಡಲು ರಿಲಯನ್ಸ್ ಜಿಯೋ ಗಿಗಾಫೈಬರ್ ಮುಂದಾಗಿದ್ದು, ಹೆಚ್ಚುವರಿ ವ್ಯವಸ್ಥೆಗಳು ಹಾಗೂ ಸ್ಮಾರ್ಟ್ ಹೋಮ್ ನೆಟ್ ವರ್ಕ್ ಗೆ ಕನಿಷ್ಠ 40 ಸಾಧನಗಳ ಸಂಪರ್ಕಕ್ಕೆ ತಿಂಗಳಿಗೆ ತಲಾ 1,000 ರೂ ಅಧಿಕ ಪಾವತಿಸಬೇಕಾಗುತ್ತದೆ ಎಂದು ಈ ಬಗ್ಗೆ ಮಾಹಿತಿಯಿರುವ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ livemint.com ವರದಿ ಮಾಡಿದೆ.
ಸದ್ಯ ರಿಲಯನ್ಸ್ ಜಿಯೋ ಪೈಲಟ್ ಟೆಸ್ಟಿಂಗ್-ಗಿಗಾಫೈಬರ್ ಹೊಸದಿಲ್ಲಿ ಹಾಗೂ ಮುಂಬೈನಲ್ಲಿ ಪ್ರತಿ ಸೆಕೆಂಡ್ಗೆ 100 ಮೆಗಾಬೈಟ್ಸ್ನಲ್ಲಿ 100 ಗಿಗಾಬೈಟ್ಸ್(ಜಿಬಿ) ಡಾಟಾವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕೆ ಟೆಲಿಫೋನ್ ಹಾಗೂ ಟಿವಿ ಸೇವೆಗಳನ್ನು ಮುಂದಿನ ಮೂರು ತಿಂಗಳಲ್ಲಿ ಸೇರಿಸಲಾಗುತ್ತದೆ. ಎಲ್ಲ 3 ಸೇವೆಗಳು ವರ್ಷದವರೆಗೆ ಉಚಿತವಾಗಿರುತ್ತದೆ.
ಲ್ಯಾಂಡ್ ಲೈನ್ ನಲ್ಲಿ ಅನಿಯಮಿತ ಕರೆ ವ್ಯವಸ್ಥೆ, ಟಿವಿ ಚಾನಲ್ ಗಳನ್ನು ಇಂಟರ್ ನೆಟ್ ಮೂಲಕ ಚಾಲನೆ ನೀಡಲಾಗುತ್ತದೆ. ‘‘ಈ ಎಲ್ಲ ಕೊಡುಗೆಗಳನ್ನು ಒಎನ್ ಟಿ(ಅಪ್ಟಿಕಲ್ ನೆಟ್ವರ್ಕ್ ಟರ್ಮಿನಲ್) ಬಾಕ್ಸ್ ರೂಟರ್ ನ ಮೂಲಕ ನೀಡಲಾಗುತ್ತದೆ. ಇದು ಮೊಬೈಲ್ ಫೋನ್ ಗಳು, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಸಹಿತ 40-45 ಸ್ಮಾಟ್ ಸಾಧನಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ತಿಳಿದುಬಂದಿದೆ. ಜಿಯೋ ಗಿಗಾ ಫೈಬರ್ ನೋಂದಾವಣಿ ಪ್ರಕ್ರಿಯೆ ಕಳೆದ ವರ್ಷ ಆಗಸ್ಟ್ ನಲ್ಲಿ ಆರಂಭವಾಗಿದೆ. ಸೇವೆಯನ್ನು 1,600 ನಗರಗಳಿಗೆ ವಿಸ್ತರಿಸಲಾಗುತ್ತದೆ ಎಂದು ಮಾರ್ಚ್ ನಲ್ಲಿ ರಿಲಯನ್ಸ್ ಘೋಷಿಸಿದೆ.