varthabharthi

ನಿಮ್ಮ ಅಂಕಣ

ಸೌಲಭ್ಯ ಕೇಳುವ ಮಂದಿ ಕರ್ತವ್ಯವನ್ನೇ ಮರೆತರು

ವಾರ್ತಾ ಭಾರತಿ : 23 Apr, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ಸುಡುವ ಬಿಸಿಲಿನ ಪ್ರದೇಶಗಳನ್ನೊಳಗೊಂಡಿರುವ ಹಲವಾರು ಜಿಲ್ಲೆಗಳಲ್ಲಿ ಮತದಾನದ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಆಗಿರುತ್ತದೆ. ಆದರೆ ಎಲ್ಲಾ ರೀತಿಯ ಸೌಕರ್ಯ ಸೌಲಭ್ಯಗಳನ್ನು ದೊರಕಿಸಿಕೊಂಡು, ಅತಿ ಹತ್ತಿರದಲ್ಲಿಯೇ ಮತದಾನದ ಕೇಂದ್ರಗಳು, ಮತದಾನದ ಕೇಂದ್ರಕ್ಕೆ ತಲುಪಲು ಎಲ್ಲಾ ಸೌಕರ್ಯಗಳನ್ನು ಹೊಂದಿರುವ ವಿದ್ಯಾವಂತ, ‘ಪ್ರಜ್ಞಾವಂತ’ ನಾಗರಿಕರು ಬೆಂಗಳೂರು ನಗರದಲ್ಲಿ ಮತದಾನದಿಂದ ದೂರು ಉಳಿದರು. ಇವರಿಗೆ ಬೆಂಗಳೂರು ನಗರದಲ್ಲಿ ಮೇಲ್ಸೇತುವೆಗಳು ಬೇಕು, ಸುರಂಗ ಮಾರ್ಗಗಳು ಬೇಕು, ಎತ್ತರದ ರಸ್ತೆಗಳು ಬೇಕು, ಶುದ್ಧ ಕುಡಿಯುವ ನೀರು ಬೇಕು, ಗುಣಮಟ್ಟದ ಪಾದಚಾರಿ ರಸ್ತೆಗಳು ಬೇಕು, ಇವರ ವಾಹನಗಳ ಅನುಕೂಲಕ್ಕಾಗಿ ಉತ್ತಮ ರಸ್ತೆಗಳು ಬೇಕು, 24 ಗಂಟೆಯೂ ವಿದ್ಯುತ್ ಸರಬರಾಜು ಇರಬೇಕು, ಇವರ ಬೊಜ್ಜು ಕರಗಿಸಲು ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಬೇಕು. ನಗರದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಮಾಡಬೇಕಾದರೆ ಇವರ ಅನುಮತಿಯನ್ನು ಪಡೆಯಬೇಕು ಎನ್ನುವ ರೀತಿಯಲ್ಲಿ ಆಂಗ್ಲ ಭಾಷೆಯಲ್ಲಿನ ಫಲಕಗಳನ್ನು ಹಿಡಿದುಕೊಂಡು ಹೋರಾಟ ಮಾಡುವ ಮಂದಿ ಚುನಾವಣೆಯ ದಿನ ಎಲ್ಲಿ ಮಾಯವಾಗಿದ್ದರೋ ಗೊತ್ತಾಗುವುದಿಲ್ಲ. ಸೌಲಭ್ಯಗಳನ್ನು ಕೇಳುವ ಜನಕ್ಕೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ನೆನಪಾಗಲಿಲ್ಲ. ನಿಜಕ್ಕೂ ಬೆಂಗಳೂರು ನಗರದಲ್ಲಿ ಪ್ರಜಾಪ್ರಭುತ್ವವನ್ನು ಪ್ರೀತಿಸುವವರು ಮತ್ತು ಪ್ರಜಾಪ್ರಭುತ್ವದ ಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು ಬೆಂಗಳೂರಿನ ಮೂಲ ನಿವಾಸಿಗಳು ಮತ್ತು ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿನ ನಾಗರಿಕರು. ವಲಸೆ ಬಂದಿರುವ ಜನ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿರುವ ಜನ, ಇಲ್ಲಿ ಸೌಕರ್ಯವನ್ನು ಪಡೆಯುತ್ತಾರೆ. ತಮ್ಮ ಹಕ್ಕುಗಳನ್ನು ಒತ್ತಾಯ ಮಾಡಿ ಪಡೆದುಕೊಳ್ಳುತ್ತಾರೆ. ಬೆಂಗಳೂರು ನಗರದ ಅಭಿವೃದ್ಧಿಗೆ ಇವರ ಮಾತೇ ವೇದವಾಕ್ಯ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಾರೆ. ಆದರೆ ತಮ್ಮ ಪಾಲಿನ ಕರ್ತವ್ಯವನ್ನು ಯಾವ ಸಂದರ್ಭದಲ್ಲಿಯೂ ಮಾಡಿರುವುದಿಲ್ಲ. ಇಂತಹವರಿಗಿಂತ ಹಳ್ಳಿಗಳಲ್ಲಿ, ಹೊಲ ಗದ್ದೆಗಳಲ್ಲಿ ಶ್ರಮ ಪಟ್ಟು ಬದುಕುವ ಗ್ರಾಮೀಣ ಪ್ರದೇಶದ ಜನರು ನಿಜಕ್ಕೂ ಪ್ರಜ್ಞಾವಂತರು, ಸೂಕ್ಷ್ಮಮತಿಗಳು, ಅವರಿಂದಲೇ ಪ್ರಜಾಪ್ರಭುತ್ವ ಉಳಿದಿದೆ ಎಂದು ಅವರನ್ನು ಅಭಿನಂದಿಸಲೇ ಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)